ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌ನ ಹೊಸ ಮಿಂಚು ಪ್ರಿಯಾಂಕಾ

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸ್ಕೆಟ್‌ಬಾಲ್‌ ಎಂದಾಕ್ಷಣ ಅಮೆರಿಕ, ಫಿಲಿಪ್ಪೀನ್ಸ್‌, ಆಸ್ಟ್ರೇಲಿಯಾ, ಕೆನಡಾ ದೇಶಗಳ ಸ್ಪರ್ಧಿಗಳ ಎತ್ತರ, ಪಾಯಿಂಟ್‌್‌ ಗಳಿಸಲು ವೇಗವಾಗಿ ಓಡುವ ಚುರುಕುತನ ಕಣ್ಣ ಮುಂದೆ ಬರುತ್ತದೆ.
 
ಆ ದೇಶದವರ ವೇಗಕ್ಕೆ ಸಾಟಿಯಾಗಿ ಪೈಪೋಟಿ ನೀಡುವಷ್ಟು ಭಾರತ ಬೆಳೆದಿಲ್ಲವಾದರೂ ಆ ದಾರಿಯಲ್ಲಿ ಹೆಜ್ಜೆ ಹಾಕುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದ ಸ್ಪರ್ಧಿಗಳು ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ (ಎನ್‌ಬಿಎ) ನಡೆಸುವ ಟೂರ್ನಿಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಪಂಜಾಬ್‌ನ ಸತ್ನಾಮ್‌ ಸಿಂಗ್ ಭಾಮರ ಅಮೆರಿಕದ ಪ್ರತಿಷ್ಠಿತ ಟೂರ್ನಿಗೆ ಆಯ್ಕೆಯಾಗಿದ್ದರು. ಈಗ 18 ವರ್ಷದ ಒಳಗಿನವರಿಗೆ ನಡೆದ ಶಿಬಿರ ಮತ್ತು ಆಲ್‌ ಸ್ಟಾರ್ಸ್‌ ಪಂದ್ಯವಾಡಲು ಕರ್ನಾಟಕದ ಪ್ರಿಯಾಂಕಾ ಪ್ರಭಾಕರ್‌  ಅವಕಾಶ ಪಡೆದಿದ್ದಾರೆ. 
 
ಮೈಸೂರಿನವರಾದ ಪ್ರಿಯಾಂಕಾ ಬೆಂಗಳೂರಿನ ವಿದ್ಯಾನಗರ ಡಿವೈಇಎಸ್‌ನಲ್ಲಿ ತರಬೇತಿ ಪಡೆಯುತ್ತಿ ದ್ದಾರೆ. ಐದು ವರ್ಷಗಳ ಹಿಂದೆ ಬ್ಯಾಸ್ಕೆಟ್‌ಬಾಲ್‌ ಆಡಲು ಆರಂಭಿಸಿದ ಪ್ರಿಯಾಂಕಾ  ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ  ಅವರ ತಾಯಿ ಗೀತಾಂಜಲಿ ರಾಷ್ಟ್ರ ಮಟ್ಟದ ಅಥ್ಲೀಟ್‌ ಆಗಿದ್ದವರು. ಮಗಳನ್ನೂ ಕ್ರೀಡಾಪಟು ಮಾಡುವ ಆಸೆಯಿಂದ ಎಂಟನೇ ತರಗತಿಗೆ ಡಿವೈಇಎಸ್‌ ವಸತಿ ಶಾಲೆಗೆ ಸೇರಿಸಿದರು.
ಎತ್ತರವೇ ವರ
 
ರೇವಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಿಯಾಂಕಾ ಐದು ಇಂಚು ಹತ್ತು ಅಡಿ ಎತ್ತರವಿದ್ದಾರೆ. ಇದರಿಂದಲೇ ಅವರು ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ್ದಾರೆ.
 
ಜೂನಿಯರ್‌ ಮಟ್ಟದ ಆಟಗಾರ್ತಿಯಾಗಿರುವ ಪ್ರಿಯಾಂಕಾ  ಈಗಾಗಲೇ ಹಲವಾರು ರಾಷ್ಟ್ರೀಯ ಸೀನಿಯರ್‌ ಟೂರ್ನಿಗಳಲ್ಲಿ ಆಡಿದ್ದಾರೆ. 2013ರಲ್ಲಿ ಒಡಿಶಾದಲ್ಲಿ ನಡೆದ ಜೂನಿಯರ್‌ ರಾಷ್ಟ್ರೀಯ ಟೂರ್ನಿ, 2015ರ ನ್ಯಾಷನಲ್‌ ಗೇಮ್ಸ್‌ನಲ್ಲಿ ಕಂಚಿನ ಪದಕ, 2014ರಲ್ಲಿ ಚಂಡೀಗಡದಲ್ಲಿ ನಡೆದ ಯೂತ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದರು.
 
ಹೋದ ವರ್ಷ ಪುದುಚೇರಿಯಲ್ಲಿ ನಡೆದ ಜೂನಿಯರ್‌ ನ್ಯಾಷನಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಚಿನ್ನದ ಪದಕ ಜಯಿಸಿತ್ತು. ಆಗ ಪ್ರಿಯಾಂಕಾ ತಂಡದಲ್ಲಿದ್ದರು. ಅದೇ ವರ್ಷ ಮೈಸೂರಿನಲ್ಲಿ ಜರುಗಿದ 66ನೇ ಸೀನಿಯರ್‌ ನ್ಯಾಷನಲ್‌ ಮತ್ತು ಗೋವಾದಲ್ಲಿ ನಡೆದ ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು.
 
ಕ್ಲಬ್‌ ಟೂರ್ನಿಗಳೇ ಬುನಾದಿ. ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಪ್ರತಿ ವರ್ಷ ಮಹಿಳೆ ಯರಿಗಾಗಿ ‘ಮಾತೃ ಕಪ್‌’ ಸೀನಿಯರ್‌ ಟೂರ್ನಿ ನಡೆಸುತ್ತದೆ. ಇದರಲ್ಲಿ ರಾಜ್ಯದ ಬಲಿಷ್ಠ ತಂಡಗಳು ಪಾಲ್ಗೊಳ್ಳುತ್ತವೆ. ಹೋದ ತಿಂಗಳು ಬೆಂಗಳೂರಿನಲ್ಲಿ ಟೂರ್ನಿ ನಡೆಯಿತು. ಈ ಟೂರ್ನಿಯಲ್ಲಿ ಸತತ ಎರಡೂ ವರ್ಷ ವಿದ್ಯಾನಗರ ಡಿವೈಇಎಸ್‌ ತಂಡವೇ ಪ್ರಶಸ್ತಿ ಗೆದ್ದುಕೊಂಡಿದೆ. ಆಗ ಪ್ರಿಯಾಂಕಾ  ತಂಡದ ನಾಯಕಿ ಯಾಗಿದ್ದರಲ್ಲದೇ, ತಮ್ಮ ತಂಡದ ಪರ ಹೆಚ್ಚು ಪಾಯಿಂಟ್ಸ್‌ ಗಳಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
 
ಕ್ಲಬ್‌, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಗಮನ ಸೆಳೆದಿದ್ದ ಪ್ರಿಯಾಂಕಾ ಹೋದ ವರ್ಷ ದೇಶ ವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದರು. ನವೆಂಬರ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ 18 ವರ್ಷದ ಒಳಗಿನವರ ಫಿಬಾ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು.
 
‘ಹೋದ ವರ್ಷ ಪುದುಚೇರಿಯಲ್ಲಿ ಜೂನಿಯರ್‌ ನ್ಯಾಷನಲ್ ಟೂರ್ನಿಯಲ್ಲಿ ಆಡುವಾಗ ಎನ್‌ಬಿಎ ಶಿಬಿರಕ್ಕೆ ಆಯ್ಕೆಯಾದ ವಿಷಯ ಗೊತ್ತಾಯಿತು. ಅಷ್ಟು ದೊಡ್ಡ ಟೂರ್ನಿಯಲ್ಲಿ ಅವಕಾಶ ಲಭಿಸುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅನಿರೀಕ್ಷಿತ ಅವಕಾಶದಿಂದ ಖುಷಿಯಾಗಿದೆ. ಇದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಲು ಅಮೆರಿಕದಲ್ಲಿ ಪಡೆಯುವ ತರಬೇತಿ ನೆರವಾಗುತ್ತದೆ’ ಎನ್ನುತ್ತಾರೆ ಪ್ರಿಯಾಂಕಾ .
 
‘ಅಮ್ಮ ಕ್ರೀಡಾಪಟುವಾಗಿದ್ದರಿಂದ ನಾನೂ ಕ್ರೀಡೆಯಲ್ಲಿಯೇ ಸಾಧನೆ ಮಾಡಬೇಕೆಂಬುದು ಅಮ್ಮನ ಆಸೆಯಾಗಿತ್ತು. ನಮ್ಮ ಆಸೆಗೆ ಅಪ್ಪ ಪ್ರಭಾಕರ ಕೂಡ ಬೆಂಬಲ ನೀಡಿದರು. ವಿದ್ಯಾನಗರ ಡಿವೈಇಎಸ್‌ನಲ್ಲಿ ಉತ್ತಮ ಅವಕಾಶ ಲಭಿಸಿತು. ರಾಜ್ಯ ಕ್ರೀಡಾ ಇಲಾಖೆ ಮತ್ತು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ರಾದ ಗೋವಿಂದರಾಜ್‌ ಸರ್‌ ತುಂಬಾ ಸಹಾಯ ಮಾಡಿದ್ದಾರೆ. ಅವರು ನೀಡಿದ ಸಹಾಯವನ್ನು  ಮರೆಯಲಾರೆ’ ಎಂದೂ ಪ್ರಿಯಾಂಕಾ ಹೇಳುತ್ತಾರೆ. 
 
ಶಿಬಿರಕ್ಕೆ ಆಯ್ಕೆಯಾದ ಏಕೈಕ ಕನ್ನಡತಿ
ಈ ಬಾರಿಯ ಎನ್‌ಬಿಎ ಆಲ್‌ಸ್ಟಾರ್ಸ್‌ ಶಿಬಿರಕ್ಕೆ ಭಾರತದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕರ್ನಾಟಕದಿಂದ ಪ್ರಿಯಾಂಕಾ ಮತ್ತು ಬಾಲಕರ ವಿಭಾಗದಿಂದ ಕೇರಳದ ಆಶಯ್‌ ವರ್ಮಾ (17 ವರ್ಷ) ಸ್ಥಾನ ಗಳಿಸಿದ್ದಾರೆ. ಫೆಬ್ರುವರಿ17ರಂದು ಲೂಸಿಯಾನದ ನ್ಯೂ ಒರ್ಲೆನ್ಸ್‌ನಲ್ಲಿ ಆರಂಭವಾದ ‘ಬಾರ್ಡರ್‌ ಗ್ಲೋಬಲ್‌’ ಶಿಬಿರ  ಮೂರು ದಿನ ನಡೆಯಿತು.

ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಸಲುವಾಗಿ ಎನ್‌ಬಿಎ ಪ್ರತಿ ವರ್ಷ ಶಿಬಿರ ನಡೆಸುತ್ತದೆ. ಈ ಸಲ 32 ದೇಶಗಳ 67 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಶಿಬಿರದಲ್ಲಿ ಉತ್ತಮ ಸಾಮರ್ಥ್ಯ ನೀಡಿದ ಕ್ರೀಡಾಪಟುಗಳಿಗೆ ಬ್ಯಾಸ್ಕೆಟ್‌ಬಾಲ್‌ ದಿಗ್ಗಜರು, ಎನ್‌ಬಿಎ, ಫಿಬಾ ಟೂರ್ನಿಗಳಲ್ಲಿ ಆಡಿದವರು ಮತ್ತು ಕೋಚ್‌ಗಳ ಜೊತೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ಲಭಿಸುತ್ತದೆ. ಅವರ ಜೊತೆ ‘ಆಲ್‌ ಸ್ಟಾರ್ಸ್‌’ ಪಂದ್ಯವಾಡಲು ವೇದಿಕೆ ಕೂಡ ಸಿಗುತ್ತದೆ.
ಶಿಬಿರಕ್ಕೆ ಆಯ್ಕೆ ಹೀಗೆ

ಶಿಬಿರಕ್ಕೆ ಆಯ್ಕೆ ಮಾಡುವ ಸಲುವಾಗಿ ಎನ್‌ಬಿಎ ಮತ್ತು ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್ ಜಂಟಿಯಾಗಿ ವೀಕ್ಷಕರನ್ನು ನೇಮಿಸಿ ಪ್ರತಿವರ್ಷ ಪ್ರತಿಭಾ ಶೋಧ ಕಾರ್ಯಕ್ರಮ ನಡೆಸುತ್ತದೆ. ಬೇರೆ ಬೇರೆ ದೇಶಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಗಳ ಕೌಶಲವನ್ನು ವೀಕ್ಷಿಸಿ, ಅವರ ಹಿಂದಿನ ಪಂದ್ಯಗಳ ವಿಡಿಯೊ ನೋಡಿದ ಬಳಿಕ ಈ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಸೌಲಭ್ಯ ಮತ್ತು ಪ್ರಯಾಣದ ಖರ್ಚನ್ನು ಎನ್‌ಬಿಎ ಭರಿಸುತ್ತದೆ.
 
‘ ಕೌಶಲದ ಆಟ ಮುಖ್ಯ’
ಪ್ರಿಯಾಂಕಾ  ಎತ್ತರವಿರುವ ಕಾರಣ ಭಾರತದಲ್ಲಿ ವೇಗವಾಗಿ ಪಾಯಿಂಟ್ಸ್‌ ಕಲೆ ಹಾಕುತ್ತಾರೆ. ಆದರೆ ಎನ್‌ಬಿಎನಂತಹ ಕಠಿಣ ಸವಾಲು ಇರುವ ಟೂರ್ನಿಯಲ್ಲಿ ಆಡುವಾಗ ಈ ಎತ್ತರ ಸಾಕಾಗುವುದಿಲ್ಲ. ಏಕೆಂದರೆ ಅಮೆರಿಕ, ಫಿಲಿಪ್ಪೀನ್ಸ್ ಆಟ ಗಾರ್ತಿಯರು ಆರು ಅಡಿ ಎತ್ತರವಿರು ವುದು ಸಾಮಾನ್ಯ. ಆದ್ದರಿಂದ ಪ್ರಿಯಾಂಕಾ ಕೌಶಲದ ಆಟಕ್ಕೆ ಒತ್ತು ಕೊಡಬೇಕಾಗುತ್ತದೆ.

ಫಾರ್ವರ್ಡ್‌ ಆಟಗಾರ್ತಿ ಪ್ರಿಯಾಂಕಾ ದೂರದಿಂದಲೇ ಪಾಯಿಂಟ್ ಕಲೆ ಹಾಕುವುದು, ಫಾಸ್ಟ್‌ ಬ್ರೇಕ್ ಮಾಡು ವುದು, ಚುರುಕಾಗಿ ಓಡಿ ಪಾಯಿಂಟ್ ಗಳಿಸುವುದು ಮತ್ತು ಡ್ರಿಬ್ಲಿಂಗ್ ಕೌಶಲ ಹೆಚ್ಚಿಸಿಕೊಳ್ಳುವತ್ತ ಗಮನ ಕೊಟ್ಟಿದ್ದಾಳೆ.

ಎತ್ತರದ ವಿಷಯದಲ್ಲಿ ಬೇರೆ ದೇಶಗಳ ಆಟಗಾರ್ತಿಯರಿಗೆ ಪೈಪೋಟಿ ನೀಡುವುದು ಕಷ್ಟವಾದರೂ  ಕೌಶಲಗಳ ಮೂಲಕ ಅವರನ್ನು ಕಟ್ಟಿ ಹಾಕಬಹುದು. ಎದುರಾಳಿ ತಂಡದ ರಕ್ಷಣಾ ವಲಯ ಭೇದಿಸಿ ಟ್ಯಾಕಲ್‌ ಮಾಡಿ ಪಾಯಿಂಟ್‌ ಗಳಿಸುವ ಕೌಶಲವನ್ನು ಪ್ರಿಯಾಂಕಾ ಕರಗತ ಮಾಡಿಕೊಂಡಿದ್ದಾಳೆ.

ಬ್ಯಾಸ್ಕೆಟ್‌ಬಾಲ್‌ ಆಡಲು ಆರಂಭಿಸಿದ ಕೆಲವೇ ವರ್ಷಗಳಲ್ಲಿ ಎನ್‌ಬಿಎ ಶಿಬಿರಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಾಕಷ್ಟು ನೆರವು ನೀಡಿದೆ. ಉತ್ತಮ ಸೌಲಭ್ಯ ಕೊಟ್ಟಿರುವುದರಿಂದಲೇ ಗುಣಮಟ್ಟದ ತರಬೇತಿ ನೀಡಲು ಆಗುತ್ತಿದೆ.

ಶಿಬಿರಕ್ಕೆ ಆಯ್ಕೆಯಾದ ಬಳಿಕ ವಂತೂ ಪ್ರಿಯಾಂಕಾ  ದಿನಕ್ಕೆ ಆರು ಗಂಟೆ ಅಭ್ಯಾಸ ಮಾಡಿದ್ದಾಳೆ. ಡಿವೈಇಎಸ್‌ನಲ್ಲಿ ಅಥ್ಲೆಟಿಕ್‌ ತರಬೇತುದಾರರಾಗಿರುವ ಅಶೋಕ್ ಮಂಟೂರ್‌ ಬಳಿ ಫಿಟ್‌ನೆಸ್‌ ತರಬೇತಿ ಕೂಡ ಪಡೆದಿದ್ದಾಳೆ. 
- ಸತ್ಯನಾರಾಯಣ, ಡಿವೈಇಎಸ್‌ ವಿದ್ಯಾನಗರದ ಬ್ಯಾಸ್ಕೆಟ್‌ಬಾಲ್‌ ಕೋಚ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT