ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕ್ರಿಕೆಟ್‌ನಲ್ಲಿ ಹೊಸ ಆಶಯ...

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಿಲ್ಲಾ ಮಟ್ಟದ ಕ್ರೀಡಾಂಗಣಗಳಲ್ಲಿ ಮ್ಯಾಟಿಂಗ್ ಮೇಲೆ ಸಾಮರ್ಥ್ಯ ಪ್ರದರ್ಶಿಸುತ್ತಿರುವ ಗ್ರಾಮೀಣ ಕ್ರಿಕೆಟಿಗರಿಗೆ ಈ ಬಾರಿ ಭರ್ಜರಿ ಕೊಡುಗೆ ಲಭಿಸಿತ್ತು. ಈ ವರ್ಷದ ಅಖಿಲ ಭಾರತ ಅಂತರ ವಲಯ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯಗಳು ನಡೆದದ್ದು ಟರ್ಫ್ ಪಿಚ್‌ನಲ್ಲಿ. ಫೆಬ್ರುವರಿ ಕೊನೆಯ ವಾರದಲ್ಲಿ ಬೆಳಗಾವಿಯ ಕೆ.ಎಸ್‌.ಸಿ.ಎ ಮೈದಾನದಲ್ಲಿ ಟೂರ್ನಿ ಹೊಸ ಬೆಳಕಿನ ನಿರೀಕ್ಷೆಯಲ್ಲಿರುವ ಭಾರತೀಯ ಗ್ರಾಮೀಣ ಕ್ರಿಕೆಟ್ ಸಂಸ್ಥೆಯ ಭರವಸೆ ಹೆಚ್ಚಿಸಿದೆ.

ರಣಜಿ ಟೂರ್ನಿಯಲ್ಲಿ ಗ್ರಾಮೀಣ ಕ್ರಿಕೆಟಿಗರ ತಂಡವನ್ನು ಸೇರಿಸಬೇಕು ಎಂದು ಒತ್ತಾಯಿಸಿ ಮುಂಬೈ ಹೈಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ ಸಲ್ಲಿಸಿರುವ ರಿಟ್ ಅರ್ಜಿಗೆ ಪೂರಕ ಸ್ಪಂದನೆ ಲಭಿಸಿದೆ ಎಂದು ಹೇಳುವ ಸಂಸ್ಥೆಯವರು ಇದೀಗ ಸುಪ್ರಿಂ ಕೋರ್ಟ್‌ ನೇಮಕ ಮಾಡಿದ ಲೋಧಾ ಸಮಿತಿಯನ್ನು ಕೂಡ ಸಂಪರ್ಕಿಸಿದ್ದಾರೆ. ಅಲ್ಲಿಯೂ ಉತ್ತಮ ಸ್ಪಂದನೆ ಲಭಿಸಿದ್ದು ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಅವರು.

ಇದೇ ಸಂದರ್ಭದಲ್ಲಿ ಬೆಳಗಾವಿ ಯಲ್ಲಿ ನಡೆದ ಟೂರ್ನಿ ಟರ್ಫ್ ಪಿಚ್‌ನಲ್ಲಿ ಗ್ರಾಮೀಣ ಪ್ರದೇಶಗಳ ಆಟಗಾರರು ಗುಣಮಟ್ಟದ ಆಟ ಆಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿತ್ತು. ಹೀಗಾಗಿ ಅವರ ಭರವಸೆ ಹೆಚ್ಚಿದೆ.

‘ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಹೈಕೋರ್ಟ್‌ ಪೀಠ ಬಿಸಿಸಿಐಗೆ ಸ್ಪಷ್ಟ ಸೂಚನೆ ನೀಡಿದೆ. ಲೋಧಾ ಸಮಿತಿ ಕೂಡ ಗ್ರಾಮೀಣ ಕ್ರಿಕೆಟ್‌ಗೆ ಪೂರಕ ವಾತಾವರಣ ಒದಗಿಸುವ ಕುರಿತು ಸ್ಪಂದಿಸಿದೆ’ ಎಂದು ಭಾರತೀಯ ಗ್ರಾಮೀಣ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಲವಕುಮಾರ ಜಾಧವ ಹೇಳಿದರು.

ಯಾರು ಗ್ರಾಮೀಣ ಕ್ರಿಕೆಟಿಗರು?
ಹಳ್ಳಿಯಲ್ಲಿ ಜನಿಸಿದ ಕ್ರಿಕೆಟಿಗರನ್ನು ಒಟ್ಟುಗೂಡಿಸಿ ಗ್ರಾಮೀಣ ಕ್ರಿಕೆಟ್‌ ತಂಡ ವನ್ನು ರಚಿಸಲಾಗುತ್ತದೆ. ಪ್ರತಿ ವರ್ಷ ನಡೆಯುವ ಅಖಿಲ ಭಾರತ ಟೂರ್ನಿಗಳಲ್ಲಿ 10ಕ್ಕೂ ಹೆಚ್ಚು ತಂಡ ಗಳು ಪಾಲ್ಗೊಳ್ಳುತ್ತವೆ. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಮಂದಿ ರಾಷ್ಟ್ರಮಟ್ಟದ ಗ್ರಾಮೀಣ ಕ್ರಿಕೆಟಿಗರು ಇದ್ದಾರೆ. ರಾಜ್ಯದ ಗ್ರಾಮೀಣ  ಚಟುವಟಿಕೆಯ ಕೇಂದ್ರ ಬೆಳಗಾವಿ.

ರಾಜ್ಯ ತಂಡವನ್ನು ಈಗ ಬ್ಯಾಟ್ಸ್‌ಮನ್‌ ಮತ್ತು ಸ್ಪಿನ್ ಬೌಲರ್‌ ಸಾಗರದ ಎಂ.ಡಿ.ನಾಯಕ  ಮುನ್ನಡೆಸುತ್ತಿ ದ್ದಾರೆ. ಆಲ್‌ರೌಂಡರ್‌ ರಾಜು ಹಮ್ಮನ್ನವರ, ಬ್ಯಾಟ್ಸ್‌ಮನ್‌ ಅಮಿತ್ ಮೊರಬದ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಾಗರದ ಗೋಲಗುಂದ ಮುಂತಾದವರು ರಾಷ್ಟ್ರಮಟ್ಟದಲ್ಲಿ ಬೆಳಗುತ್ತಿದ್ದಾರೆ. ತರಬೇತಿ ಬೆಳಗಾವಿಯಲ್ಲೇ ನಡೆಯುತ್ತಿದೆ. ಈ ವರ್ಷ ಅಖಿಲ ಭಾರತ ಟೂರ್ನಿಯಲ್ಲಿ ದಕ್ಷಿಣ ವಲಯವನ್ನು ಕರ್ನಾಟಕ ಪ್ರತಿನಿಧಿಸಿತ್ತು.

‘ನಮ್ಮಲ್ಲಿ ಉತ್ತಮ ಆಟಗಾರರು ಇದ್ದಾರೆ. ಅವರಿಗೆ ಸಮರ್ಪಕ ಸೌಲಭ್ಯಗಳು ಸಿಗುತ್ತಿಲ್ಲ. ಕೆ.ಎಸ್‌.ಸಿ.ಎ ಮೈದಾನದ ಟರ್ಫ್ ಪಿಚ್‌ನಲ್ಲಿ ಈ ಬಾರಿ ಅಂತರ ವಲಯ ಟೂರ್ನಿ ಆಡಿದ್ದು ಆಟಗಾರರ ಹುಮ್ಮಸ್ಸು ಹೆಚ್ಚಿಸಿದೆ.

ರಣಜಿ ಟೂರ್ನಿಯಲ್ಲಿ ಗ್ರಾಮೀಣ ತಂಡ ವನ್ನು ಸೇರಿಸಲು ನಡೆಯುತ್ತಿರುವ ಪ್ರಯತ್ನಕ್ಕೆ ಇಲ್ಲಿ ಆಟಗಾರರು ನೀಡಿದ ಪ್ರದರ್ಶನ ಇಂಬು ತುಂಬ ಬಲ್ಲುದು’ ಎಂದು ರಾಜ್ಯ ಗ್ರಾಮೀಣ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT