ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸರು ಸಾಂಸ್ಕೃತಿಕ ಸಂಬಂಧ ಹಾಳು ಮಾಡಿಲ್ಲ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಹಾಬಲೇಶ್ವರಪ್ಪ ಅಭಿಮತ
Last Updated 4 ಮಾರ್ಚ್ 2017, 9:49 IST
ಅಕ್ಷರ ಗಾತ್ರ

ಬೀದರ್: ಹೈದರಾಬಾದ್ ಕರ್ನಾಟಕ ದಲ್ಲಿ ಹಿಂದೂ ಮತ್ತು ಮುಸ್ಲಿಮ್ ಅರಸರು ನಡೆಸಿದ ದಾಳಿಗಳು ರಾಜಕೀಯ ಪ್ರೇರಿತವಾಗಿದ್ದವು. ಅವು ಸಾಂಸ್ಕೃತಿಕ ಸಂಬಂಧಗಳನ್ನು ಹಾಳು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಸಿ. ಮಹಾಬಲೇಶ್ವರಪ್ಪ ಅಭಿಪ್ರಾಯ ಪಟ್ಟರು.

ನಗರದ ಸಿದ್ಧಾರ್ಥ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗವು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿ ಸಿರುವ ‘ಹೈದರಾಬಾದ್‌ ಕರ್ನಾಟಕದಲ್ಲಿ ಆಳಿದ ಅರಸರ ಕೊಡುಗೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೈದರಾಬಾದ್‌ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಅರಸರು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಪ್ರಾಮುಖ್ಯ ನೀಡಿ ದ್ದರೆ ಹೊರತು ಜನರ ಸಾಂಸ್ಕೃತಿಕ ಸಂಬಂಧ ಹಾಳುಗೆಡವಲು ಪ್ರಯ ತ್ನಿಸಿರಲಿಲ್ಲ ಎಂದು ಹೇಳಿದರು.

ಮೊದಲ ಸುಧಾರಣಾ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯ ಸೃಷ್ಟಿಯಾದದ್ದು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ. ಬಸವಣ್ಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರೂ ಬ್ರಾಹ್ಮಣೇತರ ಚಳವಳಿ ಸಂಘಟಿಸಿದ್ದರು. ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಸಮಾನತೆ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ನಡೆಸಿದ್ದರು ಎಂದು ತಿಳಿಸಿದರು.

ಸಮಾನತೆಯ ಸಮಾಜ ಕಟ್ಟಲು ಹೋರಾಟ ನಡೆಸಿದ ಶರಣರನ್ನು ಜಾತಿ ನೆಲೆಯಲ್ಲಿ ಗುರುತಿಸುವುದು ವಿಷಾ ದನೀಯ. ಬಸವಣ್ಣನವರ ವಚನಗಳನ್ನು ಧರ್ಮದ ದೃಷ್ಟಿಕೋನದಿಂದ ನೋಡ ದೇ ಅವುಗಳಲ್ಲಿರುವ ಜೀವನ ಮೌಲ್ಯಗಳನ್ನು ಅರಿಯಬೇಕು ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಲಭ್ಯ ಇರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ದೊರೆತ ಅಶೋಕನ ಶಿಲಾಶಾಸನಗಳು ಧರ್ಮದ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿವೆ. ಕಲ್ಯಾಣಿ ಚಾಲುಕ್ಯರ ದೊರೆ ಆರನೆಯ ವಿಕ್ರಮಾ ದಿತ್ಯನ ಕಾಲದಲ್ಲಿ ಬರೆದ ವಿಜ್ಞಾನೇಶ್ವರನ ‘ಮಿತಾಕ್ಷರ ಗ್ರಂಥ’ವು ಕಾನೂನು ಗ್ರಂಥ ಎಂದೇ ಪ್ರಸಿದ್ಧಿ ಪಡೆದಿದೆ ಎಂದರು.

ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ ಡಾ. ವೀರಶೆಟ್ಟಿ ಬಿ. ಗಾರಂಪಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಇತಿಹಾಸದ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯ ಪತ್ರಗಾರ ಇಲಾಖೆಯಲ್ಲಿ ಹೈದರ್‌ ಅಲಿ ಕಾಲದಿಂದ ಈವರೆಗಿನ ಎಲ್ಲ ದಾಖಲೆಗಳು ಲಭ್ಯ ಇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್ ಮಾತನಾಡಿದರು. ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಮಾರುತಿರಾವ್‌ ಡಿ. ಮಾಲೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮಾಣಿಕರಾವ್‌ ಭಾಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಎಂ.ಎಸ್‌. ಖರ್ಗೆ ಸ್ವಾಗತಿಸಿದರು. ಪ್ರೊ. ಬಸವರಾಜ ಸ್ವಾಮಿ ನಿರೂಪಿಸಿದರು.

*
ಬಸವಣ್ಣನವರ ವಚನಗಳನ್ನು ಧರ್ಮದ ದೃಷ್ಟಿಕೋನದಿಂದ ನೋಡದೆ ಅವುಗಳಲ್ಲಿ ಪ್ರತಿಪಾ ದಿಸಿರುವ  ಮೌಲ್ಯಗಳನ್ನು ಅರಿಯಲು ಪ್ರಯತ್ನಿಸಬೇಕು.
-ಪ್ರೊ.ಬಿ.ಸಿ. ಮಹಾಬಲೇಶ್ವರಪ್ಪ,
ಗುಲಬರ್ಗಾ ವಿ.ವಿ. ಇತಿಹಾಸ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT