ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗ್ಗಗಳಿಂದಲೇ ಸಮವಸ್ತ್ರ ಖರೀದಿ’

1ರಿಂದ 10ನೇ ತರಗತಿ ಮಕ್ಕಳಿಗೆ ವಿತರಣೆ, 80 ಲಕ್ಷ ಮೀಟರ್ ಬಟ್ಟೆ ಅಗತ್ಯ
Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲು ಅಗತ್ಯವಾದ 80 ಲಕ್ಷ ಮೀಟರ್‌ ಬಟ್ಟೆಯನ್ನು ರಾಜ್ಯದ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳಿಂದಲೇ ಖರೀದಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ನಿಯಮ 330 ರ ಅಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಹಿಂದಿನ ಸರ್ಕಾರಗಳು ಶೇ 75ರಷ್ಟು ಬಟ್ಟೆಯನ್ನು ಟೆಂಡರ್‌ ಮೂಲಕ ಖರೀದಿಸಿ, ಶೇ 25ರಷ್ಟು ಮಾತ್ರ ರಾಜ್ಯದ ನಿಗಮಗಳಿಂದ ಖರೀದಿಸಿವೆ. ಈ ಬಾರಿ ಎಲ್ಲ ಬಟ್ಟೆಯನ್ನೂ ನಿಗಮಗಳಿಂದಲೇ ಖರೀದಿಸಲಾಗುತ್ತಿದೆ ಎಂದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ 65 ಲಕ್ಷ ಮೀಟರ್‌ ಮತ್ತು ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದಿಂದ 15 ಲಕ್ಷ ಮೀಟರ್ ಬಟ್ಟೆ ಖರೀದಿಗೆ ಆದೇಶ ನೀಡಲಾಗಿತ್ತು. ಹೈಸ್ಕೂಲ್‌ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ಸಮವಸ್ತ್ರ ನೀಡಬೇಕೆಂದು ತೀರ್ಮಾನಿಸಿರುವುದರಿಂದ ಅದಕ್ಕೆ ಮಾತ್ರ ಟೆಂಡರ್‌ ಕರೆಯಲಾಗಿದೆ ಎಂದು ಸಚಿವ ಸೇಠ್‌ ವಿವರಿಸಿದರು.

ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ವಿದ್ಯುತ್‌ ಮಗ್ಗ ವಲಯಕ್ಕೆ ನೀಡುತ್ತಿದ್ದ ಸರಬರಾಜು ಆದೇಶಗಳನ್ನು ಕ್ರಮೇಣ ಕಡಿಮೆ ಮಾಡಿರುವುದರಿಂದ ನೇಕಾರರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

‘ಹಿಂದಿನ ವರ್ಷ ಕೈಮಗ್ಗ ಘಟಕಗಳು  ಅಗತ್ಯವಿರುವಷ್ಟು ಬಟ್ಟೆ ಪೂರೈಸಿಲ್ಲ. ಇದರಿಂದ ಸಮವಸ್ತ್ರ ವಿತರಣೆಯೂ ವಿಳಂಬ ಆಗಿದೆ. ಅಲ್ಲದೆ, ಬೇರೆಡೆಯಿಂದ ಖರೀದಿ ಮಾಡಿ ಪೂರೈಸಲಾಗಿದೆ. ಈ ಬಾರಿ ಅವರಿಂದ ಒಂದು ಮೀಟರ್‌ ಬಟ್ಟೆಯನ್ನೂ    ಖರೀದಿಸಬಾರದು ಎಂಬ ಉದ್ದೇಶವಿತ್ತು. ಆದರೆ, ಹಾಗೆ ಮಾಡಬಾರದು ಎಂದು 15 ಲಕ್ಷ ಮೀಟರ್‌ ಬಟ್ಟೆ ಪೂರೈಕೆಗೆ ಆದೇಶ ನೀಡಲಾಗಿದೆ. ಅಲ್ಲದೆ, ಕಳೆದ ವರ್ಷಕ್ಕಿಂತ ಶೇ 15ರಷ್ಟು ದರ ಹೆಚ್ಚಳ ಮಾಡಿ ಪ್ರತಿ ಮೀಟರ್‌ಗೆ ₹39.34 ನಿಗದಿ ಮಾಡಲಾಗಿದೆ. ಅದಕ್ಕೆ ಅವರೂ ಒಪ್ಪಿದ್ದಾರೆ. ಮತ್ತೆ ಖರೀದಿ ದರ ಹಚ್ಚಳ ಮಾಡಲು ಸಾದ್ಯವಿಲ್ಲ’ ಎಂದು ಸಚಿವರು  ಸ್ಪಷ್ಟಪಡಿಸಿದರು.

ವಿ.ಎಸ್.ಉಗ್ರಪ್ಪ ಮಾತನಾಡಿ, ವಿದ್ಯುತ್‌ ಮಗ್ಗಗಳಿಂದಲೇ ಪೂರೈಕೆ ಮಾಡಬೇಕು ಎಂದು ಆದೇಶಿಸಿದ್ದರೂ ಬೇರೆಡೆಯಿಂದ ಖರೀದಿ ಮಾಡಿದ್ದರೆ ಸರ್ಕಾರದ ಆದೇಶ ಉಲ್ಲಂಘನೆಯಾಗುತ್ತದೆ. ಅಂತವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

‘ಬಟ್ಟೆ ಪೂರೈಕೆಗೆ ಮೂರು ತಿಂಗಳು ಮಾತ್ರ ಅವಕಾಶ ನೀಡಿ ಕಾಲಮಿತಿಯಲ್ಲಿ ಪೂರೈಸಿಲ್ಲ ಎಂದು ಹೇಳುವುದು ಸರಿಯಲ್ಲ. ಪ್ರತಿ ವರ್ಷ ಎಷ್ಟು ಬಟ್ಟೆ  ಅಗತ್ಯ ಇದೆ ಎಂಬುದನ್ನು ನಿಗದಿ ಮಾಡಿ 5 ವರ್ಷಗಳ ಸರಬರಾಜು ಆದೇಶ ನೀಡಬೇಕು’ ಎಂದು ಲಕ್ಷ್ಮೀನಾರಾಯಣ ಆಗ್ರಹಿಸಿದರು.

ಪರೀಕ್ಷೆ ಮುಗಿದ ಮೇಲೆ ಪ್ರವಾಸ: ತನ್ವೀರ್‌ ಸೇಠ್‌

ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿಯೇ ‘ಕರ್ನಾಟಕ ಪ್ರವಾಸ’ ಪೂರ್ಣಗೊಳಿಸಬೇಕೆಂಬ ಆದೇಶ ವಾಪಸ್‌ ಪಡೆಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ವಿಧಾನ ಪರಿಷತ್ತಿನಲ್ಲಿ ಹೇಳಿದರು.     ‘ಈಗ ಹೊರಡಿಸಿರುವ ಆದೇಶ ವಾಪಸ್‌ ಪಡೆದು ಪರೀಕ್ಷೆಗಳು ಮುಗಿದ ನಂತರ ಪ್ರವಾಸ ಏರ್ಪಡಿಸುವಂತೆ ಮತ್ತೊಂದು ಸುತ್ತೋಲೆ ಕಳುಹಿಸಲಾಗುವುದು’ ಎಂದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ‘ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ಸರ್ಕಾರ ಡಿಸೆಂಬರ್‌ ಬದಲು ಮಾರ್ಚ್‌ನಲ್ಲಿ ಹಣ ಬಿಡುಗಡೆ ಮಾಡಿದೆ. ಅಲ್ಲದೆ, ಈ ತಿಂಗಳೊಳಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರ ಬಂದಿದ್ದರಿಂದ ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಿದ್ದಾರೆ. ಈಗ  ಪ್ರವಾಸ ಕೈಗೊಳ್ಳಲೇಬೇಕು ಎಂದು ಶಾಲೆಗಳಲ್ಲಿ ಒತ್ತಡ ಹಾಕಲಾಗುತ್ತಿದೆ’ ಎಂದರು.

‘ಪರೀಕ್ಷಾ ಸಮಯದಲ್ಲಿ ಪ್ರವಾಸ ಭಾಗ್ಯ’ ಎಂದು ‘ಪ್ರಜಾವಾಣಿ’ ಮಾರ್ಚ್‌ 14ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು.

* 2017–18ನೇ ಸಾಲಿಗೆ ಅಗತ್ಯ ಇರುವ ಸಮವಸ್ತ್ರ ಈಗಾಗಲೇ ಸಿದ್ಧವಿದೆ. ಶೈಕ್ಷಣಿಕ ವರ್ಷ ಆರಂಭ ಆಗುತ್ತಿದ್ದಂತೆ ವಿತರಿಸಲಾಗುವುದು

–ತನ್ವೀರ್‌ ಸೇಠ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT