ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌ನಲ್ಲಿ ಇಸ್ಕಾನ್‌ ಊಟಕ್ಕೆ ಇಲಾಖೆ ಕೊಕ್ಕೆ!

ನಿಗದಿಗಿಂತ ಕಡಿಮೆ ಮೊತ್ತದ ಟೆಂಡರ್‌ಗೆ ಮುಖ್ಯಮಂತ್ರಿ ಅನುಮತಿ ಪಡೆಯಬೇಕು ಎಂಬ ನಿಯಮ
Last Updated 21 ಫೆಬ್ರುವರಿ 2017, 5:26 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ ರೋಗಿಗಳಿಗೆ ಇಸ್ಕಾನ್‌ ಸಂಸ್ಥೆಯಿಂದ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಹಾಗೂ ಉಪಾ­ಹಾರ ಪೂರೈಕೆ ಮಾಡಬೇಕೆಂಬ ಕಿಮ್ಸ್‌ ಸಂಸ್ಥೆಯ ಒಂಬತ್ತು ತಿಂಗಳ ಪ್ರಯತ್ನಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಕೊಕ್ಕೆ ಹಾಕಿದ್ದು, ಈ ಪ್ರಸ್ತಾವವನ್ನು ತಿರಸ್ಕರಿಸಿದೆ.
 
ಒಂದೊಮ್ಮೆ ಈ ಪ್ರಸ್ತಾವ ಒಪ್ಪಿ­ಕೊಂಡರೆ ಕರ್ನಾಟಕ ಪಾರದರ್ಶಕ ಕಾಯ್ದೆ (ಕೆಟಿಟಿಪಿ)ಯ ಉಲ್ಲಂಘನೆ­ಯಾಗುವ ಆತಂಕವಿದ್ದು, ಇದನ್ನೇ ನೆಪ ಮಾಡಿಕೊಂಡು ಇತರ ಸಂಘ–ಸಂಸ್ಥೆಗಳು ತಮಗೂ ಅನುಮತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಬಹುದು ಎಂಬ ಕಾರಣದಿಂದಾಗಿ ಈ ಪ್ರಸ್ತಾವ ತಿರಸ್ಕಾರ­ಗೊಂಡಿದ್ದಾಗಿ ಇಲಾಖೆಯ ಮೂಲಗಳು ತಿಳಿಸಿವೆ. 
 
ಆದರೆ, ವಾಸ್ತವ ಬೇರೆಯೇ ಇದೆ ಎನ್ನುತ್ತವೆ ಕಿಮ್ಸ್‌ ಮೂಲಗಳು.
 
ಪ್ರಸ್ತುತ ಒಳರೋಗಿಗಳಾಗಿ ದಾಖ­ಲಾದ­ವರಿಗೆ ಕಿಮ್ಸ್‌ ಆಡಳಿತವೇ ಊಟ­ವನ್ನು ವಿತರಣೆ ಮಾಡುತ್ತದೆ. ಇದ­ಕ್ಕಾಗಿಯೇ ಪ್ರತಿ ವರ್ಷ ₹ 1.5 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಹೊಣೆಯನ್ನು ಇಸ್ಕಾನ್‌ ಸಂಸ್ಥೆಗೆ ವಹಿಸಿದ್ದರೆ ಪ್ರತಿ ವರ್ಷ ₹ 21 ಲಕ್ಷ ಉಳಿತಾಯವಾಗುತ್ತಿತ್ತು. ಇದರ ಜೊತೆಗೆ, ಉತ್ತಮ ಗುಣಮಟ್ಟದ ಊಟವೂ ರೋಗಿಗಳಿಗೆ ದೊರೆಯುತ್ತಿತ್ತು. ಹೀಗಾಗಿ, ಇಸ್ಕಾನ್‌ಗೇ ಊಟದ ಜವಾಬ್ದಾರಿ ವಹಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಆಸಕ್ತಿ ವಹಿಸಿದ್ದರು. 
 
ಆದರೆ, ಕಿಮ್ಸ್‌ನ ಅಡುಗೆ ಮನೆಗೆ ಪ್ರಸ್ತುತ ಸಾಮಗ್ರಿಗಳನ್ನು ಪೂರೈಕೆ ಮಾಡುವ ಲಾಬಿ ಈ ಪ್ರಯತ್ನ ಸಾಧ್ಯ­ವಾಗ­ದಂತೆ ಪ್ರಭಾವ ಬೀರಿದೆ ಎಂಬ ಗುಸು ಗುಸು ಕಿಮ್ಸ್‌ ಅಂಗಳದಲ್ಲಿ ಕೇಳಿ ಬರುತ್ತಿದೆ. ಇಲಾಖೆಯ ಉನ್ನತ ಹುದ್ದೆ­ಯ­ಲ್ಲಿರುವ ಅಧಿಕಾರಿಯೊಬ್ಬರು ಈ ಪ್ರಸ್ತಾವಕ್ಕೆ ಅಡ್ಡಿಯಾಗಿದ್ದು, ಪಾರದರ್ಶಕ ನಿಯಮಗಳಿಗಿಂತ ಕಡಿಮೆ ಮೊತ್ತಕ್ಕೆ ಟೆಂಡರ್‌ ನೀಡಿದರೆ ಇದನ್ನೇ ನೆಪವಾಗಿ­ಟ್ಟುಕೊಂಡು ಇತರರು ತಮಗೂ ಟೆಂಡರ್‌ ನೀಡುವಂತೆ ಮುಂದೆ ಬರ­ಬಹುದು ಎಂಬ ಕಾರಣ ನೀಡಿದ್ದಾರಂತೆ.
ಇದರಿಂದ ಕಿಮ್ಸ್‌ ಆಡಳಿತ ಮಂಡಳಿಯ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದ್ದು, ಆ ಅಧಿಕಾರಿ ಬೇರೆ ಇಲಾಖೆಗೆ ವರ್ಗವಾದ ನಂತರ ಮತ್ತೊಂದು ಬಾರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
 
‘ಕರ್ನಾಟಕದಲ್ಲಿ ಪ್ರಸ್ತುತ ಯಾವ ಸರ್ಕಾರಿ ಆಸ್ಪತ್ರೆಯಲ್ಲಿಯೂ ಇಸ್ಕಾನ್‌ ಸಂಸ್ಥೆಯಿಂದ ಊಟ ಪೂರೈಕೆ­ಯಾಗುತ್ತಿಲ್ಲ. ಆದರೆ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪೂರೈಕೆಯಾಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಹಸ್ತಕ್ಷೇಪರಿಂದಾಗಿ ಸದ್ಯಕ್ಕೆ ನಮ್ಮಲ್ಲಿ ಊಟ ಪೂರೈಕೆ ಆಗುವುದು ಅನುಮಾನ’ ಎಂದು ಹಿರಿಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
 
ಇಸ್ಕಾನ್‌ನವರೊಂದಿಗೆ ನಡೆದ ಮಾತುಕತೆಯಂತೆ ಪ್ರತಿ ನಿತ್ಯ ಒಂದು ಹೊತ್ತಿಗೆ 900 ರೋಗಿಗಳಿಗೆ ಊಟ ನೀಡಬೇಕಾಗುತ್ತಿತ್ತು. ಇದು ಈಗ ಕಿಮ್ಸ್‌ನಲ್ಲೇ ತಯಾರಿಸುವ ಅಡುಗೆಗಿಂತಲೂ ಕಡಿಮೆ ಮೊತ್ತಕ್ಕೆ ಇಸ್ಕಾನ್‌ ನೀಡುತ್ತಿತ್ತು ಎಂದು ಅವರು ಹೇಳಿದರು. 
 
**
ಕಿಮ್ಸ್‌ ರೋಗಿಗಳಿಗೆ ಇಸ್ಕಾನ್‌ನಿಂದ ಆಹಾರ ಪೂರೈಸುವ ನಮ್ಮ ಪ್ರಸ್ತಾವವನ್ನು ಇಲಾಖೆ ಒಪ್ಪಿಕೊಂಡಿಲ್ಲ. ಈ ಸಂಬಂಧ ಸರ್ಕಾರ ಈಗಷ್ಟೇ ನಮಗೆ ಮಾಹಿತಿ ನೀಡಿದೆ.
-ಡಾ. ದತ್ತಾತ್ರೇಯ ಬಂಟ್‌
ಕಿಮ್ಸ್‌ ನಿರ್ದೇಶಕರು
 
**
ಕಿಮ್ಸ್‌ನವರು ಯಾವಾಗ ಹೇಳುತ್ತಾರೋ ಆವಾಗಿ­ನಿಂದಲೂ ರೋಗಿಗಳಿಗೆ ಊಟ ಪೂರೈ­ಸಲು ನಾವು ತಯಾರಿದ್ದೇವೆ. ಅವರಿಂದ ಸೂಚನೆ ಬರುವುದನ್ನು ಕಾಯುತ್ತಿದ್ದೇವೆ.
-ರಾಮಗೋಪಾಲ ದಾಸ
ಇಸ್ಕಾನ್‌ ಸಾರ್ವಜನಿಕ ಸಂಪರ್ಕಾಧಿಕಾರಿ, ರಾಯಾಪುರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT