ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಗೈರು: ಅಧ್ಯಕ್ಷೆ ಅತೃಪ್ತಿ

ಯಲಬುರ್ಗಾ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ
Last Updated 7 ಮಾರ್ಚ್ 2017, 6:44 IST
ಅಕ್ಷರ ಗಾತ್ರ
ಯಲಬುರ್ಗಾ:  ‘ಪೋನ್‌ದಲ್ಲಿ ಮಾತಾಡಿದ್ರೂ ಸಭೆಗೆ ಬರದೇ ಇರುವ ನಿರ್ಮಿತಿ, ಕೈಗಾರಿಕೆ, ಭೂಸೇನಾ ನಿಗಮದವರಿಗೆ ಹೇಳೋರು ಕೇಳೋರು ಇಲ್ವೇನ್ರಿ, ಈಗಾಗಲೇ 12ಗಂಟೆ ಆಗಿದೆ ಅಧಿಕಾರಿಗಳಿಗೆ ಟೈಂ ಸೆನ್ಸೇ ಇಲ್ಲ, ಸಭೆಗೆ ಬರಬೇಕಾದ ಅಧಿಕಾರಿಗಳೇ ಬಂದಿಲ್ಲ, ಇವತ್ತು ಸಭೆ ನಡೆಸೋದು ಬೇಡ, ನಾಳೆ ಆಥವಾ ನಾಡಿದ್ದು ನಡೆಸ್ರಿ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಗೌಡ್ರ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. 
 
ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ  ಅವರು, ‘ನಿರ್ಮಿತಿ ಹಾಗೂ ಭೂಸೇನಾ ನಿಗಮದವರು ಯಾವ ಕೆಲಸ, ಎಲ್ಲಿ ಹಾಗೂ ಎಷ್ಟು ಮಾಡ್ತಾರೆಂಬುದೇ ಗೊತ್ತಿಲ್ಲ, ತಿಂಗಳಲ್ಲಿ ಒಂದು ದಿನ ಸಭೆಗೆ ಬಂದು ಹೋಗಲು ಆಗೋದಿಲ್ಲೇನ್ರಿ ಅವರಿಗೆ, ಇವರ ವಿರುದ್ಧ ಡಿಸಿ ಮೇಡಂಗೆ, ಸಿಇಒ ಅವರಿಗೂ ಪೋನ್‌ ಮಾಡಿ ಹೇಳಿನ್ರಿ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. 
 
‘ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಬಂದಿಲ್ಲ ಎಂದು ಹೇಳುತ್ತಿದ್ದಂತೆ ಕಾರ್ಯನಿರ್ವಾಹಕ ಅಧಿಕಾರಿ ಕೆ.ತಿಮ್ಮಪ್ಪ ಮಾತನಾಡಿ, ಒಂದೆರೆಡು ಇಲಾಖೆ ಅಧಿಕಾರಿಗಳು ಬಂದಿಲ್ಲ ಅಂದ್ರೆ ಅವರಿಗಾಗಿ ಮತ್ತೊಂದು ದಿನ ಸಭೆ ನಡೆಸೋಣ, ಇದು ಮಾರ್ಚ್‌ ತಿಂಗಳು ಇರುವುದರಿಂದ ಹೆಚ್ಚಿನ ಕೆಲಸಗಳಿರುತ್ತವೆ. ಅದಕ್ಕಾಗಿ ಹಾಜರಿದ್ದ ಅಧಿಕಾರಿಗಳಿಗೆ ಸಭೆ ನಡೆಸೋಣ ಎಂದು ಹೇಳುತ್ತಿದ್ದಂತೆ ಲೋಕೋಪಯೋಗಿ ಅಧಿಕಾರಿಗಳು ಕೂಡಾ ಇದಕ್ಕೆ ಧ್ವನಿ ಗೂಡಿಸಿ ಕೆಲಸ ಬಿಟ್ಟು ಬಂದಿದ್ದೇವೆ, ಅನಗತ್ಯವಾಗಿ ಸಭೆ ಮುಂದೂಡುವುದು ಬೇಡ, ಅವರಿಗಾಗಿ ಮತ್ತೊಂದು ದಿನ ನಿಗದಿಪಡಿಸಿ ಸಭೆ ನಡೆಸಿ ಎಂದು ಹೇಳಿದ ನಂತರ ಅಧ್ಯಕ್ಷೆ ಸಭೆ ನಡೆಸಲು ಸಮ್ಮತಿಸಿದರು. 
 
ಕೃಷಿ ಅಧಿಕಾರಿ ಮಾತನಾಡಿ, ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯ ತೀರಾ ಕಡಿಮೆಯಾಗಿದೆ. ಹಾಗೆಯೇ ವಿವಿಧ ರೀತಿಯಲ್ಲಿ ರೈತರು ನಷ್ಟ ಅನುಭವಿಸಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ ಎಂದರು. 
 
ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ ಈಗ 2 ಗೋಶಾಲೆಯನ್ನು ತೆರೆಯಲಾಗಿದೆ. ಇದೇ ತಿಂಗಳು ಒಂದರಂದು ಪ್ರಾರಂಭವಾದ ಚಿಕ್ಕವಂಕಲಕುಂಟಾ ಹತ್ತಿರದ ಕೆರೆಯಲ್ಲಿ 5 ಟನ್‌ ಮೇವು ಸಂಗ್ರಹವಾಗಿದೆ. ಅಲ್ಲಿ 41 ಜಾನುವಾರುಗಳಿವೆ ಎಂದು ವಿವರಿಸಿದರು. ಗೋಶಾಲೆ ತೆರೆದ ಬಗ್ಗೆ ಹೆಚ್ಚಿನ ಸಂಖ್ಯೆಯ ರೈತರ ಗಮನಕ್ಕಿಲ್ಲ, ಈ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಸರ್ಕಾರದ ಈ ಸೌಲಭ್ಯ ರೈತರು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷೆ ನುಡಿದರು.
 
ಲೋಕೋಪಯೋಗಿ ಇಲಾಖೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸಿಮೆಂಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿವೆ ಎಂದು ಅಧಿಕಾರಿ ಸಭೆಯ ಗಮನಕ್ಕೆ ತಂದರು. 
 
ಆರೋಗ್ಯ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಯೋಜನೆಗಳ ಪ್ರಗತಿ ವರದಿಯನ್ನು ಓದಿದರು. ಸಿಬ್ಬಂದಿ ಹನಮಂತಾಚಾರ ಆಲೂರ ಸ್ವಾಗತಿಸಿದರು.
 
* ಅಂಗನವಾಡಿ ಕೇಂದ್ರಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಆದೇಶ ನೀಡಲಾಗುವುದು ಜಿಲ್ಲಾಧಿಕಾರಿ ಅದೇಶಗಳಿಗೆ ಸಹಿ ಹಾಕಲು ದಿನಾಂಕ ನಿಗದಿಪಡಿಸಿದ್ದಾರೆ.
ಮುನಿರಾಜು, ಸಿಡಿಪಿಒ ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT