ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ತ್ಯಾಜ್ಯ: ಕೋರ್ಟ್ ತೀರ್ಪು ಕಟ್ಟುನಿಟ್ಟಾಗಿ ಜಾರಿಯಾಗಲಿ

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಂಸ್ಕರಿಸದ ತ್ಯಾಜ್ಯ ನೀರನ್ನು ನದಿ, ಕೆರೆಗಳಿಗೆ ಕೈಗಾರಿಕಾ ಘಟಕಗಳು ಹರಿಯಲು ಬಿಡುವುದನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್‌ ಮೂರು ತಿಂಗಳ ಗಡುವು ನೀಡಿದೆ.  ದೇಶದಾದ್ಯಂತ ಜಲಮೂಲಗಳು  ಕಲುಷಿತಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠ ನೀಡಿರುವ ಈ ತೀರ್ಪು ಮಹತ್ವದ್ದು .  ಕಲುಷಿತ ನದಿ ನೀರಿನಿಂದ ಜನರು ಎದುರಿಸುವ ಬವಣೆ ಕುರಿತು ಸರ್ಕಾರಗಳಿಗೆ ಕನಿಷ್ಠ ಕಾಳಜಿಯೂ ಇಲ್ಲ ಎಂದು ಪೀಠ ಹೇಳಿರುವುದು ಅಧಿಕಾರಸ್ಥರ ಕಣ್ಣು ತೆರೆಸಬೇಕಾಗಿದೆ. ಮೂರು ತಿಂಗಳ ಗಡುವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಕಾರ್ಯಾರಂಭ ಮಾಡದಿದ್ದರೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿ ನಿರ್ದಾಕ್ಷಿಣ್ಯವಾಗಿ ಘಟಕಗಳನ್ನು ಮುಚ್ಚಬೇಕೆಂದು ಪೀಠವು ಆದೇಶಿಸಿದೆ. ನದಿಗಳ ಮಾಲಿನ್ಯದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕಿರುವ ಅಗತ್ಯವನ್ನು ಈ ನಿರ್ದೇಶನ ಎತ್ತಿಹಿಡಿದಿದೆ.  ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2015ರಲ್ಲಿ ನಡೆಸಿದ್ದ ಅಧ್ಯಯನದ ಪ್ರಕಾರ,   275 ನದಿಗಳ ಹರಿವು  302 ಕಡೆಗಳಲ್ಲಿ ಕಲುಷಿತಗೊಂಡಿರುವುದು ದೃಢಪಟ್ಟಿತ್ತು.  ಜೈವಿಕ ರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ) ಮಟ್ಟ ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿತ್ತು.  ಪರಿಸರ ಸಂರಕ್ಷಣೆಯ ನಿಯಮಗಳನ್ನು ಪಾಲಿಸುವ ಭರವಸೆ ನೀಡಿ ಕಾರ್ಯಾರಂಭ ಮಾಡುವ ಕಾರ್ಖಾನೆಗಳು ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡ ಅನುಪಯುಕ್ತ ಕಚ್ಚಾವಸ್ತು, ಕೊಳೆ ನೀರನ್ನು ಜಲಮೂಲಗಳಿಗೆ ಬಿಡುವ ಕೆಟ್ಟ ಚಾಳಿ ರೂಢಿಸಿಕೊಂಡಿವೆ.  ಸುಪ್ರೀಂ ಕೋರ್ಟ್‌ನ ತೀರ್ಪು, ಕೈಗಾರಿಕೆಗಳ ಈ ಜೀವವಿರೋಧಿ ಪ್ರವೃತ್ತಿಗೆ ಕಡಿವಾಣ ಹಾಕಲು ನೆರವಾಗಲಿದೆ ಎಂದು ಬಹುವಾಗಿ ನಿರೀಕ್ಷಿಸಬಹುದಾಗಿದೆ.

ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ನಿರ್ವಹಣಾ ವೆಚ್ಚ ಉಳಿಸುವ ಏಕೈಕ ಉದ್ದೇಶದಿಂದ  ಕಾರ್ಖಾನೆಗಳ ಮಾಲೀಕರು ಪರಿಸರ ಮತ್ತು ಜೀವಸಂಕುಲಕ್ಕೆ ಮಾರಕವಾಗುವ ಪ್ರವೃತ್ತಿಯನ್ನು ಬಹಳ ವರ್ಷಗಳಿಂದಲೂ  ರೂಢಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಜೀವ ಜಲವು ಜಲಚರಗಳು ಮತ್ತು ಮಾನವನಿಗೂ ವಿಷವಾಗಿ ಪರಿಣಮಿಸಿದೆ. ಕಾರ್ಖಾನೆಗಳ ನಿರ್ಲಕ್ಷ್ಯದ ಜತೆಗೆ, ಕರ್ತವ್ಯಲೋಪ ಎಸಗುತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನೂ ಹೊಣೆಯನ್ನಾಗಿ ಮಾಡಬೇಕಾಗಿದೆ. ಇಂತಹ ಅಪಾಯವನ್ನು ತಡೆಗಟ್ಟಲು ಈಗ ತಕ್ಷಣಕ್ಕೆ ಕಾರ್ಯೋನ್ಮುಖವಾಗದಿದ್ದರೆ ಅದರಿಂದಾಗುವ ವ್ಯಾಪಕ ಹಾನಿಯನ್ನು ಭವಿಷ್ಯದಲ್ಲಿ  ಸರಿಪಡಿಸಲು ಸಾಧ್ಯವಾಗಲಾರದು ಎಂದೂ  ಕೋರ್ಟ್‌ ತೀವ್ರ ಆತಂಕ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. ಕಾರ್ಖಾನೆಗಳ ಅಪಾಯಕಾರಿಯಾದ ತ್ಯಾಜ್ಯವು ನದಿ, ಹಳ್ಳ– ಕೊಳ್ಳಗಳ ನೀರಿನ ಜತೆ ಸೇರಿ ಜಲಚರಗಳು ಮತ್ತು ನದಿಗಳಗುಂಟ ನೆಲೆಸಿರುವ ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಶುದ್ಧ ಕುಡಿಯುವ ನೀರು ಸೇವಿಸುವ ಹಕ್ಕಿನಿಂದಲೂ ಜನರು ವಂಚಿತರಾಗುತ್ತಿದ್ದಾರೆ.  ಚರ್ಮ ಕಾಯಿಲೆ ಸೇರಿದಂತೆ ಹಲವು ಬಗೆಯ ರೋಗಗಳಿಗೂ ಕಲುಷಿತ ನೀರು ಕಾರಣವಾಗುತ್ತಿದೆ. ಕೈಗಾರಿಕಾ ತ್ಯಾಜ್ಯದ ಸೇರ್ಪಡೆಯಿಂದ ನೀರಿನಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೀನುಗಳು ಸಾವನ್ನಪ್ಪುವ ಅನೇಕ ಘಟನೆಗಳು ವರದಿಯಾಗುತ್ತಲೇ ಇವೆ. 

ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸದ  ಸ್ಥಳೀಯ ಸಂಸ್ಥೆಗಳ ಬೇಜವಾಬ್ದಾರಿಯನ್ನೂ ಪೀಠವು ಕಟುವಾಗಿ ಟೀಕಿಸಿ, ಅವುಗಳ ಪ್ರಾಥಮಿಕ ಕರ್ತವ್ಯ ನೆನಪಿಸಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಮೂರು ವರ್ಷಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೋರ್ಟ್‌ ನೀಡಿರುವ ಗಡುವನ್ನೂ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.  ಹಣದ ಕೊರತೆ ಎದುರಾದರೆ ಕಾರ್ಖಾನೆಗಳಿಂದ ವೆಚ್ಚ ಭರ್ತಿ ಮಾಡಿಕೊಳ್ಳಲು ಸೂಚಿಸಿರುವುದು ಸೂಕ್ತ ಸಲಹೆಯಾಗಿದೆ.  ಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೀಠವು ತಾಕೀತು ಮಾಡಿರುವುದನ್ನು ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಪರಿಸರ  ಕಾರ್ಯದರ್ಶಿಗಳು ನಿರ್ಲಕ್ಷಿಸುವಂತಿಲ್ಲ. 

ನಮ್ಮ ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳೂ ರಾಸಾಯನಿಕ ತ್ಯಾಜ್ಯವನ್ನು ನದಿಗೆ ಹರಿಬಿಡುತ್ತಿರುವ ಬಗ್ಗೆ ಹಸಿರು ನ್ಯಾಯಮಂಡಳಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ನೀಡಿರುವ ನಿದರ್ಶನಗಳಿವೆ. ಜೊತೆಗೆ, ಅಬ್ಬರದ ಪ್ರಚಾರದೊಂದಿಗೆ ಆರಂಭವಾದ ಗಂಗಾ ನದಿ ಶುದ್ಧೀಕರಣ ಯೋಜನೆ ಬಗ್ಗೆ ಆಶಾದಾಯಕ ವರದಿಗಳೇನೂ ಬರುತ್ತಿಲ್ಲ. ವಸ್ತುಸ್ಥಿತಿ ಹೀಗಿರುವಾಗ, ಕೈಗಾರಿಕೆಗಳ ತ್ಯಾಜ್ಯ ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಇದೆ.  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇನ್ನು ಮುಂದಾದರೂ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಜಾರಿಗೆ ತರಲು ಮುಂದಾಗಲಿ. ಈ ಬಗ್ಗೆ ಹಗುರ ಧೋರಣೆ ಬೇಡ.  ಜಲಚರಗಳು ಮತ್ತು ನದಿ ಪಾತ್ರದ ಜನರು ಶುದ್ಧ ನೀರು,  ಗಾಳಿ ಪಡೆಯಲು ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT