ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನೆಲದ ಕೊಂಕಣಿ

ವ್ಯಕ್ತಿ
Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

-ಶಾ.ಮಂ. ಕೃಷ್ಣರಾಯ

***

ಈ ಬಾರಿಯ ಸರಸ್ವತಿ ಸಮ್ಮಾನಕ್ಕೆ ಪಾತ್ರರಾಗಿರುವ ಮಹಾಬಲೇಶ್ವರ ದತ್ತಾ ಸೈಲರು ಕರ್ನಾಟಕದ ಕೊಂಕಣಿ ಭಾಷಿಕರು. ಕಾರವಾರ ಸಮೀಪದ ಮಾಜಾಳಿಯಲ್ಲಿ 1943ರ  ಆಗಸ್ಟ್ 4ರಂದು ಹುಟ್ಟಿ ಏಳನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಸಾನಮುಡಗೇರಿ ಶಾಲೆಯಲ್ಲಿ ಓದಿದರು. ತಮ್ಮ ಹದಿನೆಂಟನೇ ವಯಸ್ಸಿನಲ್ಲಿ (1961) ಅವರು ಭಾರತೀಯ ಸೈನ್ಯ ಸೇರಿದರು. ಆಗ ಗೋವೆಯ ಸ್ವಾತಂತ್ರ್ಯ ಸಂಗ್ರಾಮ ಕೊನೆಯ ಹಂತದಲ್ಲಿತ್ತು. ಭಾರತ ಸರ್ಕಾರ ಸೈನ್ಯ ಕಳಿಸಿ ಗೋವೆಯನ್ನು ಮುಕ್ತಗೊಳಿಸಿದ ತಂಡದಲ್ಲಿ ಇವರೂ ಇದ್ದರು. 1963–64ರಲ್ಲಿ ವಿಶ್ವಸಂಸ್ಥೆಯ ಆಪತ್ಕಾಲೀನ ಸೈನ್ಯದಳದಲ್ಲಿ ಶಾಂತಿ ಸೈನಿಕರಾಗಿ ಈಜಿಪ್ಟ್‌, ಇಸ್ರೇಲ್‌ ಸೀಮೆಯಲ್ಲಿ ಕೆಲಸ ಮಾಡಿದರು. 1965ರಲ್ಲಿ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಮಹಾಬಲೇಶ್ವರರು ಸಕ್ರಿಯವಾಗಿ ಪಾಲ್ಗೊಂಡರು.

ಏಳು ವರ್ಷ ಸೈನ್ಯದಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಅವರು ಗೋವೆಗೆ ಬಂದರು. ಗೋವೆಯ ವಾಲಪಯಿಯ ಪೊಲೀಸ್‌ ತರಬೇತಿ ಶಾಲೆಯಲ್ಲಿ  ಡ್ರಿಲ್‌ ಇನ್‌ಸ್ಪೆಕ್ಟರರಾಗಿ ಎರಡು ವರ್ಷ ಕೆಲಸ ಮಾಡಿ, 1970ರಲ್ಲಿ ಅಂಚೆ ಇಲಾಖೆ ಸೇರಿ ಟೆಲಿಗ್ರಾಫಿಸ್ಟರಾಗಿ ಆ ರಾಜ್ಯದ ಸಾಷ್ಟಿ, ತಿಸವಾಡಿ, ಸಾಂಗೆ, ಕಾಣಕೋಣ ನಗರಗಳಲ್ಲಿ ದುಡಿದು ಸೀನಿಯರ್‌ ಪೋಸ್ಟ್ ಮಾಸ್ಟರರಾಗಿ ನಿವೃತ್ತರಾದರು.

1972ರಲ್ಲಿ ಅಂಚೆ ಇಲಾಖೆಯಲ್ಲಿದ್ದಾಗ ಪುಣೆಗೆ ವರ್ಗವಾಗಿ ಹೋದ ಸೈಲ್‌ರು ‘ನವಯುಗ’ ಮರಾಠಿ ಪತ್ರಿಕೆಯಲ್ಲಿ ಆಚಾರ್ಯ ಅತ್ರೆ ಸ್ಮೃತಿ ಸಂಪುಟದಲ್ಲಿ ‘ಕೊಂಡಮಾರಾ’ ಎಂಬ ಕಥೆ ಬರೆದರು. ಅದು ಅವರ ಚೊಚ್ಚಲ ಕೃತಿ.

ಸಾಹಿತ್ಯ ಕೃಷಿಯ ಆರಂಭದಲ್ಲಿ ಅವರು ರಂಗಭೂಮಿಯ ಆಸಕ್ತಿ ಬೆಳೆಸಿಕೊಂಡು ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಮರಾಠಿಯಲ್ಲಿ ನಾಟಕಗಳನ್ನು ಬರೆಯುತ್ತಿದ್ದರು. ‘ನಕೊ ಜಾಳೂ ಮಾಝೆ ಘರ್‌ಟಂ’, (1974), ‘ಚರಿತ್ರಹೀನ’ (1976), ‘ಶರಣಾಗತಿ’ (1977), ‘ಯಾತನಾಚಕ್ರ’ (1979) ನಾಟಕಗಳನ್ನು ಬರೆದರು. ಆ ದಿನಗಳಲ್ಲಿ ಈ ನಾಟಕಗಳು ಜನಪ್ರಿಯವಾಗಿ ಕಾರವಾರ, ಮಹಾರಾಷ್ಟ್ರ, ಗೋವೆಯಲ್ಲಿ ಅನೇಕ ಯಶಸ್ವಿ ಪ್ರಯೋಗಗಳನ್ನು ಕಂಡವು. ಅವರು ಬರೆದ ಮರಾಠಿ ಕಥೆಗಳು ಸತ್ಯಕಥಾ, ಸ್ವರಾಜ್ಯ, ಮಾಣೂಸ್‌ ಮೊದಲಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕಿಗೆ ಬಂದವು.

ಸೈಲ್‌ ಅವರ ಮಾತೃಭಾಷೆ ಕೊಂಕಣಿ. ಗೋವೆಗೆ ಬಂದ ಬಳಿಕ ಅವರ ಮರಾಠಿ ಭಾಷೆಯ ಒಲವು ಕಡಿಮೆಯಾದಂತೆ ಕಾಣುತ್ತದೆ. ಅದು ಸಹಜವೂ ಹೌದು. ಗೋವೆ ಆಗ ಪೋರ್ಚುಗೀಸರ ವಜ್ರಮುಷ್ಟಿಯಿಂದ ಮೈ ಕೊಡವಿಕೊಂಡು ಹೊರಬಂದಿತ್ತು. ಕೊಂಕಣಿ ಭಾಷೆ ರಾಜಾಶ್ರಯವಿಲ್ಲದೆ ಮುರುಟಿ, ಸ್ವಾತಂತ್ರ್ಯದ ಸವಿಗಾಳಿಯಲ್ಲಿ ಕೊನರುತ್ತಿತ್ತು. ಕೊಂಕಣಿ ಭಾಷಿಕರು ನಿರ್ಭೀತರಾಗಿ ಬರೆಯುತ್ತಿದ್ದರು. ರವೀಂದ್ರ ಕೆಳೇಕಾರ್ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು) ಕವಿವರ್ಯ ಬಾ.ಭ.ಬೋರಕರ್, ಡಾ. ರ.ವಿ.ಪಂಡಿತ (ಪದ್ಮಶ್ರೀ ಪುರಸ್ಕೃತರು), ಚಂದ್ರಕಾಂತ ಕೇಣಿ, ಡಾ. ಮನೋಹರ ರಾವ್‌ ಸರ್‌ದೇಸಾಯಿ, ಲಕ್ಷ್ಮಣರಾವ್‌ ಸರ್‌ದೇಸಾಯಿ ಅವರಂತಹ ಘಟಾನುಘಟಿಗಳು ಕೊಂಕಣಿ ಸಾಹಿತ್ಯ ಕೃಷಿಯಿಂದ ಯುವಕರನ್ನು ಕೈಮಾಡಿ ಕರೆಯುತ್ತಿದ್ದರು. ಈ ಪರ್ವಕಾಲದಲ್ಲಿ ಮಹಾಬಲೇಶ್ವರ ಸೈಲ್‌ರ ಆಗಮನವಾಯಿತು. ಅವರು ಮರಾಠಿಯಲ್ಲಿ ಬರೆದಷ್ಟೇ ಸಹಜವಾಗಿ ಕೊಂಕಣಿಯಲ್ಲಿ ಬರೆಯಲಾರಂಭಿಸಿದರು.

ಅವರು ಆರಂಭದಲ್ಲಿ ಕೊಂಕಣಿ ಪತ್ರಿಕೆಗಳಲ್ಲಿ ಕಥೆಗಳನ್ನು ಪ್ರಕಟಿಸಿದರು. ಆನಂತರ ಕಾದಂಬರಿ ಕೃಷಿಯಲ್ಲಿ ತೊಡಗಿದರು. ಸೈಲ್‌ ಅವರ ‘ತರಂಗಾಂ’ ಎಂಬ ಕಥಾ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪ್ರಾಪ್ತವಾಯಿತು (1993). ಕೊಂಕಣಿ ಭಾಷಾ ಮಂಡಳದ ಪುರಸ್ಕಾರ ಬಂತು. ‘ಪಲತಡ್‌ಚೆ ತಾರೂಂ’ ಕಥಾ ಸಂಗ್ರಹಕ್ಕೆ ಗೋವಾ ಕಲಾ ಅಕಾಡೆಮಿಯ ಪುರಸ್ಕಾರ ಬಂತು. ‘ಕಾಳಿಗಂಗಾ’ ಕಾದಂಬರಿಗೆ 1997ರಲ್ಲಿ ಗೋವಾ ಕಲಾ ಅಕಾಡೆಮಿ, ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನದ ಪುರಸ್ಕಾರ ಬಂತು. ಅವರು ಒಂದು ಅವಧಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.

ಅವರ ‘ಹಾವಠಣ್’ ಹಾಗೂ ‘ಕಾಳಿಗಂಗಾ’ ಕಾದಂಬರಿಗಳು ಇಂಗ್ಲಿಷ್‌, ಕನ್ನಡ ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರ ಅನೇಕ ಕಥೆಗಳು ಭಾರತೀಯ ಭಾಷೆಗಳಿಗೆ  ಭಾಷಾಂತರಗೊಂಡಿವೆ.

ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸೈಲ್ ಅವರಿಗೊಂದು ವಿಶಿಷ್ಟ ಸ್ಥಾನವಿದೆ. ‘ಕಾಳಿಗಂಗಾ’, ‘ಯುಗ ಸಂವಾರ’, ‘ಅರಣ್ಯಕಾಂಡ’, ‘ಹಾವಠಣ್‌, ‘ವಿಖಾರ ವಿಳಖೊ’, ‘ಮಾತಿ–ಮಳಬ್’ ಕಾದಂಬರಿಗಳು ಬದುಕಿನ ವಾಸ್ತವ ಚಿತ್ರಣದ ಮಾದರಿಗಳೆಂದರೆ ಅತಿಶಯೋಕ್ತಿಯಲ್ಲ. ಈಗ ಅವರು ರಾಮಾಯಣವನ್ನು ಆಧರಿಸಿ ಒಂದು ಕಾದಂಬರಿ ಬರವಣಿಗೆಯಲ್ಲಿ ತೊಡಗಿದ್ದಾರೆ. ಅದು ಕೆಲವು ತಿಂಗಳುಗಳಲ್ಲಿ ಬೆಳಕು ಕಾಣಬಹುದು. ಸೈನ್ಯದ ಅನುಭವಗಳನ್ನು ಅವರು ಒಂದು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.

ಸೈಲ್ ಅವರು ಮಾಜಾಳಿಯ ಗ್ರಾಮೀಣ ಪರಿಸರದಲ್ಲಿ ಬೆಳೆದವರು. ಅವರಿಗೆ ಹಳ್ಳಿಗರ ನೋವು, ನಲಿವು, ಸಂಪ್ರದಾಯ, ಅಂಧಶ್ರದ್ಧೆ, ಮೇಲ್ವರ್ಗದವರಿಂದ ನಡೆಯುವ ಶೋಷಣೆ, ಅಮಾಯಕ ಮನಸ್ಸುಗಳ ಅಸಹಾಯಕತೆ ಗೊತ್ತು. ಅದನ್ನು ಅವರು ‘ಕಾಳಿಗಂಗಾ’ ಕಾದಂಬರಿಯಲ್ಲಿ ಸಮರ್ಥವಾಗಿ ಇಳಿಸಿದ್ದಾರೆ. ನಗರವಾಸಿಗಳಿಗೆ ಆ ಜೀವನ ಅಪರಿಚಿತವಿರಬಹುದು. ಆದರೆ ಆ ವಾತಾವರಣದಲ್ಲಿಯೇ ಬೆಳೆದ ಸೈಲ್ ಅವರು ತಮ್ಮ ಸೊಗಸಾದ ಭಾಷೆಯಿಂದ ಹಳ್ಳಿಯ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ನಿಲ್ಲಿಸುತ್ತಾರೆ. ಅದೇ ರೀತಿ ಅವರು ಬರೆದ ನೀಳ್ಗತೆ ಅಥವಾ ಮಿನಿ ಕಾದಂಬರಿ ‘ಅರಣ್ಯಕಾಂಡ’ ಕಾಡಿನಲ್ಲಿರುವವರ ದುರ್ದಮ್ಯ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ.

ನಾನು ಅನುವಾದಿಸಿದ ಅವರ ‘ಹಾವಠಣ್’ (ಕನ್ನಡದಲ್ಲಿ ‘ಆವಿಗೆ’) ಕಾದಂಬರಿಗೆ ಮಂಗಳೂರಿನ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದಿಂದ ಅವರಿಗೆ ಒಂದು ಲಕ್ಷ ರೂಪಾಯಿ ಪುರಸ್ಕಾರ ಬಂದಿದೆ. ಈ ಕಾದಂಬರಿ ಕುಂಬಾರರ ಬದುಕಿನ ಸಮಗ್ರ ಚಿತ್ರಣವನ್ನು ಕಣ್ಣ ಮುಂದಿಡುತ್ತದೆ. ಕುಂಬಾರಕೇರಿಯಲ್ಲಿ ನಡೆಯುವ ಬದುಕಿನ ಸಂಘರ್ಷ, ಮೂಢನಂಬಿಕೆಗಳು ಜೀವನವನ್ನು ಮುಖಾಮುಖಿಗೊಳಿಸುವ ಪರಿ ಓದುಗರನ್ನು ಬೆಚ್ಚಿ ಬೀಳಿಸುತ್ತದೆ.

‘ಯುಗ ಸಂವಾರ’ ಅವರ ಅತ್ಯುತ್ತಮ ಕೃತಿಗಳಲ್ಲಿ ಒಂದು  ಎಂದು ಭಾವಿಸಲಾಗುತ್ತದೆ. ಧರ್ಮಾಂತರದ ಕಾಲದಲ್ಲಿ ಗೋವೆಯ ಜನ ತಮ್ಮ ದೇವರು– ಧರ್ಮವನ್ನು ಕಾಪಾಡಿಕೊಳ್ಳಲು ದಿಕ್ಕುದೆಸೆಯಿಲ್ಲದೆ ಓಡಿದರು. ಅದರ ಹಿಂದಿನ ಚಿತ್ರವನ್ನು ಕಾದಂಬರಿ ಮುಂದಿಡುತ್ತದೆ. ಈ ಕಾದಂಬರಿಯನ್ನು ಮಿತ್ರರೊಬ್ಬರು ಕನ್ನಡಕ್ಕೆ ತರುತ್ತಿದ್ದಾರೆ.

ಒಟ್ಟಿನಲ್ಲಿ ಸೈಲ್ ಅವರ ಕಥೆ, ಕಾದಂಬರಿಗಳು ವಾಸ್ತವದ ನೆಲೆಯಲ್ಲಿ ಮನುಷ್ಯರು ಎದುರಿಸುವ ಬಿಕ್ಕಟ್ಟುಗಳನ್ನು, ಅಮಾಯಕರ ಬದುಕಿನ ದುರಂತಗಳನ್ನು, ಶೋಷಣೆಯ ವಿವಿಧ ಮುಖಗಳನ್ನು, ಜೀವನದ ವೈಶಿಷ್ಟ್ಯದೊಂದಿಗೆ ವೈರುಧ್ಯಗಳನ್ನೂ ತೆರೆದಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT