ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿಗೊಂದು ಗುರಿಯ ಗರಿ...

Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ಕೆಲಸ ಅಂದರೆ ಯಾರಿಗೆ ತಾನೇ ಬೇಡ! ಈ ಕೆಲಸಕ್ಕಾಗಿ ನಾನಾ ಕಸರತ್ತುಗಳನ್ನು ಮಾಡುವುದುಂಟು! ಮೀಸಲಾತಿ ಹುಡುಕಾಟ ಸೇರಿದಂತೆ ಲಂಚ ಕೊಟ್ಟಾದರೂ ಸರಿ, ಸರ್ಕಾರಿ ಕೆಲಸ ಪಡೆಯಬೇಕು ಎಂಬ ಹಪಹಪಿತನ ನಮ್ಮ ಸಮಾಜದಲ್ಲಿ ಜೀವಂತವಾಗಿದೆ. ಆದರೆ ಇದೆಲ್ಲವನ್ನೂ ಮೀರಿ ಯುವತಿಯೊಬ್ಬರು ಮೀಸಲಾತಿಯನ್ನು ಧಿಕ್ಕರಿಸಿ ಅಸ್ಸಾಂ ಸರ್ಕಾರದ ಉನ್ನತ ಹುದ್ದೆ ತೊರೆದು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ.

ಅವರೇ 27ರ ಹರೆಯದ ಡಿಂಚಿಫಾ ಬೋರಾ. ಡಿಂಚಿಫಾ ಬೋರಾ ಅಸ್ಸಾಂ ರಾಜ್ಯದವರು. ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎರಡು ವರ್ಷ ಪತ್ರಕರ್ತೆಯಾಗಿಯೂ ಕೆಲಸ ಮಾಡಿದ್ದಾರೆ.

ಈ ಪತ್ರಿಕೋದ್ಯಮದಲ್ಲಿ ಸಾಧಿಸುವಂಥದ್ದಾದರೂ ಏನು? ಎಂಬ ಪ್ರಶ್ನೆಗಳನ್ನು ಹಾಕಿಕೊಂಡೇ ಆ ವೃತ್ತಿಯಿಂದ ಹೊರಬಂದರು. ಅಸ್ಸಾಂ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಕುಳಿತರು. ಅರ್ಜಿ ತುಂಬುವಾಗ ಬೋರಾ ಮೀಸಲಾತಿ ಕಾಲಂ ಭರ್ತಿ ಮಾಡಲಿಲ್ಲ. ಅಂತಿಮವಾಗಿ ಬೋರಾ ಸಂದರ್ಶನಕ್ಕೆ ಆಯ್ಕೆಯಾದರು. ‘ನಿಮಗೆ ಉತ್ತಮ ಅಂಕಗಳು ಬಂದಿವೆ, ಹಾಗೇ ನಿಮ್ಮ ಸಮುದಾಯಕ್ಕೆ  ಶೇ 26 ರಷ್ಟು ಮೀಸಲಾತಿಯಿದೆ. ನೀವು ಈಗಲೂ ಮೀಸಲಾತಿ ಪತ್ರ ತಂದುಕೊಟ್ಟರೆ ನಿಮ್ಮಗೆ ಕೆಲಸ ಸಿಗಲಿದೆ’ ಎಂದು ಸಂದರ್ಶಕರು ಹೇಳಿದಾಗ, ನನಗೆ ಮೀಸಲಾತಿಯಿಂದ ಸಿಗುವಂಥ ಯಾವುದೇ ಕೆಲಸ ಬೇಡ ಎಂದು ಸಂದರ್ಶನ ಕೊಠಡಿಯಿಂದ ಹೊರ ಬಂದರು!

ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ನೆಲೆಸಿರುವ ಬೋರಾ, ಅಲ್ಲಿನ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತೀರಾ ಹಿಂದುಳಿದ ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಾನವೀಯತೆಗಿಂತ ಈ ಜಗತ್ತಿನಲ್ಲಿ ಮೌಲ್ಯವಾದುದು ಯಾವುದೂ ಇಲ್ಲ ಎನ್ನುವ ಬೋರಾ, ಸಮಾಜ ಸೇವೆಯಲ್ಲೇ ಬದುಕಿನ ಸಾರ್ಥಕ್ಯ ಕಂಡುಕೊಳ್ಳುವುದಾಗಿ ಹೇಳುತ್ತಾರೆ.
www. Facebook.com/dinchengfaborua

ತೇಜು ರವಿಲೋಚನ್

ಭಾರತೀಯ ಮೂಲದ ತೇಜು ರವಿಲೋಚನ್, ಅಮೆರಿಕದಲ್ಲಿ ಯುವ ಉದ್ಯಮಿಯಾಗಿದ್ದಾರೆ. 28ರ ಹರೆಯದ ತೇಜು ರವಿಲೋಚನ್, ಸಾಮಾಜಿಕ ಸೇವೆ ಮತ್ತು ಉದ್ಯಮದಲ್ಲಿ ಕ್ರಿಯಾಶೀಲರಾಗಿದ್ದಾರೆ. ಅವರ ಯಶಸ್ವಿ ಜೀವನಗಾಥೆ ಇಂದಿನ ಯುವ ಪೀಳಿಗೆಗೆ ಮಾದರಿ.

ತೇಜು ಹುಟ್ಟಿದ್ದು ಚೆನ್ನೈ ಮಹಾನಗರದಲ್ಲಿ. ಅವರ ತಂದೆ ಸಹ ಉದ್ಯಮಿ. 80ರ ದಶಕದಲ್ಲಿ ತೇಜು ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿತ್ತು. ತೇಜು ಅವರ ವಿದ್ಯಾಭ್ಯಾಸವೆಲ್ಲಾ ನಡೆದಿದ್ದು ಅಮೆರಿಕದಲ್ಲಿ. ಅಲ್ಲಿ ತೇಜು ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.

ತಂದೆಯ ಉದ್ಯಮವನ್ನು ನೋಡಿಕೊಳ್ಳುವುದರ ಜತೆಗೆ ತೇಜು ‘ಅನ್ ರೀಸನಬಲ್’ ಎಂಬ ಸಾಮಾಜಿಕ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. ಇದರ ಮೂಲಕ ವಿಶ್ವದ 50 ರಾಷ್ಟ್ರಗಳಲ್ಲಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದರ ಜತೆಗೆ ವೃತ್ತಿಪರ ಶಿಕ್ಷಣವನ್ನು ಅಭ್ಯಾಸ ಮಾಡಿರುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿಯನ್ನು ಕೊಡಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಉದ್ಯಮದ ಮೂಲಕ ಬಂಡವಾಳವನ್ನು ಕ್ರೋಡೀಕರಿಸಿ ಅದನ್ನು ಸಮಾಜ ಸೇವೆಗೆ ಬಳಕೆ ಮಾಡುತ್ತಿದ್ದಾರೆ.

ಈ ಸಂಸ್ಥೆ ಕಟ್ಟುವುದರ ಹಿಂದೆ ಒಂದು ಸಣ್ಣ ಕಥೆ ಇದೆ ಎನ್ನುತ್ತಾರೆ ತೇಜು. ‘ನಮ್ಮ ಕುಟುಂಬ ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಚೆನ್ನೈಗೆ ಬರುತ್ತಿತ್ತು. ನಾವು ಗೆಳೆಯರು ಮತ್ತು ಸಂಬಂಧಿಕರೊಟ್ಟಿಗೆ ಕೆಲವು ವಾರಗಳನ್ನು ಕಳೆದು ಮತ್ತೆ ಅಮೆರಿಕಕ್ಕೆ ವಾಪಸಾಗುತ್ತಿದ್ದೆವು. ಒಮ್ಮೆ ನಾನು ಚಿಕ್ಕವನಿದ್ದಾಗ ಅಪ್ಪನ ಜತೆ ಮಾರುಕಟ್ಟೆಗೆ ಹೋಗಿದ್ದೆ. ಅಲ್ಲಿ ನನ್ನ ವಯಸ್ಸಿನ ಬಾಲಕನೊಬ್ಬ ಬಂದು ಅಪ್ಪನ ಬಳಿ ಹಣ ಕೇಳಿ ಪಡೆದುಕೊಂಡು ಹೋದ.

ನಾನು ಅಪ್ಪನನ್ನು ಕೇಳಿದೆ, ಯಾಕೆ ಹೀಗೆ ಎಂದು! ಅದಕ್ಕೆ ಅವರು, ಭಾರತದ ಪ್ರತಿ ಬೀದಿಗಳಲ್ಲಿ ಬಡತನವಿದೆ, ಶಿಕ್ಷಣದಿಂದ ಮಾತ್ರ ಇದನ್ನು ಹೋಗಲಾಡಿಸಲು ಸಾಧ್ಯ ಎಂದು ಹೇಳಿದ್ದರು. ಅಂದಿನ ಘಟನೆಯೇ 2009ರಲ್ಲಿ ಅನ್ ರೀಸನಬಲ್ ಸಂಸ್ಥೆ ಹುಟ್ಟಲು ಕಾರಣವಾಯಿತು. ಇಲ್ಲಿಯವರೆಗೂ ಸುಮಾರು 1.6 ಕೋಟಿ ಜನರು ಅನ್‌ರೀಸನಬಲ್‌ ಸಂಸ್ಥೆಯಿಂದ ಪ್ರಯೋಜನ ಪಡೆದಿದ್ದಾರೆ’ ಎನ್ನುತ್ತಾರೆ ತೇಜು.

ಗೌರವ್ ಖನಿಜೊ
ಕೆಲವರು ಏನಾದರೂ ಸಾಧಿಸಬೇಕು, ಸಮಾಜ ನನ್ನನ್ನು ಗುರುತಿಸಬೇಕು ಎಂಬ ಗುರಿ ಅಥವಾ ಹಂಬಲವನ್ನು ಹೊಂದಿರುತ್ತಾರೆ. ಆದರೆ ಅದನ್ನು ಪೂರೈಸಿಕೊಳ್ಳುವಲ್ಲಿ ಶ್ರಮಪಡದೇ, ಆ ಗುರಿಯಲ್ಲಿ ವಿಶ್ವಾಸವಿಡದೇ ಸೋಲುತ್ತಾರೆ. ಆದರೆ ಗುರಿಯೊಂದಿಗೆ ತಾವು ಮಾಡುವ ಕೆಲಸವನ್ನು ವಿಶ್ವಾಸವಿಟ್ಟು ಮಾಡಿದರೆ ಯಶಸ್ಸು ಶತಸಿದ್ಧ ಎಂಬುದಕ್ಕೆ ಯುವಕ ಗೌರವ್ ಖನಿಜೊ ಸಾಕ್ಷಿಯಾಗಿದ್ದಾರೆ.

ವಸ್ತ್ರ ವಿನ್ಯಾಸದಲ್ಲಿ ಡಿಪ್ಲೊಮಾ ಮಾಡಿರುವ ಗೌರವ್ ಖನಿಜೊ, ದೆಹಲಿಯವರು. ಮಧ್ಯಮ ವರ್ಗ ಕುಟುಂಬದಲ್ಲಿ ಹುಟ್ಟಿದ್ದ ಗೌರವ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ವಸ್ತ್ರ ವಿನ್ಯಾಸಕನಾಗಬೇಕು ಎಂಬ ಬಯಕೆ. ಈ ಕ್ಷೇತ್ರದಲ್ಲಿ ಅವರಿಗೆ ಅಪಾರ ಆಕರ್ಷಣೆ. ಮಾಡಿದರೆ ಆ ಕೆಲಸವನ್ನೇ ಮಾಡಬೇಕು ಎಂಬ ಮಹದಾಸೆ. ಗೌರವ್ ಚಿಕ್ಕವನಾಗಿದ್ದಾಗ ಅಪ್ಪ ತೊಡುತ್ತಿದ್ದ ಧೋತಿ, ಅಮ್ಮ ಉಡುತ್ತಿದ್ದ ಸೀರೆಯನ್ನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದರಂತೆ. ಮುಂದೆ ಹತ್ತನೇ ತರಗತಿ ಬಳಿಕ ಡಿಪ್ಲೊಮಾ ಸೇರಿ ಅಂದುಕೊಂಡಿದ್ದ ಕನಸನ್ನು ನನಸು ಮಾಡಿಕೊಂಡರು.

ವೃತ್ತಿ ಜೀವನದ ಆರಂಭದಲ್ಲಿ ಗೌರವ್ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದರು. ಆರಿಸಿಕೊಂಡ ದಾರಿ ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಪದವಿ ಪಡೆದು, ಕೆಲಸಕ್ಕೆ ಸೇರಿದ ಕೂಡಲೇ ನಾನೊಬ್ಬ ದೊಡ್ಡ ವಿನ್ಯಾಸಕ ಎಂಬ ಭ್ರಮೆಯನ್ನು ಕಳಚಿದ್ದು ವೃತ್ತಿಯ ಆರಂಭದ ದಿನಗಳು ಎನ್ನುತ್ತಾರೆ ಗೌರವ್. ಆರಂಭದಲ್ಲಿ ಬಟ್ಟೆಗಳಿಗೆ ಇಸ್ತ್ರಿ ಮಾಡಿ, ಹಿರಿಯ ವಿನ್ಯಾಸಕರು ಹೇಳಿದ ಕೆಲಸಗಳನ್ನು ಮಾಡಲಾಗುತ್ತಿತ್ತು. ‘ಎರಡು ವರ್ಷಗಳನ್ನು ಸೀರೆಗೆ ನೆರಿಗೆ ಹಾಕುವುದರಲ್ಲೇ ಕಳೆದೆ’ ಎಂದು ಆ ದಿನಗಳನ್ನು ಗೌರವ್ ನೆನಪಿಸಿಕೊಳ್ಳುತ್ತಾರೆ.

‘ನಂತರದ ದಿನಗಳಲ್ಲಿ ನನ್ನ ಪ್ರತಿಭೆಯನ್ನು ಗುರುತಿಸಿದ ಹಿರಿಯ ವಿನ್ಯಾಸಕರು ಅವಕಾಶಗಳನ್ನು ಕೊಟ್ಟರು. ಅದನ್ನು ಸದುಪಯೋಗಪಡಿಸಿಕೊಂಡು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ’ ಎಂದು ಗೌರವ್ ಹೇಳುತ್ತಾರೆ.

ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ನಟಿಯರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಸೈಫ್ ಆಲಿಖಾನ್, ಕಾಜೋಲ್, ಪ್ರಿಯಾಂಕಾ ಛೋಪ್ರಾ ಸೇರಿದಂತೆ ಹಾಲಿವುಡ್ ನಟ ನಟಿಯರಿಗೆ ವಿವಿಧ ಮಾದರಿಯ ಉಡುಪುಗಳನ್ನು ವಿನ್ಯಾಸ ಮಾಡಿಕೊಟ್ಟಿದ್ದೇನೆ ಎಂದು ಗೌರವ್ ಹೇಳುತ್ತಾರೆ. ಪ್ರಸ್ತುತ ಗೌರವ್, ಲ್ಯಾಕ್ಮಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
www. Facebook.com/gauravkhanijo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT