ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಸಾಹಿತಿಗಳಿಗೆ ‘ಸುವರ್ಣ ಗೌರವ’

ಕರ್ನಾಟಕ ಸಾಹಿತ್ಯ ಅಕಾಡೆಮಿ: ನಾಳೆ ಸಮಾರೋಪ
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಸಂಭ್ರಮ ಸಮಾರೋಪ ಇದೇ 22ರಂದು ನಡೆಯಲಿದ್ದು, 75 ವರ್ಷ ಪೂರೈಸಿದ 24 ಸಾಹಿತಿಗಳಿಗೆ ‘ಸುವರ್ಣ ಗೌರವ ಪುರಸ್ಕಾರ’ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ತಿಳಿಸಿದರು.

ಅಕಾಡೆಮಿಯು ಪ್ರತಿವರ್ಷ ನೀಡುವ ಗೌರವ ಪ್ರಶಸ್ತಿ ಸಿಗದವರಿಗೆ ಈ ಪುರಸ್ಕಾರ ನೀಡಲಾಗುವುದು. ಪ್ರೇಮಾ ಭಟ್‌, ಡಾ. ಎಚ್‌.ಡಿ. ಚಂದ್ರಪ್ಪಗೌಡ, ನಾ.ಸು. ಭರತನಹಳ್ಳಿ, ಸತ್ಯನಾರಾಯಣರಾವ್ ಅಣತಿ ಸೇರಿ 24 ಜನರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕಾರ ₹ 10 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ ಎಂದು ಅವರು ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಕನ್ನಡ ಭವನದ ನಯನ ಸಭಾಂಗಣದಲ್ಲಿ ಬುಧವಾರ ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪುರಸ್ಕಾರ ಪ್ರದಾನ ಮಾಡುವರು ಎಂದರು.

1961ರಲ್ಲಿ ಸ್ಥಾಪನೆಯಾದ ಸಾಹಿತ್ಯ ಅಕಾಡೆಮಿ 2011ರಲ್ಲೆ 50 ವರ್ಷ ಪೂರೈಸಿದೆ. ಆ ಸಂದರ್ಭದಲ್ಲಿ ಅಧ್ಯಕ್ಷರ ಹುದ್ದೆ ಖಾಲಿ ಇದ್ದುದರಿಂದ 2014ರ ಆಗಸ್ಟ್‌ನಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಉದ್ಘಾಟಿಸಲಾಗಿತ್ತು. ಈಗಾಗಲೇ 165 ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.

ಸಮಾರಂಭದಲ್ಲಿ  50 ಪುಸ್ತಕಗಳ ಬಿಡುಗಡೆ
ಅಕಾಡೆಮಿ ಪ್ರಕಟಿಸಿರುವ 50 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೂ   ಬುಧವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ  ಎಂದು ಮಾಲತಿ ವಿವರಿಸಿದರು.

ಸಾಹಿತ್ಯಿಕ ಶಬ್ದ ಬಳಕೆ ಕುರಿತ ‘ಕನ್ನಡ ಸಾಹಿತ್ಯ ಸಂಗಾತಿ’, ಕನ್ನಡದ ಸಾಹಿತಿಗಳನ್ನು ಪರಿಚಯಿಸುವ ‘ಸಾಲು ದೀಪಗಳು’ (ವಿಸ್ತೃತ ಆವೃತ್ತಿ), ಕರ್ನಾಟಕದ ನಿರ್ಲಕ್ಷಿತ ಸಮುದಾಯಗಳ ಸ್ಥಿತಿಗತಿಯನ್ನು ಕಟ್ಟಿಕೊಡುವ  ‘ಕರ್ನಾಟಕ ಸಬಾಲ್ಟ್ರನ್ ಓದು’ ಸಂಪುಟಗಳು ಬಿಡುಗಡೆ ಆಗಲಿವೆ ಎಂದರು.

ಕನ್ನಡದಲ್ಲಿ ಪ್ರಥಮ ಬಾರಿಗೆ  ಸಬಾಲ್ಟ್ರನ್ ಓದಿನ 6 ಸಂಪುಟಗಳನ್ನು ಅಕಾಡೆಮಿಯಿಂದ ಪ್ರಕಟಿಸಲಾಗುತ್ತಿದೆ. ಈ ಪೈಕಿ ‘ತಾತ್ವಿಕತೆ’, ‘ರೈತ ಮತ್ತು ಕಾರ್ಮಿಕ’, ‘ದಲಿತ ಸಂಸ್ಕೃತಿ’, ‘ಹೆಣ್ಣು ನೋಟ’ ಎಂಬ ನಾಲ್ಕು ಸಂಪುಟಗಳು  ಬಿಡುಗಡೆ ಆಗುತ್ತಿವೆ. ‘ಸಬಾಲ್ಟ್ರನ್ ಸಾಹಿತ್ಯ’ ಮತ್ತು ‘ಬುಡಕಟ್ಟು ಹಾಗೂ ಅಲೆಮಾರಿ’ ಸಂಪುಟಗಳಿಗೆ ಇನ್ನೂ ಲೇಖನಗಳು ಬರಬೇಕಿದೆ. ಈ ಎರಡು ಸಂಪುಟಗಳು ಮಾರ್ಚ್‌ನಲ್ಲಿ ಬಿಡುಗಡೆ ಆಗಲಿವೆ ಎಂದು ಅವರು ತಿಳಿಸಿದರು.

ಸಾಹಿತ್ಯ ಅಕಾಡೆಮಿ ಆರಂಭದಿಂದ ಈವರೆಗಿನ 18 ಅಧ್ಯಕ್ಷರ ಅವಧಿಯಲ್ಲಿ ಸಾಹಿತ್ಯ ಕ್ಷೇತ್ರದ ಪ್ರಗತಿಗೆ ನೀಡಿರುವ ಕೊಡುಗೆಗಳ ಕುರಿತ  ‘ಪರಿಣಾಮಗಳ ಅಧ್ಯಯನ’, ಅಕಾಡೆಮಿಯ ಮೂರು ವರ್ಷದ ಸಾಧನೆ ಕುರಿತ ಕೃತಿ ‘ನಡೆದಷ್ಟೂ ದಾರಿ’, ಹಿಂದಿನ ಅಧ್ಯಕ್ಷರುಗಳ ಸಾಹಿತ್ಯದ ಕುರಿತ ‘ಬದುಕು–ಬರಹ’, ಫೆಲೋಶಿಪ್ ಸಂಪ್ರಬಂಧಗಳು, ವಾರ್ಷಿಕ ಸಂಕಲನಗಳು ಮತ್ತು ಪ್ರವಾಸ ಕೃತಿಗಳು  ಸೇರಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT