ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ವಿರುದ್ಧ ಹೋರಾಡಿದ ರೇಣುಕಾಚಾರ್ಯ

ಜಂಗಮ ಸಮಾಜದಿಂದ ಏರ್ಪಡಿಸಿದ್ದ ಜಯಂತ್ಯುತ್ಸವ: ಧರ್ಮಸಭೆಯಲ್ಲಿ ಮದ್ದರಕಿ ಮಠದ ಸ್ವಾಮೀಜಿ ಹೇಳಿಕೆ
Last Updated 11 ಮಾರ್ಚ್ 2017, 11:28 IST
ಅಕ್ಷರ ಗಾತ್ರ
ಹಾನಗಲ್: ‘ಧರ್ಮ ಮತ್ತು ಶಿವ ಸಿದ್ಧಾಂತಗಳ ಪ್ರಸಾರಕ್ಕಾಗಿ ಶಿವನ ವಂಶಿಭೂತರಾಗಿ ರೇಣುಕಾಚಾರ್ಯರು ಭೂಲೋಕಕ್ಕೆ ಅವತರಿಸಿದವರು’ ಎಂದು ರಾಣೆಬೆನ್ನೂರು, ಮದ್ದರಕಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
 
ಶುಕ್ರವಾರ ಇಲ್ಲಿನ ಗೌರಮ್ಮ ಹಿರೇಮಠ ಶಾಲೆಯ ಆವರಣದಲ್ಲಿ ತಾಲ್ಲೂಕಿನ ಜಂಗಮ ಸಮಾಜದಿಂದ ರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
 
‘ಇಂದಿನ ತೆಲಂಗಾಣದ ಕರ್ನೂಲ ಜಿಲ್ಲೆಯ ಕಲ್ಲಿಪಾಕಿಯ ಸೋಮೇಶ್ವರ ನಿಂದ ಆವಿರ್ಭವಿಸಿದ ರೇಣುಕಾ ಚಾರ್ಯರು 6 ನೇ ಶತಮಾನದಲ್ಲಿಯೇ ಅಸೃಶ್ಯತೆಯ ವಿರುದ್ಧ ಹೋರಾಡಿದವರು. ಜಾತಿ ವ್ಯವಸ್ಥೆಗೆ ಧಿಕ್ಕಾರ ಹೇಳುವ ಮೂಲಕ ಇಡೀ ಮಾನವ ಕುಲದ ಗುರುಗಳಾದರು’ ಎಂದರು.
 
ಜಂಗಮ ಸಮಾಜದ ಮುಖಂಡ ಶಿವಯೋಗಿ ಹಿರೇಮಠ ಮಾತನಾಡಿ, ‘ಜಂಗಮ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರೇಣುಕಾಚಾರ್ಯರ ಜಯಂತಿ ಯನ್ನು ತಾಲ್ಲೂಕು ಮಟ್ಟದಲ್ಲಿ ಅದ್ಧೂರಿ ಯಾಗಿ ಆಯೋಜಿಸುವ ಮೂಲಕ ಯಶಸ್ವಿಯಾಗಿದ್ದೇವೆ’ ಎಂದರು.
 
‘ರಾಜಕೀಯವಾಗಿ ಜಂಗಮ ಸಮಾಜ ಪ್ರಾತಿನಿಧ್ಯ ಪಡೆಯುವ ಅಂಗವಾಗಿ ಸಂಘಟನೆಗೆ ಮುಂದಾಗಿದ್ದೇವೆ. ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲು ನಾಡಿನ ಮಠಾಧೀಶರಿಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.
 
ಈಗ ಎಲ್ಲ ಸಮಾಜಗಳಿಗೂ ಸಮುದಾಯ ಭವನಗಳು ನಿರ್ಮಾಣಗೊಂಡಿವೆ. ಜಂಗಮ ಸಮಾಜದ ಧಾರ್ಮಿಕ ಚಟುವಟಿಕೆ ಮತ್ತಿತರ ಕಾರ್ಯಗಳಿಗಾಗಿ ರೇಣುಕ ಮಂದಿರಗಳ ಸ್ಥಾಪನೆ ಅಗತ್ಯವಾಗಿದೆ ಎಂದು ಶಿವಯೋಗಿ ಹಿರೇಮಠ ಪ್ರತಿಪಾಧಿಸಿದರು.
 
ಗೌರಮ್ಮ ಹಿರೇಮಠ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ವಿ.ಎಸ್‌. ಪುರಾಣಿಕಮಠ ಮಾತನಾಡಿ, ‘ಹರ ಮುನಿದರೆ ಗುರು ಕಾಯುವ ಎನ್ನುವ ಮಾತು ಸತ್ಯ. ಗುರು ರೇಣುಕಾಚಾರ್ಯರ ಸಂದೇಶಗಳ ಪ್ರಕಾರ ಜಂಗಮ ಸಮಾಜ ನಡೆದುಕೊಂಡು ಸಮುದಾಯಕ್ಕೆ ಮಾರ್ಗದರ್ಶಿ ಆಗಬೇಕು’ ಎಂದರು.
 
ಹೇರೂರ ಮಠದ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಂಗಮ ಸಮಾಜದ ಮುಖಂಡರಾದ ಜಿ.ವಿ.ಕಂಬಾಳಿಮಠ, ಆರ್‌.ಎಸ್‌.ಸಾಲಿಮಠ, ಜೆ.ಸಿ.ಕುಲಕರ್ಣಿ, ಡಾ.ಸುನಿಲ ಹಿರೇಮಠ, ಬಸವರಾಜ ಸಾಲಿಮಠ, ಶಶಿಧರಯ್ಯ ಮುತ್ತಿನಕಂತಿಮಠ, ಪಿ.ಕೆ.ಹಿರೇಮಠ, ರವಿಕಿರಣ ಪಾಟೀಲ, ಮಹದೇವಪ್ಪ ಬಾಗಸರ, ಬಸಣ್ಣ ಎಲಿ, ವಿಶ್ವನಾಥ ಭೀಕ್ಷಾವರ್ತಿಮಠ, ಮಹಲಿಂಗಯ್ಯ ಜವಳಿಮಠ ವೇದಿಯಲ್ಲಿದ್ದರು.
 
ಮೆರವಣಿಗೆ: ಇದಕ್ಕೂ ಮುನ್ನ ಇಲ ಕುಮಾರೇಶ್ವರ ವಿರಕ್ತಮಠದಿಂದ ಹೊರಟ ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಶಾಸಕ ಮನೋಹರ ತಹಸೀಲ್ದಾರ್‌ ಮತ್ತು ಮಾಜಿ ಸಚಿವ ಸಿ.ಎಂ.ಉದಾಸಿ ಚಾಲನೆ ನೀಡಿದರು. ಮುಖ್ಯರಸ್ತೆಯ ಮೂಲಕ ಚದಂಬರ ನಗರದ ಗೌರಮ್ಮ ಶಾಲೆಯ ಆವರಣ ತಲುಪಿದ ಮೆವರಣಿಗೆಗೆ ಡೊಳ್ಳು ಮತ್ತಿತರ ವಾದ್ಯ ವೈಭವಗಳು ಮೆರಗು ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT