ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಕ್ಕೂ ತೊಡಕೋ? ಹಣದ ಹಪಾಹಪಿಯೋ?

ಸಿಸೇರಿಯನ್‌ ಎಷ್ಟು ಅಗತ್ಯ?
Last Updated 3 ಮಾರ್ಚ್ 2017, 19:38 IST
ಅಕ್ಷರ ಗಾತ್ರ

‘ನಾರ್ಮಲ್ಲೊ, ಸಿಸೇರಿಯನ್ನೊ?’
ಪ್ರತೀ ಗಂಟೆಗೆ ಸರಾಸರಿ ಮೂರು ಸಾವಿರ ಹೆರಿಗೆಗಳಾಗುವ ನಮ್ಮ ದೇಶದಲ್ಲಿ ನಿತ್ಯ ಲೆಕ್ಕವಿಲ್ಲದಷ್ಟು ಸಲ ಕೇಳಿಬರುವ ಪ್ರಶ್ನೆ ಇದು. ಅಂದಹಾಗೆ, ಸದ್ಯದ ಸನ್ನಿವೇಶದಲ್ಲಿ ಈ ಪ್ರಶ್ನೆಗೆ ಸಿಗುವ ಸಾಮಾನ್ಯ ಉತ್ತರವೆಂದರೆ ‘ಸಿಸೇರಿಯನ್‌’ ಎಂಬುದೇ ಆಗಿದೆ.

ಒಂದುಕಾಲಕ್ಕೆ ಬರೀ ಹೆಸರು ಹೇಳಿದರೆ ಸಾಕು, ಭಯ ಉಂಟುಮಾಡುತ್ತಿದ್ದ ಸಿಸೇರಿಯನ್‌ ಹೆರಿಗೆ, ಈಗ ನೋವಿಲ್ಲದ ಕಾರಣಕ್ಕಾಗಿ ಗರ್ಭಿಣಿಯರಿಗೆ, ಬೇಕಾದ ಮುಹೂರ್ತದಲ್ಲಿ ಪ್ರಸವ ಮಾಡಿಸಬಹುದಾದ ಚಮತ್ಕಾರಕ್ಕಾಗಿ ಅವರ ಕುಟುಂಬ ವರ್ಗದವರಿಗೆ, ಹಣದ ಹೊಳೆಯನ್ನೇ ಹರಿಸುವ ತಾಕತ್ತಿಗಾಗಿ ಆಸ್ಪತ್ರೆಗಳಿಗೆ ಆಪ್ಯಾಯಮಾನ ಎನಿಸಿಬಿಟ್ಟಿದೆ.



ಹಿಂದೆ ಬಲು ಸಂಕೀರ್ಣ ಹಾಗೂ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ತಾಯಂದಿರು ಮತ್ತವರ ಹಸುಗೂಸುಗಳ ಮರಣವನ್ನು ತಪ್ಪಿಸಲು ರಾಮಬಾಣವಾಗಿ ಒದಗಿಬಂದಿದ್ದ ಸಿಸೇರಿಯನ್‌ ಅಸ್ತ್ರ, ಸದ್ಯ ಒಂದು ಪಿಡುಗಾಗಿ ಕಾಡುತ್ತಿದೆಯೇ? ಈ ಸಂಬಂಧ ಈಗ ದೇಶವ್ಯಾಪಿ ಚರ್ಚೆ ನಡೆದಿದೆ. ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಂತೂ ಯಾವ ವೈದ್ಯರು ಯಾವ ವಿಧದ ಹೆರಿಗೆಗಳನ್ನು, ಎಷ್ಟು ಮಾಡಿಸಿದ್ದಾರೆ ಎಂಬ ಅಂಕಿ–ಅಂಶದ ಫಲಕವನ್ನು ಪ್ರತೀ ಆಸ್ಪತ್ರೆಯಲ್ಲಿ ಪ್ರದರ್ಶಿಸಬೇಕು ಎನ್ನುವ ಸಲಹೆ ನೀಡಿದ್ದಾರೆ.

ಐಸಿಐಸಿಐ ಲ್ಯಾಂಬಾರ್ಡ್‌ ವಿಮಾ ಸಂಸ್ಥೆ ದೇಶದ ಹತ್ತು ಮಹಾನಗರಗಳಲ್ಲಿ, ಆರೋಗ್ಯ ವಿಮೆಯನ್ನು ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ ಎಂಬುದರ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆ ಪ್ರಕಾರ, ಶೇ 52ರಷ್ಟು ವಿಮಾ ಮೊತ್ತ ಸಿಸೇರಿಯನ್‌ ಹೆರಿಗೆಗಳಿಗಾಗಿ ಸಂದಾಯವಾಗಿದೆ!

ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ಸಿಸೇರಿಯನ್‌ ಹೆರಿಗೆಗಳು ಶೇ 15ರ ಮಿತಿಯನ್ನು ಮೀರುವಂತಿಲ್ಲ. ಆದರೆ, ಭಾರತದಲ್ಲಿ ಈಗಾಗಲೇ ಇಂತಹ ಹೆರಿಗೆಗಳ ಪ್ರಮಾಣ ಮಿತಿಯನ್ನು ದಾಟಿ ನಾಗಾಲೋಟದಲ್ಲಿ ಮುಂದೆ ಓಡುತ್ತಿದೆ. ಹೆರಿಗೆಗೆ ಶಸ್ತ್ರಚಿಕಿತ್ಸೆ ಅನಿವಾರ್ಯ ಎನ್ನುವಂತಹ ಸನ್ನಿವೇಶವನ್ನು ಆಸ್ಪತ್ರೆಗಳು ನಿರ್ಮಾಣ ಮಾಡುತ್ತಿವೆಯೇ? ‘ಹೌದು’ ಎಂಬ ಉತ್ತರ ನೀಡುವ ಸ್ವಯಂಸೇವಾ ಸಂಸ್ಥೆಗಳು ತುಂಬಾ ಸಂಖ್ಯೆಯಲ್ಲಿವೆ. ಅಂಥವುಗಳಲ್ಲಿ ‘ಬರ್ತ್‌ ಇಂಡಿಯಾ’ ಕೂಡ ಒಂದು. ಈ ಸ್ವಯಂಸೇವಾ ಸಂಸ್ಥೆಯನ್ನು ಹುಟ್ಟುಹಾಕಿದ ರುತ್‌ ಮಲಿಕ್‌ ಸಹ ಸಹಜ ಹೆರಿಗೆಗೆ ಹಂಬಲಿಸಿದವರು. ವೈದ್ಯರು ಅವರಿಗೆ ಮಾಡಿದ್ದು ಮಾತ್ರ ಸಿಸೇರಿಯನ್‌.

‘ಸಿಸೇರಿಯನ್‌ಗೆ ಒಳಗಾದ ಮಾರನೆಯ ದಿನ ನನ್ನ ಮಗುವನ್ನು ಪಕ್ಕದಲ್ಲಿ ತಂದು ಮಲಗಿಸಿದರು. ಸಹಜವಾಗಿ ಜನ್ಮಕೊಡಲು ಸಾಧ್ಯವಾಗದ ಕಾರಣ ನಾನು ವ್ಯಾಕುಲಗೊಂಡಿದ್ದೆ. ಮಗುವಿನ ಜತೆ ಸಂಬಂಧ ಬೆಸೆಯಲು ಒದ್ದಾಡಿದ್ದೆ. ನಾನೊಬ್ಬ ನಕಲಿ ಅಮ್ಮ ಎನ್ನುವಂತಹ ಪಾಪಪ್ರಜ್ಞೆ ಕಾಡಿತ್ತು’ ಎಂದು ಅವರು ಭಾವುಕರಾಗಿ ನೆನೆಯುತ್ತಾರೆ.



‘ಗರ್ಭದ ಸ್ಥಿತಿಗತಿ ತಿಳಿಯಲು ಸೋನೊಗ್ರಫಿ ಒಂದು ಉತ್ತಮ ವ್ಯವಸ್ಥೆಯೇನೊ ನಿಜ. ಆದರೆ, ಆಸ್ಪತ್ರೆಗಳಲ್ಲಿ ಭಯ ತರಿಸಲು ಅದರ ದುರುಪಯೋಗ ಆಗುತ್ತದೆ. ‘ಏನೋ ಸ್ವಲ್ಪ ತೊಂದರೆ ಇದ್ದಂತಿದೆ...’ ಎಂಬಂತಹ ಒಂದೇ ಮಾತು ಸಾಕು, ಗರ್ಭಿಣಿಯರನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಸಿಸೇರಿಯನ್‌ ಕಡೆಗೆ ಹೊರಳಿಸಲು’ ಎಂದು ಅವರು ಒಳನೋಟ ಬೀರುತ್ತಾರೆ.

ಐಸಿಐಸಿಐ ಲ್ಯಾಂಬಾರ್ಡ್‌ ವಿಮಾ ಸಂಸ್ಥೆ ಹೇಳುವಂತೆ, ಸಿಸೇರಿಯನ್‌ ಹೆರಿಗೆಗೆ ಸರಾಸರಿ ₹ 50 ಸಾವಿರ ಹಾಗೂ ಸಹಜ ಹೆರಿಗೆಗೆ ₹ 27 ಸಾವಿರದಂತೆ ವಿಮಾ ಹಣ ಪಾವತಿಯಾಗಿದೆ. ಅರಿವಳಿಕೆ ಕೊಡುವುದು ಸೇರಿದಂತೆ ಶಸ್ತ್ರಚಿಕಿತ್ಸಾ ಕೊಠಡಿಯ ಇತರ ವೆಚ್ಚಗಳು ಸೇರುವುದರಿಂದ ಸಹಜವಾಗಿಯೇ ಸಿಸೇರಿಯನ್‌ ಹೆರಿಗೆಗೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ ಎನ್ನುವುದು ವೈದ್ಯರ ವಾದ.

‘ಗರ್ಭಧಾರಣೆ ಸಂದರ್ಭದ ಮಧುಮೇಹದಿಂದ (ಜಿಡಿಎಂ– ಈ ಸಮಸ್ಯೆ ಹೆರಿಗೆ ಆಗುವವರೆಗೆ ಮಾತ್ರ ಇರುತ್ತದೆ) ಗರ್ಭಾವಸ್ಥೆಯಲ್ಲಿರುವ ಮಗು ಅಸಹಜವಾಗಿ ಬೆಳೆಯುತ್ತದೆ. ಅಂತಹ ದೊಡ್ಡಗಾತ್ರದ ಮಗುವನ್ನು ಸಹಜವಾಗಿ ಹೆರಿಗೆ ಮಾಡಿಸುವುದು ತುಂಬಾ ಕಷ್ಟ. ಆಗ ಸಿಸೇರಿಯನ್‌ ಅನಿವಾರ್ಯ’ ಎಂದು ಕ್ಲೌಡ್‌ನೈನ್‌ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ. ಆರ್‌. ಕಿಶೋರ್‌ ಕುಮಾರ್‌ ಹೇಳುತ್ತಾರೆ.

‘ಸಿಸೇರಿಯನ್‌ ಹೆರಿಗೆಗಳು ಹೆಚ್ಚುತ್ತಿರುವುದಕ್ಕೆ ವೈದ್ಯರನ್ನಷ್ಟೇ ಏಕೆ ದೂಷಿಸುತ್ತೀರಿ’ ಎಂದು ಗದರುತ್ತಾರೆ, ಭದ್ರಾವತಿಯಲ್ಲಿ ಹೆರಿಗೆ ಆಸ್ಪತ್ರೆ ನಡೆಸುತ್ತಿರುವ ಸ್ತ್ರೀರೋಗ ತಜ್ಞೆ ಡಾ. ವೀಣಾ ಭಟ್‌. ‘ಅಯ್ಯೋ ನನ್ನ ಮಗಳು ನೋವಿನಿಂದ ಒದ್ದಾಡುವುದನ್ನು ನೋಡೋಕ್ಕಾಗಲ್ಲ, ನೀವೆಂತಹ ಡಾಕ್ಟರ್ರೀ, ತಕ್ಷಣ ಸಿಸೇರಿಯನ್ ಮಾಡುತ್ತೀರೋ ಇಲ್ಲವೋ’ ಎಂದು ಧಮಕಿ ಹಾಕುವ ಪಾಲಕರೇ ಹೆಚ್ಚುತ್ತಿರುವಾಗ ವೈದ್ಯರು ಏನು ಮಾಡಬೇಕು’ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.

‘ನಮಗೆ ನೋವೇ ಬೇಡ, ಒಳಪರೀಕ್ಷೆಗಳೆಲ್ಲ ಹಿಂಸೆ. ನೇರವಾಗಿ ಸಿಸೇರಿಯನ್ನೇ ಮಾಡಿ ಎಂದು ಸಾಕಷ್ಟು ಮಂದಿ ದುಂಬಾಲು ಬೀಳುತ್ತಾರೆ. ಜ್ಯೋತಿಷಿಗಳಿಂದ ಬ್ರಾಹ್ಮಿ ಮುಹೂರ್ತ, ಶುಭ ನಕ್ಷತ್ರ ತೆಗೆಸಿಕೊಂಡು ಬಂದು ಇದೇ ಡೇಟು, ಇದೇ ಟೈಮಿಗೆ ಹೆರಿಗೆ ಆಗಬೇಕು ಎಂದೂ ತಾಕೀತು ಮಾಡುತ್ತಾರೆ. ಸ್ವಲ್ಪ ಕಾಯೋಣ ಎನ್ನುವ ಸಲಹೆ ಕೊಟ್ಟರೆ, ನೇರವಾಗಿ ಬೇರೆ ಆಸ್ಪತ್ರೆಗೆ ಹೊರಟು ಬಿಡುತ್ತಾರೆ. ಹೆರಿಗೆಯ ಈ ಮೂಢನಂಬಿಕೆಗಳಿಗೆ ಎಲ್ಲಿದೆ ಪರಿಹಾರ’ ಎಂದು ಕೇಳುತ್ತಾರೆ.



‘ಹೆರಿಗೆ ನೋವಿನ ಕುರಿತು ಇಲ್ಲಸಲ್ಲದ ಭಯಾನಕ ಕಥೆಗಳನ್ನು ಗರ್ಭಿಣಿಯರ ಮುಂದೆ ಹೇಳಿ ಅವರನ್ನು ಅಧೀರರನ್ನಾಗಿ ಮಾಡುವುದು ಸಮಾಜವೇ ಹೊರತು ವೈದ್ಯರಲ್ಲ. ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಕಷ್ಟ ಸಹಿಷ್ಣುತೆ, ಸಹನೆ, ತಾಳ್ಮೆಯಂತಹ ಗುಣಗಳು ಸಹ ಸಿಸೇರಿಯನ್‌ ಹೆರಿಗೆಗಳ ಪ್ರಮಾಣ ಹೆಚ್ಚಾಗಲು ಕಾರಣ. ಹೆರಿಗೆ ಸಂದರ್ಭದ ತಾತ್ಕಾಲಿಕ ನೋವಿನಿಂದ ಉಪಶಮನ ಸಿಕ್ಕಾಗ ಆಗುವ ಲಾಭವು ಶಸ್ತ್ರಚಿಕಿತ್ಸೆಯಿಂದ ಆಗುವ ಅರಿವಳಿಕೆ ತೊಂದರೆ, ದೀರ್ಘಕಾಲೀನ ನೋವುಗಳಿಗಿಂತ ಹೆಚ್ಚು ಎನ್ನುವ ಅರಿವನ್ನು ಭಾವಿ ಅಮ್ಮಂದಿರಲ್ಲಿ ಮೂಡಿಸಬೇಕು’ ಎಂದು ಅವರು ಹೇಳುತ್ತಾರೆ.

ಆನೆ ಕಾಡಿನಲ್ಲಿ, ಮರದ ಬಂಡಿಯಲ್ಲಿ ಹತ್ತಾರು ಮೈಲಿ ದೂರ ಪ್ರಯಾಣಿಸಿ, ಸಾವಿರಾರು ಹೆರಿಗೆಗಳನ್ನು ಮಾಡಿಸಿರುವ ಹುಣಸೂರಿನ ಮಾಸ್ತಮ್ಮ,‘ಹೆರಿಗೆ ವಿಷಯದಲ್ಲಿ ಆಸ್ಪತ್ರೆಗಳಿಗೇನು ಕೆಲಸ, ಸೂಲಗಿತ್ತಿಯರೇ ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು’ ಎನ್ನುತ್ತಾರೆ. ‘ಐವತ್ತು ವರ್ಷಗಳ ನನ್ನ ಸೇವೆಯಲ್ಲಿ ಒಬ್ಬ ಬಾಣಂತಿ, ಒಂದು ಮಗುವೂ ಸತ್ತಿಲ್ಲ, ಗೊತ್ತೆ? ಅಂತಹ ಒಂದು ದೂರು ಬಂದರೂ ನನ್ನನ್ನು ಗಲ್ಲಿಗೇರಿಸಿ’ ಎಂದು ಸವಾಲು ಎಸೆಯುತ್ತಾರೆ.

ತುಂಬಾ ತಡವಾಗಿ ಮದುವೆ ಆಗುವುದು, ಗರ್ಭ ಧರಿಸುವುದನ್ನು ಮುಂದಕ್ಕೆ ಹಾಕುತ್ತಾ, ಹಾಕುತ್ತಾ ವಿಳಂಬವಾಗಿ ಮಗು ಬಯಸುವುದು, ಪದೇ ಪದೇ ಗರ್ಭಪಾತವಾಗಿ ಬಳಲಿರುವುದು, ಕೃತಕ ಗರ್ಭಧಾರಣೆ ಮಾಡಿಸಿಕೊಳ್ಳುವುದು, ಮೈ ಬಗ್ಗಿಸಿ ಕೆಲಸ ಮಾಡದೇ ಇರುವುದು, ನೆಲ ಒರೆಸುವುದಕ್ಕೆ ಸ್ವೀಪಿಂಗ್‌ ಸ್ಟಿಕ್‌ ಬಳಸುವುದು, ಮಧುಮೇಹ, ರಕ್ತಹೀನತೆ, ರಕ್ತದೊತ್ತಡದಿಂದ ಬಳಲುವುದು, ಒತ್ತಡ–ಉದ್ವೇಗಕ್ಕೆ ಒಳಗಾಗುವುದು... ಹೀಗೆ ಸಿಸೇರಿಯನ್‌ ಸುಳಿಗೆ ಸಿಲುಕಲು ಹಲವಾರು ಕಾರಣಗಳು ಉಂಟು.

ಗರ್ಭಿಣಿಯರು ಮೈ ಬಗ್ಗಿಸಿ ನೆಲ ಒರೆಸಿದರೆ ತೊಡೆಯ ಸ್ನಾಯುಗಳಿಗೆ ಅಗತ್ಯ ವ್ಯಾಯಾಮ ಸಿಗುತ್ತದೆ. ಇದರಿಂದ ಸಹಜ ಹೆರಿಗೆಗೆ ದೇಹ ತನ್ನಿಂದತಾನೆ ಸನ್ನದ್ಧಗೊಳ್ಳುತ್ತಾ ಹೋಗುತ್ತದೆ. ಆದರೆ, ಕೈಬೆರಳುಗಳಿಗೆ ಮಾತ್ರ ಕೆಲಸ ಕೊಡುವವರ ಸಂಖ್ಯೆಯೇ ಈಗ ಹೆಚ್ಚಾಗಿದೆ. ‘ಕುಂತಿರೊ ಜಾಗ ಬಿಟ್ಟು ಏಳಲ್ಲ. ಸೊಪ್ಪು–ಕಾಳು ತಿನ್ನಲ್ಲ. ಹೆರಿಗೆ ಆಗೆಂದರೆ ಹೆಂಗೆ ಆಯ್ತದೆ? ಆಸ್ಪತ್ರೆಗೆ ಹೋಗೋದೇ, ಹೊಟ್ಟೆ ಕುಯ್ಯೋದೇ’ ಎಂದು ಹೇಳುತ್ತಾರೆ ಮಾಸ್ತಮ್ಮ.

ಗರ್ಭಿಣಿಯರಿಗೆ ಆರಂಭದಿಂದಲೇ ತಿಳಿವಳಿಕೆ ನೀಡುತ್ತಾ, ಸುಖಪ್ರಸವಕ್ಕೆ ಅವರನ್ನು ಸನ್ನದ್ಧಗೊಳಿಸುತ್ತಾ, ಸಮಾಜದ ಜೀವನ್ಮುಖಿ ಪಯಣದ ಹಾದಿಯು ತಪ್ಪದಂತೆ ನೋಡಿಕೊಳ್ಳುತ್ತಾ ಬಂದಿದ್ದ ಸೂಲಗಿತ್ತಿಯರ ಸಮುದಾಯವೇ ಕಣ್ಮರೆ ಆಗುತ್ತಿರುವುದಕ್ಕೆ ಅವರಲ್ಲಿ ವಿಷಾದವಿದೆ.

ಬೆಂಗಳೂರಿನ ಜನರಿಗೂ ನೆರವಿನಹಸ್ತ ಚಾಚಲು ಬಂದಿದ್ದ ಮಾಸ್ತಮ್ಮ, ಗರ್ಭಿಣಿಯರು ಅವರಿಂದ ಸೇವೆ ಪಡೆಯಲು ಅಪೇಕ್ಷಿಸದ ಕಾರಣ ಒಂದೇ ವಾರಕ್ಕೆ ವಾಪಸ್‌ ತಮ್ಮ ಹಾಡಿಗೆ ಹೋಗಬೇಕಾಯಿತು ಗೊತ್ತೆ?

‘ನನ್ನ ಪರಿಚಿತರೊಬ್ಬರು, ಅಜ್ಜಿ ಬೆಂಗಳೂರಿನಲ್ಲಿ ಹೆರಿಗೆ ಮಾಡಿಸುವಂತೆ ಬಾ ಎಂದು ಕರೆದುಕೊಂಡು ಹೋದರು. ಅಲ್ಲಿ ಮುದ್ದೆ ತಿನ್ನೋದು, ಮಹಡಿ ಮೇಲೆ ಕೂರೋದು ಇಷ್ಟೇ ಕೆಲಸ ಆಗಿತ್ತು ನನಗೆ. ಒಬ್ಬ ಗರ್ಭಿಣಿಯನ್ನು ಹೆರಿಗೆಗೆ ಕರೆದುಕೊಂಡು ಬಂದರು. ನಾನು ಹೆರಿಗೆ ಮಾಡಿಸಲು ಹೋದರೆ ಒಲ್ಲೆ ಎಂದು ಕಿರಿಚಿಕೊಂಡಳು. ಅವಳನ್ನು ವೈದ್ಯರ ಬಳಿಗೆ ಕರೆದೊಯ್ದರು. ಮತ್ತೆ ಯಾರೂ ಹೆರಿಗೆಗೆ ಬಾರದ ಕಾರಣ ನಾನು ಊರಿಗೆ ವಾಪಸ್‌ ಬಂದೆ’ ಎಂದು ವಿವರಿಸುತ್ತಾರೆ.

ರಾಜ್ಯದಲ್ಲಿ ಆಸ್ಪತ್ರೆ ಇಲ್ಲವೆ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಗಳಾಗುವ ಪ್ರಮಾಣ ಈಗ ಶೇ 98ರ ಗಡಿ ತಲುಪಿದೆ. ಅಂದರೆ, ಬಹುತೇಕ ಎಲ್ಲ ಹೆರಿಗೆಗಳಿಗೂ ಈಗ ವೈದ್ಯಕೀಯ ನೆರವು ಸಿಕ್ಕೇ ಸಿಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ಗಳು ಕಡಿಮೆ ಪ್ರಮಾಣದಲ್ಲಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ವಿಧದ ಹೆರಿಗೆಗಳ ಸಂಖ್ಯೆ ದುಪ್ಪಟ್ಟಿದೆ.

‘ಐವತ್ತು ವರ್ಷಗಳ ಹಿಂದಿನ ಸ್ಥಿತಿ ಈಗಿಲ್ಲ. ಜನಿಸುವ ಶಿಶುವಿನ ಸರಾಸರಿ ತೂಕ ಈಗ ಮೂರು ಕೆ.ಜಿ.ಗೆ ತಲುಪಿದೆ. ಬದಲಾದ ಜೀವನ ಶೈಲಿಯಿಂದ ತೊಡಕಿನ ಗರ್ಭಧಾರಣೆಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಸಿಸೇರಿಯನ್‌ ಹೆರಿಗೆಗಳ ಪ್ರಮಾಣ ಏರಿಕೆಯಾಗಿದೆ’ ಎಂದು ವಿಶ್ಲೇಷಿಸುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಾ. ಎನ್‌.ರಾಜ್‌ಕುಮಾರ್‌.

‘ಜನರಲ್ಲೀಗ ಆರೋಗ್ಯ ಸಂರಕ್ಷಣೆಗಾಗಿ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಿದೆ. ಸಹಜ ಹೆರಿಗೆಯ ಸಂಭಾವ್ಯ ತೊಂದರೆಯನ್ನು ಎದುರಿಸುವುದು ಅವರಿಗೆ ಬೇಕಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸುವಂತೆ ವೈದ್ಯರ ಮೇಲೆ ಒತ್ತಡ ಹಾಕುತ್ತಾರೆ’ ಎಂದು ಹೇಳುತ್ತಾರೆ.

‘ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹಣದ ಹಪಾಹಪಿ ಹೆಚ್ಚಾಗಿ, ಪ್ರತಿ ವೈದ್ಯರಿಗೆ ಸಿಸೇರಿಯನ್‌ ಹೆರಿಗೆಗಳ ಗುರಿ ನೀಡಿದ ಕುರಿತು ಹೇಳಲಾಗುತ್ತದೆ. ಅನಗತ್ಯವಾಗಿ ಶಸ್ತ್ರಚಿಕಿತ್ಸೆ ನಡೆಸಿದರೆ ಆಸ್ಪತ್ರೆಯ ಮಾನ್ಯತೆ ರದ್ದುಗೊಳಿಸಲು ಅವಕಾಶವಿದೆ. ದೂರು ಬಂದರೆ ಅಂತಹ ಪ್ರಕರಣಗಳ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ.

ತಾಳ್ಮೆಯಿಂದ ಕಾಯ್ದರೆ ಸಹಜ ಹೆರಿಗೆಯೇ ಶ್ರೇಷ್ಠ, ತೊಡಕಿನ ಗರ್ಭಧಾರಣೆ ಸಂದರ್ಭಗಳಲ್ಲಿ ಸಿಸೇರಿಯನ್‌ ವರದಾನ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಆದರೆ, ದಿನದಿಂದ ದಿನಕ್ಕೆ ಸಿಸೇರಿಯನ್‌ ಹೆರಿಗೆಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇದೇನು ಆಧುನಿಕ ಜೀವನ ಶೈಲಿಯಿಂದ ಸೃಷ್ಟಿಯಾದ ತೊಡಕೋ? ಸಮಾಜದಲ್ಲಿ ಸಹನೆ ಕಡಿಮೆಯಾದ ಪರಿಣಾಮವೋ? ವೈದ್ಯರ ಹಣದ ಹಪಾಹಪಿಯೋ? ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲಾಗದ ಸರ್ಕಾರದ ಅಸಹಾಯಕತೆಯೋ? ಸಮಸ್ಯೆಯ ಉಲ್ಬಣಕ್ಕೆ ಈ ಎಲ್ಲ ಅಂಶಗಳ ಕೊಡುಗೆಯೂ ದೊಡ್ಡದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT