ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಜಿ: ಪ್ರಜಾಪ್ರಭುತ್ವದ ಬೆಳಕು

Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ. ಕಲಾಯೋಗಿ ಆನಂದ ಕುಮಾರಸ್ವಾಮಿ ಆಗ ಅಮೆರಿಕೆಯಲ್ಲಿದ್ದರು. ಅಲ್ಲಿದ್ದ ಭಾರತೀಯರು ಕೆಲವರು ಅವರಲ್ಲಿಗೆ ಹೋಗಿ ಸಂದೇಶವನ್ನು ಕೇಳಿದರು. ಆಗ ಭಾರತೀಯರಿಗೆ ಕುಮಾರಸ್ವಾಮಿ ಹೇಳಿದ ಮಾತು: ‘ನೀವು ನೀವಾಗಿ’. ಹೀಗೆ ‘ನಾವು ನಾವಾಗಲು’  ಕೆಲವರು ಪಥದರ್ಶಕರ ದಾರಿಯಲ್ಲಿ ನಡೆಯುವಂತೆಯೂ ಅವರು ಸೂಚಿಸಿದರು. ಆ ಪಟ್ಟಿಯಲ್ಲಿ ಸೇರಿದ್ದ  ಹೆಸರು: ಡಿ.ವಿ.ಗುಂಡಪ್ಪ.

ಡಿವಿಜಿ (17.3.1887–7.10.1975) ಎಂದೇ ನಮಗೆ ಆಪ್ತರಾದವರು ಡಿ.ವಿ.ಗುಂಡಪ್ಪ. ಅವರ ದಾರಿ ಅಂದಿಗಿಂತಲೂ ಇಂದು  ಹೆಚ್ಚು ಬೇಕಾಗಿದೆ. ‘ಡಿವಿಜಿ’ ಎಂದ ಕೂಡಲೇ ನಮಗೆ ‘ಮಂಕುತಿಮ್ಮನ ಕಗ್ಗ’ದ ಪದ್ಯಗಳು ಕಾಣಬಹುದು; ಅಥವಾ ‘ಕನ್ನಡಸಾಹಿತ್ಯದ ಅಶ್ವತ್ಥವೃಕ್ಷ’ ಎಂಬ ಮಾತು ಕೇಳಬಹುದು. ಆದರೆ ಡಿವಿಜಿಯವರ ಒಟ್ಟು ಸಾಧನೆಯನ್ನು ಅವಲೋಕಿಸಿದಾಗ ಅವರ ಸಾಹಿತ್ಯಕೃಷಿಯೆಲ್ಲ ಸಾಗರದ ಒಂದು ಹನಿಯಷ್ಟೆ ಎಂದೆನಿಸದಿರದು. ಏಕೆಂದರೆ ಅವರೇ ತಮ್ಮನ್ನು ರಾಜಕಾರಣಿ ಎಂದು ಗುರುತಿಸಿಕೊಂಡವರು.

‘ನನ್ನ ಸಾಹಿತ್ಯ ಸೃಷ್ಟಿಯೆಲ್ಲ ನಡೆಸಿರುವುದು ನಾನೊಬ್ಬ ಪತ್ರಕರ್ತನಾಗಿಯೇ’ ಎಂದು ಘೋಷಿಸಿಕೊಂಡರು. ಮಾಡುವ ಒಂದೊಂದು ಕೆಲಸವನ್ನೂ ಸಮಾಜನಿರ್ಮಾಣದ ಹೆಜ್ಜೆಗಳನ್ನಾಗಿಸಿದವರು ಡಿವಿಜಿ. ಅವರು ಸಾಹಿತ್ಯವನ್ನೂ ಈ ಉಪಕ್ರಮದಲ್ಲಿ ಒಂದು ಸಾಧನವನ್ನಾಗಿಯೇ ಬಳಸಿಕೊಂಡರು. ಆದರ್ಶರಾಜ್ಯದ ಸ್ಥಾಪನೆಯಲ್ಲಿ ಸಾಹಿತ್ಯ–ಕಲೆಗಳ ಸ್ಥಾನ ಹೇಗಿರಬೇಕೆಂದೂ ತೋರಿಸಿಕೊಟ್ಟರು. ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡಾಗ ಅದರ ಮೂಲಭೂತ ತತ್ವಗಳನ್ನೂ ಶಕ್ತಿ–ಮಿತಿಗಳನ್ನೂ ಕುರಿತು ಮಾತನಾಡಿದ ಮೊದಲಿಗರಲ್ಲಿ ಮೊದಲಿಗರು ಡಿವಿಜಿ.

ಪ್ರಜಾಪ್ರಭುತ್ವದಲ್ಲಿ ಪ್ರಮುಖ ಘಟಕ ಎಂದರೆ ಪ್ರಜೆಯೇ ಹೌದು. ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜೆಗಳೇ ನಡೆಸುವ ಆಡಳಿತ ವ್ಯವಸ್ಥೆಯಲ್ಲಿ ‘ಪ್ರಜೆ’ ಎಂದರೆ ಯಾರು ಎನ್ನುವುದು ಸ್ಪಷ್ಟವಾಗದ ಹೊರತು ಪ್ರಜಾಪ್ರಭುತ್ವ ಯಶಸ್ವಿಯಾಗದಷ್ಟೆ. ಪ್ರಜಾಪ್ರಭುತ್ವದ ಪ್ರಜೆ ಯಾರು ಎಂದು ಆಳವಾಗಿಯೂ ಆದರ್ಶವಾಗಿಯೂ ಸಮರ್ಥವಾಗಿಯೂ ಪ್ರಬುದ್ಧತೆಯಿಂದಲೂ ಅವರು ವಿಶ್ಲೇಷಿಸಿದರು. ಅಂಥ ಆದರ್ಶ ಪ್ರಜೆಯನ್ನು ‘ರಾಷ್ಟ್ರಕ’ ಎಂದು ಕರೆದರು. ಅವರೇ ಆ ಆದರ್ಶದ ಮಾನದಂಡವೂ ಆದರು; ‘ವಿರಕ್ತ ರಾಷ್ಟ್ರಕ’ ಎಂಬ ಕೀರ್ತಿಗೆ ಪಾತ್ರರಾದರು.

ಇಂದು ರಾಜಕಾರಣ, ಆಡಳಿತ, ವ್ಯವಸ್ಥೆಗಳೆಲ್ಲವೂ ಚುನಾವಣೆ ಮತ್ತು ಪಕ್ಷರಾಜಕೀಯಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಪ್ರಜಾಪ್ರಭುತ್ವದಲ್ಲಿ ಎದುರಾಗಬಹುದಾದ ಈ ದುರಂತದ ಬಗ್ಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ಎಚ್ಚರಿಸಿದ್ದವರು ಡಿವಿಜಿ. ಮತಗಳ ಲೆಕ್ಕಾಚಾರ ಪ್ರಜಾಪ್ರಭುತ್ವದ ಆದರ್ಶಗಳನ್ನೇ ಮರೆಮಾಡುತ್ತದೆ, ಮಾರಾಟ ಮಾಡಿಯೂಬಿಡುತ್ತದೆ ಎಂದು ಮುಂಗಾಣ್ಕೆಯಿಂದ ಪ್ರತಿಪಾದಿಸಿದರು.

ಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಸಾಧ್ಯವಾಗದು; ಆದರೆ ಪಕ್ಷವೇ ಅಂತಿಮ ಉದ್ದೇಶವೂ ಆಗಬಾರದು ಎಂದು ಪ್ರತಿಪಾದಿಸಿದರು. ಪಕ್ಷರಾಜಕೀಯದ ಸಣ್ಣತನಗಳನ್ನೂ ದೌರ್ಬಲ್ಯಗಳನ್ನೂ ಗುರುತಿಸಿದರು.

‘ಪಕ್ಷವಿಲ್ಲದೆ ಪ್ರಜಾಪ್ರಭುತ್ವ ಕುಂಟನಂತಾದೀತು; ಪಕ್ಷದ ಕಾರಣದಿಂದ ಅದು ಅಡ್ಡದಾರಿಯನ್ನೂ ಹಿಡಿದೀತು’ (Without party, democracy stands crippled; with party it walks awry) – ಎಂದರು. ಹೀಗಾಗಿ ಪ್ರಜಾಪ್ರಭುತ್ವದ ಆಶಯಗಳು ಉಳಿಯಬೇಕಾದರೆ ಸ್ವತಂತ್ರ ಚಿಂತಕರ ಆವಶ್ಯಕತೆಯಿದೆ; ಯಾವುದೇ ಪಕ್ಷ, ಪದವಿ, ಪ್ರತಿಷ್ಠೆಗಳಿಗೆ ಮಾರಿಕೊಳ್ಳದ ‘ಸಾರ್ವಜನಿಕ ಬುದ್ಧಿಜೀವಿ’ಗಳು ಅಧಿಕ ಸಂಖ್ಯೆಯಲ್ಲಿ ನಿರ್ಮಾಣವಾಗಬೇಕಿದೆ ಎಂದೂ ಒತ್ತಿಹೇಳಿದರು: ‘ರಾಜಕೀಯ ಪಕ್ಷಪದ್ಧತಿಯ ಕೇಡುಗಳನ್ನು ಸರಿಪಡಿಸುವ ಒಂದು ವಿಧಾನ ಎಂದರೆ ಸ್ವತಂತ್ರ ಚಿಂತಕರೂ, ಪಕ್ಷಾತೀತರೂ ಆದ ಸಾರ್ವಜನಿಕ ವ್ಯಕ್ತಿಗಳ ಕ್ರಿಯಾಶೀಲತೆ.

ಯಾವುದೇ ಪದವಿ, ಪ್ರಶಸ್ತಿಗಳ ಮೇಲೆ ಕಣ್ಣಿಡದ ಅಥವಾ ಯಾವುದೇ ಸ್ವಹಿತಾಸಕ್ತಿಗೆ ಪಕ್ಕಾಗದ ಸ್ವಾರ್ಥಪರರಲ್ಲದವರನ್ನು ನಿರ್ಮಾಣ ಮಾಡಬಲ್ಲ ಸಾರ್ವಜನಿಕ ವಿಚಾರಸಂಸ್ಥೆಗಳು ರೂಪುಗೊಳ್ಳಬೇಕಾಗಿದೆ. ಇಂಥ ಸಂಸ್ಥೆಗಳಿಗೆ ಸೇರಿದವರು ದೇಶದ ಎಲ್ಲ ಪಕ್ಷಗಳ ಉದ್ದೇಶ–ಕಾರ್ಯಗಳನ್ನು ವೈಜ್ಞಾನಿಕ ಕ್ರಮದಲ್ಲಿ ಅಧ್ಯಯನ ನಡೆಸಿ ಜನರಿಗೆ ಅವುಗಳ ಸರಿ–ತಪ್ಪುಗಳ ಬಗ್ಗೆ ತಿಳಿವಳಿಕೆಯನ್ನು ಮೂಡಿಸಬೇಕಾಗಿದೆ.’ ಇದನ್ನು ಅವರು ಹೇಳಿದ್ದು 1942ರಲ್ಲಿ.

ಈ ಉದ್ದೇಶಕ್ಕಾಗಿಯೇ ‘ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ’ (Gokhale Institute of Public Affairs) ಎನ್ನುವ ಸಂಸ್ಥೆಯನ್ನೂ ಸ್ಥಾಪಿಸಿದರು. ಅವರು ಕೇವಲ ಆದರ್ಶಗಳ ಕನಸಿನ ಗಾಳಿಗೋಪುರದಲ್ಲೇ ವಿಹರಿಸಿದವರಲ್ಲ; ಮನುಷ್ಯಸ್ವಭಾವದ ಪರಿಚಯ ಅವರಿಗೆ ಚೆನ್ನಾಗಿದ್ದಿತು; ಅವರು ಎಳವೆಯಿಂದಲೇ ತತ್ವಜ್ಞಾನಿಯಂತೆ ಬದುಕನ್ನು ಕಂಡವರು; ಅಳವಡಿಸಿಕೊಂಡವರು.

ಅವರ ಈ ಮಾತುಗಳನ್ನು ನೋಡಿ: ‘ರಾಜದಂಡ ಹುಟ್ಟಿದ್ದು ಮನುಷ್ಯನಿಗೆ ಮನುಷ್ಯನ ವಿಷಯದಲ್ಲಿರುವ ಹೆದರಿಕೆಯಿಂದ. ರಾಜ್ಯನಿಬಂಧನೆಯಾದದ್ದೂ ಮನುಷ್ಯನಿಗೆ ಮನುಷ್ಯನಲ್ಲಿರುವ ಅಪನಂಬಿಕೆಯಿಂದ. ಮನುಷ್ಯರು ಅನ್ಯೋನ್ಯ ಸಹವಾಸದಲ್ಲಿರಬೇಕಾಗಿಬಂದ ಮೇಲೆ, ಒಬ್ಬನನ್ನೊಬ್ಬನು ನಂಬದಿದ್ದರೆ ಬದುಕು ಸಾಗದು; ಪೂರ್ತಿ ನಂಬುವುದೆಂದರೆ ವಂಚನೆಯ ಶಂಕೆ.

ಹೀಗೆ ನಂಬಿಕೆ–ಅಪನಂಬಿಕೆಗಳ ಬೆರಕೆಯೇ ರಾಜ್ಯಸಂಬಂಧಗಳ ಒಳತಿರುಳು... ಸಾರ್ವಜನಿಕ ಕಾರ್ಯಕ್ಕೆಂದು ಮುಂದೆ ಬರುವವರ ಮನಸ್ಸುಗಳಲ್ಲಿ ಪ್ರತ್ಯಕ್ಷವಾಗಲ್ಲದಿದ್ದರೆ ಪರೋಕ್ಷವಾಗಿಯಾದರೂ, ಸಮೀಪದಲ್ಲಿ ಅಲ್ಲದಿದ್ದರೆ ದೂರವಾಗಿಯಾದರೂ, ಸ್ವಪ್ರಯೋಜನದ ನಿರೀಕ್ಷೆ ಅಷ್ಟೋ ಇಷ್ಟೋ ಇರುವುದು ಅಸ್ವಾಭಾವಿಕವಲ್ಲ. ಆದರೆ ಎಲ್ಲಿ ಅವರು ನೂರಕ್ಕೆ ನೂರು ಮಂದಿಯೂ ಅಂಥವರೇ ಆಗಿದ್ದಾರೆಯೋ ಆ ದೇಶ ತೀರ ಬಡದೇಶವೆನ್ನಬೇಕು.

ಸ್ವಾಭಾವಿಕವಾದ ಆಶಾಪ್ರವೃತ್ತಿಯ ಮಟ್ಟದಿಂದ ಮೇಲೇರಿ ನಡೆಯಬಲ್ಲವನು ದೇಶದ ನೂರರಲ್ಲಿ ಹತ್ತು ಮಂದಿಯಾದರೂ ಎಲ್ಲಿ ದೊರೆಯುತ್ತಾರೆಯೋ ಅದೇ ಪ್ರಜಾರಾಜ್ಯವನ್ನು ಅನರ್ಥದಿಂದ ಉಳಿಸಿಕೊಳ್ಳಬಲ್ಲ ದೇಶ’.

ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವುದರ ಅಪಾಯದ ಬಗ್ಗೆಯೂ ಡಿವಿಜಿ ಎಚ್ಚರಿಸಿದ್ದರು. ‘ಅನ್ನ ವಸ್ತು ಸಂಪಾದನೆಗಾಗಿ ಬೇರೆ ವೃತ್ತಿಯನ್ನಿರಿಸಿಕೊಂಡು, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯಕ್ಕೆ ಕೈ ಹಚ್ಚುವವರೆಲ್ಲ ನಿಷ್ಪಾಕ್ಷಿತ ರಾಜ್ಯಸ್ಥರೇ. ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು.

ಸಾರ್ವಜನಿಕ ಜೀವನವು ಧರ್ಮಮಯವಾಗಿರಬೇಕು (Public life must be spiritualised)– ಎಂಬ ಗೋಪಾಲಕೃಷ್ಣ ಗೋಖಲೆಯವರ ವಾಕ್ಯವನ್ನು ಆದರ್ಶವಾಗಿ ಸ್ವೀಕರಿಸಿದ್ದವರು ಅವರು. ಡಿವಿಜಿಯವರ ರಾಮರಾಜ್ಯದ ಕಲ್ಪನೆಯೂ ಮನನೀಯವಾಗಿದೆ: ‘ರಾಮರಾಜ್ಯವು ಸಿದ್ಧವಸ್ತುವಾಗದೆ ಸಾಧ್ಯಧ್ಯೇಯವಾಗಿಯೇ ಇರುವ ಒಂದು ಜೀವಿತ ಸೌಂದರ್ಯದ ಕಲ್ಪನೆ.

ಅದನ್ನು ಹುಡುಕುತ್ತಿರುವುದೇ, ಅದಕ್ಕಾಗಿ ಪಡುವ ಶ್ರಮವೇ, ಅದನ್ನು ಕುರಿತ ತಪಸ್ಸೇ ನಮ್ಮ ಆತ್ಮಕ್ಕೆ ಲಾಭ. ಅದರಿಂದಲೇ ಆತ್ಮಕ್ಕೆ ಪರಿಪೂರ್ಣತಾ ಪಾತ್ರತೆ. ರಾಮರಾಜ್ಯ ಹಿಂದೆ ಎಲ್ಲೋ ಇದ್ದಂತೆ ಮುಂದೆ ಎಲ್ಲೋ ಇರುತ್ತದೆ. ಆ ನಂಬಿಕೆಯೇ ನಮಗೆ ಪ್ರಗತಿ ಪ್ರೇರಕ’.

ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಗಳು ಗಟ್ಟಿಯಾಗಲೂ ರಾಷ್ಟ್ರಕರ ಸಂಖ್ಯೆ ಹೆಚ್ಚಲೂ ಡಿವಿಜಿಯವರ ‘ರಾಜ್ಯಶಾಸ್ತ್ರ’, ‘ರಾಜ್ಯಾಂಗ’ ಮತ್ತು ಅವರ ಇಂಗ್ಲಿಷ್‌ ಬರಹಗಳ ಅಧ್ಯಯನ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT