ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಕ್ಟೀರಿಯಾ ಸೋಂಕು ತಡೆಗೆ ಹೊಸ ವಿಧಾನ

Last Updated 19 ಫೆಬ್ರುವರಿ 2017, 19:40 IST
ಅಕ್ಷರ ಗಾತ್ರ

ಮೂತ್ರೀಯ ತೂರುನಳಿಕೆಗಳು, ಹೃದಯ ಗತಿ ನಿಯಂತ್ರಕಗಳು (ಪೇಸ್‌ಮೇಕರ್‌), ಅಂತರ್ಗರ್ಭಾಶಯ  ಮುಂತಾದ ಅನೇಕ ಜೀವರಕ್ಷಕ    ವೈದ್ಯಕೀಯ ಸಾಧನಗಳಲ್ಲಿರುವ ಬ್ಯಾಕ್ಟೀರಿಯಾ ಜೈವಿಕ ಲೇಪನದಿಂದ   ಸೋಂಕು ಹರಡುವುದು ಒಂದು ಸರ್ವೇ ಸಾಮಾನ್ಯ ಸಮಸ್ಯೆ. ಈ ಸಾಧನಗಳ ಮೇಲ್ಮೈನಲ್ಲಿ  ಬೆಳವಣಿಗೆ ಹೊಂದುವ ಈ ಜೈವಿಕ ಲೇಪನಗಳು  ಇತರರಿಗೆ  ಸೋಂಕು ಹರಡುವ ಸಾಧ್ಯತೆಗಳಿವೆ. ಸಾಧಾರಣ ಬ್ಯಾಕ್ಟೀರಿಯಾ ಸೋಂಕಿನ ಚಿಕಿತ್ಸೆಗಿಂತ ಇದರ ಚಿಕಿತ್ಸೆ ಬಲು ಕಠಿಣ. ಈ ಚಿಕಿತ್ಸೆಗೆ ನೂರರಿಂದ ಸಾವಿರ ಪಟ್ಟು ಹೆಚ್ಚು ಪ್ರಮಾಣದ ಜೀವನಿರೋಧಕಗಳ ಅವಶ್ಯಕತೆ ಇದೆ.  ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ದೀಪ್ಷಿಖಾ ಚಕ್ರವರ್ತಿ ಮತ್ತು ಪ್ರೊ.ಗೋಪಾಲನ್ ಜಗದೀಶ್ ನೇತೃತ್ವದ ಸಂಶೋಧನ ತಂಡವೊಂದು ಇಂತಹ ಜೈವಿಕ ಲೇಪನದಿಂದ ಉಂಟಾಗುವ ಸೋಂಕನ್ನು ತಡೆಯಲು ಒಂದು ನವೀನ ವಿಧಾನವನ್ನು ಕಂಡುಹಿಡಿದಿದ್ದಾರೆ.

ಬ್ಯಾಕ್ಟೀರಿಯಾ  ಸಮುದಾಯಗಳಿಂದ ರೂಪುಗೊಳ್ಳುವ  ಬ್ಯಾಕ್ಟೀರಿಯಾ ಜೈವಿಕ ಲೇಪನ ಮೇಲ್ಮೈಗಳಿಗೆ ಒಂದು ಬಲವಾದ ತೆಳು ಪದರದ ಹಾಗೆ ಅಂಟಿಕೊಳ್ಳುತ್ತದೆ. ಈ ಪದರದ ಸುತ್ತ ಅದರಿಂದ ಸ್ರವಿಸುವ ಒಂದು ಅಂಟುಅಂಟಾದ   ಪಾಲಿಮರ್ ವಸ್ತುವಿರುತ್ತದೆ. ಈ ಪದರವು ಜೀವ ನಿರೋಧಕಗಳಿಂದ ಬ್ಯಾಕ್ಟೀರಿಯಾವನ್ನು ರಕ್ಷಿಸುತ್ತದೆ. ಅಲ್ಲದೇ, ಬ್ಯಾಕ್ಟೀರಿಯಾಗಳು ಜೀವನಿರೋಧಕಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ ಜೈವಿಕ ಲೇಪನಗಳಿಂದ ಉರಿಯೂತ, ಅಂಗಾಂಶಗಳಿಗೆ ಹಾನಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕ್ರಿಮಿನಾಶಕ ವಿಧಾನಗಳನ್ನು ಅಳವಡಿಸಿ ವೈದ್ಯಕೀಯ ಸಾಧನಗಳ ಮೇಲೆ ಬ್ಯಾಕ್ಟೀರಿಯಾ ಜೈವಿಕ ಲೇಪನಗಳ ಚಟುವಟಿಕೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಿದೆ. ಆದರೆ, ಮೂತ್ರೀಯ ತೂರುನಳಿಕೆಗಳಂತಹ ಸಾಧನಗಳು, ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಮತ್ತಿತರ ರೋಗಾಣುಗಳಿಂದ ಕಲುಷಿತಗೊಳ್ಳುವುದರಿಂದ, ಇವು ಸೋಂಕು ಹರಡುವ ಸಾಧ್ಯತೆ ಹೆಚ್ಚು.  ಮೂತ್ರನಾಳದ ಸೋಂಕಿಗೂ ಇವು ಕಾರಣವಾಗುತ್ತವೆ.

ಆದರೆ, ಈ ಬ್ಯಾಕ್ಟೀರಿಯಾದ ಸುತ್ತ ರೂಪುಗೊಂಡ ಪಾಲಿಮರ್ ಪದರ ಇರುವವರೆಗೆ ಮಾತ್ರ ಬ್ಯಾಕ್ಟೀರಿಯಾಗಳು ಜೀವನಿರೋಧಕಗಳಿಗೆ ಪ್ರತಿರೋಧ ಒಡ್ಡುತ್ತವೆ ಎಂದು ಅಧ್ಯಯನಗಳು ಬೆಳಕು ಚೆಲ್ಲಿವೆ. ಒಮ್ಮೆ ಈ ಪದರವನ್ನು ನಾಶಗೊಳಿಸಿದಲ್ಲಿ, ಬ್ಯಾಕ್ಟೀರಿಯಾವನ್ನು ಕೊಲ್ಲಲು ಅಲ್ಪ ಪ್ರಮಾಣದ ಜೀವನಿರೋಧಕ ಸಾಕಾಗುತ್ತದೆ. ಈ ಪಾಲಿಮರ್ ಪದರವನ್ನು ನಾಶಮಾಡುವಲ್ಲಿ  ಆಘಾತತರಂಗಗಳು (shockwaves) ಹಾಗೂ ಜೀವನಿರೋಧಕಗಳು ಸಹಕಾರಿ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮೊದಲ ಬಾರಿಗೆ ಕಂಡುಹಿಡಿದಿದ್ದಾರೆ.  ಮಾಧ್ಯಮದಲ್ಲಿನ ಒತ್ತಡಗಳ ತೀಕ್ಷ್ಣ ಮತ್ತು ಅಸ್ಥಿರ ಬದಲಾವಣೆಯೇ ಆಘಾತತರಂಗಗಳು. ಇವು,  ಕಣ ಸ್ಫೋಟಗಳು ಅಥವಾ ಕಣಗಳು ಶಬ್ದದ ವೇಗಕ್ಕಿಂತಲೂ ವೇಗವಾಗಿ ಚಲಿಸಿದಾಗ ಉಂಟಾಗುತ್ತವೆ. ನಿಯಂತ್ರಿತ ಪರಿಸ್ಥಿತಿಗಳಲ್ಲಿ ಆಘಾತತರಂಗಗಳನ್ನು ಅಳವಡಿಸಿದರೆ, ಇವು ದೇಹದೊಳಗೆ ಲಸಿಕೆಗಳನ್ನು ತಲುಪಿಸಲು, ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಅಥವಾ ಗಾಯಗಳನ್ನು ಶಮನಗೊಳಿಸಲುಸಹಕಾರಿ. .

‘ಶ್ವಾಸಕೋಶದ ಸೋಂಕಿನಿಂದ ಹಿಡಿದು ಮೂತ್ರೀಯ ತೂರುನಳಿಕೆಗಳಿಂದ ಬರುವ ಸೋಂಕಿನವರೆಗೆ ವಿಭಿನ್ನ ರೀತಿಯ ಕಾಯಿಲೆಗಳ ಪರಿಸ್ಥಿತಿಗಳಲ್ಲಿ ಬೇರೆ ಬೇರೆ ತರಹದ ಜೈವಿಕ ಲೇಪನಗಳನ್ನು ಗುರಿಯಾಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆಘಾತತರಂಗಗಳು ದೇಹದ ಒಳಗೂ ಈ ಬ್ಯಾಕ್ಟೀರಿಯಾ ಜೈವಿಕ ಲೇಪನಗಳನ್ನು ಛಿದ್ರಗೊಳಿಸಲು ಸಮರ್ಥವಾಗಿದ್ದು, ಅವು  ಜೀವನಿರೋಧಕಗಳ ಶಕ್ತಿಗೆ ಒಳಗಾಗಿ ಕೊನೆಗೆ  ಸಂಪೂರ್ಣವಾಗಿ ನಶಿಸುತ್ತವೆ.   ಭವಿಷ್ಯದಲ್ಲಿ, ಬ್ಯಾಕ್ಟೀರಿಯಾ ಜೈವಿಕ ಲೇಪನಗಳಿಂದ ಉಂಟಾಗುವ ಸೋಂಕುಗಳ ಚಿಕಿತ್ಸೆಗೆ  ಆಘಾತತರಂಗಗಳನ್ನೆ ಬಳಸಲಾಗುತ್ತದೆ ಎಂಬುದರಲ್ಲಿ  ಸಂದೇಹವೇ ಇಲ್ಲ’ ಎಂದು ಇದರ ಮೇಲಿನ ಅಧ್ಯಯನ ನಡೆಸಿದ ಪಿಎಚ್.ಡಿ ವಿದ್ಯಾರ್ಥಿ ಅಕ್ಷಯ್ ದಾತೆ ಹೇಳುತ್ತಾರೆ. 

ಈ ಅಧ್ಯಯನಕ್ಕೆಂದು P. aeruginosa, S. aureus ಮತ್ತು Salmonella ಎಂಬ ಮೂರು ವಿಧದ ಬ್ಯಾಕ್ಟೀರಿಯಾಗಳನ್ನು - ಪರಿಗಣಿಸಲಾಯಿತು. ಇವು ಸಾಮಾನ್ಯವಾಗಿ ಜೈವಿಕ ಲೇಪನಗಳಿಗೆ ಹೆಸರುವಾಸಿ. ಈ ಬ್ಯಾಕ್ಟೀರಿಯಾವನ್ನು ನಿಜವಾದ ಮೂತ್ರೀಯ ತೂರುನಳಿಕೆಯ ಮೇಲೆ ವೃದ್ಧಿಸಿ,  ಮಾನವನ ಹಾಗೂ ಗೋವಿನ  ಮೂತ್ರದಿಂದ (ಕ್ರಿಮಿನಾಶಗೊಳಿಸಿದ್ದು) ತುಂಬಿದ ಮೂತ್ರೀಯ ತೂರುನಳಿಕೆಯ ಪರಿಸ್ಥಿತಿಗಳನ್ನು ನಕಲು ಮಾಡಲಾಯಿತು. ಬಾಹ್ಯ ಕಶ್ಮಲೀಕರಣವನ್ನು ತಡೆಯಲು ಹಾಗೂ ಖಚಿತಪಡಿಸಲು ಇದಕ್ಕೆ ಕ್ರಿಮಿನಾಶಕ ಕ್ರಿಯೆಯನ್ನು ಅಳವಡಿಸಲಾಯಿತು. ತೂರುನಳಿಕೆಯ ಮೇಲೆ ಇರಿಸಿದ ಈ ಬ್ಯಾಕ್ಟೀರಿಯಾ ಜೈವಿಕ ಲೇಪನವನ್ನು ಆಘಾತ ತರಂಗಗಳಿಂದ, ಜೀವನಿರೋಧಕಗಳಿಂದ ಹಾಗೂ ಇವೆರಡರ ಸಂಯೋಜನೆಯಿಂದ ಪರೀಕ್ಷಿಸಲಾಯಿತು.

ಹೊರಬಿದ್ದ ಫಲಿತಾಂಶಗಳಲ್ಲಿ, ಆಘಾತ ತರಂಗಗಳು ಮೂರು ಬೇರೆ ಬೇರೆ ವಿಧಗಳ ಬ್ಯಾಕ್ಟೀರಿಯಾದಿಂದ ರೂಪುಗೊಂಡ ಈ ಜೈವಿಕ ಲೇಪನವನ್ನು ನಾಶಮಾಡಿ, ಜೀವನಿರೋಧಕಗಳ ಹಾಗೂ ಆಘಾತತರಂಗಗಳ ಸಂಯೋಜನೆ ಬ್ಯಾಕ್ಟೀರಿಯಾವನ್ನು ಸಿಪ್ರೋಫ್ಲೋಕ್ಸಸಿನ್ ಎನ್ನುವ ಜೀವನಿರೋಧಕಕ್ಕೆ 100ರಿಂದ 1000 ಪಟ್ಟು ಹೆಚ್ಚು ಸೂಕ್ಷ್ಮವನ್ನಾಗಿಸಿತು.

ಈ ವಿಧಾನವನ್ನು ದೇಹದ ಆಂತರಿಕ ಸಾಧನಗಳ (ತೂರುನಳಿಕೆಯ ಹಾಗೆ ತೆಗೆಯಬಲ್ಲ) ಮೇಲೆಯೂ ಪರೀಕ್ಷಿಸಲಾಯಿತು. ಇಲ್ಲಿ, ಇಲಿಗಳನ್ನು ಮಾದರಿಯನ್ನಾಗಿರಿಸಿ, ಶ್ವಾಸ ಸೋಂಕಿಗೆ ಕಾರಣವಾಗುವ P. aeruginosa ಬ್ಯಾಕ್ಟೀರಿಯಾದ ಸೋಂಕು ತಗುಲಿದ ಇಲಿಗಳನ್ನು ಆಘಾತತರಂಗಗಳಿಂದ, ಪ್ರತಿಜೀವಕಗಳಿಂದ ಹಾಗೂ ಇವೆರಡರ ಸಂಯೋಜನೆಯಿಂದ ಪರೀಕ್ಷಿಸಲಾಯಿತು. ಫಲಿತಾಂಶವು  ಇವೆರಡರ ಸಂಯೋಜನೆ ಮಹತ್ತರವಾಗಿ ಪರಿಣಾಮಕಾರಿಯೆಂದು ಧೃಡಪಡಿಸಿತು. ಇದೇ ವಿಧಾನವನ್ನು ಸಮಾನವಾಗಿ ಕಂಡುಬರುವ S. aureus (ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಹರಡುವ ಸೋಂಕು)  ಬ್ಯಾಕ್ಟೀರಿಯಾದ ಜೈವಿಕ ಲೇಪನದ ಮೇಲೆಯೂ ಪರೀಕ್ಷಿಸಲಾಗಿದ್ದು, ಇದೇ ತರಹದ ಫಲಿತಾಂಶವು ದೊರೆಯಿತು.

ಈ ವಿಧಾನದ ಬಗ್ಗೆ ಇನ್ನು ಹಲವಾರು ಅಧ್ಯಯನಗಳು ಹಾಗೂ ವೈದ್ಯಕೀಯ ಪ್ರಯೋಗಗಳ ಅವಶ್ಯಕತೆ ಇದೆ. ಆದರೂ ಜೈವಿಕ ಲೇಪನಗಳ ಸೋಂಕಿನ ಚಿಕಿತ್ಸೆಗೆ ಆಘಾತತರಂಗಗಳ ಹಾಗೂ ಜೀವನಿರೋಧಕಗಳ ಸಂಯೋಜನೆ ಭರವಸೆ ಮೂಡಿಸುವಂತಿದೆ. ಒಟ್ಟಾರೆ ಈ ನೂತನ ವಿಧಾನದಿಂದ ಬಾಕ್ಟೀರಿಯಾ ಲೇಪನಗಳನ್ನು ಭೇದಿಸಿ ಅದರಿಂದ ಉಂಟಾಗುವ ಸೋಂಕನ್ನು ಚಿಕಿತ್ಸೆಯ ಮೂಲಕ ಗುಣಪಡಿಸುವ ದಿನಗಳು ಸಮೀಪದಲ್ಲಿವೆ. 

- ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT