ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ಜಾಗಕ್ಕಾಗಿ ಹುಡುಕಾಟ ಆರಂಭ

Last Updated 18 ಮಾರ್ಚ್ 2017, 6:13 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವರ್ಷದಲ್ಲಿ ಒಮ್ಮೆ ನಡೆಯುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಭದ್ರತೆಗೆ ನಿಯೋಜಿಸಲಾಗುವ ಪೊಲೀಸರ ಅನುಕೂಲಕ್ಕಾಗಿ ಬಹುಉದ್ದೇಶಿತ ಭವನದ ಜೊತೆಗೆ ಬ್ಯಾರಕ್‌ಗಳನ್ನು (ಉಳಿದುಕೊಳ್ಳಲು ಬೇಕಾದ ವ್ಯವಸ್ಥೆ ಇರುವ ಹಾಲ್‌) ನಿರ್ಮಿಸುವುದಕ್ಕಾಗಿ ಸೂಕ್ತ ಜಾಗದ ಹುಡುಕಾಟ ಆರಂಭವಾಗಿದೆ.

ಬಹುಉದ್ದೇಶಿತ ಭವನ ಹಾಗೂ ಬ್ಯಾರಕ್‌ಗಳನ್ನು ನಿರ್ಮಿಸುವ ಸಂಬಂಧ 2017–18ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕಾಗಿ ₹3 ಕೋಟಿ ಅನುದಾನವನ್ನೂ ನಿಗದಿಪಡಿಸಲಾಗಿದೆ.

ನಗರದಲ್ಲಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭ ಭದ್ರತೆಗಾಗಿ ಸ್ಥಳೀಯವಾಗಿ ಹಾಗೂ ರಾಜ್ಯದ ವಿವಿಧೆಡೆಯಿಂದ 4,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಳೆದ ವರ್ಷ ನಡೆದ ಅಧಿವೇಶನದ ವೇಳೆ ಪೊಲೀಸರಿಗೆ ನಗರದ ರಾಮತೀರ್ಥನಗರದ ಕೆಐಎಡಿಬಿ ಸಮುದಾಯ ಭವನ, ಡಿಎಆರ್‌ ಆವರಣದಲ್ಲಿರುವ ದೇವಾಲಯದ ಸಭಾಂಗಣ, ಎಪಿಎಂಸಿ ಆವರಣ ಸೇರಿದಂತೆ ನಗರದ ವಿವಿಧೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸ್ಥಳಗಳಲ್ಲಿ, ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಪೊಲೀಸರಿಗೆ ಸೂಕ್ತ ವಸತಿ, ಶೌಚಾಲಯ, ಸ್ನಾನಕ್ಕೆ ವ್ಯವಸ್ಥೆ ಒದಗಿಸಲು ಸಾಧ್ಯವಾಗಿಲ್ಲ, ಆಹಾರದ ವ್ಯವಸ್ಥೆಯೂ ಸರಿ ಇಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಗೃಹ ಸಚಿವರು ಭೇಟಿ ನೀಡಿದ್ದರು: ಇಲ್ಲಿ ಉಳಿದಿದ್ದ ಪೊಲೀಸರು ಟ್ಯಾಂಕರ್‌ನಲ್ಲಿ ತಂದಿದ್ದ ನೀರಿನಲ್ಲಿ ಬಯಲಿನಲ್ಲಿಯೇ ಸ್ನಾನ ಮಾಡುತ್ತಿದ್ದುದು ಕಂಡುಬಂದಿತ್ತು. ನೀರು ಖಾಲಿಯಾಗುತ್ತದೆ ಎನ್ನುವ ಧಾವಂತದಲ್ಲಿ ಸ್ನಾನಕ್ಕೆ ಮುಗಿ ಬೀಳುತ್ತಾ ತೊಂದರೆ ಅನುಭವಿಸುತ್ತಿದ್ದುದು ಗಮನಕ್ಕೆ ಬಂದಿತ್ತು. ಹೀಗಾಗಿ, ಗೃಹ ಸಚಿವ ಡಾ.ಜಿ. ಪರಮೇಶ್ವರ ಕೂಡಭೇಟಿ ನೀಡಿ ಪೊಲೀಸರ ಕುಂದುಕೊರತೆಗಳನ್ನು ಆಲಿಸಿದ್ದರು. ಪೊಲೀಸರಿಗೆ ಉಳಿದುಕೊಳ್ಳಲು ಶಾಶ್ವತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ, ಭವನ ನಿರ್ಮಿಸುವ ಕುರಿತು ಅನುದಾನ ನಿಗದಿಪಡಿಸಿ, ಬಜೆಟ್‌ನಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಾಗಿದೆ.

‘ಅಧಿವೇಶನದ ಭದ್ರತೆಗೆ ಆಗಮಿಸುವ ಪೊಲೀಸ್‌ ಸಿಬ್ಬಂದಿ ವಾಸ್ತವ್ಯಕ್ಕೆ ವ್ಯವಸ್ಥೆ ಒದಗಿಸಲು ಬಹುಉದ್ದೇಶಿತ ಭವನ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ಸಂತಸ ತಂದಿದೆ. ಇದಕ್ಕಾಗಿ ₹ 3 ಕೋಟಿ ಅನುದಾನವನ್ನೂ ನಿಗದಿಪಡಿಸಲಾಗಿದೆ. ಭವನ ನಿರ್ಮಾಣಗೊಂಡಲ್ಲಿ ಸಿಬ್ಬಂದಿಗೆ ಅನುಕೂಲವಾಗುತ್ತದೆ’ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

15 ಎಕರೆ ಜಾಗಕ್ಕೆ ಮನವಿ

ಅಧಿವೇಶನ ಸಂದರ್ಭ ಸುವರ್ಣ ವಿಧಾನಸೌಧದ ಸುತ್ತಮುತ್ತ ಮಾತ್ರವಲ್ಲದೇ, ಸಮೀಪದಲ್ಲಿ ನಿಗದಿಪಡಿಸಲಾಗುವ ಪ್ರತಿಭಟನಾ ವೇದಿಕೆ, ಹೆದ್ದಾರಿ ಬಳಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಹೀಗಾಗಿ, ಸುವರ್ಣ ವಿಧಾನಸೌಧದ ಸುತ್ತಮುತ್ತ ಜಾಗ ನೀಡಿದರೆ ಅನುಕೂಲವಾಗುತ್ತದೆ. ಇದರಿಂದ, ಪೊಲೀಸರನ್ನು ಕರ್ತವ್ಯದ ಸ್ಥಳಕ್ಕೆ ತಲುಪಿಸಲು ತಗಲುವ ಸಾರಿಗೆ ವೆಚ್ಚವನ್ನು ತಗ್ಗಿಸಬಹುದಾಗಿದೆ ಎನ್ನುವ ಲೆಕ್ಕಾಚಾರವನ್ನು ಹಾಕಲಾಗಿದೆ.

‘ಭವನ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಪೀರನವಾಡಿ, ಹಲಗ, ಬಸ್ತವಾಡ ಸೇರಿ ಕೆಲವೆಡೆ ಜಾಗ ತೋರಿಸಲಾಗಿತ್ತು. ಇದ್ಯಾವುದು ಸಮರ್ಪಕವಾಗಿರಲಿಲ್ಲ. ಹೀಗಾಗಿ, ಒಂದೇ ಕಡೆ 15 ಎಕರೆಯಷ್ಟು ಜಾಗ ನೀಡಿದರೆ ಅನುಕೂಲವಾಗುತ್ತದೆ ಎಂದು ಕೋರಲಾಗಿದೆ. ಭವನವನ್ನು ಕೇವಲ ಅಧಿವೇಶನದ ಸಂದರ್ಭದಲ್ಲಿ ಬಳಸಿಕೊಂಡು ನಂತರ ಖಾಲಿ ಬಿಟ್ಟು ‘ಭೂತಬಂಗಲೆ’ ಮಾಡುವುದಕ್ಕಿಂತ, ವರ್ಷವಿಡೀ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ, ಭವನದೊಂದಿಗೆ ಸಿಎಆರ್‌ ಮೈದಾನ, ಪರೇಡ್‌ ಮೈದಾನ, ತರಬೇತಿಗೆ ನೀಡಲು ಸ್ಥಳಾವಕಾಶ ಕಲ್ಪಿಸಿಕೊಳ್ಳಬೇಕಾಗಿದೆ.

ಹೀಗಾಗಿ, ಹೆಚ್ಚಿನ ಜಾಗವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಜಾಗದ ಲಭ್ಯತೆ ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

**

ಜಾಗ ಸಿಕ್ಕರೆ ಬಹುಉದ್ದೇಶಿತ ಭವನ, ಬ್ಯಾರಕ್‌ಗಳನ್ನು ಮುಂದಿನ ಆರ್ಥಿಕ ವರ್ಷದ ವೇಳೆಗೆ ನಿರ್ಮಿಸುವುದಕ್ಕೆ ಸಾಧ್ಯವಿದೆ ಜಾಗಕ್ಕಾಗಿ ಜಿಲ್ಲಾಡಳಿತವನ್ನು ಕೋರಲಾಗಿದೆ.
-ಟಿ.ಜಿ. ಕೃಷ್ಣಭಟ್‌,
ನಗರಪೊಲೀಸ್‌ ಕಮಿಷನರ್‌, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT