ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಗಳ ಅಭಿವೃದ್ಧಿ ಅವಶ್ಯ’

ಬಸವೇಶ್ವರ ರಂಗಮಂದಿರ ಉದ್ಘಾಟನೆ; ಹೋಬಳಿ ಮಟ್ಟದ ಕೃಷಿ ಮೇಳ
Last Updated 24 ಫೆಬ್ರುವರಿ 2017, 5:46 IST
ಅಕ್ಷರ ಗಾತ್ರ

ರಾಮನಗರ: ‘ಚುನಾಯಿತ ಪ್ರತಿನಿಧಿಗಳು ತಮಗೆ ಬರುವ ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಬಳಸಬೇಕು’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇ. ಕೃಷ್ಣಪ್ಪ ಹೇಳಿದರು.

ತಾಲ್ಲೂಕಿನ ಶ್ಯಾನುಭೋಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಬಸವೇಶ್ವರ ರಂಗ ಮಂದಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಭಿವೃದ್ಧಿಗೆ ನೀಡುವ  ಅನುದಾನವನ್ನು ಶಾಶ್ವತ ಕೆಲಸಗಳಿಗೆ ಬಳಕೆ ಮಾಡಲು ಸಹಕರಿಸಿ, ಇಲ್ಲವಾದರೆ ನಾವು ಮಾಡಿದ ಕೆಲಸಗಳು ಸಾಕ್ಷಿಯಾಗಿ ನಿಲ್ಲಲು ಸಾಧ್ಯವಿರುವುದಿಲ್ಲ ಎಂದು ಮನವಿ ಮಾಡಿದ್ದೆ. ಇದರ ಮೇರೆಗೆ ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್, ಶಾಲಾ ಆವರಣದಲ್ಲಿ ಒಂದು ಮಾದರಿ ಬಯಲು ರಂಗ ಮಂದಿರವನ್ನು ಶಾಸಕ ಬಾಲಕೃಷ್ಣ ಅವರ ನೆರವಿನೊಂದಿಗೆ ನಿರ್ಮಾಣ ಮಾಡಿದ್ದಾರೆ’ ಎಂದರು.

‘ಪ್ರತಿಯೊಂದು ಶಾಲೆಗಳಲ್ಲೂ ರಂಗಮಂದಿರಗಳ ನಿರ್ಮಾಣದ ಅವಶ್ಯ  ಇದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಇಂತಹ ವೇದಿಕೆಗಳು ಅತ್ಯವಶ್ಯಕವಾಗಿವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್ ಮಾತನಾಡಿ ‘ಕೃಷ್ಣಪ್ಪನವರ ಅನುದಾನದಲ್ಲಿ ನಿರ್ಮಾಣವಾಗಿರುವ ಈ ರಂಗಮಂದಿರ ಜಿಲ್ಲೆಯಲ್ಲಿ ಮಾದರಿಯಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್‌ ಮಾತನಾಡಿ ‘ಶ್ಯಾನುಭೋಗನಹಳ್ಳಿ ರಾಮನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾಗ ಎಚ್.ಡಿ.ಕುಮಾರಸ್ವಾಮಿ ನಮ್ಮ ಗ್ರಾಮಕ್ಕೆ ಪ್ರೌಡಶಾಲೆ ಮಂಜೂರು ಮಾಡಿಕೊಟ್ಟರು.

ನಂತರ ಶಾಸಕರಾದ ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಕೃಷ್ಣಪ್ಪ ಮತ್ತು ಪುಟ್ಟಣನವರ ಅನುದಾನದಲ್ಲಿ ಶಾಲಾ ಕಟ್ಟಡ ಮತ್ತು ಬಯಲು ರಂಗ ಮದಿರ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಮಾಡಲಾಯಿತು. ಅವರು ಸ್ಪಂದಿಸಿ ಅನುದಾನ ನೀಡಿದ ಪ್ರತಿಫಲವಾಗಿ ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯವಾಯಿತು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಎ.ಎಂ. ಆನಂದ್‌ ಬರೆದಿರುವ ‘ಭಾವಸಿರಿ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಶ್ಯಾನುಭೋಗನಹಳ್ಳಿ ಗ್ರಾಮದ ಪ್ರಮುಖರನ್ನು ಸನ್ಮಾನಿಸಲಾಯಿತು. ಹೋಬಳಿ ಮಟ್ಟದ ಕೃಷಿ, ವಿಜ್ಞಾನ, ಸಾಹಿತ್ಯ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಕೆ.ರಾಜು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ. ಅಶ್ವತ್ಥ್‌, ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಬಿ.ಟಿ. ನೇತ್ರಾವತಿಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ,  ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷ ಹೊನ್ನಗಿರಿಗೌಡ, ಸದಸ್ಯರಾದ ಕೃಷ್ಣ, ಕೂಟಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಶಿವಣ್ಣ, ಮುಖಂಡರಾದ ಎಸ್.ಟಿ. ಪ್ರೇಮ್‌ಕುಮಾರ್, ಎಂ.ಸಿ. ರಂಗಸ್ವಾಮಿ, ಎಸ್‌ಡಿಎಂಸಿ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್‌, ಹಾಸ್ಯ ಕಲಾವಿದ ಗೋಪಾಲ್‌, ಶಾಲೆಯ ಮುಖ್ಯಶಿಕ್ಷಕಿ ಎಸ್.ಕೆ. ಮಂಜುಳಾ ಇತರರು ಇದ್ದರು. 

ಶಿಕ್ಷಕಿಯರು ಪ್ರಾರ್ಥಿಸಿದರು. ಮೆಳೆಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಚಿನ್ನಗಿರಿಗೌಡ ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT