ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿವಾಲ್ವರ್ ಕದ್ದವರು ಮಂಗಳೂರಿನಲ್ಲಿ ಸಿಕ್ಕರು

ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳ ಮುನಿಶಾಮಪ್ಪ ಗನ್‌ಮ್ಯಾನ್‌ ರಿವಾಲ್ವರ್ ನಾಪತ್ತೆ ಪ್ರಕರಣ
Last Updated 23 ಮಾರ್ಚ್ 2017, 19:50 IST
ಅಕ್ಷರ ಗಾತ್ರ
ಬೆಂಗಳೂರು: ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಗನ್‌ಮ್ಯಾನ್‌ನಿಂದ ರಿವಾಲ್ವರ್ ಕದ್ದೊಯ್ದಿದ್ದ ಯುವಕರಿಬ್ಬರು ಮಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
 
‘ಮಂಗಳೂರು ಕುಳಾಯಿ ಗ್ರಾಮದ ಧನುಷ್ (19) ಹಾಗೂ ಆಶ್ರಯ ಕಾಲೊನಿಯ ವಿಜಯ್ ಆಲಿಯಾಸ್ ಆಂಜನೇಯ (21) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ರಿವಾಲ್ವರ್ ಹಾಗೂ 15 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
ಸುಲಿಗೆಗೆ ಬಂದಿದ್ದರು: ‘ಪೇಂಟರ್ ಆಗಿರುವ ಧನುಷ್ ಹಾಗೂ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸ ಮಾಡುವ ವಿಜಯ್ ಎರಡೂವರೆ ವರ್ಷಗಳಿಂದ ಪರಿಚಿತರು. ಮಾದಕ ವ್ಯಸನಿಗಳಾದ ಇವರು, ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
 
‘ಸುಲಿಗೆ ಮಾಡಲೆಂದೇ ಫೆ.23ರ ರಾತ್ರಿ ಮಂಗಳೂರಿನಿಂದ ಬೈಕ್‌ನಲ್ಲಿ ಹೊರಟು ನಗರಕ್ಕೆ ಬಂದಿದ್ದ ಆರೋಪಿಗಳು, ಯಶವಂತಪುರದ ಲಾಡ್ಜ್‌ವೊಂದರಲ್ಲಿ ತಂಗಿದ್ದರು.

ಮರುದಿನ ರಾತ್ರಿ 11 ಗಂಟೆ ಸುಮಾರಿಗೆ ಯಲಹಂಕದ ಉನ್ನಿಕೃಷ್ಣನ್ ರಸ್ತೆಗೆ ತೆರಳಿದ ಅವರು, ಅಲ್ಲಿನ ತಿರುಮಲ ಡಾಬಾ ಬಳಿ ಕುಸಿದು ಬಿದ್ದಿದ್ದ ನರಸಿಂಹಮೂರ್ತಿ ಅವರಿಂದ ಸರ್ವಿಸ್ ರಿವಾಲ್ವರ್, 2 ಮೊಬೈಲ್‌ಗಳು ಹಾಗೂ ₹ 6.5 ಸಾವಿರ ನಗದು ದೋಚಿ ಪರಾರಿಯಾಗಿದ್ದರು.
 
ನಂತರ ಲಾಡ್ಜ್ ಮರಳಿದ ಆರೋಪಿಗಳು, ಬೆಳಿಗ್ಗೆಯವರೆಗೂ ಮಲಗಿ ನಂತರ ಮಂಗಳೂರಿಗೆ ವಾಪಸಾಗಿದ್ದರು. ಇತ್ತ ಬೆಳಗಿನ ಜಾವ 4 ಗಂಟೆಗೆ ಎಚ್ಚರಗೊಂಡ ನರಸಿಂಹಮೂರ್ತಿ, ರಿವಾಲ್ವರ್ ಇಲ್ಲದಿರುವುದನ್ನು ಕಂಡು ಗಾಬರಿಗೊಂಡಿದ್ದರು. ನಂತರ ಶಾಸಕರ ಸೂಚನೆಯಂತೆ ಯಲಹಂಕ ಉಪನಗರ ಠಾಣೆಗೆ ದೂರು ಕೊಟ್ಟಿದ್ದರು.
 
ಐಎಂಇಐ ಸುಳಿವು: ‘ಗನ್‌ಮ್ಯಾನ್‌ನಿಂದ ದೋಚಿದ ಮೊಬೈಲ್‌ಗಳನ್ನು ಆರೋಪಿಗಳು ಮಂಗಳೂರಿನ ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದರು.

ಐಎಂಇಐ ಸಂಖ್ಯೆ ಆಧರಿಸಿ  ತನಿಖೆ ಪ್ರಾರಂಭಿಸಿದಾಗ, ಮೊಬೈಲ್ ಯಾವ ಪ್ರದೇಶದಿಂದ ನಿರ್ವಹಣೆಯಾಗುತ್ತಿದೆ ಎಂಬುದು ತಿಳಿಯಿತು. ಕೂಡಲೇ ಎಎಸ್‌ಐ ಪರಮೇಶ್ವರ ಉಪಾಧ್ಯಾಯ ಅವರ ತಂಡ ಮಂಗಳೂರಿಗೆ ತೆರಳಿತು’ ಎಂದು ತನಿಖಾಧಿಕಾರಿಗಳು ಕಾರ್ಯಾಚರಣೆಯನ್ನು ವಿವರಿಸಿದರು.
 
‘ಮೊಬೈಲ್ ಖರೀದಿಸಿದವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಧನುಷ್‌ನ ವಿವರ ಸಿಕ್ಕಿತು. ಆತನ ತಂದೆ, ಬೈಕಂಪಾಡಿಯ ಸಿಮೆಂಟ್ ಮಾರಾಟ ಮಳಿಗೆಯಲ್ಲೇ ಕೆಲಸ ಮಾಡುತ್ತಿದ್ದ ಕಾರಣ ತಂಡ ಮೊದಲು ಅವರನ್ನೇ ವಿಚಾರಣೆ ನಡೆಸಿದರು. ಮಗನೇ ಈ ಕೃತ್ಯ ಮಾಡಿರಬಹುದೆಂದು ಶಂಕಿಸಿದ ತಂದೆ, ಪೊಲೀಸರನ್ನು ನೇರವಾಗಿ ತಮ್ಮ ಮನೆಗೆ ಕರೆದುಕೊಂಡು ಹೋದರು.’
 
‘ಈ ವೇಳೆ ಧನುಷ್ ಪಣಂಬೂರು ಬೀಚ್‌ಗೆ ಹೋಗಿದ್ದ. ಸಿಬ್ಬಂದಿ ಇಡೀ ರಾತ್ರಿ ಮನೆ ಸಮೀಪ ಕಾದರೂ, ಆರೋಪಿ ಬರಲಿಲ್ಲ. ಮಂಗಳವಾರ ಬೆಳಿಗ್ಗೆ ಮನೆಗೆ ಬಂದ ಧನುಷ್‌ನನ್ನು ಸಿಬ್ಬಂದಿ ವಶಕ್ಕೆ ಪಡೆದುಕೊಂಡರು. ನಂತರ ಸಮೀಪದ ಪಾಳು ಮನೆಯೊಂದರಲ್ಲಿ ಅಡಗಿಸಿಟ್ಟಿದ್ದ ರಿವಾಲ್ವರನ್ನೂ ಜಪ್ತಿ ಮಾಡಿದರು. ಆತ ನೀಡಿದ ಸುಳಿವಿನಿಂದ ವಿಜಯ್‌ನನ್ನೂ ವಶಕ್ಕೆ ಪಡೆದರು’ ಎಂದು ಮಾಹಿತಿ ನೀಡಿದರು.
 
ಅಂದು ಆಗಿದ್ದೇನು
ಪಿಳ್ಳ ಮುನಿಶಾಮಪ್ಪ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರದ ಮತದಾರರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮನವೊಲಿಸಲು ಫೆ.24ರಂದು ಅವರ ಮನೆ ಬಳಿ ಬಂದಿದ್ದರು. ಅದಕ್ಕೆ ಮಣಿದ ಅವರು, ಅಂದು ಮಧ್ಯಾಹ್ನ ವಿಧಾನಸಭಾ ಅಧ್ಯಕ್ಷರನ್ನು  ಭೇಟಿಯಾಗಿ ರಾಜೀನಾಮೆ ಹಿಂಪಡೆದಿದ್ದರು.

ಈ ಪ್ರಕ್ರಿಯ ಪೂರ್ಣಗೊಂಡ ನಂತರ ಸಂಜೆವರೆಗೂ ಮುಖಂಡರ ಜತೆಗಿದ್ದ ಅವರು, ರಾತ್ರಿ 11 ಗಂಟೆ ಸುಮಾರಿಗೆ ವಿಶ್ರಾಂತಿಗೆಂದು ಕಮ್ಮಗೊಂಡನಹಳ್ಳಿಯ ತೋಟದ ಮನೆಗೆ ಹೊರಟಿದ್ದರು. ಈ ವೇಳೆ  ಎಂ.ಎಸ್.ಪಾಳ್ಯದಲ್ಲಿ ನರಸಿಂಹಮೂರ್ತಿ ಅವರನ್ನು ಕಾರಿನಿಂದ ಇಳಿಸಿದ ಶಾಸಕ, ಆಟೊದಲ್ಲಿ ಮನೆಗೆ ಹೋಗುವಂತೆ ಹಣ ಕೊಟ್ಟು ಕಳುಹಿಸಿದ್ದರು.

ಅಲ್ಲಿ ಆಟೊ ಹತ್ತಿದ ನರಸಿಂಹಮೂರ್ತಿ, ಯಲಹಂಕ ಉಪನಗರ ಮಾರ್ಗವಾಗಿ ಮನೆ ಕಡೆ ಹೊರಟಿದ್ದರು. ಚಾಲಕನಿಗೆ ಹೇಳಿ ಉನ್ನಿಕೃಷ್ಣನ್ ರಸ್ತೆಯಲ್ಲಿ  ಆಟೊ ನಿಲ್ಲಿಸಿದ ಅವರು, ಮೂತ್ರ ವಿಸರ್ಜನೆಗೆ ತೆರಳಿದಾಗ ಕುಸಿದು ಬಿದ್ದರು. ಇದರಿಂದ ಗಾಬರಿಗೊಂಡ ಚಾಲಕ, ಆಟೊ ತೆಗೆದುಕೊಂಡು ಹೊರಟು ಹೋಗಿದ್ದ. ಆ ನಂತರ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ರಿವಾಲ್ವರ್  ದೋಚಿ ಪರಾರಿಯಾಗಿದ್ದರು.

ನರಸಿಂಹಮೂರ್ತಿ ಅವರು ನಿಶ್ಶಕ್ತಿಯಿಂದ ಕುಸಿದು ಬಿದ್ದಿರಬಹುದು ಎಂದು ವೈದ್ಯರು ಹೇಳಿದ್ದಾರೆ. ರಿವಾಲ್ವರ್ ಜೋಪಾನವಾಗಿ ಇಟ್ಟುಕೊಳ್ಳುವಂತೆ ಸಿಎಆರ್‌ನ ಹಿರಿಯ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT