ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಹಕ್ಕುಗಳು: ‘ಅಸಹಜ’ ರಾಯಭಾರಿಯಿಂದ ಒಂದು ಪ್ರೀತಿಯ ಪತ್ರ…

Last Updated 27 ಫೆಬ್ರುವರಿ 2017, 15:57 IST
ಅಕ್ಷರ ಗಾತ್ರ

ಇತ್ತೀಚೆಗೆ ನನ್ನನ್ನು ನಾಗಾಲ್ಯಾಂಡ್‌ನ ಅಂಗವಿಕಲ ಮತದಾರರ ಹಕ್ಕುಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ವಿನಂತಿಸಲಾಯಿತು. ಈ ವಿಚಾರವಾಗಿ ಅವರೊಂದಿಗೆ ಚರ್ಚಿಸಿದ ಬಳಿಕ,  ಶಿಕ್ಷಣ ಮತ್ತು ಅಂಗವಿಕಲತೆ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ಸದಾವಕಾಶ ಎಂದು ಭಾವಿಸಿ ರಾಯಭಾರಿಯಾಗುವ ಆಹ್ವಾನವನ್ನು ಒಪ್ಪಿಕೊಂಡೆ.

ಕಳೆದ ತಿಂಗಳು ಜನವರಿ 25ರ ರಾಷ್ಟ್ರೀಯ ಮತದಾರರ ಹಕ್ಕುಗಳ ದಿನದಂದು ಮೊದಲ ಸುತ್ತಿನ ರಾಯಭಾರಿ ಸಭೆಯನ್ನು ಆಯೋಜಿಸಲಾಗಿತ್ತು. ರಾಯಭಾರಿಯಾಗಿ ಇದು ನನ್ನ ಮೊದಲ ಕಾರ್ಯಕ್ರಮವಾಗಿತ್ತು.  ಸಮಾರಂಭಕ್ಕೆ ನಾಗಾಲ್ಯಾಂಡಿನ ಚುನಾವಣಾ ಆಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಗೆ ನೇಮಕವಾಗಿದ್ದ ಮತದಾರರ ಹಕ್ಕುಗಳ ರಾಯಭಾರಿಗಳು ಹಾಜರಿದ್ದರು.

ಸಭೆ ಆರಂಭವಾಯಿತು. ಅಧಿಕಾರಿಗಳು ರಾಯಭಾರಿಗಳ ಕಿರುಪರಿಚಯ ಮಾಡಿಕೊಡುವುದರ ಜತೆಗೆ ರಾಯಭಾರಿಗಳ ಪಾತ್ರ ಏನು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಪರಿಚಯದ ಮಾತುಗಳು ಮುಗಿದ ಮೇಲೆ  ಈ ಭಾರಿ ನಾವು ಎರಡು ರೀತಿಯ ರಾಯಭಾರಿಗಳನ್ನು ಕಾಣಬಹುದು. ಒಂದು ಸಹಜ, ಮತ್ತೊಂದು ಭಿನ್ನ ಮನುಷ್ಯರು  ಎಂದು ಅಂಗವಿಕಲತೆಯನ್ನು ಉದ್ದೇಶಿಸಿಯೇ ಹೇಳಿದರು. ಅದು ಅಸಹಜ ಎಂಬುದು ಸ್ಷಷ್ಟವಾಗಿತ್ತು.

ಇದರಿಂದ ನಾನು ವಿಚಲಿತಳಾಗಲಿಲ್ಲ, ಏಕೆಂದರೆ ಇಂತಹ ಮನಸ್ಥಿತಿ ಇರುವವರ ನಡುವೆ ನಾವು ಬದುಕುತ್ತಿದ್ದೇವೆ.  ನಾನು ಅಂಗವಿಕಲತೆಯನ್ನು ಹೊಂದಿದ್ದೇನೆ, ನಾನು ಗಾಲಿಕುರ್ಚಿಯನ್ನು ಬಳಸುತ್ತೇನೆ, ಈ ಸಮಾಜದಲ್ಲಿ ಅಂಗವಿಕಲರು ಭಿನ್ನವಾಗಿ ಕಾಣುವುದರಿಂದ ಅವರು ಅಸಹಜ ವ್ಯಕ್ತಿಗಳು ಎಂಬ ಮನಸ್ಥಿತಿ ಬಂದುಬಿಟ್ಟಿದೆ. ಅಂಗವಿಕಲರು ಸಾಮಾನ್ಯ ಮನುಷ್ಯರಿಗಿಂತ ಭಿನ್ನವಾಗಿರುವವರು ಮತ್ತು ಸಾಮಾನ್ಯ ವ್ಯಕ್ತಿಗಳಂತೆ ಕೆಲಸ ಮಾಡಲಾಗದವರು ಎಂಬ ಮನಸ್ಥಿತಿ ಈ ಸಮಾಜದಲ್ಲಿ ಬೆಳೆದು ಬಿಟ್ಟಿದೆ.  

ನಾನು ಅಂಗವಿಕಲತೆಯನ್ನು ಹೊಂದಿದ್ದೇನೆ, ನನಗೆ ಗೊತ್ತು ಈ ಸಾಮರ್ಥ್ಯದ ಜಗತ್ತಿನಲ್ಲಿ ಕೆಲಸ ಮಾಡುವುದು ಅಸಾಧ್ಯ ಎಂಬುದು. ಅಸಾಮರ್ಥ್ಯ ಎಂಬುದು ಸಾಮಾಜಿಕವಾಗಿಯೂ ಮತ್ತು ನಮ್ಮ ನಿತ್ಯದ ಜೀವನದೊಟ್ಟಿಗೆ ಸೇರಿಬಿಟ್ಟಿದೆ. ಏಕೆಂದರೆ ನಾನು ಅಂಗವಿಕಲತೆಯನ್ನು ಹೊಂದಿದ್ದೇನೆ. ಉದಾಹರಣೆಗೆ ನಾನು ಕಾಮನೆಗಳು ಅಥವಾ ಲೈಂಗಿಕ ಆಸಕ್ತಿಯನ್ನು  ಸಾಮಾನ್ಯರಂತೆ ವ್ಯಕ್ತಪಡಿಸಲು ಸಾಧ್ಯವಿಲ್ಲ.

ಇಂದಿನ ಕಾಲಘಟ್ಟದ ನಮ್ಮ ಸಮಾಜದಲ್ಲಿ ಅಂಗವಿಕಲರು ಎಂದರೆ ಅಸಹಜ ವ್ಯಕ್ತಿಗಳು, ಇವರು ಅಸಮರ್ಥರು ಅಥವಾ ಇವರು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಲಾರರು ಎಂಬ ಬಲವಾದ ಮನೋವೃತ್ತಿ ಬೆಳೆದುಬಿಟ್ಟಿದೆ. ಇವರು ಅನುಕಂಪ ಮತ್ತು ಸಹಾಯವನ್ನು ಬಯಸುವವರು ಎಂಬ ಭಾವನೆ ಬೇರೂರಿದೆ.

ನಾನು ಹೊಸಬರನ್ನು ಭೇಟಿಯಾದಗಲೆಲ್ಲ ಅವರು ಅನುಕಂಪದ ಮಾತುಗಳನ್ನು ಎದುರಿಸಬೇಕಾಗುತ್ತದೆ. ಅಯ್ಯೋ ಪಾಪ, ಈ ರೀತಿ ಆಗಬಾರದಿತ್ತು, ಜೀವನ ಪೂರ್ತಿ ಕಷ್ಟಪಡಬೇಕು, ನಿಜವಾಗಲೂ ನೀವು ತೊಂದರೆ ಅನುಭವಿಸುತ್ತಿರುವಿರಿ ಎಂಬ ಅನುಕಂಪದ ಮಾತುಗಳನ್ನು ಆಲಿಸುವುದು ಸಾಮಾನ್ಯವಾಗಿದೆ. ಈ ಬಗ್ಗೆ ನಾನು ಯೋಚನೆ ಮಾಡದೇ ನನ್ನ ಬದುಕಿನ ಕಡೆ ಗಮನ ಹರಿಸುತ್ತೇನೆ.

ಕೆಲವರು ಗ್ರಹಿಸಿರುವಂತೆ ಅಥವಾ ಹೇಳುವಂತೆ ಅಂಗವಿಕಲರು ಸಾಮಾನ್ಯರಂತೆ ಬದುಕಲು ಸಾಧ್ಯವಿಲ್ಲ ಎಂಬುದು ನಿಜ, ಆದರೆ ನಮ್ಮ ಆರೋಗ್ಯ, ಕಾಮನೆಗಳು, ಭಾವನೆಗಳು ಕೂಡ ಸಾಮಾನ್ಯರಂತೆ ಸಹಜವಾಗಿಯೇ ಇವೆ. ಇಷ್ಟು ಸಾಕು ತಾನೇ! ಕೆಲವು ಸಂದರ್ಭದಲ್ಲಿ ಸಾಮಾನ್ಯರಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ಬೇರೆ ರೀತಿಯಲ್ಲಿ ಆ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೇವೆ ಅದಕ್ಕಾಗಿ ಶ್ರಮವಹಿಸಿ ಕಲಿಯುತ್ತೆವೆ.  ನಮ್ಮ  ಜೀವನದಲ್ಲಿ ಕಷ್ಟಗಳೇ ಸ್ಥಿರವಾಗಿ ಇರುವವು ಎಂದು ನಾನು ಎಣಿಸುವುದಿಲ್ಲ.  ಈ ಕಷ್ಟಗಳನ್ನು ಎದುರಿಸಲು ನಾವು ಪಡುವ ಶ್ರಮ ನಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಮೂಡಿಸುವುದರ ಜತೆಗೆ ಬದುಕಿನ ಪ್ರೀತಿಯನ್ನು ಕಲಿಸುತ್ತದೆ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ.
ದುರಾದೃಷ್ಟಕ್ಕೆ ನನಗೆ ಅಂಗವೈಕಲ್ಯ ಉಂಟಾಗಿರಬಹುದು. ಆಗಂತ ನಾನು ಖಿನ್ನತೆಗೆ ಒಳಗಾಗಿ ಮನೆಯ ಮೂಲೆಯಲ್ಲಿ ಕುಳಿತಿಲ್ಲ.

ಸಾಮಾನ್ಯರಂತೆ ಶಿಕ್ಷಣ ಪಡೆದಿದ್ದೇನೆ, ಕೆಲಸ ಮಾಡುತ್ತೇನೆ. ಹಣ ಸಂಪಾದಿಸುತ್ತೇನೆ, ಸ್ವತಂತ್ರವಾಗಿ ಬದುಕುತ್ತಿರುವಾಗ ‘ ಅಸಹಜ’ ಎಂದು ಹೇಳಲು ಸಾಧ್ಯವೇ?  ನಾನು ಪ್ರವಾಸ ಮಾಡುತ್ತೇನೆ, ಪಾರ್ಟಿ ಮಾಡುತ್ತೇನೆ, ಸಂತೋಷವಾಗಿ ಕಾಲ ಕಳೆಯುತ್ತೇನೆ ಕೂಡ.  ಓ ದೇವರೇ ಅಂಗವಿಕಲರು ಸಹ ಸಮಾಜದ ಮುಖ್ಯವಾಹಿಯಲ್ಲಿ ಬದುಕುತ್ತಿದ್ದಾರೆ ಎಂಬುದೇ ನನಗೆ  ನೆಮ್ಮದಿಯ ವಿಷಯವಾಗಿದೆ.
ನನಗೆ ಅಂಗವೈಕಲ್ಯ ಇರಬಹುದು ಆದರೆ ನನ್ನ ಬದುಕು ಮುಗಿದಿಲ್ಲ, ನನ್ನ ಅಸಹಜ ಬದುಕನ್ನು ಸಂತೋಷದಿಂದ ಪ್ರೀತಿಸುತ್ತೇನೆ, ಆದರೆ ಅನುಕಂಪವನ್ನು ನಾನು ಬೇಡುವುದಿಲ್ಲ.

ಸಹನಾಭೂತಿಯಿಂದ ಕೆಲವರು ಅಂಗವಿಕಲರಿಗೆ ನೆರವು ನೀಡುವುದನ್ನು  ನೋಡಿದ್ದೇನೆ. ಬೇರೆಯವರ ನೆರವನ್ನು ಕೂಡ  ಅನುಭವಿಸಿದ್ದೇನೆ. ಆದರೆ ಸಹಾಯ ಕೇವಲ ಅನುಕಂಪವಾಗಬಾರದು. ಇದು ಅಂಗವಿಕಲರ ಬದುಕಿನ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರುತ್ತದೆ. ಅಂಗವಿಕಲರಿಗೆ ಮತ್ತೊಬ್ಬರ ಸಹಾಯ ಕೆಲವು ಸಂದರ್ಭಗಳಲ್ಲಿ ಬೇಕು ಎಂಬುದು ಖಂಡಿತವಾಗಿಯೂ ನನಗೆ ಗೊತ್ತು ಆದರೆ ಅದು ವಾಡಿಕೆಯಾಗಬಾರದು. ಅವರ ಸಮಸ್ಯೆಗಳನ್ನು ಅವರೆ ಪರಿಹಾರ ಮಾಡಿಕೊಳ್ಳುವಂತೆ ಸಾಮಾನ್ಯರು ಪ್ರಯತ್ನಿಸಬೇಕು.

ಅಂಗವಿಕಲರಿಗೆ ಸಹಾಯ ಮಾಡಬೇಕು ಎಂಬ ಕಾಳಜಿ ಇದ್ದವರು, ಅವರಿಗೆ ನೆರವು ನೀಡಬೇಕು ಎಂದು ಬಯಸುವವರು ನಾನು ಹೇಳುವ ವಿಚಾರಗಳನ್ನು ಪಾಲಿಸುವುದು ಉತ್ತಮ.  ಅಂಗವಿಕಲತೆ ಇರುವ ವ್ಯಕ್ತಿಗಳ ಜತೆ ಮುಕ್ತವಾಗಿ ಮಾತನಾಡಿ, ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಎದರಿಸುವುದು ಹೇಗೆ ಎಂದು ಅವರಿಗೆ ಹೇಳಿಕೊಟ್ಟರೆ ಅದು ನಿಜವಾದ ಸೇವೆಯಾಗುತ್ತದೆ. ಸರ್ಕಾರ ಅಥವಾ ಸೇವಾ ಸಂಸ್ಥೆಗಳು ಈ ಕೆಲಸವನ್ನು ಮಾಡುತ್ತಿಲ್ಲ, ಬದಲಾಗಿ ಅಂಗವಿಕಲರ ಸಮಸ್ಯೆಗಳನ್ನು ಅವರೇ ಅರಿತುಕೊಂಡು ಅನುಕಂಪದಿಂದ ಸಾಧನ ಸಲಕರಣೆ ನೀಡುತ್ತಾರೆ. ಈಗೆ ಮಾಡುತ್ತಿರುವುದನ್ನು  ತಪ್ಪು ಎಂದು ನಾನು ಹೇಳುತ್ತಿಲ್ಲ ಆದರೆ ಇದು ಅನುಕಂಪದ ಒಂದು ಭಾಗ ಅಷ್ಟೆ!

ಸಮಾಜದಲ್ಲಿ ಅಂಗವಿಕಲರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು, ಅವರಿಗೆ ಶಿಕ್ಷಣ ಕೊಡುವುದು ಮತ್ತು ದೈಹಿಕ ನ್ಯೂನತೆಗಳಿಗೆ ಚಿಕಿತ್ಸೆ ಕೊಡಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಅಂಗವಿಕಲರಿಗೆ ನಿಜವಾದ ಸೇವೆ ಮಾಡಿದಂತಾಗುತ್ತದೆ.
-ಡಯತೊನೊ ನಖ್ರೊ
( ಲೇಖಕಿ ಡಯತೊನೊ ನಖ್ರೊ ಅವರು ಅಂಗವಿಕಲರ ಹಕ್ಕುಗಳಗಾಗಿ ನಾಗಾಲ್ಯಾಂಡಿನಲ್ಲಿ ಹೋರಾಟ ನಡೆಸುತ್ತಿದ್ದಾರೆ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT