ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿವೆಂಕಟರಮಣಸ್ವಾಮಿ ಜಾತ್ರೆಗೆ ಚಾಲನೆ

ರಾಬರ್ಟ್‌ಸನ್‌ಪೇಟೆ: ಹದಿನಾಲ್ಕು ದಿನ ನಡೆಯುವ ಜಾತ್ರಾ ಮಹೋತ್ಸವ
Last Updated 7 ಮಾರ್ಚ್ 2017, 8:48 IST
ಅಕ್ಷರ ಗಾತ್ರ
ಕೆಜಿಎಫ್: ರಾಬರ್ಟ್‌ಸನ್‌ಪೇಟೆಯ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ಸೋಮವಾರ ರಾತ್ರಿ ಶಿಬಿಕ ವಾಹನೋತ್ಸವ ಮೂಲಕ ಚಾಲನೆ ದೊರೆಯಿತು. ಹದಿನಾಲ್ಕು ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಂಗಿನ ಕಾರ್ಯಕ್ರಮಗಳು ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ನಗರ ಮಧ್ಯಭಾಗದಲ್ಲಿರುವ ದೇವಾಲಯದ ಪ್ರತಿಮೆ ತಿರುಮಲದ ವೆಂಕಟೇಶ್ವರ ದೇವಾಲಯದ ಮೂರ್ತಿಯನ್ನೇ ಹೋಲುತ್ತದೆ. 

ದೇವಾಲಯ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ವಿವಿಧ ಸಮುದಾಯದವರು ಒಂದೊಂದು ದಿನ ಸೇವೆ ಮಾಡುವುದು ರೂಢಿಗತವಾಗಿದೆ.  ಧಾರ್ಮಿಕ ಕಾರ್ಯಗಳನ್ನು ನಡೆಸಲು ಶಕ್ತ್ಯವಿರುವ ಸಮುದಾಯದ ಕೋರಿಕೆ ಮೇರೆಗೆ ಒಂದೊಂದು ದಿನ ಒಂದೊಂದು ಸಮುದಾಯಕ್ಕೆ ಜಾತ್ರೆಯ ವಿಶೇಷ ಪೂಜೆ ಮೀಸಲಿರಿಸಲಾಗಿದೆ.
 
ಸಮುದಾಯಗಳ ನಡುವೆ ಸ್ನೇಹಮಯ ಸ್ಪರ್ಧೆ ಇಲ್ಲಿ ಕಾಣಬಹುದು. ತಮ್ಮ ಕಾರ್ಯಕ್ರಮ ಇತರರಿಗಿಂತ ಆಕರ್ಷಣೀಯವಾಗಿ ಇರಬೇಕು. ಹೆಚ್ಚು ಭಕ್ತರು ಕಾರ್ಯಕ್ರಮ ವೀಕ್ಷಿಸಬೇಕು ಎಂಬುದು ಎಲ್ಲಾ ಸಮುದಾಯಗಳ ಮುಖ್ಯ ಗುರಿಯಾಗಿರುತ್ತದೆ.  ಇದಕ್ಕೆ ಪೂರಕವಾಗಿ ರಸಮಂಜರಿ ಕಾರ್ಯಕ್ರಮ, ನೃತ್ಯ, ಪಟಾಕಿ ಸಿಡಿತ ಇರುತ್ತದೆ.

ಮಲೆಯಾಳಿ ಸಮುದಾಯದವರು ನಡೆಸುವ ಪಟಾಕಿ ಸಿಡಿತ ಮೊದಲಿನಿಂದಲೂ ಆಕರ್ಷಣೀಯ. ಈ ವರ್ಷದಿಂದ ಪಟಾಕಿ ಸಿಡಿತವನ್ನು ಪೊಲೀಸರು ನಿಷೇಧಿಸಿದ್ದಾರೆ. 
ಮೊದಲ ದಿನವಾದ ಸೋಮವಾರ ರೆಡ್ಡಿ ಜನಾಂಗದವರು ನಡೆಸುವ ಶಿಬಿಕ ವಾಹನೋತ್ಸವದಲ್ಲಿ ಸಮುದಾಯದ ಗಣ್ಯರು ಭಾಗವಹಿಸಿದ್ದರು.   
 
ಧಾರ್ಮಿಕ  ಕಾರ್ಯಕ್ರಮಗಳಲ್ಲದೆ ಕನ್ನಡ ನಾಟಕಗಳನ್ನು ಆಡಿಸುವಲ್ಲಿ ರೆಡ್ಡಿ ಸಮುದಾಯದವರು ಹೆಚ್ಚಿನ ಮುತುವರ್ಜಿ  ವಹಿಸುತ್ತಾರೆ. ಹೆಚ್ಚಿನ ಸಮುದಾಯದವರು ತಮಿಳುನಾಡಿನ ಆರ್ಕೆಸ್ಟ್ರಾಗಳಿಗೆ ಮೊರೆ ಹೋದರೂ, ರೆಡ್ಡಿ ಜನಾಂಗದವರು ರಾಜ್ಯದ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಜಾತ್ರೆಯ ವಿಶೇಷ.
 
ಸಿಂಹವಾಹನೋತ್ಸವ, ಹನುಮಂತ ವಾಹನೋತ್ಸವ, ಶೇಷ ವಾಹನೋತ್ಸವ, ಗರುಡ ವಾಹನೋತ್ಸವ, ಗಜೇಂದ್ರ ಮೋಕ್ಷ ಉತ್ಸವ, ಬ್ರಹ್ಮ ರಥೋತ್ಸವ, ಪಾರ್ವಟೋತ್ಸವ, ಹಂಸವಾಹನೋತ್ಸವ, ಶಯನೋತ್ಸವ, ಪುಷ್ಪ ಪಲ್ಲಕ್ಕಿ, ಮುತ್ಯಾಲ ಮಂಟಪ ಉತ್ಸವ ಹಲವಾರು ದಶಕಗಳಿಂದ ನಡೆದುಕೊಂಡು ಬಂದ ಉತ್ಸವಗಳಾಗಿವೆ. ಮಾಜಿ ಶಾಸಕ ವೈ.ಸಂಪಂಗಿ ಅವರ ವೈಯಕ್ತಿಕ ಆಸಕ್ತಿ ಮೇರೆಗೆ ಚಿನ್ನದ ಪಲ್ಲಕ್ಕಿ ಉತ್ಸವ ಹೊಸದಾಗಿ ಸೇರ್ಪಡೆಗೊಂಡಿತು. ಮೊದಲಿಯಾರ್ ಸಮುದಾಯದವರು ನಡೆಸಿಕೊಡುವ ಪುಷ್ಪ ಪಲ್ಲಕ್ಕಿ ವೀಕ್ಷಿಸಲು ಸಾವಿರಾರ ಜನ ಸೇರುತ್ತಾರೆ. 
 
ಹೂವಿನ ಪಲ್ಲಕ್ಕಿ ನೋಡುವುದೇ ಒಂದು ರೋಮಾಂಚನ. ಈ ದಿನದಂದು ರಾಬರ್ಟಸನ್‌ಪೇಟೆಯ ಗೀತಾ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಇತರ ರಾಜ್ಯಗಳಿಂದಲೂ ಹೆಚ್ಚಿನ ಜನ ಪುಷ್ಪ ಪಲ್ಲಕ್ಕಿ ವೀಕ್ಷಿಸಲು ಬರುತ್ತಾರೆ. 
–ಕೃಷ್ಣಮೂರ್ತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT