ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಕಟ್ಟಡದಲ್ಲಿ ತರಗತಿಗೆ ಒತ್ತಾಯ

ಅಧಿಕಾರಿ, ವಿದ್ಯಾರ್ಥಿಗಳೊಂದಿಗೆ ವಿಧಾನ ಪರಿಷತ್‌ ಸದಸ್ಯ ನಿರಾಣಿ ಸಮಾಲೋಚನೆ
Last Updated 3 ಮಾರ್ಚ್ 2017, 7:55 IST
ಅಕ್ಷರ ಗಾತ್ರ

ಬೀಳಗಿ: ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಏನೇನೋ ನೆಪ ಹೇಳುತ್ತ ಪ್ರವೇಶವನ್ನು ಮುಂದಕ್ಕೆ ಹಾಕುತ್ತಿರುವುದರ ವಿರುದ್ಧ ವಿದ್ಯಾರ್ಥಿಗಳು ಗುರುವಾರ ಆಕ್ರೋಶ ಹೊರ ಹಾಕಿದರು.

ಗುರುವಾರ ಇಲ್ಲಿನ ಸುಶೀಲಾಬಾಯಿ ರುದ್ರಪ್ಪ ನಿರಾಣಿ ಪಾಲಿಟೆಕ್ನಿಕ್ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹಳೆಯ ಕಾಲೇಜಿನಿಂದ ಹೊರಬಂದು ನೂತನ ಕಟ್ಟಡದ ಮುಂದೆ ಜಮಾಯಿಸಿ ನೂತನ ಕಟ್ಟಡವನ್ನು ತಮ್ಮ ವ್ಯಾಸಂಗಕ್ಕೆ ಕೊಡಲು ಒತ್ತಾಯಿಸಿದರು.

2010ರಲ್ಲಿ ಅಂದಿನ ಸಚಿವ ಮುರುಗೇಶ ನಿರಾಣಿ ತಮ್ಮ ತಾಯಿಯವರ ಹೆಸರಿನಲ್ಲಿ 5 ಎಕರೆ ಜಮೀನನ್ನು ಪಾಲಿಟೆಕ್ನಿಕ್ ಕಾಲೇಜಿಗೆ ನೀಡಿದ್ದರು. ಕಾಲೇಜು ಕಟ್ಟಡಕ್ಕೆ ₹ 8ಕೋಟಿ ಅಂದಾಜು ಮಾಡಲಾಗಿತ್ತು. ₹ 7.35 ಕೋಟಿ ಟೆಂಡರ್ ಮೊತ್ತವಾಗಿತ್ತು.  2010ರ ಅಕ್ಟೋಬರ್‌ 19ರಂದು ಭೂಮಿಪೂಜೆಯೂ ನಡೆಯಿತು. ಇದೇ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿತು.

ಇದೇ ವಿನ್ಯಾಸದ, ಇಷ್ಟೇ ಅಂದಾಜು ಮೊತ್ತದ, ಇದೇ ಗುತ್ತಿಗೆದಾರರು ಪ್ರಾರಂಭಿಸಿದ ಕಟ್ಟಡ ಪೂರ್ಣಗೊಂಡು ಅಲ್ಲಿನ ವಿದ್ಯಾರ್ಥಿಗಳು ನೂತನ ಕಾಲೇಜು ಕಟ್ಟಡದಲ್ಲಿ ಎರಡು ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಕಾಲೇಜು ಏಕೆ ಪೂರ್ಣಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ವಿದ್ಯಾರ್ಥಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು. 

ಈ ವಿಷಯ ಕುರಿತಂತೆ ತಾವು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಜೊತೆ ಈ ಮೊದಲು ಮಾತನಾಡಿದ್ದಾಗಿಯೂ, ಅವರ ಸಲಹೆಯ ಮೇರೆಗೆ ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಎಂಜಿನಿಯರ್‌ರಿಗೆ ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚಿಸಿದ ಪತ್ರದ ನಕಲನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದರು.

ಸ್ಥಳದಲ್ಲಿ ಇದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಆರ್.ಜಿ.ಹಿರೇಮಠ, ಬಿ.ಪಿ.ಬಿರಾದಾರಪಾಟೀಲ ಈಗಾಗಲೇ ಗುತ್ತಿಗೆದಾರರಿಗೆ ₹ 6.5 ಕೋಟಿ ಸಂದಾಯವಾಗಿದೆ. ಸಂಪರ್ಕ ರಸ್ತೆ, ನೀರು ಸರಬರಾಜು, ವಿದ್ಯುತ್ ಸಲಕರಣೆ ಜೋಡಣೆ ಕೆಲಸ  ಬಾಕಿ ಉಳಿದಿದ್ದು ಶೀಘ್ರದಲ್ಲಿಯೇ ಮುಗಿಸಿಕೊಡುವುದಾಗಿ ಹೇಳಿದರು. ‘ಗಡುವಿನ ನಂತರ ವಿದ್ಯಾರ್ಥಿಗಳೊಂದಿಗೆ ಕಾಲೇಜು ಪ್ರವೇಶ ಮಾಡುತ್ತೇವೆ’ ಎಂದು ನಿರಾಣಿ ಹೇಳಿದರು. 

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ಕಟಗೇರಿ, ಎಂ.ಎಂ.ಶಂಭೋಜಿ, ಶ್ರೀಶೈಲಯ್ಯ ಯಂಕಂಚಿಮಠ, ಸುಭಾಶ ಮೇರಾಕಾರ, ಮುತ್ತು ಬೋರ್ಜಿ, ವಿದ್ಯಾರ್ಥಿ ಮುಖಂಡರಾದ ಶ್ರೀಕಾಂತ ರಾಠೋಡ, ಬಿ.ಕೆ.ಶ್ರೀಶೈಲ, ಸಾಗರ ಕೋಟಿ, ವಿ.ಎಸ್.ಬಳಿಗಾರ, ಸಂತೋಷ ಡಿ.ವಿ.ಇದ್ದರು.

*
ಕಟ್ಟಡ ಪ್ರವೇಶಕ್ಕೆ 1 ತಿಂಗಳು ಗಡುವು ನೀಡಲಾಗಿದೆ. ಗಡುವಿನೊಳಗೆ ಆರಂಭಿಸದಿದ್ದರೆ ವಿದ್ಯಾರ್ಥಿಗಳನ್ನೊಳಗೊಂಡು ನಾವೇ ಕಟ್ಟಡದೊಳಗೆ ಪ್ರವೇಶಿಸುತ್ತೇವೆ.
–ಎಚ್.ಆರ್.ನಿರಾಣಿ,
ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT