ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಮುರನಾಳ ಗ್ರಾ.ಪಂ ಸೆಡ್ಡು!

ಮೂಲಸೌಕರ್ಯ ಕೊರತೆ: ಯುಕೆಪಿ ಸಂತ್ರಸ್ತರ ಪುನರ್ವಸತಿ ಕೇಂದ್ರಗಳ ಹಸ್ತಾಂತರಿಸಿಕೊಳ್ಳಲು ನಿರಾಕರಣೆ
Last Updated 23 ಮಾರ್ಚ್ 2017, 10:08 IST
ಅಕ್ಷರ ಗಾತ್ರ

ಬಾಗಲಕೋಟೆ: ಮೂಲಸೌಕರ್ಯ ಕೊರತೆ ಕಾರಣ, ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ನಾಲ್ಕು ಪುನರ್ವಸತಿ ಕೇಂದ್ರಗಳನ್ನು ಹಸ್ತಾಂತರಿಸಿಕೊಳ್ಳಲು ತಾಲ್ಲೂಕಿನ ಮುರನಾಳ ಗ್ರಾಮ ಪಂಚಾಯ್ತಿ ನಿರಾಕರಿಸಿದೆ. ಹಸ್ತಾಂತರ ಆದೇಶ ತಿರಸ್ಕರಿಸಿ ಠರಾವು ಪಾಸು ಮಾಡುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

ಗ್ರಾಮಸಭೆಯ ಒಪ್ಪಿಗೆ ಪಡೆಯದೇ ಸರ್ಕಾರಿ ಆದೇಶವನ್ನು ಒಪ್ಪಿಕೊಂಡು ಸಹಿ ಮಾಡಿದ್ದಾರೆ ಎಂದು ಆರೋಪಿಸಿ ಪಿಡಿಓ ಅವರನ್ನು ಅದೇ ದಿನ ಪಂಚಾಯ್ತಿಯಿಂದ ವಾಪಸ್‌ ಕಳುಹಿಸಲಾಗಿದೆ.

ತಾಲ್ಲೂಕಿನ ಮುರನಾಳ, ವೀರಾಪುರ, ಬನ್ನಿದಿನ್ನಿ ಹಾಗೂ ಕೆಸನೂರು ಪುನರ್ವಸತಿ ಕೇಂದ್ರಗಳನ್ನು ಮುರನಾಳ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಿ, ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್‌ನಿರ್ಮಾಣ ವಿಭಾಗದ ಆಯುಕ್ತರು ಇದೇ ತಿಂಗಳ 10ರಂದು ಆದೇಶ ಹೊರಡಿಸಿದ್ದಾರೆ.

ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಬಂಟನೂರ ನೇತೃತ್ವದಲ್ಲಿ ಅದೇ ದಿನ ಸಂಜೆ ಸಭೆ ನಡೆಸಿದ ಪಂಚಾಯ್ತಿಯ 18 ಮಂದಿ ಸದಸ್ಯರು, ಆದೇಶ ತಿರಸ್ಕರಿಸಿ ಠರಾವು ಮಾಡಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸವಿತಾ ಬಿ.ನಂದೆಪ್ಪನವರ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಈ ತೀರ್ಮಾನದ ವಿರುದ್ಧ ಅವರು ಕೆಲಸ ಮಾಡಲು ಮುಂದಾದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಠರಾವಿನಲ್ಲಿ ಉಲ್ಲೇಖಿಸಲಾಗಿದೆ.

ಅಭಿವೃದ್ಧಿ ಮರೀಚಿಕೆ: ‘ಪುನರ್ವಸತಿ ಕೇಂದ್ರಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಚರಂಡಿ ವ್ಯವಸ್ಥೆಯಂತಹ ಅಗತ್ಯ   ಮೂಲಸೌಕರ್ಯಗಳೂ ಇಲ್ಲ. ಅವುಗಳನ್ನು ಕಲ್ಪಿಸದೇ ಈಗ ಹಸ್ತಾಂತರಿಸಿದರೆ ಮುಂದೆ ಪಂಚಾಯ್ತಿಯ ಸೀಮಿತ ಸಂಪನ್ಮೂಲದಲ್ಲಿ ಸೌಕರ್ಯ ಕಲ್ಪಿಸುವುದು ಹೇಗೆ’ ಎಂದು ಸದಸ್ಯ ಶಿವಕುಮಾರ ಕೋವಳ್ಳಿ ಪ್ರಶ್ನಿಸುತ್ತಾರೆ.

‘ಕೇಂದ್ರಗಳಲ್ಲಿನ ಸಂತ್ರಸ್ತರಿಗೆ ನಿವೇಶನ ನೀಡಿ, ಹಕ್ಕುಪತ್ರಗಳನ್ನು ನೀಡಲಾಗಿದೆ. ಕೆಲವು ಕಡೆ ಮೂಲ ಮಾಲೀಕರು ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾಳೆ ವ್ಯತಿರಿಕ್ತ ತೀರ್ಪು ಬಂದರೆ ಸಂತ್ರಸ್ತರ ನೆರವಿಗೆ ನಿಲ್ಲಬೇಕಾದವರು ಯಾರು’ ಎಂದು ಅವರು ಕೇಳುತ್ತಾರೆ.

ಮೊದಲು ಸೌಲಭ್ಯ ಕಲ್ಪಿಸಲಿ: ‘ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮುರನಾಳ ಗ್ರಾಮ ಪಂಚಾಯ್ತಿಗೆ ₹9 ಕೋಟಿ ಕೊಡುವುದಾಗಿ ಸರ್ಕಾರ ಹೇಳಿದೆ. 150 ಎಕರೆ ವಿಸ್ತೀರ್ಣದ ಕೇಂದ್ರಗಳಲ್ಲಿ ಸೌಕರ್ಯ ಕಲ್ಪಿಸಲು ಈ ಹಣ ಸಾಲುವುದಿಲ್ಲ. ಇನ್ನೂ ಶೇ 80ರಷ್ಟು ಕೆಲಸ ಆಗಬೇಕಿದೆ. ಅವರೇ ಸೌಕರ್ಯ ಕಲ್ಪಿಸಿ ನಂತರ ಹಸ್ತಾಂತರಿಸಲಿ’ ಎಂದು ಕೋವಳ್ಳಿ ಹೇಳುತ್ತಾರೆ.

ಶೇ 70 ಕೇಂದ್ರಗಳ ಹಸ್ತಾಂತರ ಪೂರ್ಣ
ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯ 137 ಪುನರ್ವಸತಿ ಕೇಂದ್ರಗಳನ್ನು 60 ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರಿಸುವ ಕಾರ್ಯ ಆರಂಭವಾಗಿದ್ದು ಈಗಾಗಲೇ ಶೇ 70ರಷ್ಟು ಕೇಂದ್ರಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಮಾರ್ಚ್ 31ರೊಳಗೆ ಎಲ್ಲಾ ಕೇಂದ್ರಗಳನ್ನೂ ಹಸ್ತಾಂತರಿಸಲಾಗುತ್ತಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್‌ವಸತಿ ಹಾಗೂ ಪುನರ್‌ ನಿರ್ಮಾಣ ವಿಭಾಗದ ಆಯುಕ್ತ ಶಿವಯೋಗಿ ಕಳಸದ ‘ಪ್ರಜಾವಾಣಿ’ಗೆ ತಿಳಿಸಿದರು.

₹192 ಕೋಟಿ ಬಿಡುಗಡೆ: ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ₹192 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ಈಗಾಗಲೇ ₹189 ಕೋಟಿ ವೆಚ್ಚದಲ್ಲಿ 343 ಕಾಮಗಾರಿಗಳಿಗೆ ಅನುಮೋದನೆ ನೀಡಿ, ಟೆಂಡರ್ ಕರೆಯಲಾಗಿದೆ ಎಂದರು.

*
ಹಸ್ತಾಂತರ ಸರ್ಕಾರದ ತೀರ್ಮಾನ. ಅದನ್ನು  ನಾವು ಪಾಲಿಸಿದ್ದೇವೆ. ಆರಂಭದಲ್ಲಿ ವಿರೋಧ ಸಹಜ. ಮುರನಾಳ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರ ಮನವೊಲಿಸುತ್ತೇವೆ.
-ಶಿವಯೋಗಿ ಕಳಸದ,
ಆಯುಕ್ತರು, ಕೃಷ್ಣಾ ಮೇಲ್ದಂಡೆ ಯೋಜನೆ (ಪುನರ್ವಸತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT