ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗುಡ್ಡದಲ್ಲಿ ನೀರಿನ ಠೇವಣಿ

ಜಲ ಸಂಗ್ರಹಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಚನೆಗಳಿಂದ ಅರಣ್ಯ ಇಲಾಖೆ ಕಲಿತ ಪಾಠಗಳೇನು? ದಶಕಗಳ ಅವಲೋಕನ ಅಗತ್ಯವಿದೆ
Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಗುಡ್ಡವೇರಿ  ಕಾಡು– ಕಣಿವೆಗಳನ್ನು ಗಮನಿಸಬೇಕು. ಮಳೆನೀರನ್ನು ಸಮುದ್ರಕ್ಕೆ ಒಯ್ಯುವ ಬಸಿಗಾಲುವೆಯಂತೆ  ಝರಿ, ಹಳ್ಳ, ನದಿಗಳು ಕಾಣಿಸುತ್ತವೆ. ಮಲೆನಾಡಿನಲ್ಲಿ  ಒಂದೊಂದು ಎಕರೆಯಲ್ಲಿ  60 ಲಕ್ಷ ಲೀಟರ್‌ನಿಂದ 1.25 ಕೋಟಿ ಲೀಟರ್ ಮಳೆನೀರು ಸುಮಾರು 110–115 ದಿನಗಳಲ್ಲಿ ಸುರಿಯುತ್ತದೆ. ಮಳೆ ಬಿದ್ದ ಗಂಟೆಯೊಳಗೆ ಪ್ರವಾಹ ಉಕ್ಕೇರುತ್ತದೆ. ನದಿ ನೀರಿನ ಬಣ್ಣ ನೋಡಿದರೆ ಭೂ ಸವಕಳಿಯ ದರ್ಶನವಾಗುತ್ತದೆ.
 
ಮಣ್ಣಿನ ಸಂರಕ್ಷಣೆ, ಅರಣ್ಯಾಭಿವೃದ್ಧಿಗೆ ಜಲ ಸಂಗ್ರಹ ಅತ್ಯಗತ್ಯ. ಓಡುವ ಮಳೆನೀರನ್ನು ಗುಡ್ಡದಲ್ಲಿ ಹಿಡಿದರಷ್ಟೇ ಬೇಸಿಗೆಯಲ್ಲಿ ಕೊಳ್ಳದ ನದಿಗಳ ಜೀವ ಉಳಿಯುತ್ತದೆ, ವನ್ಯ ಸಂಕುಲಗಳಿಗೂ ಅನುಕೂಲವಾಗುತ್ತದೆ. ದಟ್ಟ ಕಾಡಿನಲ್ಲಿ ಆಳಕ್ಕೆ ಬೇರಿಳಿಸುವ ಹೆಮ್ಮರಗಳು ಬಿರುಗಾಳಿಗೆ ತೊನೆದಾಡಿದ ಬಳಿಕ ಮಳೆಗಾಲದ ಒರತೆ ಜನಿಸುವುದು ಗೊತ್ತಿದೆ. ಈಗ ಅರಣ್ಯ ಇಲಾಖೆ ನಿರ್ಮಿತ  ನೆಡುತೋಪಿನಲ್ಲಿ ಕೃತಕವಾಗಿ ನೀರಿಂಗಿಸುವ ಪ್ರಯತ್ನ ನಡೆದಿದೆ. 
 
ಗಿಡಕ್ಕೊಂದು ಜಲಪಾತ್ರೆ: ವಿಶ್ವ ಬ್ಯಾಂಕ್ ನೆರವಿನ ಸಾಮಾಜಿಕ ಅರಣ್ಯ ಯೋಜನೆ 80ರ ದಶಕದಲ್ಲಿ ಜಾರಿಯಾಗಿತ್ತು. ಉತ್ತರ ಕನ್ನಡದ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಅ.ನ. ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ಕರಾವಳಿಯ ಭಟ್ಕಳದಲ್ಲಿ ಸಭೆ ನಡೆಯಿತು.  

ಲ್ಯಾಟ್ರೈಟ್ ಕಲ್ಲು ಹಾಸಿನ ಬೋಳು ಗುಡ್ಡದಲ್ಲಿ ನಾಟಿ ಮಾಡಿದ ಗಿಡಗಳು ಮಳೆಯಲ್ಲಿ ನೀರು ಹಿಡಿಯುವಂತಾದರೆ ಭೂಸವಕಳಿ ತಗ್ಗುತ್ತದೆ, ಭೂಮಿಗೂ ನೀರಿಂಗುತ್ತದೆ. ನಾಟಿ ಮಾಡಿದ ಗಿಡಗಳ ಸುತ್ತಲಿನ ಹುಲ್ಲನ್ನು ಕೆತ್ತಿ ಗಿಡದ ಬುಡಕ್ಕೆ ಮಣ್ಣೇರಿಸಿದರೆ ಬೆಂಕಿಯಿಂದ ಗಿಡ ನಾಶ ತಡೆಯಬಹುದು.
 
ಇದಕ್ಕೆ ನೀರಿಂಗಿಸುವ ಹೊಸ ವಿನ್ಯಾಸ ಜೀವ ತಳೆಯಿತು. ಅರ್ಧ ಚಂದ್ರಾಕೃತಿಯಲ್ಲಿ ಇಳಿಜಾರಿಗೆ ಅಡ್ಡವಾಗಿ ನಿರ್ಮಿಸುವ ರಚನೆಯಿದು. ಸತತ ಮೂರು ದಿನಗಳ ಕಾಡು ಸುತ್ತಾಟದ ಬಳಿಕ ‘ಚಂದ್ರ ಬರಾವು’ ವಿನ್ಯಾಸ ರೂಪುಗೊಂಡಿತೆಂದು ಯಲ್ಲಪ್ಪ ರೆಡ್ಡಿ  ನೆನಪಿಸಿಕೊಳ್ಳುತ್ತಾರೆ.

ಮಲೆನಾಡಿನ ಅಕೇಶಿಯಾ ನೆಡುತೋಪಿನಲ್ಲಿ ಪ್ರಥಮವಾಗಿ ಬಳಕೆಯಾದ ವಿಧಾನ ಮುಂದೆ ಬ್ರಿಟನ್, ಜಪಾನ್ ನೆರವಿನಲ್ಲಿ ರಾಜ್ಯದಲ್ಲಿ ಕೈಗೊಂಡ ಅರಣ್ಯಾಭಿವೃದ್ಧಿ ಯೋಜನೆಗಳಲ್ಲಿ ಮುಂದುವರಿಯಿತು. . 
 
ಚಂದ್ರಬರಾವು ಚಾಲ್ತಿಗೆ ಬಂದ ಹತ್ತು ವರ್ಷಗಳ ಬಳಿಕ ಇಳಿಜಾರಿಗೆ ಅಡ್ಡವಾಗಿ ಅಗಳಗಳನ್ನು (ಸ್ಟ್ರಾಗರ್ಡ್‌್ ಟ್ರೆಂಚ್) ತೆಗೆಯುವ ಇನ್ನೊಂದು ಮಾದರಿಯನ್ನು ಇಲಾಖೆ ಅಳವಡಿಸಿತು. ಮಳೆ ಪ್ರಮಾಣ, ಮಣ್ಣುಗುಣ ಅವಲಂಬಿಸಿ  25–30 ಮೀಟರ್‌ಗೆ ಒಂದರಂತೆ ಇಂಗು ಅಗಳ ನಿರ್ಮಾಣ. ನೀರು ಶೇಖರಣೆಯಾದ ಅರ್ಧ ತಾಸಿನಲ್ಲಿ ಭೂಮಿಗೆ ಇಂಗುತ್ತಿದ್ದರಿಂದ ಈ ಪುಟ್ಟ ರಚನೆ ವರ್ಷಕ್ಕೆ ಲಕ್ಷಾಂತರ ಲೀಟರ್ ಇಂಗಿಸುವ ಹೊಸ ಅವಕಾಶವಾಯಿತು.

ಮಳೆ ನೀರಿನಲ್ಲಿ ಶೇಕಡ 15ರಷ್ಟನ್ನು ಭೂಮಿಗೆ ಇಂಗಿಸಿದರೆ ಅಂತರ್ಜಲ ಅಭಿವೃದ್ಧಿಯಾಗುತ್ತದೆಂಬ ಜಾಗೃತಿ ಮೂಡಿತು.  ನೆಡುತೋಪಿನ ಎಕರೆಯಲ್ಲಿ 10–15 ರಚನೆಗಳನ್ನು ಇಲಾಖೆ ಮಾಡಿಸುತ್ತಿತ್ತು.

ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಗೋಕಾಕದ ಗುಡ್ಡಗಳಲ್ಲಿ ಇದರದೇ ಇನ್ನೊಂದು ರೂಪ ಮೈದಳೆಯಿತು. ಟ್ರೆಂಚ್ ನಿರ್ಮಿಸಿ ಅದರ ತೆಗ್ಗಿನಲ್ಲಿ ಸಸಿ ನಾಟಿ ಶುರುವಾಯ್ತು. ಬಯಲುಸೀಮೆಯ ಬರದಲ್ಲಿ ಗಿಡ ಬದುಕಿಸುವ ತಂತ್ರ ಇದಾಗಿತ್ತು. ಬೆಂಗಳೂರು ನಗರದ ಜ್ಞಾನಭಾರತಿ ಆವರಣದಲ್ಲಿ ಹೀಗೆ ಬೆಳೆಸಿದ ಚಂದನದ ಗಿಡಗಳು, ಗೋಕಾಕ್ ಮಿಲ್ ಗುಡ್ಡದಲ್ಲಿ ಬೆಳೆಸಿದ ಕಮರಾ ಗಿಡಗಳು ಉತ್ತಮ ಬೆಳವಣಿಗೆ ತೋರಿಸಿವೆ. 
 
ಕಾಡಲ್ಲಿ ಕೆರೆ ಕಾಯಕ: ಕಾಡಿನಲ್ಲಿ ಕೆರೆ, ಕುಂಟೆ ರೂಪಿಸುವ ಅಭ್ಯಾಸವಿರಲಿಲ್ಲ. 70ರ ದಶಕದವರೆಗೂ ತೇಗ, ನೀಲಗಿರಿ ನೆಡುತ್ತ ಜೀವ ಸವೆಸಿದ ಇಲಾಖೆಗೆ ಜಲ ಸಂರಕ್ಷಣೆಯ ಗಮನವಿರಲಿಲ್ಲ, ನದಿ ಜನಿಸುವ ಅರಣ್ಯ ನೆಲೆಯಲ್ಲಿ ನೀರಿನ ಸಮಸ್ಯೆಯೂ ಇರಲಿಲ್ಲ.  
 
ವನ್ಯಜೀವಿ ವಲಯಗಳಲ್ಲಿ ಅಲ್ಲೊಂದು ಇಲ್ಲೊಂದು ಕೆರೆಗಳಿದ್ದವು, ಹಳೆಯ ಕೆರೆಗಳ ದುರಸ್ತಿ ನಡೆಯುತ್ತಿತ್ತು. ಕಿಂಡಿತಡೆ ಅಣೆಕಟ್ಟು, ಕೊರಕಲು ತಡೆ ಕಟ್ಟುತ್ತಿದ್ದರು. ಕೆಲಸಗಳೆಲ್ಲ ಕಾಡಲ್ಲಿ ನಡೆಯುತ್ತಿದ್ದರಿಂದ ಕಾಮಗಾರಿ ಸಾರ್ವಜನಿಕರ ಗಮನಕ್ಕೆ ಬರುತ್ತಿರಲಿಲ್ಲ, ಕಾಗದ ಪತ್ರಗಳಲ್ಲೇ ಬಹುತೇಕ ಮುಗಿಯುತ್ತಿದ್ದವು.

ಜಪಾನ್ ನೆರವಿನ ಸುಸ್ಥಿರ ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣಾ ಯೋಜನೆ ರಾಜ್ಯದಲ್ಲಿ 2005ರಲ್ಲಿ ಜಾರಿಯಾಯ್ತು. ಯೋಜನೆಯನ್ವಯ ಅರಣ್ಯೀಕರಣ ಜೊತೆಗೆ ಜಲ ಸಂರಕ್ಷಣೆ ಕೈಗೊಳ್ಳಲು ನಿರ್ದೇಶನವಿತ್ತು.  ಅಲ್ಲಿಯವರೆಗೆ ಇಲಾಖೆಯಲ್ಲಿ ಚಂದ್ರಬರಾವು, ಕಟ್ ಅಗಳದ ಸಣ್ಣ ಮಾದರಿಗಳು ಮಾತ್ರವಿದ್ದವು. 
 
ಅರಣ್ಯ ಭವನದಲ್ಲಿ ಒಮ್ಮೆ ಹಿರಿಯ ಅಧಿಕಾರಿಗಳು ಜಲ ಸಂರಕ್ಷಣೆ ಮಾದರಿಗಳ ಚರ್ಚೆ ನಡೆಸಿದರು. ಜಲ ಸಂರಕ್ಷಣೆ ಇಲಾಖೆಗೆ ಹೊಸದಾದ್ದರಿಂದ ಇದರಿಂದ ಅರಣ್ಯಕ್ಕೆ ದೊರೆಯುವ ಲಾಭವೇನು ಎಂಬ ಪ್ರಶ್ನೆ ಮುಖ್ಯವಾಗಿತ್ತು. ಎಕರೆ ಅರಣ್ಯಕ್ಷೇತ್ರದಲ್ಲಿ 75–80 ಲಕ್ಷ ಲೀಟರ್ ಮಳೆನೀರು ಸುರಿಯುತ್ತದೆಂದು ಹೇಳುತ್ತೇವೆ. ಇದನ್ನು ಹಿಡಿಯಲು ಚಿಕ್ಕಚಿಕ್ಕ ಗಾತ್ರದ ರಚನೆಗಿಂತ ದೊಡ್ಡ ಒಡ್ಡು ನಿರ್ಮಿಸಬಹುದೆಂದು ನಿರ್ಧರಿಸಿದರು.

ಉತ್ತರ ಕನ್ನಡದ ಶಿರಸಿ - ಸಿದ್ದಾಪುರಗಳಲ್ಲಿ ಪ್ರಾಯೋಗಿಕವಾಗಿ ಕಣಿವೆ ಕೆರೆ ರಚನೆ ಶುರುವಾಯ್ತು. ಒಂದೇ ವರ್ಷದಲ್ಲಿ 60ಕ್ಕೂ ಹೆಚ್ಚು ಕೆರೆಗಳು ರೂಪುಗೊಂಡವು. ಇವು ಯಂತ್ರಗಳ ಸಹಾಯದಿಂದ ನಿರ್ಮಾಣವಾಗುತ್ತಿದ್ದವು. ₹ 40–50 ಸಾವಿರ  ವೆಚ್ಚದಲ್ಲಿ  10–20 ಲಕ್ಷ ಲೀಟರ್ ನೀರು ಹಿಡಿಯುವ ರಚನೆಗಳನ್ನು ರೂಪಿಸಲು ಸಾಧ್ಯವಾಯಿತು. ಸರಣಿ ಕೆರೆಗಳು ಮಳೆ ನೀರು ಹಿಡಿದ ಅನುಕೂಲ ಗಮನಿಸಿದ ಗ್ರಾಮಸ್ಥರಿಂದ ಜನಸಹಭಾಗಿತ್ವದ ಅರಣ್ಯಾಭಿವೃದ್ಧಿಗೆ ಹೊಸ ಜೀವ ಬಂದಿತು.  
 
ಜಲಸಂರಕ್ಷಣೆಯ ಯಶಸ್ಸು ಎರಡು– ಮೂರು ವರ್ಷಗಳಲ್ಲಿ ಕಾಣಿಸಿತು, ಕೆರೆ ಕಾಯಕ ಇನ್ನೂ ವ್ಯಾಪಕವಾಗಿ ನಡೆಯಬೇಕಿತ್ತು. ವಿರಳ ಜನಸಂಖ್ಯೆಯ ಅರಣ್ಯ ಜಿಲ್ಲೆಯಲ್ಲಿ 500 ಎಕರೆ ಕೃಷಿ ಭೂಮಿಯಿದ್ದ ಹಳ್ಳಿಯ ಸುತ್ತ 20–25 ಎಕರೆ ಅರಣ್ಯ ಆವರಣವಿರುತ್ತದೆ. ಇಲ್ಲಿ ಸರ್ಕಾರದ ನೀರಾವರಿ ಯೋಜನೆಗಳಿಲ್ಲ.

ಹೇರಳ ಮಳೆ ಬಂದರೂ ಬೇಸಿಗೆ ಬಂದಾಗ ಕಾಡಿನ ನೀರು ಒಣಗುತ್ತಿದ್ದರಿಂದ ವನ್ಯಜೀವಿಗಳು ತಗ್ಗಿನ ಕೃಷಿ ನೆಲೆಗೆ ಬರುತ್ತಿದ್ದವು. ಮಾನವ– ವನ್ಯಜೀವಿ ಸಂಘರ್ಷಗಳು ಅಕೇಶಿಯಾ ನೆಡುತೋಪಿನಿಂದ ಜಾಸ್ತಿಯಾದವು. ನೆಡುತೋಪಿನಲ್ಲಿ ಕೆರೆ ನಿರ್ಮಾಣ ಅವಶ್ಯವಿತ್ತು.

ಈಗ ಇಲಾಖೆಯ ಕೆರೆ ರಚನೆ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ. ಗ್ರಾಮ ಅರಣ್ಯ ಸಮಿತಿಗಳಲ್ಲಿ ಲಕ್ಷಾಂತರ ಹಣವಿದ್ದರೂ ನಿರ್ಮಾಣಕ್ಕೆ ಅಧಿಕಾರಿಗಳು ಒಪ್ಪುತ್ತಿಲ್ಲ. ಅತ್ಯಂತ ಕಡಿಮೆ ವೆಚ್ಚದಲ್ಲಿ ಕೆರೆ ನಿರ್ಮಿಸುವ ವಿನ್ಯಾಸಗಳಿದ್ದರೂ ಕ್ಯೂಬಿಕ್ ಮೀಟರ್ ಲೆಕ್ಕದಲ್ಲಿ ಹಣ ಹೊಡೆಯುವ ಮಾರ್ಗ ಶುರುವಾಗಿದ್ದು ಇದಕ್ಕೆ ಮುಖ್ಯಕಾರಣ. 
 
ಅತ್ಯುತ್ತಮ ಮಾದರಿಗೆ ಕಳಂಕ ತಟ್ಟಿದೆ. ಹಣದ ಅಪವ್ಯಯ ತಡೆಗಟ್ಟಲು ಮುಂದಾಗುವುದು ಮರೆತ ಅರಣ್ಯ ಭವನ, ಕೆರೆ ನಿರ್ಮಾಣಕ್ಕೆ ತಡೆ ನೀಡಿತು. ಅಗಳದಂತಹ ಸಣ್ಣ ಸಣ್ಣ ರಚನೆಗಳನ್ನು ಮಾತ್ರ ಮಾಡಲು ಸುತ್ತೋಲೆ ಹೊರಡಿಸಿದರು.
 
ಇದರಿಂದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ! ಈಗ ಕಾಡಿನ ಗಿಡಗಳನ್ನು  ಯಂತ್ರಗಳಿಂದ ಕಿತ್ತೆಸೆಯುತ್ತ ಮಾರ್ಚ್ ತಿಂಗಳ ಲೆಕ್ಕ ಮುಗಿಸಲು ಮಳೆನೀರು ಸಂಗ್ರಹ ಕಾಮಗಾರಿಯಲ್ಲಿ ಹಣ ನುಂಗುವ ಮಹಾ ಸಮರ ನಡೆಯುತ್ತಿದೆ.
 
ಮೂರು ದಶಕಗಳಿಂದ ನಿರಂತರವಾಗಿ ಕೋಟ್ಯಂತರ ಹಣ ಖರ್ಚು ಮಾಡಿಯೂ  ಆಡಳಿತಕ್ಕೆ ಅರಣ್ಯದಲ್ಲಿ ಜಲ ಸಂರಕ್ಷಣೆಯ ಸರಿಯಾದ ಮಾದರಿಯ ಸ್ಪಷ್ಟತೆಯಿಲ್ಲವೆಂದರೆ ಏನು ಹೇಳೋಣ?  ಅಭಿವೃದ್ಧಿ ಅನುಭವದ ಪಾಠ ಕಲಿತು ಮುಂದೆ ಹೋಗಬೇಕಾದ ಇಲಾಖೆಯನ್ನು ತೀವ್ರ ‘ಜ್ಞಾನ ಬರ’ ಕಾಡುತ್ತಿದೆ, ಜಲ ಸಂಗ್ರಹ ಕಳಕಳಿಯುಳ್ಳವರಿಗೆ ಆಘಾತ ಮೂಡಿಸುವ ವರ್ತನೆಯಿದೆ.
ಲೇಖಕ ಜಲ ಕಾರ್ಯಕರ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT