ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹದ ಪ್ರಯೋಗಶಾಲೆ

ಬರದ ನಡುವೆ ಹಸಿರು, ಸೂರಜ್‌ ಜಮೀನಿನಲ್ಲಿ ಅಂತರ್ಜಲ ವೃದ್ಧಿ
Last Updated 22 ಮಾರ್ಚ್ 2017, 10:30 IST
ಅಕ್ಷರ ಗಾತ್ರ

ಮಡಿಕೇರಿ: ಆತ ಯಶಸ್ವಿ ಕೃಷಿಕ; ಜಿಲ್ಲೆಯಲ್ಲಿ ಮೂರು ಬಾರಿ ಬರ ಬಂದರೂ ಅಂಜಿಲ್ಲ, ಮಳೆ ಕೊರತೆಯ ನಡುವೆಯೂ ನಗುತ್ತಿದ್ದಾರೆ. ಏಳು ಎಕರೆ ಜಮೀನಿನಲ್ಲಿ ಸದಾ ಹಸಿರು ಉಕ್ಕುತ್ತಿದೆ. ಕಾಫಿ, ಏಲಕ್ಕಿ, ಕಾಳು ಮೆಣಸಿನ ಬಳ್ಳಿ, ಅಡಿಕೆ, ಮಾವು, ಬಾಳೆ ಬೆಳೆಗಳು ನಳನಳಿಸುತ್ತಿವೆ. ಬೇಸಿಗೆ ಬೇಗೆಯಲ್ಲೂ ಕೆರೆಯ ನೀರು ಬತ್ತಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಮಳೆ ನೀರು ಸಂಗ್ರಹ ಯೋಜನೆ ಅಳವಡಿಸಿಕೊಂಡಿರುವುದೆ ಇದಕ್ಕೆ ಕಾರಣ..!

ಇದನ್ನು ನೀವು ಕಣ್ಣಾರೆ ನೋಡಬೇಕಾದರೆ ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕಿನ ಸುಳುಗೋಡು ಗ್ರಾಮದ ಅಜ್ಜಿಕುಟ್ಟೀರ ಎಂ. ಸೂರಜ್‌ ಅವರ ಜಮೀನಿಗೆ ಭೇಟಿ ಕೊಡಬೇಕು. ಯುವ ಉತ್ಸಾಹಿ ಕಾಫಿ ಬೆಳೆಗಾರರ ಸೂರಜ್‌ ತಮ್ಮ 7 ಎಕರೆ ಜಮೀನಿನಲ್ಲಿ ಮಳೆ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ಧಿಯ ಪ್ರಯೋಗ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುತ್ತದೆ. ಆದರೆ, ಇಲ್ಲಿನ ಭೂಪ್ರದೇಶದಿಂದ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಕೆಲವರು ಮಾತ್ರ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಬೀಳುವ ಮಳೆಯ ನೀರನ್ನು ತಮ್ಮ ಜಮೀನಿನಲ್ಲೇ ಇಂಗುವಂತೆ ಮಾಡಿಕೊಂಡಿದ್ದಾರೆ. ಸರ್ಕಾರದ ಯಾವುದೇ ಅನುದಾನಕ್ಕೂ ಕಾಯದೇ ತಮ್ಮ ಜಮೀನಿನಲ್ಲಿ ನೀರಿನ ಪಸೆ ಆರದಂತೆ ನೋಡಿಕೊಂಡಿದ್ದಾರೆ! ಅಂತಹವರ ಸಾಲಿನಲ್ಲಿ ಸೂರಜ್‌ ಸಹ ಒಬ್ಬರು.

1979ರಲ್ಲಿ ತೆಗೆದ 50 ಅಡಿ ಆಳದ ತೆರೆದ ಬಾವಿಯೊಂದಲ್ಲಿ ಸಾಕಷ್ಟು ವರ್ಷಗಳ ಕಾಲ ನೀರಿತ್ತು. ಬೆಳೆ ಹಾಗೂ ಕುಡಿಯಲು ಇದೇ ನೀರನ್ನು ಸೂರಜ್‌ ಕುಟುಂಬವು ಆಶ್ರಯಿಸಿತ್ತು. ಕಾಲಕ್ರಮೇಣ ಬಾವಿಯಲ್ಲಿ ಜಲ ಕಡಿಮೆ ಆಯಿತು. 1994ರಲ್ಲಿ ಬಾವಿಯಲ್ಲಿ ಸಂಪೂರ್ಣ ನೀರು ಬತ್ತಿ ಹೋಯಿತು. ಬೆಳೆಗಳು ಸೊರಗಲು ಆರಂಭಿಸಿದವು, ಕುಡಿಯುವ ನೀರಿಗೆ ಸಮಸ್ಯೆ ಆರಂಭವಾಯಿತು.

ಆಗ ಅದೇ ಬಾವಿಯನ್ನು ಮತ್ತಷ್ಟು ಆಳ ಇಳಿಸಿ, ರಿಂಗ್‌ ಅಳವಡಿಸಿಕೊಂಡರು. ಅದೂ ಕೈಕೊಟ್ಟ ಬಳಿಕ ಕೊಳವೆಬಾವಿ ಕೊರೆಸಿದರು. ಅದರಲ್ಲೂ ಕಡಿಮೆ ಪ್ರಮಾಣದ ನೀರು ಬರಲಾರಂಭಿಸಿದಾಗ ಮಳೆ ನೀರು ಸಂಗ್ರಹಕ್ಕೆ ಮುಂದಾದರು.

ಸೂರಜ್‌ ತಮ್ಮ ಸ್ವಂತ ಜಮೀನಿನಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯ ಜತೆಗೆ ನೂರಾರು ರೈತರಿಗೆ ಪ್ರೇರಣೆ ನೀಡುತ್ತಿದ್ದಾರೆ. ನೀರಿನ ಸಂರಕ್ಷಣೆ ಕುರಿತು 800ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

‘2003ರಲ್ಲಿ ಮೊದಲ ಬಾರಿಗೆ ಕೊಳವೆಬಾವಿಗೆ ನೀರು ಇಂಗಿಸುವ ಘಟಕ ಅಳವಡಿಸಿಕೊಂಡೆ. ಅಂದಿನಿಂದ ಪ್ರತಿ ಹನಿ ನೀರನ್ನೂ ವ್ಯರ್ಥವಾಗಲು ಬಿಡಲಿಲ್ಲ. ನೋಡ ನೋಡುತ್ತಿದ್ದಂತೆಯೇ ಅಂತರ್ಜಲ ಮಟ್ಟ ವೃದ್ಧಿಯಾಯಿತು. ಇದರಿಂದ ಪ್ರೇರಣೆಗೊಂಡು 15 ಮೀಟರ್‌ ದೂರದಲ್ಲಿ ಮತ್ತೊಂದು ಸಣ್ಣ ತೆರೆದ ಬಾವಿ ತೆಗೆಸಿ ಶೋಧಕ ಅಳವಡಿಸಿದೆ.

ಮನೆ ಹಾಗೂ ಕಾಫಿ ಕಣದಲ್ಲಿ ಬೀಳುವ ಮಳೆಯ ನೀರನ್ನು ಬಾವಿಯಲ್ಲಿ ಸಂಗ್ರಹವಾಗುವಂತೆ ನೋಡಿಕೊಂಡೆ. ಮತ್ತಷ್ಟು ಅಂತರ್ಜಲ ಹೆಚ್ಚಾಯಿತು. ಗದ್ದೆಗಳು ಬೇಸಿಗೆಯಲ್ಲಿ ಬಾಯ್ಬಿಟ್ಟಿರುತ್ತಿದ್ದವು. ಇದೀಗ ಅಂತಹ ಪರಿಸ್ಥಿತಿ ಇಲ್ಲ’ ಎಂದು ಸೂರಜ್‌ ತಮ್ಮ ಯಶಸ್ಸಿನ ಹಿಂದಿನ ಗುಟ್ಟನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಕೃಷಿ, ಕೈಗಾರಿಕೆ, ನಿತ್ಯ ಜೀವನಕ್ಕೆ ನೀರು ಅತ್ಯವಶ್ಯ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಭೀಕರ ದಿನಗಳು ಬರಲಿವೆ. ಆದ್ದರಿಂದ ಮಳೆಯ ನೀರು ಸಂಗ್ರಹಿಸುವುದು ಅನಿವಾರ್ಯ. 2003ರಲ್ಲಿ ನಾನು ಮಾಡಿದ ಪ್ರಯೋಗದಿಂದ ನೀರಿನ ಸಮಸ್ಯೆ ದೂರವಾಗಿದೆ.

ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 54ರಿಂದ 60 ಇಂಚು ಮಳೆ ಸುರಿಯುತ್ತಿತ್ತು. ಆದರೆ, ಕೆಲವು ವರ್ಷಗಳಿಂದ ಮಳೆ 30 ಇಂಚಿಗಿಂತಲೂ ಕಡಿಮೆ ಮಳೆ ಆಗುತ್ತಿರುವುದು ಆತಂಕಕಾರಿ ವಿಚಾರ. ಬರೀ ಕೊಳವೆಬಾವಿ, ತೆರೆದ ಬಾವಿ ತೆಗೆಸಿದರೆ ಸಾಲದು; ಮಳೆಯ ನೀರು ಇಂಗುವಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಸೂರಜ್‌.

*
ಕಣ, ಮನೆಯ ಚಾವಣಿಯಿಂದ ಪ್ರತಿ ವರ್ಷ 56 ಲಕ್ಷ ಲೀಟರ್‌ ಮಳೆಯ ನೀರು ಭೂಮಿಯೊಳಗೆ ಇಂಗುತ್ತಿದೆ. ಮಳೆಯ ನೀರನ್ನು ಇಂಗಿಸಿಕೊಂಡರೆ ಸಮಸ್ಯೆ ಆಗುವುದಿಲ್ಲ.
-ಅಜ್ಜಿಕುಟ್ಟೀರ ಎಂ. ಸೂರಜ್‌ ,
ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT