ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾಯಿತು ಹೇಮೆ: ಜೀವಜಲಕ್ಕೆ ಕುತ್ತು

ಅರೆಮಲೆನಾಡಿನಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ
Last Updated 28 ಫೆಬ್ರುವರಿ 2017, 9:55 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಜನರ ದಾಹ ನೀಗಿಸುತ್ತಿದ್ದ ಹೇಮಾವತಿ ಜಲಾಶಯ ಬರಿದಾಗಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

37.103 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಈಗ ಉಳಿದಿರುವುದು 4.08 ಟಿಎಂಸಿ ಅಡಿ ನೀರು ಮಾತ್ರ. ಹೇಮೆಯ ಒಡಲಲ್ಲಿ ಅಧಿಕ ಪ್ರಮಾಣದ ಹೂಳು ತುಂಬಿಕೊಂಡಿದೆ.

ಇದರ ನಡುವೆ ಕಾವೇರಿ ಜಲಾಶಯ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಎರಡು ದಿನ 5,000 ಕ್ಯೂಸೆಕ್‌ ನೀರು ಹರಿಸಿರುವುದರಿಂದ ಮುಂದಿನ ದಿನಗಳಲ್ಲಿ ನಗರ ಜನತೆ ಕುಡಿಯುವ ನೀರಿಗೆ ಸಂಕಷ್ಟ ಎದುರಿಸುವ ಭೀತಿ ಎದುರಾಗಿದೆ.

ಹೀಗಾಗಿ ಡೆಡ್‌ ಸ್ಟೋರೆಜ್‌ (ತಳಮಟ್ಟದ, ಬಳಕೆಗೆ ಸಿಗದ) ನೀರನ್ನು ಶುದ್ಧೀಕರಿಸಿ ವಿತರಿಸುವ ಸಾಹಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ₹ 1.68 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದ್ದು, ವಾರದಲ್ಲಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲು ನಿರ್ಧರಿಸಿದೆ.

1.5 ಲಕ್ಷ ಜನಸಂಖ್ಯೆ ಇರುವ ಹಾಸನ ನಗರಕ್ಕೆ ಪ್ರತಿದಿನ 20 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಪ್ರಸ್ತುತ ಸಿಗುತ್ತಿರುವುದು 12 ಎಂಎಲ್‌ಡಿ ಮಾತ್ರ. ಹೀಗಾಗಿ ನೀರಿನ ಕೊರತೆ ಸರಿದೂಗಿಸಲು ನಗರಸಭೆ ಬೋರ್‌ವೆಲ್‌ ಬಳಸಿಕೊಂಡು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ.

ನೀರಿನ ರಾಜಕೀಯ ತಾರಕಕ್ಕೇರಿರುವುದರಿಂದ ಯಗಚಿ ಜಲಾಶಯದಿಂದ ಹಾಸನ ನಗರಕ್ಕೆ ನೀರು ಪೂರೈಕೆ ಮಾಡುವುದಕ್ಕಾಗಿ ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಎ.ಮಂಜು ಜನರಿಗೆ ಭರವಸೆ ನೀಡಿದ್ದಾರೆ.

ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ 6.55 ಲಕ್ಷ ಎಕರೆ ಭೂಮಿಗೆ ಹೇಮಾವತಿ ಜಲಾಶಯದಿಂದ ನೀರುಣಿಸಬೇಕು. 2010ರಿಂದ 2014ರವರೆಗೆ ಜಲಾಶಯ ನಾಲ್ಕು ಬಾರಿ 2002, 2003, 2004, 2012ರಲ್ಲಿ  ತುಂಬಿರಲಿಲ್ಲ.  ಅಣೆಕಟ್ಟೆ ಗರಿಷ್ಠ ಮಟ್ಟ 2,922 ಅಡಿಗಳು. 
ಜಿಲ್ಲೆಯಲ್ಲಿ 4,822 ಕೆರೆಗಳಿದ್ದು, ಇರುವ ಕೆರೆಯಲ್ಲಿ ಶೇ 80ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣ ಬರಿದಾಗಿವೆ. ಜಿಲ್ಲೆಯ 131 ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಪ್ರತಿನಿತ್ಯ ಗ್ರಾಮಗಳ ಸಂಖ್ಯೆ ಹೆಚ್ಚುತ್ತಿದೆ.

ಅದೇ ರೀತಿ ನೀರಿನ ಸಮಸ್ಯೆ ಎದುರಿಸುತ್ತಿರುವ ನಗರದ 15ಕ್ಕೂ ಹೆಚ್ಚು ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ.
‘ಹೇಮಾವತಿ ಜಲಾಶಯದ ಡೆಡ್‌ಸ್ಟೋರೆಜ್‌ ನೀರನ್ನು ಶುದ್ಧೀಕರಿಸಿ ಬಿಡಲಾಗುವುದು. ನೀರು ಜಾಕ್‌ವೆಲ್‌ಗೆ ಬರುತ್ತಿಲ್ಲ. ಪಂಪ್‌ ಮಾಡಿ ಪೂರೈಸಬೇಕು. ಇದಕ್ಕಾಗಿ ₹ 1.68 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧ ಪಡಿಸಲಾಗಿದೆ. ಎರಡು–ಮೂರು ದಿನಗಳಲ್ಲಿ ಹಾಸನ ನಗರಕ್ಕೆ ಕುಡಿಯುವ ನೀರಿನ ತೊಂದರೆ ನಿವಾರಿಸಲಾಗುವುದು. ನಗರಕ್ಕೆ 24X7 ನೀರು ಪೂರೈಸಲು ‘ಅಮೃತ್‌’ ಯೋಜನೆಯಲ್ಲಿ ₹ 116 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಹೆಚ್ಚುವರಿಯಾಗಿ ₹ 24 ಕೋಟಿ ನೀಡಲಾಗಿದೆ’ ಎಂದು ಸಚಿವ ಎ.ಮಂಜು ವಿವರಿಸಿದರು.

ಬಿರುಬೇಸಿಗೆಯ ಏಪ್ರಿಲ್‌  ಹಾಗೂ ಮೇ ತಿಂಗಳಿನಲ್ಲಿ ಜಲಾಶಯದಲ್ಲಿ ಕುಡಿಯಲು ನೀರು ಉಳಿಯುವುದಿಲ್ಲ. ಮಾರ್ಚ್‌ ಅಂತ್ಯದೊಳಗೆ ಜಲಾನಯನ ಪ್ರದೇಶಗಳಾದ ಸಕಲೇಶಪುರ ಮತ್ತು ಚಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಅಲ್ಪ ಸ್ವಲ್ಪ ಮಳೆಯಾದರೆ ಮಾತ್ರವೇ ಮುಂಗಾರು ಆರಂಭದವರೆಗೂ ನಿರಾಳವಾಗಿರಲು ಸಾಧ್ಯ. ಇಲ್ಲವಾದರೆ ನೀರಿಗೆ ತತ್ವಾರ ಉಂಟಾಗಲಿದೆ.

ಎರಡು ದಿನ ನೀರಿಲ್ಲ
ಜಲಾಶಯದಿಂದ ನೀರು ಹರಿಸಿದ ಪರಿಣಾಮವಾಗಿ ನಗರದ ಜನತೆ ನೀರಿಲ್ಲದೆ ಎರಡು (ಫೆ. 27,28)  ದಿನ ಪರದಾಡುವಂತಾಗಿದೆ. ತಳ ಸೇರಿದ್ದ ಜಲಾಶಯದ ಹಿನ್ನೀರಿನಿಂದಾಗಿ ನಗರಸಭೆಯ ಜಾಕ್‌ವೆಲ್‌ಗೆ ನೀರು ಎಟುಕುತ್ತಿರಲಿಲ್ಲ. ಹಿನ್ನೀರು ಪ್ರದೇಶದಲ್ಲಿ ಹೆಚ್ಚುವರಿ ಪಂಪ್‌ ಇರಿಸಿ ನೀರು ಮೇಲೆತ್ತಲು ವ್ಯವಸ್ಥೆ ರೂಪಿಸಲಾಗಿತ್ತು. 1 ಟಿಎಂಸಿ ಅಡಿ ನೀರು ಹೊರ ಹರಿದಿರುವುದರಿಂದ ಪಂಪ್‌ಸೆಟ್‌ನಿಂದ ಹಿನ್ನೀರು 60–70 ಮೀಟರ್‌ ದೂರಕ್ಕೆ ಇಳಿದಿದೆ. ಅಷ್ಟು ದೂರಕ್ಕೆ ಹೆಚ್ಚುವರಿಯಾಗಿ ಪೈಪ್‌ ಅಳವಡಿಸಿ ಮತ್ತಷ್ಟು ಕೆಳಗೆ ಪಂಪ್‌ ಇರಿಸಿ ಜಾಕ್‌ವೆಲ್‌ಗೆ ನೀರು ಪಂಪ್‌ ಮಾಡುವುದು ಅನಿವಾರ್ಯವಾಗಿದೆ.

ಹೊರ ಹರಿವು ಸ್ಥಗಿತ
ಮೂರು ದಿನಗಳಿಂದ ಹೇಮಾವತಿ ಜಲಾಶಯದಿಂದ ನದಿಗೆ ಹರಿಯುತ್ತಿರುವ ನೀರನ್ನು ಭಾನುವಾರವೂ ನಿಲ್ಲಿಸಿಲ್ಲ. ಶನಿವಾರ 5 ಸಾವಿರ ಕ್ಯೂಸೆಕ್‌ ಇದ್ದ ಹೊರ ಹರಿವನ್ನು ಮಧ್ಯರಾತ್ರಿಯಿಂದ 4,025 ಕ್ಯೂಸೆಕ್‌ಗೆ ಇಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಜಲಾಶಯದಿಂದ 1 ಟಿಎಂಸಿ ಅಡಿ ನೀರು ಹೊರ ಹೋದ ಬಳಿಕ ನೀರು ನಿಲ್ಲಿಸಲಾಗಿದೆ ಎಂದು ಜಲಾಶಯದ ಅಧಿಕಾರಿ ತಿಳಿಸಿದ್ದಾರೆ.

* ಹಾಸನ ನಗರ ಜನತೆಗೆ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎರಡು–ಮೂರು ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಜನತೆ ಆತಂಕ ಪಡುವ ಅಗತ್ಯವಿಲ್ಲ
-ಎ.ಮಂಜು, ಸಚಿವ

* ಜಾಕ್‌ವೆಲ್‌ಗೆ ನೀರು ಎತ್ತಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಹೊರತಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ
-ನಾಗಭೂಷಣ್‌, ನಗರಸಭೆ ಆಯುಕ್ತ

ಮುಖ್ಯಾಂಶಗಳು
* ಟ್ಯಾಂಕರ್‌ ಮೂಲಕ ನೀರು ಪೂರೈಕೆ

* ಡೆಡ್‌ಸ್ಟೋರೇಜ್‌ ನೀರು ಬಳಸಲು ಸಿದ್ಧ
* ₹ 1.68 ಕೋಟಿ ವೆಚ್ಚದ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT