ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನೇತರ ಹೊಸ ಜ್ಞಾನ ಸೃಷ್ಟಿಸಿ’

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳ ಸಮಾವೇಶದಲ್ಲಿ ಪ್ರೊ.ಚಂದ್ರ ಪೂಜಾರಿ ಸಲಹೆ
Last Updated 11 ಮಾರ್ಚ್ 2017, 12:40 IST
ಅಕ್ಷರ ಗಾತ್ರ
ಹೊಸಪೇಟೆ: ‘ಇಂದಿನ ಸಂಶೋಧನಾ ಸಮುದಾಯ ವಿಜ್ಞಾನೇತರ ಜ್ಞಾನ ಶಿಸ್ತುಗಳ ಮೂಲಕ ಹೊಸ ಜ್ಞಾನ ಸೃಷ್ಟಿಸಿ, ಅದರ ಬಗ್ಗೆ ವ್ಯಾಖ್ಯಾನ ಮಾಡುವ ಅಗತ್ಯವಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ  ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ. ಚಂದ್ರ ಪೂಜಾರಿ ಹೇಳಿದರು.
 
ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗವು ಹಂಪಿ ವಿ.ವಿ ಮಂಟಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳ ಸಮಾವೇಶ’ದಲ್ಲಿ ಆಶಯ ನುಡಿ ಆಡಿದರು.
 
ವಿಜ್ಞಾನ ಕೊಡುವ ಜ್ಞಾನದ ವ್ಯಾಖ್ಯೆಯನ್ನು ಯಥಾರೂಪದಲ್ಲಿ ನಾವೆಲ್ಲ ಸ್ವೀಕರಿಸಿದ್ದೇವೆ. ಅದು ಏಕಸತ್ಯದ ಪರಿಕಲ್ಪನೆ ಹೊಂದಿದೆ. ಇದರ ಪರಿಣಾಮ ಏಕಕೃಷಿ, ಏಕರೂಪದ ಆರೋಗ್ಯ, ವಸತಿ, ಭಾಷೆ, ಧರ್ಮ, ಅಭಿವೃದ್ಧಿಯ ಪರಿಕಲ್ಪನೆಗಳು ಬಂದು, ಸಂಸ್ಕೃತಿ ಮತ್ತು ಪರಿಸರವನ್ನು ನಾಶ ಮಾಡುತ್ತಿವೆ ಎಂದು ತಿಳಿಸಿದರು.
 
ಸಂಶೋಧನಾ ವಿದ್ಯಾರ್ಥಿಗಳ ಮಾರ್ಗದರ್ಶಕರಿಗೆ ಮೌಲ್ಯ ನಿರಪೇಕ್ಷಿತ ದೃಷ್ಟಿಕೋನಗಳಿವೆ. ಇದರಿಂದಾಗಿ ಶಿಕ್ಷಣದ ಮೌಲ್ಯ ಕುಸಿಯುತ್ತಿದೆ. ಮಾನವೀಯತೆ ಇಲ್ಲದಂತಾಗಿದೆ ಎಂದರು.
 
ಶಿಕ್ಷಣವು ಬಲಾಢ್ಯರ ಪರವಾಗಿದೆ. ತೆರಿಗೆ, ಶಿಕ್ಷಣ ಹಾಗೂ ನಮ್ಮ ಸಾಲ ನೀತಿಗಳು ಸಮಾಜದ ತಳಸ್ತರದಲ್ಲಿರುವವರಿಗೆ ಅಸಮಾನ ನೆಲೆಗಳಲ್ಲಿ ಹಂಚಿಕೆಯಾಗಿದೆ ಎಂದರು.
 
ಪ್ರಾಧ್ಯಾಪಕ ರಹಮತ್‌ ತರೀಕೆರೆ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದು ಸಮಾಜ ಕಟ್ಟುವ ಕೆಲಸವಾಗಿದೆ. ವಿದ್ಯಾರ್ಥಿಗಳೊಂದಿಗೆ ಮಾರ್ಗದರ್ಶಕರು ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಾಗಬೇಕು. ಇಬ್ಬರ ನಡುವೆ ಸಾಮರಸ್ಯ ಇದ್ದರೆ ಉತ್ಕಟ ಸಂಶೋಧನೆ ಕೈಕೊಳ್ಳಬಹುದು ಎಂದರು.
 
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಮಲ್ಲಿಕಾ ಎಸ್‌.ಘಂಟಿ, ನಮ್ಮೊಳಗಿನ ವಿವೇಕ ನಮ್ಮನ್ನು ಕೈ ಹಿಡಿದು ನಡೆಸಬೇಕು ವಿನಃ ಇನ್ನೊಬ್ಬರನ್ನು ಅವಲಂಬಿಸುವುದು ಸರಿಯಲ್ಲ ಎಂದರು.
 
ಸಮಕಾಲೀನ ಸಂದರ್ಭಕ್ಕೆ ವಿದ್ಯಾರ್ಥಿಗಳನ್ನು ಮುಖಾಮುಖಿಯಾಗಿಸಿ ಅವರ ಬೌದ್ಧಿಕ ಲೋಕ ವಿಸ್ತರಿಸುವ ಕೆಲಸ ಮಾರ್ಗದರ್ಶಕರು ಮಾಡಬೇಕು. ಇದಕ್ಕೆ ತಾಳ್ಮೆ ಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT