ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆಯಿಂದ ದೇಶದ ಅಭಿವೃದ್ಧಿ

ಕೆಜೆವಿಎಸ್ ಸದಸ್ಯತ್ವ ಅಭಿಯಾನದಲ್ಲಿ ಪ್ರೊ.ಕೋಡಿ ರಂಗಪ್ಪ ಅಭಿಪ್ರಾಯ
Last Updated 13 ಮಾರ್ಚ್ 2017, 7:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮೂಢನಂಬಿಕೆಗಳಿಂದ ಹಿಂದುಳಿದಿರುವ ಸಮಾಜವನ್ನು ಮುನ್ನಡೆಸಲು ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳಸಬೇಕಿದೆ. ವೈಚಾರಿಕತೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು.
ನಗರದ ವಿವೇಕ ಕೇಂದ್ರದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ಸೂಕ್ತ ಜ್ಞಾನವನ್ನು ಜನರಲ್ಲಿ ಮೂಡಿಸಿದರೆ ವೈಚಾರಿಕತೆ ತನ್ನಷ್ಟಕ್ಕೆ ತಾನೇ ಮೂಡುತ್ತದೆ. ಈ ನಿಟ್ಟಿನಲ್ಲಿ ಶ್ರಮವಹಿಸಿ ದುಡಿಯಬೇಕಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ಸಮಿತಿ ತನ್ನ ಚಟುವಟಿಕೆಗಳನ್ನು  ಹೆಚ್ಚಿಸಿಕೊಳ್ಳಬೇಕಿದೆ. ಆದ್ದರಿಂದ ಹೆಚ್ಚು ಸದಸ್ಯತ್ವ ನೋಂದಣಿ ಅಗತ್ಯವಾಗಿದೆ’ ಎಂದು ಹೇಳಿದರು.

‘ಪ್ರಾಥಮಿಕ ಶಿಕ್ಷಣ ಉತ್ತಮಗೊಳ್ಳಲು ಸರ್ಕಾರಿ ಪ್ರಾಥಮಿಕ ಶಾಲೆಗಳ ಜೊತೆಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅನುಷ್ಠಾನಗೊಳಿಸಬೇಕು. ಭಾಷಾ ಮಾಧ್ಯಮವಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡಕ್ಕೂ ಸಮಾನ ಸ್ಥಾನ ನೀಡಬೇಕಿದೆ. ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳು ಸಮನಾಗಿ ನಿಲ್ಲಬೇಕಾದರೆ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ತರಬೇಕಿದೆ’ ಎಂದು ತಿಳಿಸಿದರು.

‘ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಸದಸ್ಯತ್ವನ್ನು ಪಡೆಯಲು ₹ 100 ಸದಸ್ಯತ್ವ ಶುಲ್ಕ ಪಾವತಿಸಬೇಕು. ಸದಸ್ಯತ್ವ ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತ. ಕೆಜೆವಿಎಸ್ ಸಮಿತಿ ಹೊರಡಿಸುವ ಮಾಸಪತ್ರಿಕೆ ‘ಶಿಕ್ಷಣ ಶಿಲ್ಪಿ’ಯ  ಚಂದಾದಾರರಾಗಲು ₹ 150 ಪಾವತಿಸಬೇಕು’ ಎಂದು ತಿಳಿಸಿದರು.

ಕೆಜೆವಿಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಎಂ.ರೆಡ್ಡೆಪ್ಪ, ಸದಸ್ಯರಾದ ಬಿ.ಎನ್.ಮುನಿಕೃಷ್ಣಪ್ಪ, ಜೆ,ಶ್ರೀನಿವಾಸ್, ಎ.ವೆಂಕಟರೆಡ್ಡಿ, ಸಿ.ವಿ.ಮೋಹನ್, ಶಂಕರ್, ಎನ್.ವೆಂಕಟಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT