ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
–ಶಿವಮೂರ್ತಿ.ಪಿ., ತುಮಕೂರು
* ನಾನು ತುಮಕೂರು ವಿಶ್ವ ವಿದ್ಯಾಲಯದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳ ₹ 16,916 ವಯಸ್ಸು 34, ಮದುವೆ ಆಗಿದೆ. ಮಕ್ಕಳಿಲ್ಲ. ಮನೆ ಖರ್ಚು, ಬಾಡಿಗೆಯಿಂದ ₹ 12,000 ಖರ್ಚು ಬರುತ್ತದೆ. ಎನ್.ಪಿ.ಎಸ್. ₹ 1734 ಹೊರತು ಪಡಿಸಿ ಬೇರಾವ ಕಡಿತವಿಲ್ಲ. ನಿಮ್ಮ ಲೇಖನದಿಂದ ಪ್ರಭಾವಿತನಾಗಿ ₹ 2000 ಎಸ್.ಬಿ.ಎಂ. ನಲ್ಲಿ ಆರ್.ಡಿ. ಮಾಡಿದ್ದೇನೆ. ನನ್ನ ಗೆಳೆಯರು ಪಿ.ಪಿ.ಎಫ್. ಅಥವಾ ಪಿ.ಎಲ್.ಐ. ಮಾಡಲು ಸಲಹೆ ಮಾಡುತ್ತಿದ್ದಾರೆ. ನನಗೆ ನಿಮ್ಮ ಅಮೂಲ್ಯ ಸಲಹೆ ಬೇಕಾಗಿದೆ.
ಉತ್ತರ: ನೀವು ವಿಶ್ವವಿದ್ಯಾಲಯದಲ್ಲಿರುವುದರಿಂದ ನಿಮಗೆ ತುಂಬಾ ಜನ ಸಂಪರ್ಕವಿರುವುದು ಸಹಜ. ನಿಮ್ಮಲ್ಲಿರುವ ಬುದ್ಧಿಶಕ್ತಿ ಕೌಶಲ್ಯ ಅಥವಾ ಮೇಧಾಶಕ್ತಿ, ನೀವು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ನಿಮ್ಮ ಆರ್ಥಿಕ ಮಟ್ಟ ಬಹಳ ಮೇಲಕ್ಕೆ ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬಿಡುವಿನ ವೇಳೆಯಲ್ಲಿ ಎಲ್.ಐ.ಸಿ.ಯವರ ಏಜೆನ್ಸಿ ಪಡೆದು, ಸಂಪರ್ಕ ಇರುವವರ ವಿಮೆ ಮಾಡಿಸಲು ಪ್ರಾರಂಭಿಸಿರಿ. ಇದಕ್ಕೆ ಬಂಡವಾಳದ ಅವಶ್ಯವಿಲ್ಲ. ನಿಮ್ಮ ಯೋಗ್ಯತೆಯೇ ಬಂಡವಾಳ. ಎಲ್.ಐ.ಸಿ. ಏಜೆನ್ಸಿ ಪಡೆಯಲು INSURANCE INSTITUTE OF INDIA- MUMBAI ಇವರು ನಡೆಸುವ ಆನ್‌ಲೈನ್ ಪರೀಕ್ಷೆ ಪಾಸು ಮಾಡಬೇಕು. ಇದು ಬಹು ಸುಲಭ. ನಿಮ್ಮ ಸಮೀಪದ ಎಲ್.ಐ.ಸಿ. ಆಫೀಸನ್ನು ಸಂಪರ್ಕಿಸಿರಿ. ಏಜೆನ್ಸಿ ಪಡೆದು, ನೀವೇ ಪ್ರಥಮ ಒಂದು ಪಾಲಿಸಿ ಮಾಡಿರಿ. ಸದ್ಯ ಪಿ.ಪಿ.ಎಫ್. ಅಗತ್ಯವಿಲ್ಲ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.
 
**
–ಎನ್.ಆರ್. ವಾಸುದೇವರಾವ್, ಶಿವಮೊಗ್ಗ
* ಬ್ಯಾಂಕಿನಲ್ಲಿ ಠೇವಣಿ ಇರಿಸುವಾಗ ನಾಮ ನಿರ್ದೇಶನ ಮಾಡುವುದಕ್ಕಿಂತ ಜಾಯಿಂಟ್ ಖಾತೆ ಮಾಡುವುದು ಸೂಕ್ತವೇ? ನಾಮಿನಿ ಕೇವಲ ಹಣದ ಕಸ್ಟೋಡಿಯನ್ ಎಂದು ಕೇಳಿದ್ದೇನೆ. ನಾಮಿನಿಯಿಂದ ನಂತರದಲ್ಲಿ ಬೇರೆಯವರು ಕೇಸ್ ಮಾಡಿ ಕ್ಲೇಮ್ ಮಾಡಬಹುದೇ? ಕಾನೂನಿನ ಪ್ರಕಾರ ಯಾವುದು ಸರಿ. ದಯಮಾಡಿ ತಿಳಿಸಿ.
ಉತ್ತರ: ಯಾವುದೇ ಠೇವಣಿ ಇರಿಸುವಾಗ ಗಂಡ–ಹೆಂಡತಿ ಜಂಟಿಯಾಗಿ ಖಾತೆ ತೆರೆಯುವುದು ಕ್ಷೇಮ. (ಜಂಟಿ ಖಾತೆ ಯಾರೊಂದಿಗೂ ತೆರೆಯುವ ಅವಕಾಶವಿದೆ). ಜಂಟಿ ಖಾತೆ ತೆರೆದಾಗಲೂ ನಾಮ ನಿರ್ದೇಶನ ಮಾಡಬಹುದು. ಜಂಟಿ ಖಾತೆ ತೆರೆದಾಗ, ಇಬ್ಬರಲ್ಲಿ ಒಬ್ಬರು ಮೃತಪಟ್ಟರೆ, ಉಳಿದ ವ್ಯಕ್ತಿಗೆ ಏನೂ ತೊಂದರೆಯಾಗದಂತೆ ‘Payab* e to either or Survivor’ ಎಂದು ಠೇವಣಿಯಲ್ಲಿ ನಮೂದಿಸುವುದು ಸೂಕ್ತ. ನಾಮಿನಿ ಮೇಲ್ವಿಚಾರಕ (Custodian) ಅಥವಾ ಪಾರುಪತ್ಯಗಾರ ಆಗುವುದಿಲ್ಲ. ಖಾತೆದಾರರ ಮರಣಾನಂತರ, ನಾಮಿನಿ ಠೇವಣಿಯನ್ನು ಪಡೆಯಬಹುದು. ನಾಮ ನಿರ್ದೇಶನದಲ್ಲಿ ಏನಾದರೂ ನ್ಯೂನ್ಯತೆ (F* aw) ಇದ್ದಲ್ಲಿ ನಾಮಿನಿ ಮೇಲೆ ಕೇಸ್ ಹಾಕಿ ಕ್ಲೇಮ್ ಮಾಡಬಹುದು. ಉದಾಹರಣೆಗಾಗಿ, ಓರ್ವ ವ್ಯಕ್ತಿ, ತನ್ನ ಹೆಂಡತಿ ಮಕ್ಕಳನ್ನು (ವಾರಸುದಾರರನ್ನು ಬಿಟ್ಟು) ಮೂರನೆಯವರ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿದಾಗ, ವಾರಸುದಾರರು ಕೋರ್ಟಿಗೆ ಹೋಗಿ ತಡೆ ಆಜ್ಞೆ ತರಬಹುದು. ಈ ಪ್ರಶ್ನೋತ್ತರದಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ. ನಿಮಗೆ ಅಭಿನಂದನೆಗಳು.
 
**
ಹೆಸರು ಬೇಡ: ಬೆಂಗಳೂರು
* ನಾನು ಸಾಫ್ಟ್‌ವೇರ್ ಎಂಜಿನಿಯರ್. ವಯಸ್ಸು 26, ತಿಂಗಳ ಸಂಬಳ ₹ 35,000. ಇದರಲ್ಲಿ ₹ 4,000 ವಿಮೆಗೆ ಕಟ್ಟುತ್ತೇನೆ. ₹ 10,000 ಚೀಟಿಗೆ ಹಾಕುತ್ತೇನೆ. ನನ್ನ ಖರ್ಚು ₹ 5000. ನಾನು ವಿಮೆ ಹಣ ಕಟ್ಟುವುದನ್ನು ಕಡಿತ ಮಾಡಬಹುದೇ? ನನಗೆ ಎಷ್ಟರ ಮಟ್ಟಿನ ವಿಮೆ ಅಗತ್ಯವಿದೆ? ನಾನು ಮುಂದೆ ಹೇಗೆ ಉಳಿತಾಯ ಮಾಡಲಿ? 
ಉತ್ತರ: ನೀವು ಈಗಾಗಲೇ ತಿಳಿಸಿದ ವಿಮೆ ಸರಿ ಇರುತ್ತದೆ, ಹಾಗೂ ಕಡಿಮೆ ಮಾಡುವ ಅವಶ್ಯವಿಲ್ಲ. ಮಧ್ಯದಲ್ಲಿ ನಿಲ್ಲಿಸುವುದರಿಂದ ಕಟ್ಟಿದ ಹಣ ಕಳೆದು ಕೊಳ್ಳುವ ಸಾಧ್ಯತೆ ಇದೆ. ಈ ಯೋಜನೆ ಮುಂದುವರಿಸಿರಿ. ಚೀಟಿ ವ್ಯವಹಾರ ಅಭದ್ರತೆಯ ಖಾಸಗಿ ಸಂಸ್ಥೆ ಅಥವಾ ಯಾವುದಾದರೂ ವ್ಯಕ್ತಿಗಳಲ್ಲಿ ಮಾಡುತ್ತಿದ್ದರೆ, ಅದನ್ನು ತಕ್ಷಣ ನಿಲ್ಲಿಸಿ. ನೀವು ಅವಿವಾಹಿತರಿರಬೇಕು. ಮದುವೆ ಆಗುವ ತನಕ ₹ 25000, (ಚೀಟಿ ವ್ಯವಹಾರ ನಿಲ್ಲಿಸಿ) ಎರಡು ವರ್ಷಗಳ ಆರ್.ಡಿ. ಮಾಡಿರಿ. ಇದರಿಂದ ಹಣ ಉಳಿಸುವುದರ ಜೊತೆಗೆ, ನಿಮ್ಮ ಹಣ ಭದ್ರವಾಗಿದ್ದು, ನಿಶ್ಚಿತ ವರಮಾನ ಕೂಡಾ ಪಡೆದಂತಾಗುತ್ತದೆ, ಜೊತೆಗೆ ಮದುವೆಗೆ ಕೂಡಾ ಅನುಕೂಲವಾಗುತ್ತದೆ.
 
**
–ಚಂದ್ರಶೇಖರ್‌, ಕಂಪ್ಲಿ ಹಾಗೂ ರಾಜೇಂದ್ರ, ಮೈಸೂರು (ಇಬ್ಬರ ಪ್ರಶ್ನೆಯಲ್ಲಿ ಸಾಮ್ಯತೆ ಇದೆ)
* ನಾನು ನಿವೃತ್ತ ಸೈನಿಕ. ನಿವೃತ್ತಿ ವೇತನ ₹ 17,500. ಈಗ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ಸಂಬಳ ₹ 4000. ಮನೆ ಸಾಲ ಇದೆ. ನಿವೃತ್ತಿಯಿಂದ ಸೈನಿಕರಿಗೆ ಬರುವ ಪಿಂಚಣಿ ಆದಾಯ ತೆರಿಗೆ ಇದೆಯೇ, ದಯವಿಟ್ಟು ತಿಳಿಸಿ.
ಉತ್ತರ: 
 
**
–ಎಚ್‌.ಕೆ. ಮುರಳೀಧರ್‌, ಮೈಸೂರು
* ನನ್ನ ಹೆಂಡತಿ 2005 ರಲ್ಲಿ ಅಪಘಾತದಲ್ಲಿ ತೀರಿಕೊಂಡಿದ್ದಾಳೆ. ನನಗೆ ₹ 10,72,488 ಪರಿಹಾರದ ಧನ ಬಂದಿದೆ.  ₹ 6,31,150 ಬಡ್ಡಿ ಕೂಡಾ ಬಂದಿದೆ. ವಿಮಾ ಕಂಪೆನಿ ₹ 1,26,230 ಟಿ.ಡಿ.ಎಸ್‌. ಮಾಡಿ ನನಗೆ ಉಳಿದ ಹಣ ಕೊಟ್ಟಿದ್ದಾರೆ. ಪರಿಹಾರದಿಂದ ಬಂದ ಹಣದ ಮೇಲಿನ ಬಡ್ಡಿಗೆ ಆದಾಯ ತೆರಿಗೆ ವಿನಾಯತಿ ಇದೆಯೇ ತಿಳಿಸಿ. 
ಉತ್ತರ: ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು ಅಪಘಾತಕ್ಕೀಡಾಗಿ ಇದರಿಂದಾಗಿ ವಾರಸುದಾರರು ಪಡೆಯುವ ಹಣಕ್ಕೆ ತೆರಿಗೆ ಸಂಪೂರ್ಣ ವಿನಾಯತಿ ಇದೆ. ಇದೇ ವೇಳೆ ಮರಣ ಪರಿಹಾರದ ಹಣ ಕೊಡುವುದು ವಿಳಂಬವಾದಲ್ಲಿ ಪರಿಹಾರ ಹಣದ ಮೇಲೆ ನ್ಯಾಯಾಲಯ ವಿಧಿಸುವ ಬಡ್ಡಿಗೆ ಆದಾಯ ತೆರಿಗೆ ಕಾನೂನಿನಂತೆ ತೆರಿಗೆ ಅನ್ವಯವಾಗುತ್ತದೆ. ಆದರೆ ಮದ್ರಾಸ್‌ ಉಚ್ಚ ನ್ಯಾಯಾಲಯ (Madras High court) The Managing Director Tami* nadu State Transport Corporation * td v/s Chinnaduri - case CRP (PD) No. 134307 2012 and M.P. No. 1 of 2012-dated 2.6.2016.
 
ತೀರ್ಪು ನೀಡಿ, ಮರಣ ಪರಿಹಾರ ಕೊಡಲು ತಡವಾಗಿ, ಇದರಿಂದ ಬರುವ ಬಡ್ಡಿ ಹಣಕ್ಕೆ ತೆರಿಗೆ ವಿಧಿಸುವಂತಿಲ್ಲ ಎಂಬುದಾಗಿ ತೀರ್ಪು ನೀಡಿದೆ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿ ದಂತಾಗಿದೆ. ತೆರಿಗೆ ಸಲಹೆಗಾರರನ್ನು ಅಥವಾ ಚಾರ್ಟರ್ಡ್ ಅಕೌಟಂಟ್‌ ಸಂಪರ್ಕಿಸಿ ಟಿ.ಡಿ.ಎಸ್‌. ವಾಪಸ್‌ ಪಡೆಯಲು ಪ್ರಯತ್ನಿಸಿರಿ.  
 
**
–ಫಯಾಜ್‌, ಗಂಗಾವತಿ
* ಆರ್ಥಿಕ ವಿಚಾರಗಳಲ್ಲಿ  ನೀವು ಸಮಾಜಕ್ಕೆ ನೀಡುವ ಸಲಹೆ ತುಂಬಾ ಉಪಯುಕ್ತವಾಗಿದೆ. ನನಗೆ ಕೂಡಾ ನಿಮ್ಮ ಅಮೂಲ್ಯ ಸಲಹೆ ಬೇಕಾಗಿದೆ. ನಾನು ಆರ್‌ಎಫ್‌ಒ ಆಗಿ ಮಾರ್ಚ್‌ 2015 ರಲ್ಲಿ ಕೆಲಸಕ್ಕೆ ಸೇರಿದೆ. ನನ್ನ ವಯಸ್ಸು 25. ನನ್ನ ಸಂಬಳ ₹ 30,000. ನನಗೆ ಮನೆ ಇಲ್ಲ. ಉಳಿತಾಯದ ವಿಚಾರದಲ್ಲಿ ನಾನು ಹೇಗೆ ಜೀವನ ಪ್ರಾರಂಭಿಸಲಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.
ಉತ್ತರ: ನಿಮಗೆ ಸರ್ಕಾರದಿಂದ ಉಳಿಯಲು ಮನೆ ಕೊಟ್ಟಿರಬೇಕು. ನೀವೂ ಅವಿವಾಹಿತ ರಿರಬೇಕು. ನೀವು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವಾಗಲೇ ಸ್ವಂತ ಮನೆ, ಉತ್ತಮ ಉಳಿತಾಯ ಮಾಡಬೇಕು ಎನ್ನುವ ಮನೋಭಾವನೆ ಹೊಂದಿರುವುದು ನಿಜವಾಗಿ ಸಂತಸ ತಂದಿದೆ. ನಿಮ್ಮ ಖರ್ಚು ಕಳೆದು ₹ 20,000 ನೀವು ಪ್ರತೀ ತಿಂಗಳು ಈ ಕೆಳಗೆ ವಿವರಿಸಿದಂತೆ ಉಳಿತಾಯ ಮಾಡಲು ಪ್ರಾರಂಭಿಸಿ:
1. ಪಿ.ಪಿ.ಎಫ್‌. ಖಾತೆ ಪ್ರಾರಂಭಿಸಿ ಹಾಗೂ ತಿಂಗಳು ₹ 8000 ಕಟ್ಟುತ್ತಾ ಬನ್ನಿ.
2. ಎಲ್‌.ಐ.ಸಿ. ಜೀವನ ಆನಂದ ಪಾಲಿಸಿ ಮಾಡಿಸಿ ಪ್ರತೀ ತಿಂಗಳು ₹ 2000 ಕಟ್ಟಿರಿ.
3. ₹ 10000 ಆರ್‌.ಡಿ. ಎರಡು ವರ್ಷಗಳ ಅವಧಿಗೆ ಸಂಬಳ ಪಡೆಯುವ ಬ್ಯಾಂಕಿನಲ್ಲಿ ಮಾಡಿ.
ಇಷ್ಟರಲ್ಲಿ ನಿಮಗೆ ಮದುವೆಯಾಗಬಹುದು. ಪಿ.ಪಿ.ಎಫ್‌. ಹಾಗೂ ಎಲ್‌.ಐ.ಸಿ. ಉಳಿತಾಯ ದಿಂದ, ಸೆಕ್ಷನ್‌ 80ಸಿ ಆಧಾರದ ಮೇಲೆ ಇಲ್ಲಿ ತೊಡಗಿಸಿದ ಹಣದಿಂದ ಆದಾಯ ತೆರಿಗೆ ವಿನಾಯ್ತಿ ಪಡೆಯಿರಿ. ಆರ್‌.ಡಿ. ಹಣದಿಂದ ಮದುವೆ ಹಾಗೂ ಸಂಸಾರ ಮಾಡಲು ಬೇಕಾದ ಹಣ ಭರಿಸಿದಂತಾಗುತ್ತದೆ. ವಾರ್ಷಿಕವಾಗಿ ದೊರೆಯುವ ಇನ್‌ಕ್ರಿಮೆಂಟ್‌ ಹಾಗೂ ಅರ್ಧ ವಾರ್ಷಿಕವಾಗಿ ದೊರೆಯುವ ಹೆಚ್ಚಿನ ತುಟ್ಟಿಭತ್ಯೆ ಇವುಗಳ ಕನಿಷ್ಠ ಶೇ 50, ದೀರ್ಘಾವಧಿ ಆರ್‌.ಡಿ. ಮಾಡಿರಿ. ಈ ಪ್ರಕ್ರಿಯೆ ನಿರಂತರವಾಗಿರಲಿ, ಮದುವೆ ನಂತರ ಬ್ಯಾಂಕ್‌ನಿಂದ ಸ್ವಲ್ಪ ಸಾಲ ಪಡೆದು 30X40 ಅಳತೆಯ ನಿವೇಶನ ಕೊಳ್ಳಿರಿ. ಹೀಗೆ ಸಾಲ ಪಡೆದರೆ, ₹ 10,000 ಆರ್‌.ಡಿ. ನಿಲ್ಲಿಸಿ. ಈ ಹಣ ಸಾಲಕ್ಕೆ ತುಂಬಿರಿ. ವೈವಾಹಿಕ ಜೀವನದ ಪ್ರಾರಂಭದಿಂದಲೇ ಆರ್ಥಿಕ ಶಿಸ್ತು ಅಳವಡಿಸಿಕೊಂಡಲ್ಲಿ, ಉಳಿತಾಯದ ಗೀಳು, ಜೀವನದ ಅವಿಭಾಜ್ಯ ಅಂಗವಾಗುತ್ತದೆ. ಇದರಿಂದ ಬೇಡವಾದ ಖರ್ಚಿಗೆ ಕಡಿವಾಣ ಬೀಳುವುದಲ್ಲದೆ, ಆರೋಗ್ಯವಾಗಿ ನೆಮ್ಮದಿಯಾಗಿ ಬಾಳಬಹುದು. ಸಂತೃಪ್ತ ಜೀವನಕ್ಕೆ ಸರಿಯಾದ ಪ್ಲ್ಯಾನಿಂಗ್‌ ಅವಶ್ಯಕತೆ ಇದೆ. ಬರೀ ಪ್ಲ್ಯಾನಿಂಗ್‌ ಮಾಡಿದರೆ ಸಾಲದು, ಅದರಂತೆ  ನಡೆದುಕೊಳ್ಳಬೇಕು. ನಿಮ್ಮ ಮುಂದಿನ ಜೀವನ ಸುಖ ಸಂತೋಷ, ಸಮೃದ್ಧಿಯಿಂದ ಕೂಡಿರಲಿ.
 
**
–ಬಿ.ವಿ. ರಮಾನಾಥ್‌, ಬೆಂಗಳೂರು
* ನನ್ನ ಮಗಳು ಅಮೆರಿಕದಲ್ಲಿ ಕೆಲಸ ಮಾಡುತ್ತಾಳೆ. ಬೆಂಗಳೂರಿನಲ್ಲಿ ಅವಳು ಒಂದು ಸಾಮಾನ್ಯ ಉಳಿತಾಯ ಖಾತೆ  ಹೊಂದಿದ್ದಾಳೆ. ತಿಂಗಳಿಗೆ ₹ 30,000 ಕಳಿಸುತ್ತಾಳೆ. ನನಗೆ ಹಣ ಪಡೆಯಲು ಜಿಪಿಎ ಕೊಟ್ಟಿದ್ದಾಳೆ. ಈ ಹಣಕ್ಕೆ ತೆರಿಗೆ ವಿನಾಯತಿ ಇದೆಯೇ, ನಾನು ತೆರಿಗೆ ರಿಟರ್ನ್‌ ತುಂಬಬೇಕೇ?  
ಉತ್ತರ: ನಿಮ್ಮ ಮಗಳು NRE-SB A/C ಭಾರತದಲ್ಲಿ ಪ್ರಾರಂಭಿಸಿ, ಅಮೆರಿಕದಿಂದ ಎಷ್ಟು ಬೇಕಾದರೂ, ಆ ಖಾತೆಗೆ ಹಣ ಕಳಿಸಬಹುದು. ಈ ವ್ಯವಹಾರಕ್ಕೆ ಆದಾಯ ತೆರಿಗೆ ಸಂಪೂರ್ಣ ವಿನಾಯ್ತಿ ಇದೆ. ನಿಮಗೆ ಹಣ ತೆಗೆಯಲು ಬ್ಯಾಂಕಿಗೆ ನಿಮ್ಮ ಮಗಳು * etter of authority ಕೊಟ್ಟರೆ ನಿಮಗೆ ತೆರಿಗೆ ಬರುವುದಿಲ್ಲ ಹಾಗೂ ನೀವೂ ತೆರಿಗೆ ಕೊಡುವ ಅವಶ್ಯವಿಲ್ಲ ಮತ್ತು ರಿಟರ್ನ್ಸ್‌ ತುಂಬುವ ಅವಶ್ಯಕತೆಯೂ ಇಲ್ಲ.
 
**
–ಹೆಸರು: ಊರು, ಬೇಡ
* ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮಿನಲ್ಲಿ ನನ್ನ ಹೆಂಡತಿ ಹೆಸರಿನಲ್ಲಿ ಡಿಪಾಸಿಟ್ ಇಟ್ಟಿರುತ್ತೇನೆ. ಇದರ ಬಡ್ಡಿ ನನ್ನ ಖಾತೆಗೆ ಸಂದಾಯವಾಗುತ್ತದೆ. Gift deed Registration ಅಗತ್ಯವಿದೆಯೇ? ಇದ್ದರೆ ಅನುಸರಿಸಬೇಕಾದ ನಿಯಮಗಳೇನು ದಯಮಾಡಿ ತಿಳಿಸಿ.
ಉತ್ತರ: ನೀವಿರಿಸಿದ ಠೇವಣಿಯ ಮೇಲೆ ಬರುವ ಬಡ್ಡಿಯ ಮೊತ್ತ ತಿಳಿಸಿಲ್ಲ. ತಾ. 31–3–2017ರ ತನಕ ₹ 3 ಲಕ್ಷ ವಾರ್ಷಿಕ ಬಡ್ಡಿ ಬಂದು, ಬೇರಾವ ಆದಾಯವಿಲ್ಲದಿರುವಲ್ಲಿ ಆದಾಯ ತೆರಿಗೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಿಮ್ಮ ಹೆಂಡತಿಯ ಠೇವಣಿಯ ಮೇಲಿನ ಬಡ್ಡಿ ನಿಮ್ಮ ಖಾತೆಗೆ ಜಮಾ ಆಗುವಲ್ಲಿ, ಈ ಹಣ ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಬೇಕಾಗುತ್ತದೆ. ಅವರ ಹೆಸರಿನಲ್ಲಿಯೇ ಉಳಿತಾಯ ಖಾತೆ ತೆರೆದು ಬಡ್ಡಿ ಜಮಾ ಮಾಡುವುದೇ ಲೇಸು. ಅಲ್ಲಿಂದ ಯಾವಾಗ ಬೇಕಾದರೂ ಹಣ ಪಡೆದು ಖರ್ಚಿಗೆ ವಿನಿಯೋಗಿಸಿ. ಗಿಫ್ಟ್‌ ಡೀಡ್ ನೊಂದಾಯಿಸುವ ಅಗತ್ಯವಿದೆ. ಗಿಫ್ಟ್‌ಡೀಡ್ ಸಬ್‌ರಿಜಸ್ಟ್ರಾರ್ ಆಫೀಸಿನಲ್ಲಿ  ನೋಂದಾಯಿಸಬಹುದು.
 
**
ರವಿಬಾಸ್ ನಾಯಕ್, ಕಾರವಾರ
* ನಾನು ಅತಿಥಿ ಉಪನ್ಯಾಸಕ. ಸೇವಾ ಭದ್ರತೆ ಇಲ್ಲ. ವಾರ್ಷಿಕ ಸಂಬಳ ₹ 1 ಲಕ್ಷ. ಮದುವೆ ಆಗಿ ಇಬ್ಬರು ಮಕ್ಕಳು. ವಾರ್ಷಿಕ ಎಲ್.ಐ.ಸಿ. ₹ 10,000, ಆರ್.ಡಿ. ₹ 15600 (ತಿಂಗಳಿಗೆ ₹ 1300) ಕಟ್ಟುತ್ತೇನೆ. ವಾರ್ಷಿಕ ಖರ್ಚು ₹ 60,000. ಇನ್ನು ವಾರ್ಷಿಕ ₹ 20000 ಉಳಿಸ ಬೇಕೆಂದಿದ್ದೇನೆ. ಸಲಹೆ ನೀಡಿ.
ಉತ್ತರ: ನೀವು ವಾರ್ಷಿಕವಾಗಿ ಉಳಿಸಬಹುದಾದ ₹ 20,000 ವರ್ಷಾಂತ್ಯಕ್ಕೆ, 5 ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಬ್ಯಾಂಕ್ ಠೇವಣಿಯಲ್ಲಿ ಇರಿಸಿರಿ. ಹೀಗೆ ಮಾಡುವಾಗ, ವರ್ಷದ ಪ್ರಾರಂಭದಲ್ಲಿ ₹ 1800. ಒಂದು ವರ್ಷದ ಆರ್.ಡಿ. ಪ್ರಾರಂಭಿಸಿ. ಇದರಿಂದ ಬರುವ ಹಣ ವರ್ಷಾಂತ್ಯಕ್ಕೆ ಅವಧಿ ಠೇವಣಿ ಮಾಡಿರಿ. 
 
ಈ ಪ್ರಕ್ರಿಯೆ ಪ್ರತೀವರ್ಷ ಮುಂದುವರಿಯಲಿ. ನಿಮ್ಮ ಆದಾಯ ಬಹಳ ಕಡಿಮೆ ಇದ್ದರೂ, ಬಿಡುವಿನ ವೇಳೆಯಲ್ಲಿ, ನೀವು ಎಲ್.ಐ.ಸಿ. ಏಜೆನ್ಸಿ ಪಡೆದು, ಹೆಚ್ಚಿನ ಆದಾಯ ಗಳಿಸಬಹುದು. ಪ್ರಾರಂಭದಲ್ಲಿ ಸ್ವಲ್ಪ ಅಡೆತಡೆಗಳು ಬಂದರೂ, ಧೈರ್ಯಗೆಡದೆ ಈ ವೃತ್ತಿ ಮುಂದುವರಿಸಿ. ಈ ಏಜೆನ್ಸಿ ಪಡೆಯಲು Insurance Institute Of India ದವರು ನಡೆಸುವ On * ine ಪರೀಕ್ಷೆ ಪಾಸು ಮಾಡಬೇಕು. ಇದು ಬಹು ಸುಲಭ.
 
ಹೆಚ್ಚಿನ ಮಾಹಿತಿಗೆ ಸಮೀಪದ ಎಲ್.ಐ.ಸಿ. ಆಫೀಸಿಗೆ ಭೇಟಿ ನೀಡಿ. ನಿಮಗೆ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತೇನೆ.
 
**
–ಶಿವಾನಂದ, ಊರು ಬೇಡ
* ನಾನು ಎಚ್.ಡಿ.ಎಫ್.ಸಿ. ಬ್ಯಾಂಕಿನಿಂದ ₹ 15.50 ಲಕ್ಷ ಗೃಹಸಾಲ ಪಡೆದಿದ್ದೇನೆ. ಸಾಲದ ಬಡ್ಡಿ ದರ ಶೇ 9.45 ಬದಲಾಗುವ ಬಡ್ಡಿ ದರದಲ್ಲಿ ಸಾಲ ಪಡೆದದ್ದರಿಂದ ಈಗ ಬಡ್ಡಿ ದರ ಶೇ 8.7 ಕ್ಕೆ ಇಳಿದಿರುತ್ತದೆ. ಹೀಗೆ ಬದಲಾಯಿಸಿ ಕೊಳ್ಳುವಾಗ ಬ್ಯಾಂಕಿಗೆ ಏನಾದರೂ ಹಣ ತುಂಬಬೇಕೇ? ತುಂಬಬೇಕಾದಲ್ಲಿ ಎಷ್ಟು ಹಣ ತುಂಬ ಬೇಕು. ದಯಮಾಡಿ ತಿಳಿಸಿ.
ಉತ್ತರ: ಬದಲಾಗುವ ಬಡ್ಡಿದರ, ಗೃಹಸಾಲದಲ್ಲಿ ವಿಧಿಸುವಾಗ, ಕಾಲ ಕಾಲಕ್ಕೆ ಬಡ್ಡಿದರದಲ್ಲಿ ಹೆಚ್ಚಳ ಅಥವಾ ಕಡಿಮೆ ಆಗುವ ಸಂದರ್ಭದಲ್ಲಿ, ಗ್ರಾಹಕರು ಈ ಸೇವೆಗೆ ಹೆಚ್ಚಿನ ಹಣ ತೆರವ ಅವಶ್ಯವಿಲ್ಲ ಹಾಗೂ ಬ್ಯಾಂಕಿಗೆ ತಿಳಿಸುವ ಅವಶ್ಯವೂ ಇಲ್ಲ. ಕಾಲ ಕಾಲಕ್ಕೆ ಬದಲಾಗುವ ಬಡ್ಡಿದರ, ತಾನಾಗಿ ಆಗುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT