ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಸಭೆಯಲ್ಲಿ ಕೋಲಾಹಲ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ– ಸಿಇಒ ವಿರುದ್ಧ ತಿರುಗಿಬಿದ್ದ ಬಿಜೆಪಿ, ವರ್ತೂರು ಬಣದ ಸದಸ್ಯರು
Last Updated 9 ಮಾರ್ಚ್ 2017, 7:21 IST
ಅಕ್ಷರ ಗಾತ್ರ
ಕೋಲಾರ: ‘ಅಧ್ಯಕ್ಷರು ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಪೂರ್ಣ ವಿಫಲರಾಗಿದ್ದು, ಅವರ ಆಡಳಿತದಲ್ಲಿ ಬಿಗಿ ಇಲ್ಲ. ಅಧಿಕಾರಿ ವರ್ಗವು ನಮ್ಮ ಮಾತಿಗೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ನಮಗೆ ಮರ್ಯಾದೆ ಕೊಡದ ಸಭೆ ಬೇಕಿಲ್ಲ. ಇದನ್ನು ಮುಂದೂಡಿ’ ಎಂದು ಜಿಲ್ಲಾ ಪಂಚಾಯಿತಿಯ ಬಿಜೆಪಿ ಹಾಗೂ ಶಾಸಕ ವರ್ತೂರು ಪ್ರಕಾಶ್‌ ಬಣದ ಸದಸ್ಯರು ಗದ್ದಲ ನಡೆಸಿದ್ದರಿಂದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಬುಧವಾರ ಕೋಲಾಹಲ ಸೃಷ್ಟಿಯಾಯಿತು.
 
ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಹಾಗೂ ವರ್ತೂರು ಪ್ರಕಾಶ್‌ ಬಣದ ಸದಸ್ಯರು ಒಗ್ಗೂಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ವಿರುದ್ಧ ವಾಗ್ದಾಳಿ ನಡೆಸಿದರು.
 
ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮತ್ತು ಸಂಸದ ಕೆ.ಎಚ್‌.ಮುನಿಯಪ್ಪ ಉಪಸ್ಥಿತಿ ಯಲ್ಲಿ ನಡೆದ ಸಭೆಯಲ್ಲಿ ಜಿ.ಪಂ 8 ಸದಸ್ಯರು ಅಧ್ಯಕ್ಷೆ ಗೀತಾ ಅವರನ್ನು ಸುಮಾರು 45 ನಿಮಿಷಗಳ ಕಾಲ ತೀವ್ರ ತರಾಟೆಗೆ ತೆಗೆದುಕೊಂಡರು.
 
ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ. ತಮ್ಮ ಕೆಲಸ ಕಾರ್ಯಗಳು ಒಂದೂ ಆಗುತ್ತಿಲ್ಲ. ಅಧಿಕಾರಿಗಳ ವರ್ತನೆ ಬೇಸರ ತರಿಸಿದ್ದು ತಾವು ಇದ್ದೂ ಇಲ್ಲದಂತಾಗಿದ್ದೇವೆ. ಅಧಿಕಾರಿಗಳು ತಮ್ಮನ್ನು ಕ್ಯಾರೆ ಅನ್ನುತ್ತಿಲ್ಲ. ಅಧ್ಯಕ್ಷರ ಮಾತಿಗೂ ಬೆಲೆ ಇಲ್ಲ. ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಕೇವಲ 3 ಬಾರಿ ಮಾತ್ರ ಸಾಮಾನ್ಯ ಸಭೆ ನಡೆದಿವೆ. ಕ್ಷೇತ್ರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಅಧಿಕಾರಿಗಳ ಅಸಹಕಾರದಿಂದಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ವರ್ತೂರು ಪ್ರಕಾಶ್‌ ಬಣದ ಸದಸ್ಯರಾದ ಅರುಣ್‌ ಪ್ರಸಾದ್, ಸಿ.ಎಸ್.ವೆಂಕಟೇಶ್, ರೂಪಶ್ರೀ ಆಕ್ರೋಶ ವ್ಯಕ್ತಪಡಿಸಿದರು.
 
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರಾದ ಮಹೇಶ್ ಮತ್ತು ಅಶ್ವಿನಿ, ‘ನಮಗೆ ಮೀಸಲಾದ ಅನುದಾನದ ಮಾಹಿತಿಯೇ ಇಲ್ಲ. ಅಧಿಕಾರಿಗಳು ಸೌಜನ್ಯಕ್ಕೂ ನಮ್ಮನ್ನು ಸಂಪರ್ಕಿಸುವುದಿಲ್ಲ. ನಮ್ಮ ಮಾತು ಎಂದರೆ ಅವರಿಗೆ ಲೆಕ್ಕಕ್ಕಿಲ್ಲ. ನಮಗೆ 35 ಸಾವಿರ ಜನ ಮತ ಹಾಕಿದ್ದಾರೆ. ಅವರ ಕೆಲಸ ಮಾಡಬೇಕು. ಆದರೆ, ಅಧಿಕಾರಿಗಳು ನಮ್ಮ ಮಾತು ಕೇಳುವುದಿಲ್ಲ. ಇದರಿಂದ ಜನ ಬೀದಿಯಲ್ಲಿ ನಮ್ಮ ಮಾನ ಹರಾಜು ಹಾಕುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.
 
‘ಸಚಿವರೆ ನೀವೇ ಮಾತಾಡಿ. ಪಂಚಾಯಿತ್‌ ರಾಜ್‌ ವ್ಯವಸ್ಥೆಗೆ ಹೊಸ ರೂಪ ಕೊಟ್ಟವರು ನೀವು. ನಮಗೆ ಹೆಚ್ಚಿನ ಅಧಿಕಾರ ಇದೆ ಎಂದು ಹೇಳ್ತೀರಿ. ಆದರೆ, ವಾಸ್ತವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಗೆ ಇರುವಷ್ಟು ಅಧಿಕಾರವೂ ನಮಗೆ ಇಲ್ಲ. ಅಧಿಕಾರಿ ಗಳನ್ನು ನಮ್ಮನ್ನು ಕೇಳದೆ ಕೆಲಸ ಮಾಡಿಸುತ್ತಾರೆ. ಕನಿಷ್ಠ ಒಂದು ಕೊಳವೆ ಬಾವಿ ಕೊರೆಸಿ ಜನರಿಗೆ ನೀರು ಕೊಡುವುದಕ್ಕೂ ನಮ್ಮಿಂದ ಆಗುತ್ತಿಲ್ಲ’ ಎಂದು ಗದ್ದಲ ಮಾಡಿದ ಸದಸ್ಯರು ಸಭೆಯನ್ನು ಮುಂದೂಡುವಂತೆ ಪಟ್ಟು ಹಿಡಿದರು.
 
ಶಾಸನಬದ್ಧ ಹಕ್ಕು: ಆಗ ಮಧ್ಯ ಪ್ರವೇಶಿಸದ ಸಚಿವ ರಮೇಶ್‌ಕುಮಾರ್‌, ‘ಜಿ.ಪಂ ಸಭೆಯಲ್ಲಿ ನಿಮಗೆ ಅಧಿಕಾರ ವಿದೆ. ನಾನು ಮಾತನಾಡುವಂತಿಲ್ಲ. ನಿಮ್ಮ ಚರ್ಚೆಯಲ್ಲಿ ನಾನು ಮೂಗು ತೂರಿಸುವುದು ಬೇಡವೆಂದು ಸುಮ್ಮನೆ ಕೂತಿದ್ದೇನೆ. ನಿಮಗೆ ಕೊಟ್ಟಿರುವ ಅಧಿಕಾರವನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಶಾಸನಬದ್ಧ ಹಕ್ಕು. ಗ್ರಾ.ಪಂ ಸದಸ್ಯರಿಗಿಂತ ಕಡಿಮೆ ಎಂಬ ಮಾತು ನಿಮ್ಮ ಬಾಯಿಂದ ಬರಬಾರದು. ಎಲ್ಲರಿಗೂ ಶಾಸನಬದ್ಧ ಜವಾಬ್ದಾರಿಗಳಿರುತ್ತವೆ. ಅದನ್ನು ತಿಳಿದು ಬಳಸುವ ಕೆಲಸ ಮಾಡಬೇಕು’ ಎಂದರು.
 
ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಗ್ರಾಮ ಸ್ವರಾಜ್ ಎನ್ನುವುದೇ ಶ್ರೇಷ್ಠ. ಎಲ್ಲರೂ ಅದಕ್ಕೆ ತಲೆ ಬಾಗಬೇಕು. ಜನಪ್ರತಿನಿಧಿಗಳಿಗೆ ಜವಾಬ್ದಾರಿಗಳು ಇರುತ್ತವೆಯೇ ಹೊರತು ಅಧಿಕಾರವಲ್ಲ. ಜವಾಬ್ದಾರಿಗಳ ಅರಿವು ಸದಸ್ಯರಿಗೆ ಇರಬೇಕು. ಅದನ್ನು ಬಿಟ್ಟು ತಮಗೆ ಅಧಿಕಾರವಿಲ್ಲ ಎಂದು ಸೊರಗಿ ಕೂರುವುದು ಸರಿಯಲ್ಲ ಎಂದರು.
 
ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪಂಚಾಯತ್‌ ರಾಜ್ ವ್ಯವಸ್ಥೆಗೆ ಹೊಸ ರೂಪ ಕೊಟ್ಟು ಅನೇಕ ಜವಾಬ್ದಾರಿ ಗಳನ್ನು ನೀಡಿದ್ದಾರೆ, ಈ ವ್ಯವಸ್ಥೆಯಲ್ಲಿ ಸಂಸತ್ತಿಗಿಂತ ಪಂಚಾಯಿತಿಗಳಿಗೆ ಹೆಚ್ಚು ಅಧಿಕಾರ ಮತ್ತು ಸ್ಥಾನಮಾನವಿದೆ. ಪ್ರಧಾನಿ ಮಂತ್ರಿಗೆ ಇರುವಷ್ಟೇ ಜವಾ ಬ್ದಾರಿಗಳು ಗ್ರಾ.ಪಂ ಅಧ್ಯಕ್ಷನಿಗೂ ಇವೆ. ಶಾಸಕರು ಪಾಳೇಗಾರರಲ್ಲ. ನೀವು ಭಿಕ್ಷೆ ಬೇಡಲು ಬಂದಿಲ್ಲ. ಇದು ನಿಮ್ಮ ಹಕ್ಕು. ಬೆನ್ನು ಬಗ್ಗಿಸುವ ಅಗತ್ಯವಿಲ್ಲ ಎಂದು ಹೇಳಿದರು.
 
ಸಮಸ್ಯೆಗಳು ಏನೇ ಇದ್ದರೂ ಸಭೆಯ ಅಂತಿಮದಲ್ಲಿ ಚರ್ಚಿಸೋಣ. ಮೊದಲು ಸಭೆಯ ಅಜೆಂಡಾದೊಳಗಿನ ವಿಷಯಗಳನ್ನು ಮುಂಡಿಸಿ. ನಂತರ ಸಮಸ್ಯೆಗಳು ಮತ್ತು ಇತರೆ ವಿಷಯಗಳ ಬಗ್ಗೆ ಮಾತನಾ ಡೋಣ ಎಂದು ಸದಸ್ಯರ ಮನವೊ ಲಿಸಲು ಯತ್ನಿಸಿದರು. ಆದರೆ, ಇದಕ್ಕೆ ಒಪ್ಪದ ಸದಸ್ಯರು ಸಭೆ ಮುಂದೂಡುವಂತೆ ಪಟ್ಟು ಹಿಡಿದರು.
 
ಹೇಗೆ ಪ್ರೀತಿ ಬಂತು: ‘ನನ್ನ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹ 26.90 ಲಕ್ಷ ಅನುದಾನ ಕೊಟ್ಟಿದ್ದೀರಿ. ಉಳಿದ ಕ್ಷೇತ್ರಗಳಿಗೆ ₹ 5 ಲಕ್ಷ ಬಿಡುಗಡೆ ಮಾಡಿದ್ದೀರಿ. ನಾನು ಅನುದಾನಕ್ಕೆ ಪ್ರಸ್ತಾವ ಸಲ್ಲಿಸದಿದ್ದರೂ ಸಾಕಷ್ಟು ಹಣ ಕೊಟ್ಟಿದ್ದೀರಿ. ಅನುದಾ ನದ ಸಂಗತಿಯನ್ನು ನನ್ನ ಗಮನಕ್ಕೂ ತಂದಿಲ್ಲ. ನನ್ನ ಮೇಲೆ ಹೇಗೆ ಇಷ್ಟೊಂದು ಪ್ರೀತಿ ಬಂತು. ಬಿಡುಗಡೆಯಾದ ಅನು ದಾನದಲ್ಲಿ ನನಗೆ ತಿಳಿಸದೆ ಕಾಮಗಾರಿ ಗಳನ್ನು ಆರಂಭಿಸಿದ್ದೀರಿ’ ಎಂದು ಪಾರಂಡಹಳ್ಳಿ ಕ್ಷೇತ್ರದ ಸದಸ್ಯೆ ಅಶ್ವಿನಿ ಅಧ್ಯಕ್ಷರ ವಿರುದ್ಧ ಹರಿಹಾಯ್ದರು.
 
‘ಅಶ್ವಿನಿ ಅವರ ಕ್ಷೇತ್ರಕ್ಕೆ ₹ 26 ಲಕ್ಷ ಕೊಟ್ಟಿದ್ದೀರಿ. ನನ್ನ ಕ್ಷೇತ್ರಕ್ಕೆ ₹ 2 ಲಕ್ಷ ಕೊಡಿ ಎಂದು ಬೇಡಿದರೂ ಅನುದಾನ ಕೊಡಲಿಲ್ಲ’ ಎಂದು ಸದಸ್ಯೆ ಪದ್ಮಾವತಮ್ಮ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯರ ಆಕ್ರೋಶಕ್ಕೆ ತುತ್ತಾದ ಅಧ್ಯಕ್ಷೆ ಗೀತಾ ಅವರ ಬೆಂಬಲಕ್ಕೆ ಸ್ವಪಕ್ಷೀಯ ಸದಸ್ಯರು ಬರಲಿಲ್ಲ. ಮತ್ತೊಂದೆಡೆ ಗೀತಾ ಅವರ ಮನವೊಲಿಕೆ ಪ್ರಯತ್ನಕ್ಕೂ ಸದಸ್ಯರು ಬಗ್ಗಲಿಲ್ಲ. ಇದರಿಂದ ಸಭೆ ಗೊಂದಲದ ಗೂಡಾಯಿತು. 

ಸಭೆ ಹಾದಿ ತಪ್ಪುತ್ತಿರುವುದನ್ನು ಅರಿತ ಜೆಡಿಎಸ್ ಸದಸ್ಯ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್‌ ಸದಸ್ಯ ಗೋವಿಂದಸ್ವಾಮಿ ಎದ್ದು ನಿಂತು, ‘ಸಭೆಯನ್ನು ಮನಸ್ಸಿಗೆ ಬಂದಂತೆ ನಡೆಸಲು ಸಾಧ್ಯವಿಲ್ಲ. ಅಧ್ಯಕ್ಷರ ಅನುಮತಿ ಮೇರೆಗೆ ಎಲ್ಲವೂ ನಡೆಯಬೇಕು. ಸಭೆಯಲ್ಲಿ ಯಾರೇ ಮಾತನಾಡಬೇಕಾದರೂ ಅಧ್ಯಕ್ಷರ ಅನುಮತಿ ಪಡೆಯಬೇಕು. ಅಜೆಂಡಾದ ವಿಷಯಗಳನ್ನು ಬಿಟ್ಟು ಬೇರೆ ವಿಷಯಗಳನ್ನು ಚರ್ಚಿಸಬೇಡಿ’ ಎಂದು ಸದಸ್ಯರನ್ನು ಸಮಾಧಾನಪಡಿಸಿದರು. ಬಳಿಕ ಸಭೆ ವ್ಯವಸ್ಥಿತವಾಗಿ ನಡೆಯಿತು.
ಶಾಸಕರಾದ ಎಸ್‌.ಎನ್‌. ನಾರಾಯಣಸ್ವಾಮಿ, ಕೆ.ಎಸ್‌.ಮಂಜು ನಾಥಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋಧಾ ಸಭೆಯಲ್ಲಿ ಹಾಜರಿದ್ದರು.

ಗುತ್ತಿಗೆದಾರರ ವಂಚನೆ
ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಕೊಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದೆ. ಮಕ್ಕಳಿಗೆ ಸರಿಯಾದ ಊಟ ಸಿಗುತ್ತಿಲ್ಲ. ಆಹಾರ ಪದಾರ್ಥಗಳ ತೂಕದಲ್ಲೂ ಗುತ್ತಿಗೆದಾರರು ವಂಚನೆ ಮಾಡುತ್ತಿದ್ದಾರೆ. ಬೆಡ್‌ಶೀಟ್, ಹಾಸಿಗೆ, ತಟ್ಟೆ ಲೋಟಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ್‌ಕುಮಾರ್, ‘ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಉಪ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಸದಸ್ಯರು ಪಕ್ಷಬೇಧ ಮರೆತು ಕೆಲಸ ಮಾಡಿ’ ಎಂದು ಸಲಹೆ ನೀಡಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT