ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗುರು ಪಾಟೀಲ ಶಿರವಾಳ ಸೂಚನೆ
Last Updated 11 ಮಾರ್ಚ್ 2017, 6:27 IST
ಅಕ್ಷರ ಗಾತ್ರ
ಶಹಾಪುರ: ಬೇಸಿಗೆ ಕಾಲ ಶುರುವಾಗಿದೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ನಗರದಲ್ಲಿ ಏಪ್ರಿಲ್ ನಿಂದ ಮೂರು ದಿನಕ್ಕೊಮ್ಮೆ  ಎರಡು ತಿಂಗಳ ತನಕ  ನೀರು ಹರಿಸಿ ಎಂದು ಶಾಸಕ ಗುರು ಪಾಟೀಲ ಶಿರವಾಳ ಅಧಿಕಾರಿಗಳಿಗೆ ಸೂಚಿಸಿದರು.
 
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಅವರು ಮಾತನಾಡಿದರು.
ಗ್ರಾಮೀಣ  ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್ ರಾಜಕುಮಾರ ಪತ್ತಾರ ಸಭೆಯಲ್ಲಿ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 22 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಅದರಲ್ಲಿ 11 ಘಟಕಗಳು ಅಂದರೆ ಮದ್ರಿಕಿ, ಮುಡಬೂಳ, ಸಾದ್ಯಾಪುರ, ಇಟಗಾ, ಬೋವಿ ಕಾಡಂಗೇರಾ, ಶಾರದಹಳ್ಳಿ, ದಿಗ್ಗಿ, ಬಾಣತಿಹಾಳ, ಚಂದಾಪುರ, ಸಿಂಗನಹಳ್ಳಿ, ಶೆಟ್ಟಿಕೇರಾ, ಗೋಗಿ(ಪಿ) ಗ್ರಾಮದಲ್ಲಿ  ಈಗಾಗಲೇ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿವೆ.  ಇನ್ನೂ ಆರು ಘಟಕಕ್ಕೆ ವಿದ್ಯುತ್ ಸಮಸ್ಯೆ ಇದೆ, ಎರಡು ಕಡೆ ಜಾಗದ ಸಮಸ್ಯೆಯಿಂದ ಘಟಕ ಆರಂಭವಾಗಿಲ್ಲ ಎಂದು ತಿಳಿಸಿದರು.
 
ಬರುವ ದಿನದಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಶಾಸಕರು ಪ್ರಶ್ನಿಸಿದಾಗ ತಾಲ್ಲೂಕಿನ ಹತ್ತಿಗೂಡೂರ, ಚಾಮನಾಳ, ಮುಡಬೂಳ, ನಡಿಹಾಳ ಗ್ರಾಮದಲ್ಲಿ ಉಂಟಾಗಬಹುದು. ತಾಲ್ಲೂಕಿನಲ್ಲಿ 62 ಕೆರೆ ಇವೆ. ನಾಗರಕೆರೆ ಅಭಿವೃದ್ಧಿಗೆ ₹66 ಲಕ್ಷ ಅನುದಾನ ಬಂದಿದೆ ಎಂದು ಎಂಜಿನಿಯರ್ ತಿಳಿಸಿದರು.
 
ಕೃಷಿ ಇಲಾಖೆಯ ಅಧಿಕಾರಿ ದಾನಪ್ಪ ಕತ್ನಳ್ಳಿ  ಇಲಾಖೆಯ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 33 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 21 ಪ್ರಕರಣ ಅನುಮೋದನೆಗೊಂಡಿವೆ. 18 ಪ್ರಕರಣದಲ್ಲಿ ಪರಿಹಾರ ನೀಡಲಾಗಿದೆ. ಇನ್ನೂ 7 ಪ್ರಕರಣ ಬಾಕಿ ಇವೆ.  ತಾಲ್ಲೂಕಿನಲ್ಲಿ ಶೇ 22 ರಷ್ಟು ಕೊರತೆ ಮಳೆ ಅನುಭವಿಸಿದ್ದೇವೆ.
 
18,000ಹೆಕ್ಟೆರ್ ಮುಂಗಾರು ಮತ್ತು  5,280 ಹೆಕ್ಟರ್ ಹಿಂಗಾರು ಬೆಳೆ ನಷ್ಟವಾಗಿದೆ. ಬೆಳೆ ಪರಿಹಾರದ ಅನುದಾನ ಬಂದಿಲ್ಲ. ಹಣ ಬಿಡುಗಡೆಯಾದ ತಕ್ಷಣ ರೈತ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಆದರೆ ಕಡ್ಡಾಯವಾಗಿ ಆಧಾರ್‌ ಕಾರ್ಡ್ ಹೊಂದಿರಬೇಕು ಎಂಬ ಅಂಶವನ್ನು ಬಹಿರಂಗಪಡಿಸಿದರು.
 
ಬೇಸಿಗೆ ಹಂಗಾಮಿನಲ್ಲಿ 12,850 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದಾರೆ. ಸದ್ಯ ಕಾಳು ಕಟ್ಟುವ ಹಂತದಲ್ಲಿದೆ. ಏಪ್ರೀಲ್ ಮೊದಲ ವಾರದವರೆಗೆ  ಕಡ್ಡಾಯವಾಗಿ  ನೀರು ಬಿಟ್ಟರೆ ಬೆಳೆ ಕೈಗೆ ಬರುತ್ತದೆ ಇಲ್ಲದೆ ಹೋದರೆ ಶೇ 20ರಷ್ಟು ಹಾನಿಯಾಗುತ್ತದೆ ಎಂದಾಗ, ಮಧ್ಯ ಪ್ರವೇಶಿಸಿ ಶಾಸಕರು, ನಿಗಮದ ಎಂ.ಡಿಗೆ ತಕ್ಷಣ ಪತ್ರ ಬರೆದು ಏಪ್ರಿಲ್ 6ರವರೆಗೆ ನೀರು ಹರಿಸಲು ಮನವಿ ಸಲ್ಲಿಸುವಂತೆ ಸೂಚಿಸಿದರು.
 
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 516 ಶಿಕ್ಷಕರ ಕೊರತೆ ಇದೆ. ಅಲ್ಲದೆ ಪ್ರೌಢಶಾಲೆಯಲ್ಲಿ 86 ಹುದ್ದೆ ಖಾಲಿ ಇವೆ. ತಾಲ್ಲೂಕಿನ ವನದುರ್ಗ ಗ್ರಾಮದ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಇಲ್ಲ ಎಂದರು.
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನಪ್ಪಗೌಡ ಹೊತಪೇಟ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ, ತಹಶೀಲ್ದಾರ ಸೋಮಶೇಖರ ಹಾಗರಗುಂಡಗಿ, ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಬಾಬುರಾವ ಭೂತಾಳೆ, ಮಲ್ಲಣ್ಣ ದ್ಯಾವಗೊಂಡ ಮುಡಬೂಳ ಇದ್ದರು.
 
ರೈತರ ಕತ್ತು ಹಿಸುಕಿದಂತೆ ಆಗಿದೆ...!
ರೈತರ ಜಮೀನುಗಳಿಗೆ ನೀರು ಹರಿಸುವುದನ್ನು ಬಿಟ್ಟು ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಮಾಡಿರುವುದು ನೋಡಿದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಕತ್ತು ಹಿಸುಕಿದಂತೆ ಆಗಿದೆ. ಬೆಳೆದು ನಿಂತ ಪೈರಿಗೆ ಏಪ್ರಿಲ್ 6ರತನಕ ನೀರು ಹರಿಸಬೇಕು. ಇಲ್ಲದೆ ಹೋದರೆ ರೈತರ ಜತೆಗೂಡಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಶಾಸಕ ಗುರು ಪಾಟೀಲ ಶಿರವಾಳ ಎಚ್ಚರಿಕೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT