ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸಿಪಿಎಲ್‌ ಡಾಂಬರು ಘಟಕ ಸ್ಥಳಾಂತರಕ್ಕೆ ಆಗ್ರಹ

ಸಂಡೂರು ತಾಲ್ಲೂಕಿನ ಸುಲ್ತಾನಪುರ ಗ್ರಾಮದ ಡಾಂಬರ್ ಉತ್ಪಾದನಾ ಘಟಕದ ವಿರುದ್ಧ ಬೃಹತ್‌ ಪ್ರತಿಭಟನೆ
Last Updated 28 ಫೆಬ್ರುವರಿ 2017, 10:36 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ಸುಲ್ತಾನಪುರ ಗ್ರಾಮದ ಬಳಿ ಸ್ಥಾಪಿಸಿದ ಇಸಿಪಿಎಲ್‌ ಡಾಂಬರ್ ಉತ್ಪಾದನಾ (ಕೋಲ್‌ ಟಾರ್) ಘಟಕವನ್ನು ಕೂಡಲೇ ಸ್ಥಳಾಂತರಿಸ ಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ನೂರಾರು ಮಂದಿ ನಗರ ದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ, ಮೆರವಣಿಗೆ ನಡೆಸಿದರು.

ನಗರದ ನಗರೂರು ನಾರಾಯಣ ರಾವ್‌ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಬಂದ ಪ್ರತಿಭಟನಕಾರರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಡಾಂಬರ್ ಘಟಕ ಸ್ಥಾಪಿಸುವ ಕುರಿತು ಗ್ರಾಮಸಭೆ ಅಥವಾ ಗ್ರಾಮಸ್ಥರ ಒಪ್ಪಿಗೆಯನ್ನೂ ಘಟಕದ ಮಾಲೀಕರು ಪಡೆದಿಲ್ಲ. ಡಾಂಬರ್ ಘಟಕದಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತ ಗೊಂಡು ಜನ – ಜಾನುವಾರುಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೂಡಲೇ ಜಿಲ್ಲಾಡ ಳಿತ ಮಧ್ಯಪ್ರವೇಶಿಸಿ ಘಟಕದ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯ ದರ್ಶಿ ಜೆ.ಸತ್ಯಬಾಬು ಆಗ್ರಹಿಸಿದರು.

ಶೀಘ್ರವೇ ಡಾಂಬರ್ ಘಟಕದ ಕಾರ್ಯ ಚಟುವಟಿಕೆಯನ್ನು ರದ್ದುಪಡಿಸಿ ಬೇರೆಡೆಗೆ ವರ್ಗಾಯಿಸಬೇಕು. ಘಟಕ ದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರ ಕುಟುಂಬಗಳಿಗೆ ತಲಾ ₹20ಲಕ್ಷ ಪರಿಹಾರಧನ ನೀಡಬೇಕು. ಘಟಕದ ಅಪಾಯಕಾರಿ ಕೆಮಿಕಲ್‌ನಿಂದ ಮೃತಪಟ್ಟ ಬಿ.ತಾಯಪ್ಪ ಕುಟುಂಬಕ್ಕೆ ₹25ಲಕ್ಷ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.

ಜಿಂದಾಲ್ ಮತ್ತು ಇಸಿಪಿಎಲ್‌ ಕೆಮಿಕಲ್ಸ್ ಪ್ರವೇಟ್ ಲಿಮಿಟೆಡ್ ಕಂಪೆನಿ ಸೇರಿದಂತೆ  ಅನೇಕ ಕಂಪೆನಿಗಳು ಕಾರ್ಮಿಕ ಕಾಯ್ದೆಯ ನಿಯಮವನ್ನು ಗಾಳಿಗೆ ತೂರಿವೆ. ನಿಯಮ ಉಲ್ಲಂಘಿ ಸಿರುವ ಬಗ್ಗೆ  ಮೇಲ್ನೋಟಕ್ಕೆ ಸಾಬೀತಾ ದರೂ, ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಾರ್ಮಿಕ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿ ರುವ ಘಟಕದ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು. ಜನವಸತಿ ಪ್ರದೇಶ ದಲ್ಲಿ ಅಪಾಯಕಾರಿ ಕೆಮಿಕಲ್‌ಯುಕ್ತ ಘಟಕ ಸ್ಥಾಪನೆಗೆ ಪರವಾನಗಿ ನೀಡಿರುವ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ನಡೆದ ರಸ್ತೆತಡೆ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರ ಮೇಲೆ ದಾಖಲಿಸಿ ರುವ ಪ್ರಕರಣ ಹಿಂಪಡೆಯಬೇಕು ಎಂದು ಕೋರಿದರು.

ಸಂಘಟನೆಯ ಅಧ್ಯಕ್ಷ ಆರ್.ಭಾಸ್ಕರ ರೆಡ್ಡಿ, ಉಪಾಧ್ಯಕ್ಷ ಆರ್‌.ಎಸ್‌. ಬಸವ ರಾಜ, ಖಜಾಂಚಿ ಕೆ.ನಾಗರತ್ನಮ್ಮ, ಹಮಾಲಿ ನೌಕರರ ಸಂಘದ ಅಧ್ಯಕ್ಷ ಎಚ್‌.ತಿಮ್ಮಯ್ಯ, ಕಾರ್ಯದರ್ಶಿ ಬಿ. ಸುರೇಶ, ಸಿರುಗುಪ್ಪ ಘಟಕದ ಅಧ್ಯಕ್ಷ ಬಿ.ಎಲ್.ಈರಣ್ಣ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಎರ್ರೆಮ್ಮ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನೀಲಾವತಿ, ಬಸಮ್ಮ, ಲೀಲಾವತಿ, ಎಂ. ಗೋಪಾಲ, ಎಸ್‌.ಜಗನ್ನಾಥ, ಕರುಣಾ ನಿಧಿ, ಬಿ.ಎಂ.ಶಿಲ್ಪ, ಬಂಡಿ ಬಸವರಾಜ, ರಾಜಶೇಖರಗೌಡ, ತಿಪ್ಪೇಸ್ವಾಮಿ, ಚೆನ್ನಬಸಯ್ಯ, ಎ.ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT