ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿ: ವಿಶ್ವಾಸ ಮೂಡಿಸದ ಅಂಕಿ ಅಂಶ

Last Updated 3 ಮಾರ್ಚ್ 2017, 19:52 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ ವೃದ್ಧಿ ದರ) ಶೇ 7ರಷ್ಟಾಗಿದೆ ಎನ್ನುವುದು ಅಚ್ಚರಿದಾಯಕ ವಿದ್ಯಮಾನವಾಗಿದೆ.  ಕೇಂದ್ರೀಯ ಅಂಕಿಅಂಶ  ಕಚೇರಿ (ಸಿಎಸ್‌ಒ) ಬಿಡುಗಡೆ ಮಾಡಿರುವ ವರದಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅರ್ಥಶಾಸ್ತ್ರಜ್ಞರಿಗೂ ಒಗಟಾಗಿ ಕಂಡಿದೆ. ನೋಟು ರದ್ದತಿಯ ನೈಜ ಪರಿಣಾಮಗಳನ್ನು ಮರೆಮಾಚಲಾಗಿದೆ ಎನ್ನುವ ಅನುಮಾನ ಮೂಡಿಸಿದೆ. ಶೇ 90ರಷ್ಟು ವಹಿವಾಟು ನಗದು ಮೂಲಕವೇ ನಡೆಯುತ್ತಿದ್ದ ಅರ್ಥ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ ಶೇ 86ರಷ್ಟು ಮೊತ್ತದ ನೋಟುಗಳನ್ನು  ನವೆಂಬರ್‌ನಲ್ಲಿ ಹಠಾತ್ತಾಗಿ ರದ್ದುಪಡಿಸಲಾಗಿತ್ತು.

ಈ  ವಿದ್ಯಮಾನವು ಆರ್ಥಿಕ ವೃದ್ಧಿ ದರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನೇ  ಬೀರಿಲ್ಲ ಎಂದು ಬಿಂಬಿಸುವ ಈ ಅಂಕಿ ಅಂಶಗಳ ಮಾಯಾಜಾಲವು  ಮೇಲ್ನೋಟಕ್ಕೆ ನಂಬಲರ್ಹವಲ್ಲ ಎನ್ನುವ  ಭಾವನೆ ಮೂಡಿಸಿದೆ.  ರಾಜಕಾರಣಿಗಳು ಬಿಡಿ, ಅರ್ಥಶಾಸ್ತ್ರಜ್ಞರೂ ಈ ವಿವರಗಳ ಸಾಚಾತನ ಪ್ರಶ್ನಿಸಿರುವುದು ಗಮನಾರ್ಹ. ಡಿಸೆಂಬರ್‌ ತಿಂಗಳಾಂತ್ಯದಲ್ಲಿನ ವೃದ್ಧಿ ದರ ಶೇ 7 ಮತ್ತು ಒಟ್ಟಾರೆ ಆರ್ಥಿಕ ವರ್ಷದ ಜಿಡಿಪಿ ಶೇ 7.1ರಷ್ಟು ಇರಲಿದೆ ಎನ್ನುವ ಅಂದಾಜು, ಸರ್ಕಾರದ ಆರ್ಥಿಕ ಸಮೀಕ್ಷೆಯೂ ಸೇರಿದಂತೆ ದೇಶಿ ಮತ್ತು ವಿದೇಶಿ ಹಣಕಾಸು ಸಂಸ್ಥೆಗಳ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿದೆ. 

ಕೃಷಿ ವಲಯದ ವೃದ್ಧಿ ದರ ಶೇ 6 ರಷ್ಟು ಇರಲಿದೆ ಎನ್ನುವುದಕ್ಕೂ ಸಮರ್ಥ ಕಾರಣಗಳೇ ಇಲ್ಲ.  ಕಾರ್ಪೊರೇಟ್‌ ಸಂಸ್ಥೆಗಳ ಹಣಕಾಸು ಸಾಧನೆ ಮತ್ತು ವರ್ತಕರು ಪಾವತಿಸಿರುವ ಮಾರಾಟ ತೆರಿಗೆಗಳನ್ನಷ್ಟೇ ಆಧರಿಸಿ ಜಿಡಿಪಿ ಅಂದಾಜಿಸಿರುವಂತಿದೆ. ಹೀಗಾಗಿ  ಆರ್ಥಿಕ ಚಟುವಟಿಕೆಗಳ ಬಗ್ಗೆ ಉತ್ಪ್ರೇಕ್ಷಿತ  ಚಿತ್ರಣ ದೊರೆತಿದೆ. ಜಿಡಿಪಿ ಅಂಕಿಅಂಶಗಳನ್ನೆಲ್ಲ ತಿರುಚಲಾಗಿದೆ ಎನ್ನುವ ತೀರ್ಮಾನಕ್ಕೂ ಯಾರೊಬ್ಬರೂ ಬರಬೇಕಾಗಿಲ್ಲ. ಅದರ ಬದಲಿಗೆ, ಪರಿಗಣನೆಗೆ ತೆಗೆದುಕೊಂಡಿರುವ ಸಂಗತಿಗಳು, ಹಾಕಿದ ಲೆಕ್ಕಾಚಾರ ಸಮರ್ಪಕವಾಗಿಲ್ಲ ಎನ್ನಬಹುದು.

ನೋಟು ರದ್ದತಿಯು ಆರ್ಥಿಕ ಚಟುವಟಿಕೆಗಳ ಮೇಲೆ ತಣ್ಣೀರು ಎರಚಲಿದೆ  ಎನ್ನುವ ವ್ಯಾಪಕ ಟೀಕೆಯನ್ನು  ಜಿಡಿಪಿ ವೃದ್ಧಿ ದರ ಹುಸಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ  ಅವರು ಸ್ವಯಂ ಬೆನ್ನು ತಟ್ಟಿಕೊಳ್ಳುವುದೂ ಟೀಕಾಕಾರರನ್ನು ಜರೆಯುವುದೂ ಸರಿಯಲ್ಲ. ನೋಟು ರದ್ದತಿಯು ಆರ್ಥಿಕತೆಗೆ ಯಾವುದೇ ಹಾನಿಯನ್ನೇ ಉಂಟು ಮಾಡಿಲ್ಲ ಎನ್ನುವುದನ್ನು ಸಿಎಸ್‌ಸಿ ವರದಿ ಖಚಿತವಾಗಿ ಸಾಬೀತುಪಡಿಸುವುದೂ ಇಲ್ಲ. ತೆರಿಗೆ ಸಂಗ್ರಹ ಮತ್ತು ಸಬ್ಸಿಡಿ ಕಡಿತಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡಿರುವುದರಿಂದ ಜಿಡಿಪಿಯಲ್ಲಿ ಸುಧಾರಣೆ ಕಂಡು ಬಂದಿದೆಯಷ್ಟೆ.

ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಸುನಾಮಿ ಹೊಡೆತಕ್ಕೆ ಚಿಲ್ಲರೆ ವಹಿವಾಟು, ವಾಹನ ತಯಾರಿಕೆ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ಮನರಂಜನೆ,  ಗುಡಿ ಕೈಗಾರಿಕೆ, ರಿಯಲ್‌ ಎಸ್ಟೇಟ್‌ ವಹಿವಾಟುಗಳು ನಷ್ಟಕ್ಕೆ ಗುರಿಯಾಗಿದ್ದವು.  ಅಂತಹದ್ದು ಏನೂ ಘಟಿಸಿಯೇ ಇಲ್ಲ ಎಂಬರ್ಥ  ಧ್ವನಿಸುವ ಅಂಕಿಅಂಶಗಳ ಸಾಚಾತನ ಪ್ರಶ್ನಿಸುವುದರಲ್ಲಿ ಅಸಹಜವೇನೂ ಇಲ್ಲ. ಹೀಗಾಗಿ ಜಿಡಿಪಿ ಕುರಿತು ಗೊಂದಲ ಸೃಷ್ಟಿಯಾಗಿರುವುದರಿಂದ ಅಂಕಿಅಂಶಗಳ ಜತೆ ವ್ಯವಹರಿಸುವಾಗ ಎಲ್ಲ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದೇ ಹೆಚ್ಚು ಸುರಕ್ಷಿತ ನಿಲುವಾಗಿರುತ್ತದೆ.

ಪರಿಷ್ಕೃತ ಅಂದಾಜು ಬೇರೆ ಚಿತ್ರಣವನ್ನೇ ನೀಡಬಹುದು. ಜತೆಗೆ, ಮೇ ತಿಂಗಳಲ್ಲಿ ಪ್ರಕಟವಾಗಲಿರುವ ನಾಲ್ಕನೇ ತ್ರೈಮಾಸಿಕದ ಅಂಕಿಅಂಶಗಳು ಹೆಚ್ಚು ನೈಜ ಚಿತ್ರಣ ನೀಡಬಹುದಾಗಿದ್ದು, ಅಲ್ಲಿಯವರೆಗೆ ಕಾದುನೋಡಬೇಕು.  ಕಹಿ ಗುಳಿಗೆ ಸೇವಿಸಿದ ನಂತರ   ಚೇತರಿಕೆ ಕಂಡುಬರುತ್ತದೆ ಎನ್ನುವ ನಿರೀಕ್ಷೆ ನಿಜವಾದರೆ ಮಾತ್ರ ಸಿಎಸ್‌ಸಿ ವರದಿ ನಂಬಿಕೆ ಮೂಡಿಸುತ್ತದೆ. ಸರ್ಕಾರವು ಇಷ್ಟಕ್ಕೇ ಸಂತೃಪ್ತಗೊಂಡು ಭ್ರಮಾಲೋಕದಲ್ಲಿ ವಿಹರಿಸಬಾರದು. ವಾಸ್ತವಿಕವಾದ ಸಂಗತಿಗಳ ಬಗ್ಗೆ ಹೆಚ್ಚು ನಿಗಾ ವಹಿಸಿ ಅಗತ್ಯ ಸುಧಾರಣಾ ಕ್ರಮ ಕೈಗೊಂಡರೆ  ಮಾತ್ರ ಹಳಿ ತಪ್ಪಿರುವ ಅರ್ಥ ವ್ಯವಸ್ಥೆ ಮುಂಬರುವ ದಿನಗಳಲ್ಲಿ ಸರಿದಾರಿಗೆ ಬಂದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT