ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಂಗಳದ ನಾಲ್ಕು ಎಕರೆ ಒತ್ತುವರಿ ತೆರವು

Last Updated 14 ಮಾರ್ಚ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಾರಕ್ಕಿ ಕೆರೆ ಅಂಗಳದ ಸರ್ವೆ ನಂ. 1 ರಲ್ಲಿ 4 ಎಕರೆ 20 ಗುಂಟೆಯ ಒತ್ತುವರಿ ತಹಶೀಲ್ದಾರ್‌ ಎಸ್.ಎಂ.ಶಿವಕುಮಾರ್ ನೇತೃತ್ವದ ತಂಡ ಮಂಗಳವಾರ ತೆರವುಗೊಳಿಸಿದೆ.

ಈ ಜಾಗದಲ್ಲಿ ಶಾಂತರಾಜು ಹಾಗೂ ಚಂದ್ರಶೇಖರ್ ಅಕ್ರಮವಾಗಿ ವಸತಿ ಬಡಾವಣೆ ಅಭಿವೃದ್ಧಿಪಡಿಸಿದ್ದರು. ನಿವೇಶನ ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದರು. ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇದು ಕೆರೆ ಅಂಗಳಕ್ಕೆ ಸೇರಿದ ಜಾಗ ಎಂದು ದಕ್ಷಿಣ ಉಪವಿಭಾಗಾಧಿಕಾರಿ ವರದಿ ಸಲ್ಲಿಸಿದ್ದರು. 

ಖರಾಬು ಕಾಲಂ 5 ‘ಸಿ’ಯಲ್ಲಿದ್ದ ಜಾಗವನ್ನು ರದ್ದುಪಡಿಸಿ ಕಾಲಂ 5 ‘ಬಿ’ಯಲ್ಲಿ ನಮೂದಿಸಲು ಭೂದಾಖಲೆಗಳ ಇಲಾಖೆಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರು. ಅದರ ಪ್ರಕಾರ ಪಹಣಿ ತಿದ್ದುಪಡಿ ಮಾಡಲಾಗಿತ್ತು. ವಶಪಡಿಸಿಕೊಂಡ ಜಾಗದ ಮೌಲ್ಯ ₹200 ಕೋಟಿ ಎಂದು
ಅಂದಾಜಿಸಲಾಗಿದೆ.

ಜನ ಏನಂತಾರೆ
ಕಸ ಸುರಿಯದಂತೆ ತಡೆಯಬೇಕು

ಸಾರ್ವಜನಿಕರ ಹಾಗೂ ಸ್ಥಳೀಯ ಸ್ವಯಂಸೇವಕರ ಸಹಕಾರದಲ್ಲಿ ಪುಟ್ಟೇನಹಳ್ಳಿ ಕೆರೆ ಉಳಿಸಲು ಸಾಕಷ್ಟು ಕೆಲಸ ಮಾಡಲಾಗಿದೆ. ಇದಕ್ಕೆ ಈಗ ನವರೂಪ ಬಂದಿದೆ. ಇದು ಇತರ ಜಲಮೂಲಗಳಿಗೆ ಮಾದರಿ. ಸಾರಕ್ಕಿಯಲ್ಲೂ ಇದೇ ರೀತಿ ಕೆಲಸ ಮಾಡಬಹುದು. ಕಸ ಸುರಿಯದಂತೆ ತಡೆಯಬೇಕು. ಅಲ್ಲಿರುವ ಪ್ಲಾಸ್ಟಿಕ್‌ ತೆಗೆಯಬೇಕು. ಈ ಕೆಲಸ ಮಾಡಲು ಅಧಿಕಾರಿಗಳಿಗೆ ಕಾಯಬೇಕಿಲ್ಲ.
-ನಾಗೇಶ್‌ ಎಸ್‌.

ರೋಗಗಳ ಆಗರ
ಜರಗನಹಳ್ಳಿಯ ಕಲಿಯುಗದ ಭೂತ ಎಂದರೆ ಸಾರಕ್ಕಿ ಕೆರೆ ಒಂದೇ. ಪ್ರಪಂಚದಲ್ಲಿರುವ ಎಲ್ಲ ರೋಗಕಾರಕಗಳು ಈ ಕೆರೆಯಲ್ಲಿವೆ. ಸಾರಕ್ಕಿ ಕೆರೆಯನ್ನು ಯಾರೂ ಅಭಿವೃದ್ಧಿ ಮಾಡುತ್ತಿಲ್ಲ. ಈ ಜಲಮೂಲ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಇಲ್ಲಿ ಕೋಳಿ ಹಾಗೂ ಹಂದಿಯ ತ್ಯಾಜ್ಯ, ಸತ್ತ ನಾಯಿಗಳನ್ನು ಬಿಸಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ  ವಿಚಿತ್ರ ಕಂಬಳಿಹುಳಗಳ ಕಾಟ ಜಾಸ್ತಿಯಾಗಿದೆ. ಜನ ಬದುಕುವುದೇ ದುಸ್ತರವಾಗಿದೆ. ಸಂಸದರು, ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಇಲ್ಲಿ ಒಂದು  ದಿನ ವಾಸ್ತವ್ಯ ಹೂಡಿ ಜನರ ಬವಣೆಯನ್ನು ಅರ್ಥ ಮಾಡಿಕೊಳ್ಳಬೇಕು.  ಕೆರೆಗಳನ್ನು  ಉಳಿಸಲು ಏನಾದರೂ ಮಾಡಿ.
-ವೆಂಕಟೇಶ್‌ ಆರ್., ಜರಗನಹಳ್ಳಿ

ಮಳೆ ನೀರು ನಿಲ್ಲುವಂತೆ ಮಾಡಲು ಸಲಹೆ
ಕೆರೆ ಅಭಿವೃದ್ಧಿಪಡಿಸುವ ಮೂಲಕ ನಗರದ ನೀರಿನ ಬವಣೆಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಇದರಲ್ಲಿ ಮಳೆ ನೀರು ನಿಲ್ಲುವಂತೆ ಮಾಡಬೇಕು. ಅದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯರ ಸಹಕಾರದಲ್ಲಿ ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
-ಬಿ.ಎಸ್‌. ಲಕ್ಷ್ಮಿ

ಸಂಬಳದ ಋಣ ತೀರಿಸಲಿ
ಕೆಲವು ವರ್ಷಗಳ ಹಿಂದೆ ಪುಟ್ಟೇನಹಳ್ಳಿ ಕೆರೆಯನ್ನು ಪುನರುಜ್ಜೀವನ ಮಾಡಲಾಗಿತ್ತು. ಸಾರಕ್ಕಿ ಕೆರೆಗೂ ಸಮರ್ಪಕ ರಾಜಕಾಲುವೆ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ನಂತರದಲ್ಲಿ ಅಧಿಕಾರಿಗಳು ಬಿಲ್ಡರ್‌ಗಳು ಜತೆಗೆ ಕೈಜೋಡಿಸಿ ರಾಜಕಾಲುವೆಗಳನ್ನು ಮುಚ್ಚಿಸಿದ್ದರು. ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಸೇರಿ ಕೆರೆ ಕಲುಷಿತಗೊಂಡಿದೆ. ಇನ್ನಾದರೂ ಅಧಿಕಾರಿಗಳು ಸರ್ಕಾರದ ಸಂಬಳದ ಋಣ ತೀರಿಸಲು ಮುಂದಾಗಲಿ.
-ನವೀನ್‌ ಕುಮಾರ್‌ ಟಿ. ಊಗಿನಹಳ್ಳಿ.

ಶ್ರೀಮಂತರು ಕಾಣುವುದಿಲ್ಲವೇ?
ಸಾರಕ್ಕಿ ಕೆರೆಯ ಮಾದರಿಯಲ್ಲೇ ರಾಜರಾಜೇಶ್ವರಿನಗರದ ರಾಜಕಾಲುವೆಗಳು ಒತ್ತುವರಿಯಾಗಿವೆ. ನಟ ದರ್ಶನ್‌ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಎಸ್.ಎಸ್‌. ಆಸ್ಪತ್ರೆಯ ಒತ್ತುವರಿ  ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ದರ್ಶನ್‌ ಈಗಲೂ ಅದೇ ಮನೆಯಲ್ಲಿ ವಾಸವಾಗಿದ್ದಾರೆ. ಆಸ್ಪತ್ರೆಯನ್ನೂ ಮುಟ್ಟಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬಡವರನ್ನು ಮಾತ್ರ ಗುರಿ ಮಾಡಲಾಗುತ್ತಿದೆ.
-9900...8556

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT