ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮೇಶ್ವರ್‌ ಬದಲಾವಣೆಗೆ ಹಿರಿಯ ಸಚಿವರ ಪಟ್ಟು

Last Updated 27 ಫೆಬ್ರುವರಿ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ವಿರುದ್ಧ ಹಿರಿಯ ಸಚಿವರು ತಿರುಗಿಬಿದ್ದಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಕಲಹ ಬಿರುಸುಗೊಂಡಿದೆ.

‘ನಾಲ್ಕು ವರ್ಷ ಅವಧಿ ಪೂರೈಸಿರುವ ಸಚಿವರನ್ನು ಕೈಬಿಟ್ಟು, ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು. ಹೊಸ ಮುಖಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು’ ಎಂಬ ವಿಷಯ ಸಮನ್ವಯ ಸಮಿತಿಯಲ್ಲಿ ಚರ್ಚೆಗೆ ಬರಲಿದೆ ಎಂಬ ಕಾರ್ಯಸೂಚಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಿವಾದ  ಪರಮೇಶ್ವರ್‌ ತಲೆಗೆ ಅಂಟಿಕೊಂಡಿದೆ ಎನ್ನಲಾಗಿದೆ.

‘ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷದ ವರ್ಚಸ್ಸನ್ನು ವೃದ್ಧಿಸಲು ಕಠಿಣ ತೀರ್ಮಾನಗಳು’ ಎಂಬ ಶೀರ್ಷಿಕೆಯಡಿ ಮಾಧ್ಯಮ ಕಚೇರಿಗೆ ತಲುಪಿದ್ದ ಎರಡು ಪುಟಗಳ ಕಾರ್ಯಸೂಚಿ ಈಗ ಕಾಂಗ್ರೆಸ್‌ ನಲ್ಲಿ ಅಸಮಾಧಾನವನ್ನು ಭುಗಿಲೆಬ್ಬಿಸಿದೆ.

ಭಾನುವಾರ ಬೆಂಗಳೂರಿನಲ್ಲಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ಸಿಂಗ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಐವರು ಹಿರಿಯ ಸಚಿವರು, ಈ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.

‘ಸರ್ಕಾರ ಒಳ್ಳೆಯ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ತಾವು ಕೆಲಸ ಮಾಡದೇ ಇದ್ದರೆ  ಒಂದು ಕ್ಷಣವೂ ತಮ್ಮನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬೇಡಿ. ನಾವೆಲ್ಲ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಆರು ವರ್ಷದಿಂದ ಕೆಪಿಸಿಸಿ ಅಧ್ಯಕ್ಷರಾಗಿರುವ  ಪರಮೇಶ್ವರ್‌ ಮತ್ತೊಂದು ಅವಧಿಗೆ ಮುಂದುವರಿಯಲು ಯತ್ನಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಗೆಲ್ಲಲಾಗದ ಅವರನ್ನು ಎರಡನೆ ಅವಧಿಗೆ ಮುಂದುವರಿಸಿದ್ದೇ ತಪ್ಪು. 4 ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿದವರನ್ನು ತೆಗೆಯಬೇಕಾದರೆ 6 ವರ್ಷ ಪೂರೈಸಿದವರನ್ನು ಮೊದಲು ಆ ಹುದ್ದೆಯಿಂದ ತೆಗೆಯಬೇಕಲ್ಲವೇ? ಎಂದು ಪ್ರಶ್ನಿಸಿದ್ದಾಗಿ ಸಚಿವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಸಮನ್ವಯ ಸಮಿತಿ ಸಭೆ ಆರಂಭವಾದಾಗ ಕೆಪಿಸಿಸಿ ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿದ್ದ ಕಾರ್ಯಸೂಚಿಯನ್ನು ಪರಮೇಶ್ವರ್‌ ಓದಿದರು. ಅದರಲ್ಲಿ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪರಿಶೀಲನೆ, ರಾಜ್ಯದ ರಾಜಕೀಯ ಸ್ಥಿತಿ, ಮುಂದಿನ ಚುನಾವಣೆಗೆ ಸಿದ್ಧತೆ
ಹಾಗೂ ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳು ಎಂದಷ್ಟೇ ಇತ್ತು.

ಪರಮೇಶ್ವರ್‌ ಮಾತು ಮುಗಿಯುತ್ತಿದ್ದಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ, ‘4 ವರ್ಷ ಪೂರೈಸಿದ ಸಚಿವರನ್ನು ಬದಲಾಯಿಸಿ ಹೊಸ ಮುಖಗಳನ್ನು ಕ್ಯಾಬಿನೆಟ್‌ಗೆ ಸೇರಿಸಬೇಕು ಎಂಬ ಅಜೆಂಡಾ ಇದೆಯಂತಲ್ರೀ. . .?’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ‘ಅದೆಲ್ಲಾ ಮಾಧ್ಯಮಗಳ ಸೃಷ್ಟಿ’ ಎಂದು ಹೇಳಿ ವಿಷಯ ಬದಲಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಪರಮೇಶ್ವರ್‌ ಬದಲಾವಣೆಗೆ ಬೇಡಿಕೆ: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರನ್ನು ತರಬೇಕು ಎಂಬ ಬೇಡಿಕೆಗೆ ಈಗ ಮತ್ತೆ ಬಲವಾಗಿ ಚಾಲ್ತಿಗೆ ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಸ್‌.ಆರ್‌. ಪಾಟೀಲ ಅಥವಾ ಅಪ್ಪಾಜಿ ನಾಡಗೌಡ ಅವರನ್ನು ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಸಮನ್ವಯ ಸಮಿತಿ ಸಭೆಯಲ್ಲಿಯೇ ವಿಷಯ ಪ್ರಸ್ತಾಪಿಸಿದ ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ, ‘ಪರಮೇಶ್ವರ್‌  ಸಚಿವರಾಗಿ ಮುಂದುವರಿಯಲಿ, ಅಧ್ಯಕ್ಷ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಿ’ ಎಂದು ಆಗ್ರಹಿಸಿದರು ಎನ್ನಲಾಗಿದೆ.

ವಲಸಿಗನೆಂದೇ ನೋಡುವುದು ಏಕೆ – ಸಿ.ಎಂ ಪ್ರಶ್ನೆ
ಕಾಂಗ್ರೆಸ್‌ ಪಕ್ಷ ಸೇರಿ 10 ವರ್ಷ ಕಳೆದಿದ್ದು, ಯಾವುದೇ ಭೇದ ಭಾವ ತೋರದಿದ್ದರೂ ನನ್ನನ್ನು ವಲಸಿಗ ಎಂದು ಟೀಕಿಸುವುದು ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನೋವು ತೋಡಿಕೊಂಡರು ಎನ್ನಲಾಗಿದೆ.

ಪಕ್ಷದ ವರಿಷ್ಠೆ ಸೋನಿಯಾಗಾಂಧಿ  ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದೆ. ಪಕ್ಷ ಅಧಿಕಾರಕ್ಕೆ ಬಂದಾಗ ಹೈಕಮಾಂಡ್‌ ನನ್ನನ್ನು ಮುಖ್ಯಮಂತ್ರಿಯಾಗಿ ನಿಯೋಜಿಸಿತು. ಅಲ್ಲಿಂದ ಇಲ್ಲಿಯವರೆಗೂ  ಮೂಲ ಕಾಂಗ್ರೆಸಿಗರು, ಹೊರಗಿನಿಂದ ಬಂದವರು ಎಂಬ ಭಿನ್ನತೆಯಿಂದ ವರ್ತಿಸಲಿಲ್ಲ. ಹಾಗಿದ್ದರೂ ಜಾಫರ್‌ ಷರೀಫ್ ಅಂತಹ ಹಿರಿಯ ನಾಯಕರು ಇದು ಕುರುಬರ ಸರ್ಕಾರ ಎಂದು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಅವರ ಬಗ್ಗೆ ಹೈಕಮಾಂಡ್‌ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಸರ್ಕಾರದ ಹಿಂದಿನ ಯಾವುದೇ ಮುಖ್ಯಮಂತ್ರಿ 90 ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸುವಾಗ ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರು ಹೇಳಿದವರಿಗೆ ಆದ್ಯತೆ ನೀಡಿದೆ. ನನ್ನ ಬೆಂಬಲಿಗರಿಗೆ ಹೆಚ್ಚಿನ ಸ್ಥಾನ ಕೊಡಲಿಲ್ಲ. ಹೀಗಿದ್ದರೂ ನನ್ನನ್ನು ವಲಸಿಗ, ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕುತ್ತಾರೆ, ಮುಖ್ಯಮಂತ್ರಿ ಹುದ್ದೆಯಿಂದ ಬದಲಿಸಿ ಎಂದು ಹಿರಿಯ ನಾಯಕರು ಆಗ್ರಹಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು ಎನ್ನಲಾಗಿದೆ.

‘ಡೈರಿಯ ತನಿಖೆ ಐಟಿ ಇಲಾಖೆ ನಡೆಸಲಿ’
ದಾವಣಗೆರೆ: 
‘ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಹಾಗೂ ಗೋವಿಂದರಾಜ್‌ ಅವರಿಗೆ ಸೇರಿದ್ದು ಎನ್ನಲಾದ ಡೈರಿಗಳನ್ನು ವಶಪಡಿಸಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ, ಅವುಗಳ ತನಿಖೆ ನಡೆಸಲಿ. ಯಾರಾದರೂ ತಪ್ಪು ಮಾಡಿದ್ದರೆ ಅವರನ್ನು ಜೈಲಿಗೆ ಹಾಕಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದಲ್ಲಿ ಜಿಲ್ಲಾ ಘಟಕ ಆಯೋಜಿಸಿದ್ದ ‘ಕಾಂಗ್ರೆಸ್‌ ನಡಿಗೆ ಸುರಾಜ್ಯದ ಕಡೆಗೆ ಹಾಗೂ ಜನವೇದನ ಸಮಾವೇಶ’ದಲ್ಲಿ ಅವರು ಮಾತನಾಡಿದರು.
‘ವರ್ಷದ ಹಿಂದೆ ವಶಪಡಿಸಿಕೊಂಡ ಡೈರಿಯ ಬಗ್ಗೆ ಇದುವರಿಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸುಮ್ಮನಿದ್ದಿದ್ದು ಏಕೆ? ಐಟಿ ಅಧಿಕಾರಿಗಳೇ ದಾಖಲೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಮಾಹಿತಿ ಕೇಳಿದರೆ ಇದು ಇಲಾಖೆಯ ರಹಸ್ಯ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ’ ಎಂದು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT