ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಕೆಲಸಗಳಿಗೂ ವೇಳಾಪಟ್ಟಿ

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಪದ್ಮಶ್ರೀ ಮೂರ್ತಿ
ಯಾವುದೋ ಬಣ್ಣದ ಸೀರೆಗೆ, ಯಾವುದೋ ಬಣ್ಣದ ರವಿಕೆ ಹಾಕಿಕೊಂಡು, ಆಫೀಸಿನ ರೆಸ್ಟ್ ರೂಮಲ್ಲಿ ಕೂದಲು ಬಾಚಿಕೊಳ್ಳುವ ಗೆಳತಿ/ಸಹೋದ್ಯೋಗಿಯನ್ನು ನೋಡಿದ್ದೀರಾ? ಊಟದ ಡಬ್ಬಿ ತರಲು ಸಾಧ್ಯವಾಗದೆ ಮಧ್ಯಾಹ್ನ ಜ್ಯೂಸ್, ಬಿಸ್ಕತ್ತು ತಿಂದು ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುವ ಮಹಿಳೆಯ ಜೊತೆ ಕೆಲಸ ಮಾಡುತ್ತಿದ್ದೀರಾ?
 
ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲೆಂದೋ, ಸ್ವಾಭಿಮಾನದಿಂದ ಬದುಕಲೆಂದೋ, ಗಳಿಸಿದ ಕುಶಲತೆಯ ಸದುಪಯೋಗವಾಗಲೆಂದೋ ನೌಕರಿ ಮಾಡುವ ಮಹಿಳೆಗೆ ಮನೆಕೆಲಸಗಳನ್ನೂ ನಿರ್ವಹಿಸಲೇಬೇಕಾದ ಅನಿವಾರ್ಯತೆ. ಮನೆ ಎಂದರೆ ಅದೊಂದು ವಿಶ್ವವಿದ್ಯಾಲಯ.

ದಿನದಿನದ ಕಲಿಕೆ; ಪ್ರಯೋಗ; ವಿಜ್ಞಾನ, ಗಣಿತ, ವಾಣಿಜ್ಯ, ಹಣಕಾಸು ಎಲ್ಲದರ ಹದವಾದ ಬೆರಕೆ. ಮನೆಯ ನಿರ್ವಹಣೆಗೆ ಮುಂದಾಲೋಚನೆ, ಶ್ರದ್ಧೆ, ಚಾತುರ್ಯ, ಸಮಯದ ಹೊಂದಾಣಿಕೆ...  ಬೇಡವಾ?! ಮನೆಯೆಂದರೆ ಹಜಾರ, ಮಲಗುವ ಕೋಣೆ, ಸ್ನಾನದ ಮನೆ, ಎಲ್ಲದರ ಕೇಂದ್ರಬಿಂದು ಅಡುಗೆಮನೆ .
 
ಮನೆ ಸ್ವಚ್ಛವಾಗಿರಬೇಕು, ಎಲ್ಲ ವಸ್ತುಗಳೂ ಅದರದರ ಸ್ಥಾನದಲ್ಲಿರಬೇಕು, ಅಡುಗೆಮನೆಯ ಡಬ್ಬಿಗಳು ಪದಾರ್ಥಗಳಿಂದ ತುಂಬಿರಬೇಕು, ಗಂಡಮಕ್ಕಳೊಂದಿಗೆ ಮಾತಾಡಬೇಕು, ಊಟ ಮಾಡಬೇಕು, ಟೀವಿ ನೋಡಬೇಕು. ಎಲ್ಲ ಬೇಕುಗಳೂ ಸಾಧ್ಯವಾ? ಟೈಮೆಲ್ಲಿದೆ? 
 
ಯೋಜನೆಗಳು
ಭಾನುವಾರ ರಜಾ ದಿನ. ಅರ್ಧ ಗಂಟೆ ಆ ವಾರದ ಕಾರ್ಯಕ್ರಮಗಳ ಯೋಜನೆ ಮಾಡಿಟ್ಟುಕೊಳ್ಳಲು ವ್ಯಯಿಸುವುದು ಸಾಧ್ಯವಾ...?!
 
- ಸೋಫಾ ಹೊದಿಕೆಗಳು, ಮಗ್ಗುಲು ಹಾಸಿಗೆ( ಬೆಡ್ ಸ್ಪ್ರೆಡ್), ಹೊದಿಕೆಗಳು, ದಿಂಬಿನ ಕವರ್‌ಗಳನ್ನು ಬದಲಾಯಿಸುವುದು. ಕೊಳೆಯಾಗಿರುವುದನ್ನು ಒಗೆಯಲು ವಾಶಿಂಗ್ ಮೆಷೀನಿಗೆ ಹಾಕುವುದು ಅಥವಾ ಅಗಸನಿಗೆ ಕೊಡುವುದು-  30 ನಿಮಿಷದ ಕೆಲಸ.
 
- ದಿನಸಿ ಸಾಮಾನುಗಳು ಮುಗಿದಿದ್ದರೆ ತರಿಸಿಟ್ಟುಕೊಳ್ಳುವುದರ ಜೊತೆಗೆ ರವೆ ಹುರಿದಿಟ್ಟುಕೊಳ್ಳುವುದು, ಸಾರಿನ ಪುಡಿ, ಹುಳಿ ಪುಡಿ, ಚಟ್ನಿ ಪುಡಿ ಮೊದಲಾದವುಗಳನ್ನು ಮಾಡಿಡುವುದು. ಬೇಕಾಗಿರುವ ಸಾಮಾನುಗಳನ್ನು ಹೊಂದಿಸಿಟ್ಟುಕೊಳ್ಳುವುದು 10 ನಿಮಿಷದ ಕೆಲಸವಾದರೆ ಹುರಿದು ಮಿಕ್ಸಿಗೆ ಹಾಕಲು 30 ರಿಂದ 40 ನಿಮಿಷ ಬೇಕಾಗುವುದು.  

ಹಣದ ಉಳಿತಾಯ, ಆತ್ಮೀಯತೆಯ ಸ್ಪರ್ಶ ದುಬಾರಿಯೆನಿಸಿದಾಗ ಆಗೊಮ್ಮೆ ಈಗೊಮ್ಮೆ ಸಮಯದ ಉಳಿತಾಯವೆಂದೋ ಮತ್ತು ರುಚಿಯ ಬದಲಾವಣೆಗಾಗಿಯೋ ಪುಡಿಗಳನ್ನು ಕೊಂಡು ತರಬಹುದು. 
 
- ಕಡಲೆಕಾಳು, ಹೆಸರುಕಾಳುಗಳನ್ನು ರಾತ್ರಿ ನೆನೆ ಹಾಕಿ ಬೆಳಗ್ಗೆ ಫ್ರಿಜ್‌ನಲ್ಲಿಟ್ಟುಕೊಂಡರೆ ತಕ್ಷಣಕ್ಕೆ ಬಳಸಲು ಅನುಕೂಲವಾಗುತ್ತದೆ - 5 ನಿಮಿಷ.
 
- ವಾರಕ್ಕೆ ಬೇಕಾದ ತರಕಾರಿ ತರುವುದು, ಸಾಧ್ಯವಾದರೆ ಹೆಚ್ಚಿ ಪ್ಲಾಸ್ಟಿಕ್ ಕವರುಗಳಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟುಕೊಳ್ಳುವುದು. 15 ರಿಂದ 20 ನಿಮಿಷ.
 
- ದಿನಸಿ ಸಾಮಾನುಗಳನ್ನು ಪಾರದರ್ಶಕ ಡಬ್ಬಗಳಲ್ಲಿ ಸಂಗ್ರಹಿಸಿಟ್ಟುಕೊಂಡರೆ, ಅಡುಗೆ ಮಾಡುವಾಗ ಅರ್ಧದಷ್ಟು ಸಮಯ ಉಳಿಸಬಹುದು.
 
- ಆ ವಾರದಲ್ಲಿ ಬರುವ ಹಬ್ಬ ಹರಿದಿನಗಳು, ಹುಟ್ಟುಹಬ್ಬ ಮೊದಲಾದ ವಿಶೇಷ ದಿನಗಳಿಗಾಗಿ ಉಡುಗೊರೆ, ವಿಶೇಷ ತಿಂಡಿ ತಯಾರಿ ಸಲುವಾಗಿ ಶಾಪಿಂಗ್ ಹೋಗುವುದಿದ್ದರೆ ಬೆಳಿಗ್ಗೆ 10ರಿಂದ ಮಧ್ಯಾಹ್ನ ಒಂದು ಗಂಟೆಯೊಳಗೆ ಮುಗಿಸಿಕೊಳ್ಳಬಹುದು. ಮಧ್ಯಾಹ್ನದ ಊಟ–ವಿಶ್ರಾಂತಿಗೆ ಅನುಕೂಲವಾಗುವುದು.
 
- ಅಡುಗೆಮನೆ ಮತ್ತು ಮಲಗುವ ಕೊಠಡಿಯಲ್ಲಿ ಒಂದೊಂದು ಸಣ್ಣ ಪುಸ್ತಕ ಮತ್ತು ಪೆನ್ ಇಟ್ಟುಕೊಂಡಿದ್ದರೆ, ತರಬೇಕಾದ ಸಾಮಾನುಗಳ ಪಟ್ಟಿಯನ್ನು ನೆನಪಾದ ಹಾಗೆ ಬರೆದಿಟ್ಟುಕೊಳ್ಳಲು ಅನುಕೂಲವಾದೀತು.
 
- ಮನೆಯಿಂದ ಹೊರಡುವಾಗ ಆ ಪುಸ್ತಕಗಳನ್ನೋ, ಬರೆದ ಪುಟವನ್ನೋ ತೆಗೆದುಕೊಂಡು ಹೋದರಾಯಿತು.
 
- ಪ್ಲಾನಿಂಗ್ ಮಾಡುವಾಗ ಮನೆಕೆಲಸದ ಜೊತೆಗೆ ತನಗಾಗಿಯೂ ವಿಶೇಷವಾದ ಯೋಜನೆಯನ್ನು ತಯಾರಿಸಿಟ್ಟುಕೊಳ್ಳಬೇಕು.
 
- ಆ ವಾರದಲ್ಲಿ ಹಾಕಿಕೊಳ್ಳಬೇಕಾಗಿರುವ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿ ಓರಣವಾಗಿಟ್ಟುಕೊಳ್ಳುವುದು.
 
- ಉಡುಪುಗಳಿಗೆ ಹೊಂದಿಕೆಯಾಗುವ ಓಲೆ, ಸರ, ಬಳೆಗಳನ್ನು ಜಿಪ್ ಲಾಕ್ ಕವರ್‌ಗಳಲ್ಲಿ ಹಾಕಿಟ್ಟುಕೊಳ್ಳುವುದು.
 
- ವ್ಯಾನಿಟಿ ಬ್ಯಾಗಿನಲ್ಲಿರುವ ಬೇಡದ ರಸೀದಿಗಳನ್ನು ಬಿಸಾಕಿ, ಚಿಲ್ಲರೆ ಕಾಸುಗಳನ್ನು ಒಂದುಗೂಡಿಸಿ ಎತ್ತಿಡುವುದು.
 
- ಕೆಲಸಕ್ಕೆ ಹೋಗುವಾಗ ಅಥವಾ ಬರುವಾಗ ಕೊಡಲು ಅನುಕೂಲವಾಗುವಂತೆ ಗಂಜಿ ಹಾಕಬೇಕಾದ ಉಡುಪುಗಳನ್ನು, ಹೊಲಿಯಲು ಕೊಡುಬೇಕಾದ ಬಟ್ಟೆಗಳನ್ನು ಚೀಲದಲ್ಲಿ ಹಾಕಿಟ್ಟುಕೊಳ್ಳುವುದು. 
 
- ಅಭ್ಯಂಗ, ಕೂದಲಿಗೆ ಬಣ್ಣ ಹಾಕಿಕೊಳ್ಳಲು, ಉಗುರು ಕತ್ತರಿಸಲು ಬೆಳಗಿನ ಹೊತ್ತು ಧಾವಂತವೆನಿಸಿದರೆ ರಾತ್ರಿಯನ್ನೇ ಆಯ್ದುಕೊಳ್ಳಬಹುದು.
 
ಹಿಂದಿನ ದಿನ
ಮಾರನೇ ದಿನದ ಅಡುಗೆಗೆ ಹಿಂದಿನ ದಿನದ ತಯಾರಿ ಬಹುಪಾಲು ಸಮಯವನ್ನು ಮಿಗಿಸುತ್ತದೆ. ಚಪಾತಿಹಿಟ್ಟು ಕಲಿಸಿಕೊಳ್ಳುವುದು, ತರಕಾರಿ ಹೆಚ್ಚಿಟ್ಟುಕೊಳ್ಳುವುದು  ಇತ್ಯಾದಿ
ಉದ್ಯೋಗ ಮಾಡುವ ಜಾಗದಲ್ಲಿರುವಂತೆ, ಮನೆಯಲ್ಲೂ callender of events ತಯಾರಿಸಿಟ್ಟುಕೊಳ್ಳಬೇಕು, ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ, ಮಾಸಿಕ, ವಾರದ್ದು, ದಿನದ್ದು – ಹೀಗೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ದಿನಾಂಕ/ವಾರಗಳನ್ನು ಡೈರಿಯಲ್ಲಿ ನಮೂದಿಸಿಟ್ಟುಕೊಂಡರೆ ನಿರ್ವಹಣೆ ಸುಲಭ. 
 
ವರುಷಕ್ಕೊಮ್ಮೆ- 30 ನಿಮಿಷ ಯೋಜನೆ
ಜಸ್ಟ್ ಡಯಲ್ ಅಥವಾ ಇನ್ನಿತರ ಆಪ್ ಗಳ ಮೂಲಕ ನಿರ್ವಹಣಾ ಜನರ (Maintenance people) ಸಹಾಯವನ್ನು ಪಡೆದು ಕೆಲಸವನ್ನು ಹಗುರ ಮಾಡಿಕೊಳ್ಳಬಹುದು.
- ಮನೆಯ ಸಂದು ಗೊಂದುಗಳನ್ನು ಸ್ವಚ್ಛಗೊಳಿಸಲು, ಕರ್ಟನ್ ರಾಡ್, ಬಲ್ಬುಗಳು, ಫ್ಯಾನ್‌ಗಳನ್ನು ಒರೆಸುವುದು-ಇಬ್ಬರು ವ್ಯಕ್ತಿಗಳನ್ನು ಎರಡು ದಿನಕ್ಕಾಗಿ ನೇಮಿಸಿಕೊಂಡು ವರ್ಷಕ್ಕೊಮ್ಮೆ ನಿಂತು ಮಾಡಿಸಬೇಕು. ಹಳೆಯ/ಉಪಯೋಗಕ್ಕೆ ಬಾರದ ಎಷ್ಟೋ ವಸ್ತುಗಳನ್ನು ವಿಲೇವಾರಿ ಮಾಡಬಹುದು. 
 
- ಕೀಟ ನಿಯಂತ್ರಣ (Pest control)- ಅಡುಗೆಮನೆಯ ಎಲ್ಲ ಗೂಡುಗಳಲ್ಲಿ, ಮಂಚ, ಬೀರು ಕೆಳಗೆ ಕೀಟ ನಿಯಂತ್ರಕಗಳನ್ನು, ಪೇಸ್ಟ್ ರೂಪದಲ್ಲೋ, ಪುಡಿ ರೂಪದಲ್ಲೋ ಹಾಕಿದರೆ ಒಂದು ವರ್ಷದವರೆಗೆ ಜಿರಳೆ, ಹಲ್ಲಿ, ಜೇಡದಂತಹ ಜೀವಿಗಳಿಂದ ಮುಕ್ತ ಮನೆಯ ವಾಸ ಸಾಧ್ಯ. ಒಂದು ಟೆಲಿಫೋನ್ ಕರೆ, ಸೇವಾಕರ್ತನೊಂದಿಗೆ ಹತ್ತು ನಿಮಿಷದ ಮಾತುಕತೆಯಿಂದ ಇದು ಸಾಧ್ಯ.
 
ಆರು ತಿಂಗಳಿಗೊಮ್ಮೆ
- ಅಡುಗೆಮನೆಯ ಚಿಮಣಿ ಸ್ವಚ್ಛಗೊಳಿಸುವುದು- 1 ಗಂಟೆ ಕೆಲಸ
- ಅಂಗಳದ ಪಾಟುಗಳಲ್ಲಿ ಮಣ್ಣು ಬದಲಾಯಿಸಿ, ಗೊಬ್ಬರ, ಕೀಟನಾಶಕಗಳನ್ನು ಹಾಕುವುದು/ಹಾಕಿಸುವುದು. ಹೊಸ ಗಿಡಗಳನ್ನು ನೆಡುವುದು - ಒಂದು ದಿನದ ಕೆಲಸ
 
ತ್ರೈಮಾಸಿಕ 
- ಗಾಡಿ (ದ್ವಿಚಕ್ರ, ಕಾರು) ಸರ್ವೀಸ್‌ಗೆ ಬಿಡುವುದು.
- ಹಾಸಿಗೆ – ದಿಂಬುಗಳನ್ನು ಬಿಸಿಲಿಗೆ ಹಾಕುವುದು - 1 ಗಂಟೆ
 
ತಿಂಗಳಿಗೊಮ್ಮೆ
ಅಡುಗೆಮನೆಯ ದಿನಸಿ ಸಾಮಾನುಗಳನ್ನು ತರಿಸುವಾಗ ಗಮನಿಸಬೇಕಾದ ಅಂಶಗಳು
 
- ಆ ತಿಂಗಳಲ್ಲಿ ಬರುವ ಹಬ್ಬಗಳು, ನಿರ್ದಿಷ್ಟ ಹಬ್ಬಕ್ಕೆ ಪ್ರತ್ಯೇಕ-ವಿಶೇಷ ಭಕ್ಷ್ಯಗಳ ತಯಾರಿಕೆಗೆ ಬೇಕಾಗುವ ಪದಾರ್ಥಗಳನ್ನು ತರಿಸಬೇಕಾಗುವುದು.
 
- ಅತಿಥಿಗಳ ಆಗಮನವಾಗುವ/ಆಹ್ವಾನಿಸುವ ಮುನ್ಸೂಚನೆಯಿದ್ದರೆ ಅವರ ಇಷ್ಟದ ತಿನಿಸುಗಳ ತಯಾರಿಕೆಗೆ ಪೂರಕವಾಗುವ ಸಾಮಾನುಗಳ ಸಂಗ್ರಹ.

- ಆ ತಿಂಗಳಲ್ಲಿ ಮದುವೆ, ಮುಂಜಿ ಕಾರ್ಯಕ್ರಮಗಳಿದ್ದು ಊರಿಗೆ ಹೋಗುವ ಸಂದರ್ಭವಿದ್ದರೆ, ಮನೆಯ ಸದಸ್ಯರ ಹುಟ್ಟುಹಬ್ಬ, ವಾರ್ಷಿಕೋತ್ಸವವಿದ್ದರೆ
ರದ್ದಿ ಪೇಪರ್ ವಿಲೇವಾರಿ, ಅಡುಗೆಮನೆ, ಬಚ್ಚಲು ಮನೆಯ ವಾಶ್ ಬೇಸಿನ್‌ಗಳಿಗೆ ಡ್ರೈನೆಕ್ಸ್‌ಗಳನ್ನು ಹಾಕುವುದು, ಫ್ರಿಜ್  ಒರೆಸುವುದು .
 
- ಮೊದಲ ವಾರದಲ್ಲಿ ಪೇಪರ್ ಬಿಲ್ಲು, ಮನೆ ಕೆಲಸದವಳ ಸಂಬಳ, ಮಕ್ಕಳ ಹವ್ಯಾಸಗಳಾದ ಸಂಗೀತ, ನೃತ್ಯ, ಕ್ರೀಡೆಗಳ ಶುಲ್ಕ ಪಾವತಿಸುವುದು
 
- ತಿಂಗಳ ಎರಡನೇ ವಾರದಲ್ಲಿ ವಿದ್ಯುತ್, ಟೆಲಿಫೋನ್, ನೀರಿನ ಬಿಲ್‌ಗಳನ್ನು ಪಾವತಿಸುವುದು. ಎಲ್ಲವನ್ನೂ online ಮಾಡಬಹುದು - ಬಿಲ್ ಕಟ್ಟಲು 5ರಿಂದ 10 ನಿಮಿಷ ಸಾಕಾಗುವುದು. 
 
ಅನಿರೀಕ್ಷಿತಗಳಿಗೆ ತಯಾರಾಗಿರಿ
ಎಷ್ಟೆಲ್ಲ ತಯಾರಿ, ಮುಂದಾಲೋಚನೆಗಳನ್ನು ಮಾಡಿಕೊಂಡಿದ್ದರೂ ಅನಿರೀಕ್ಷಿತಗಳನ್ನು ತಡೆಯಲಾರೆವು. ಅನಾರೋಗ್ಯ, ಅನಾಯಾಸವಾಗಿ ಒದಗುವ ಸಂಭ್ರಮಗಳು, ದಿಢೀರ್  ಬರುವ ಬಂಧುಗಳು ಇದ್ದೇ ಇರುವವು. ನಮ್ಮಳತೆಯೊಳಗೆ ಮಾಡಿಕೊಳ್ಳುವ ತಯಾರಿಗಳು ಅನಿರೀಕ್ಷಿತಗಳನ್ನು ಎದುರಿಸುವ ಮನಃಸ್ಥೈರ್ಯ ನೀಡುತ್ತವೆ.
 
ನಿಮಗಾಗಿ
- ಉತ್ತಮ ಆರೋಗ್ಯಕ್ಕಾಗಿ ನಿಯಮಿತ ವ್ಯಾಯಾಮ/ಯೋಗಾಭ್ಯಾಸ/ ವಾಕಿಂಗ್.
- ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಅಥವಾ ಮಕ್ಕಳು, ಪತಿಯೊಂದಿಗೆ ಸಿನಿಮಾ, ನಾಟಕ, ಕಲಾಪ್ರದರ್ಶನಗಳಿಗೆ ಭೇಟಿ ನೀಡುವುದು.
- ಇಷ್ಟದ ಸಂಗೀತ ಕೇಳುವುದು, ಪುಸ್ತಕ ಓದುವುದು.
ಸಮಯದ ಸದುಪಯೋಗ ಮತ್ತು ಉಳಿತಾಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸೂಕ್ತವಾಗಿ ದುಡಿಸಿಕೊಳ್ಳಬೇಕು. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು/ಮೇಲ್ಪಂಕ್ತಿಗೆ (Upgrade) ಬರಲು ಸದಾ ಸಿದ್ಧವಾಗಿರಿ: ಮೊಬೈಲ್ ಬ್ಯಾಂಕಿಂಗ್ /PayTM- ಕುರಿತು ಮಾಹಿತಿ ಸಂಗ್ರಹಿಸಿ, ಉಪಯೋಗಿಸಿ. ಮೊಬೈಲ್ ಮೂಲಕ ಟ್ಯಾಕ್ಸಿ, ಆಟೊ ಬುಕಿಂಗ್, ಬಸ್ಸು, ರೈಲುಗಳ ಟಿಕೆಟ್ ಕಾಯ್ದಿರಿಸುವುದು

ಸಹಾಯ ಪಡೆಯಲು ಹಿಂಜರಿಯಬೇಡಿ: ಪತಿ ಮತ್ತು ಮಕ್ಕಳ ಸಹಾಯವನ್ನು ಯಾವುದೇ ಹಿಂಜರಿಕೆಯಿಲ್ಲದೆ ಪಡೆದುಕೊಳ್ಳಿ. ಮಶೀನಿಗೆ ಬಟ್ಟೆ ಹಾಕುವುದು, ಒಣಗಲು ಹಾಕುವುದು, ಪಾತ್ರೆ ಜೋಡಿಸುವುದು, ಗಿಡಗಳಿಗೆ ನೀರು ಹಾಕುವುದು ಒಬ್ಬೊಬ್ಬರಿಗೆ ವಹಿಸಿಕೊಡಿ.

ಬಾಯಿಬಿಟ್ಟು ಕೇಳದೆ, ಗಂಡ–ಮಕ್ಕಳು ತಾವೇ ತಿಳಿದುಕೊಂಡು ಮಾಡಲಿ ಎಂದುಕೊಂಡರೆ ನಿರಾಸೆಯ ಹೊರತು ಮತ್ತೇನೂ ಸಿಗದು. ಮನೆ ಕೆಲಸ ಕನಿಷ್ಠದ್ದಲ್ಲ ಎಂಬ ಅರಿವು ಮೂಡಿಸುವ ಜವಾಬ್ದಾರಿಯೂ ನಿಮ್ಮದೇ. ನಿಗದಿತ ಸಮಯದಲ್ಲಿ ಅವರೆಲ್ಲರ ಸಹಾಯ ಸಹಕಾರದೊಂದಿಗೆ ಅಡುಗೆಮನೆಯ ಕೆಲಸ ಮುಗಿಸಿ, ಎಲ್ಲರೂ ಟಿವಿ ನೋಡುವುದು ಅಥವಾ ಉದ್ಯಾನವನದಲ್ಲಿ ಸಣ್ಣ ವಾಯುವಿಹಾರ ಬಾಂಧವ್ಯದ ಬೆಸುಗೆಗೆ ಸಹಕಾರಿ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT