ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ರಾಜಕೀಯಪ್ರೇರಿತ ಹತ್ಯೆ ಇನ್ನಾದರೂ ನಿಲ್ಲಲೇಬೇಕು

ಸಂಪಾದಕೀಯ
Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅತಿಹೆಚ್ಚು ಸುಶಿಕ್ಷಿತರ ನಾಡು, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವ ರಾಜ್ಯ ಎಂಬ ಗೌರವಕ್ಕೆ ಪಾತ್ರವಾದ ನಮ್ಮ ನೆರೆಯ ಕೇರಳ ಅಶಾಂತಿಯ ಬೀಡಾಗಿದೆ. ರಾಜಕೀಯ ಪ್ರೇರಿತ ಹಿಂಸಾಚಾರ, ಕೊಲೆಗಳಿಂದ  ಕುಖ್ಯಾತಿ ಪಡೆಯುತ್ತಿದೆ. ‘ದೇವರನಾಡು’ ಎಂಬ ಹೆಸರಿಗೆ ಕಳಂಕ ಎನ್ನುವಂತೆ ಶಾಂತಿ, ನೆಮ್ಮದಿಯ ವಾತಾವರಣವೇ ಅಲ್ಲಿ ಮಾಯವಾಗುತ್ತಿದೆ.  ಮಾರ್ಕ್‌್ಸವಾದಿ ಕಮ್ಯುನಿಸ್‌್ಟ ಪಕ್ಷ (ಸಿಪಿಎಂ) ಮತ್ತು ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರ ಮಧ್ಯೆ ಹೆಚ್ಚುತ್ತಿರುವ ದ್ವೇಷ, ಪ್ರತೀಕಾರ ಆ ರಾಜ್ಯವನ್ನು ಎಲ್ಲಿಗೆ ಒಯ್ದು ನಿಲ್ಲಿಸುತ್ತದೆಯೋ ಗೊತ್ತಿಲ್ಲ. ಕೇರಳದ ಅಪರಾಧ ದಾಖಲೆಗಳ ಬ್ಯೂರೊ ಸಂಗ್ರಹಿಸಿದ ಮಾಹಿತಿಯಂತೆ, 10 ವರ್ಷಗಳಲ್ಲಿ ಸುಮಾರು 100 ಮಂದಿ ಸೈದ್ಧಾಂತಿಕ, ರಾಜಕೀಯ ದ್ವೇಷಾಸೂಯೆಯಿಂದ ಹತ್ಯೆಯಾಗಿದ್ದಾರೆ. ಇತ್ತೀಚಿನ ಏಳು ತಿಂಗಳಲ್ಲಿ  8 ಹತ್ಯೆಗಳು ನಡೆದಿವೆ. ಹೊಡೆದಾಟಗಳಿಗೆ, ಗಾಯಾಳುಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.  ಎಲ್ಲೋ ಒಂದು ಕಡೆ ಹೊತ್ತಿಕೊಳ್ಳುವ ಹಿಂಸೆಯ ಬೆಂಕಿ ಇಡೀ ರಾಜ್ಯವನ್ನು ಸುಡುತ್ತಿದೆ. ಇದು ಕಳವಳಕಾರಿ.

ಬಹುಪಾಲು ಹಿಂಸಾಚಾರಗಳು ನಡೆಯುತ್ತಿರುವುದು ಉತ್ತರ ಮಲಬಾರ್‌ ಪ್ರದೇಶದ ಕಣ್ಣೂರು ಮತ್ತು ತಲಶ್ಶೇರಿ ಸುತ್ತಮುತ್ತ. ಇವೆರಡೂ ಆಗಿನಿಂದಲೂ ಸಿಪಿಎಂನ ಭದ್ರಕೋಟೆಗಳು. ಹೀಗಾಗಿ ರಾಜಕೀಯ ಪೈಪೋಟಿಯೂ ಜಾಸ್ತಿ. ಮೊದಲು ಕಾಂಗ್ರೆಸ್‌ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಅಲ್ಲಿ ಘರ್ಷಣೆಗಳು ಆಗುತ್ತಿದ್ದವು. ಕಾಂಗ್ರೆಸ್‌ ಹಿಂದೆ ಸರಿದಂತೆಲ್ಲ ಆ ಸ್ಥಾನವನ್ನು ಬಿಜೆಪಿ, ಆರ್‌ಎಸ್‌ಎಸ್‌ ತುಂಬುತ್ತ ಬಂದಿವೆ.  ಕಮ್ಯುನಿಸ್‌್ಟ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅನೇಕರು ಸೈದ್ಧಾಂತಿಕ ನಿಲುವು ಬದಲಿಸಿ ಬಿಜೆಪಿ, ಆರ್‌ಎಸ್‌ಎಸ್‌ ಕಡೆ ವಾಲುತ್ತ ಹೋದಂತೆ ಸಂಘರ್ಷಗಳೂ ಹೆಚ್ಚುತ್ತಿವೆ. ಅಲ್ಲಿನ ಹತ್ಯೆ, ಹಿಂಸೆಗೆ ನಾಲ್ಕು ದಶಕಗಳಿಗೂ ಹೆಚ್ಚಿನ ಇತಿಹಾಸ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅದು ಆತಂಕ ಮೂಡಿಸುವಷ್ಟರ ಮಟ್ಟಿಗೆ ಬೆಳೆದಿದೆ. ಜನತಂತ್ರದಲ್ಲಿ ಎಲ್ಲ ಬಗೆಯ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಆದರೆ ಅದು ಶಾಂತಿಯ ಮಾರ್ಗದಲ್ಲಿ ಇರಬೇಕು. ಅದನ್ನು ಬಿಟ್ಟು ತಮ್ಮ ಸಿದ್ಧಾಂತ ಒಪ್ಪದಿರುವವರನ್ನು ದೈಹಿಕವಾಗಿ ಮುಗಿಸುವುದು, ಏಟಿಗೆ ಎದಿರೇಟು, ಕೊಲೆಗೆ ಪ್ರತಿಯಾಗಿ ಇನ್ನಷ್ಟು ಕೊಲೆ ಯಾರಿಗೂ ಶೋಭೆ ತರುವುದಿಲ್ಲ.

ಎರಡೂ ಕಡೆಯ ಹಿರಿಯರು ಪರಸ್ಪರ ಚರ್ಚಿಸಿ ಇದಕ್ಕೊಂದು ಇತಿಶ್ರೀ ಹಾಡಬೇಕು. ತಮ್ಮ ತಮ್ಮ ಹಿಂಬಾಲಕರ ಕಿವಿ ಹಿಂಡಿ ಬುದ್ಧಿ ಹೇಳಬೇಕು. ಹಿಂಸೆ ಯಾವುದಕ್ಕೂ ಪರಿಹಾರ ಅಲ್ಲ ಎಂಬುದನ್ನು ಮನವರಿಕೆ ಮಾಡಬೇಕು. ಆದರೆ ಕೇರಳದ ರಕ್ತಸಿಕ್ತ ವಿದ್ಯಮಾನಗಳನ್ನು ನೋಡಿದರೆ ಅಂತಹ ವಿವೇಕವಂತರು ಇಲ್ಲವೇನೋ ಎನಿಸುತ್ತದೆ.

ಈಗ ಅಲ್ಲಿ ಅಧಿಕಾರ ಸಿಪಿಎಂ ಕೈಯಲ್ಲಿದೆ. ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌ ಮುಂಚೆ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದವರು.  ಕಾಕತಾಳೀಯ ಎಂದರೆ, ಕಣ್ಣೂರು ಅವರ ರಾಜಕೀಯ ಕಾರ್ಯಕ್ಷೇತ್ರ. ಅವರು ಇನ್ನೂ ಪಕ್ಷ ರಾಜಕಾರಣದ ಸುಳಿಯಲ್ಲೇ ಸುತ್ತುತ್ತಿದ್ದಾರೆ.  ತಮ್ಮ ಮಂಗಳೂರು ಭೇಟಿಯನ್ನು ವಿರೋಧಿಸಿದ್ದ ಆರ್‌ಎಸ್‌ಎಸ್‌ ಬಗ್ಗೆ ಅವರ ಟೀಕೆ ಇದಕ್ಕೊಂದು ನಿದರ್ಶನ. ‘ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಹೋಗಿದ್ದರೆ ಪ್ರತಿಭಟನಾಕಾರರಿಗೆ ಅವರದೇ ಧಾಟಿಯಲ್ಲಿ ತಿರುಗೇಟು ಕೊಡುತ್ತಿದ್ದೆ’ ಎಂಬ ಅರ್ಥದ ಮಾತು ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವ ಅವರ ಬಾಯಲ್ಲಿ ಬರಬಾರದಾಗಿತ್ತು. ಅವರು ತಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ರಾಜಕೀಯ ಒಲವು ನಿಲುವು, ಸೈದ್ಧಾಂತಿಕ ಭಿನ್ನಮತವನ್ನು ಪರಿಗಣಿಸದೆ ಪ್ರಜೆಗಳ ಹಿತ ಕಾಯುವ, ರಕ್ಷಣೆ ಕೊಡುವ ಹೊಣೆ ಅವರ ಮೇಲಿದೆ. ಆ ಹುದ್ದೆಯಲ್ಲಿ ಇರುವವರೆಗೂ ಅದನ್ನು ಸರಿಯಾಗಿ ನಿಭಾಯಿಸಬೇಕು. ಸಂಯಮ ತೋರಿಸಬೇಕು.

ಪಿಣರಾಯಿ ತಲೆ ತೆಗೆಯುವವರಿಗೆ ₹ 1 ಕೋಟಿ ಇನಾಮು ಕೊಡುತ್ತೇನೆ’ ಎಂಬ  ಮಧ್ಯಪ್ರದೇಶದ ಆರ್‌ಎಸ್‌ಎಸ್‌ ಮುಖಂಡರೊಬ್ಬರ  ಘೋಷಣೆಯಂತೂ ಅತಿರೇಕದ ಪ್ರತಿಕ್ರಿಯೆ. ಪ್ರಚೋದನಕಾರಿ  ಹೇಳಿಕೆ– ಪ್ರತಿಹೇಳಿಕೆಗಳಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ.

ಇತಿಹಾಸದಲ್ಲಿ ಅದಕ್ಕೆ ಬೇಕಾದಷ್ಟು ಪುರಾವೆಗಳು ಸಿಗುತ್ತವೆ. ಸೇಡಿಗೆ ಸೇಡು, ಹಿಂಸೆಗೆ ಹಿಂಸೆ ಪರಿಹಾರವಲ್ಲ; ಅದರಿಂದ ಪ್ರಯೋಜನವೂ ಇಲ್ಲ ಎಂಬುದನ್ನು ಪಶ್ಚಿಮ ಬಂಗಾಳದ ಅನುಭವದಿಂದ ಸಿಪಿಎಂ ಕಲಿತುಕೊಳ್ಳಬೇಕು. ಕೇರಳದಲ್ಲಿ ಆಡಳಿತ ಪಕ್ಷವಾಗಿ ಇನ್ನಷ್ಟು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು.  ಸರಣಿ ಹಿಂಸೆ, ಹತ್ಯೆಗಳನ್ನು ನಿಲ್ಲಿಸಲು ತಾನೇ ಒಂದು ಹೆಜ್ಜೆ ಮುಂದೆ ಇಡಬೇಕು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಅದಕ್ಕೆ ಸಹಕಾರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT