ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕೆಎಫ್‌ಸಿಸಿ ಆರಂಭ

ರಿಮೇಕ್ ಸಿನಿಮಾ ತಡೆಗಾಗಿ ಡಬ್ಬಿಂಗ್‌ ಚಲನಚಿತ್ರ ಮಂಡಳಿ ಹೆಸರು ಬದಲು
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ಪರ್ಯಾಯವಾಗಿ ಸ್ಥಾಪನೆಯಾಗಿದ್ದ ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿಯು ಈಗ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಎಂದು ಮರು ನಾಮಕರಣ ಮಾಡಿಕೊಂಡಿದೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೃಷ್ಣೇಗೌಡ ಸೋಮವಾರ ಮಾಹಿತಿ ನೀಡಿದರು. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪರಭಾಷಾ ಸಿನಿಮಾಗಳ ಡಬ್ಬಿಂಗ್‌ಗೆ ಅವಕಾಶ ನೀಡುತ್ತಿಲ್ಲ, ನಿರ್ಮಾಪಕರ ಪರ ಸರಿಯಾದ ಕಾಳಜಿ ವಹಿಸುತ್ತಿಲ್ಲ ಮತ್ತು ರಿಮೇಕ್ ಸಿನಿಮಾಗಳಿಗೆ ತಡೆ ಹಾಕಬೇಕು ಎಂಬ ಕಾರಣಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪಿಸಿದ್ದೇವೆ’ ಎಂದು ಅವರು ಹೇಳಿದರು.

‘ನೋಂದಣಿ ಆದ ಒಂದೇ ವರ್ಷದಲ್ಲಿ ನಮ್ಮ ಮಂಡಳಿ ಮೂಲಕ ಇಪ್ಪತ್ತೆರಡು ಸಿನಿಮಾಗಳಿಗೆ ಸೆನ್ಸಾರ್ ಮಾಡಿಸಿದ್ದೇವೆ. ಅವುಗಳಲ್ಲಿ ಎರಡು ಡಬ್ಬಿಂಗ್ ಸಿನಿಮಾಗಳು’ ಎಂದು ಅವರು ತಿಳಿಸಿದರು. ಈ ವರ್ಷ ಎಂಬತ್ತರಿಂದ ನೂರು ಸಿನಿಮಾಗಳ ನೋಂದಣಿ ಆಗಲಿದೆ ಎಂದು ಹೇಳಿದರು. ಈಗಾಗಲೇ ಈ ವಾಣಿಜ್ಯ ಮಂಡಳಿಯಲ್ಲಿ 180 ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.

ನೋಂದಣಿ ಸರಳ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿಗೆ ₹2,000, ಸದಸ್ಯತ್ವ ನೋಂದಣಿಗೆ ₹ 55 ಸಾವಿರ ಶುಲ್ಕ ಪಾವತಿಸಬೇಕು. ಒಬ್ಬ ನಿರ್ಮಾಪಕ ಒಮ್ಮೆಗೆ ಒಂದೇ ಶೀರ್ಷಿಕೆ ನೋಂದಾಯಿಸಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿಗೆ ₹ 500, ಸದಸ್ಯತ್ವ ನೋಂದಣಿಗೆ ₹10 ಸಾವಿರ ಶುಲ್ಕ ಸಂಗ್ರಹಿಸಲಾಗುತ್ತದೆ. ಒಬ್ಬ ನಿರ್ಮಾಪಕ ಒಮ್ಮೆಗೆ ಮೂರು ಶೀರ್ಷಿಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ಕೃಷ್ಣೇಗೌಡ ಹೇಳಿದರು.

ಮುಂದಿನ ದಿನಗಳಲ್ಲಿ ಕಿರುಚಿತ್ರ ಸ್ಪರ್ಧೆ ಹಾಗೂ ಅಂತರರಾಷ್ಟ್ರೀಯ ಚಿತ್ರೋತ್ಸವಗಳನ್ನು ಆಯೋಜಿಸುವ ಚಿಂತನೆಯೂ ಇದೆ ಎಂದು ಹೇಳಿದ ಕೃಷ್ಣೇಗೌಡ, ಆಸಕ್ತ ಹೊಸ ನಿರ್ಮಾಪಕರಿಗೆ ನುರಿತ ಚಿತ್ರಕರ್ಮಿಗಳಿಂದ ಅಗತ್ಯ ಸಲಹೆ ಕೊಡಿಸುವುದಾಗಿಯೂ ತಿಳಿಸಿದರು.

‘ಡಬ್ಬಿಂಗ್ ಸಿನಿಮಾಗಳಿಗೆ ತೊಂದರೆ ಇಲ್ಲ’
ಮುಂದಿನ ಆರೇಳು ತಿಂಗಳುಗಳಲ್ಲಿ ಕನಿಷ್ಠ ಎಂಟು ಡಬ್ಬಿಂಗ್ ಸಿನಿಮಾಗಳು ತೆರೆಗೆ ಬರಲಿವೆ. ಈ ಸಿನಿಮಾಗಳಿಗೆ ಚಿತ್ರಮಂದಿರಗಳ ಸಮಸ್ಯೆ ಆಗಬಾರದು ಎಂದು ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್. ಓದುಗೌಡರ್ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಕೃಷ್ಣೇಗೌಡ ಹೇಳಿದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಖಜಾಂಚಿ ಮಾರುತಿ ಜಡೆಯವರ್ ಮತ್ತು ಸದಸ್ಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT