ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಿಂದ ಕೆಎಸ್‌ಆರ್‌ಟಿಸಿ ಘಟಕ

ಜಿಲ್ಲಾ ಘಟಕವನ್ನಾಗಿಸಲು ಪ್ರಸ್ತಾವನೆ ಸಲ್ಲಿಸಲು ಸೂಚನೆ
Last Updated 24 ಮಾರ್ಚ್ 2017, 4:46 IST
ಅಕ್ಷರ ಗಾತ್ರ

ಮಧುಗಿರಿ: ಮಧುಗಿರಿಯಲ್ಲಿ ಕೆಎಸ್ಆರ್‌ಟಿಸಿ ಘಟಕ ಏಪ್ರಿಲ್ ಅಂತ್ಯದಲ್ಲಿ ಆರಂಭಗೊಳ್ಳಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ತಿಳಿಸಿದರು.

ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಾರಿಗೆ ಸಂಸ್ಥೆ ಘಟಕದ ಕಾಮಗಾರಿಯನ್ನು ಬುಧವಾರ ಶಾಸಕ ಕೆ.ಎನ್.ರಾಜಣ್ಣ, ಸ್ಥಳೀಯ ಜನಪ್ರತಿನಿಧಿಗಳು, ಕೆಎಸ್ಆರ್‌ಟಿಸಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾತನಾಡಿದರು.

ಘಟಕದ ಕಾಮಗಾರಿ ಈಗಾಗಲೇ ಶೇ 80 ರಷ್ಟು ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಬಾಕಿ ಕಾಮಗಾರಿಯೂ ಮುಕ್ತಾಯವಾಗಲಿದೆ. ಪಟ್ಟಣದಲ್ಲಿರುವ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ಉನ್ನತೀಕರಿಸುವ ಉದ್ದೇಶದಿಂದ 2ನೇ ಹಂತದ ಕಾಮಗಾರಿಗೆ ₹ 85 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲಾ ಘಟಕಕ್ಕೆ ಪ್ರಸ್ತಾವನೆ: ಮಧುಗಿರಿ ಘಟಕವನ್ನು ಜಿಲ್ಲಾ ಘಟಕವನ್ನಾಗಿ ಉನ್ನತೀಕರಿಸಲು ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಒದಗಿಸಿಕೊಂಡು ತಕ್ಷಣವೇ ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿರು, ಶಾಸಕ ಕೆ.ಎನ್.ರಾಜಣ್ಣ ಬೇಡಿಕೆಯಂತೆ ಸಾರಿಗೆ ಸಂಸ್ಥೆಯು ಉದ್ಘಾಟನೆ ವೇಳೆಗೆ 50 ಮಿನಿ ಬಸ್‌ ಹಾಗೂ ಒಂದು ಓಲ್ವೋ ಬಸ್‌  ನೀಡುವುದಾಗಿ ತಿಳಿಸಿದರು.

ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಹಲವು ಕಾನೂನಾತ್ಮಕ ತೊಡಕುಗಳಿಂದಾಗಿ ಕಾಮಗಾರಿ ತಡವಾಯಿತು. ನನ್ನ ಅಧ್ಯಕ್ಷತೆಯಲ್ಲಿ ಡಿಪೋ ಆರಂಭಕ್ಕೆ ವಿಘ್ನ ತರಲು ಪ್ರಯತ್ನಿಸುತ್ತಿರುವವರ ಕಾರ್ಯ ಸಫಲವಾಗುವುದಿಲ್ಲ. ಏಪ್ರಿಲ್ ಅಂತ್ಯಕ್ಕೆ ಘಟಕ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

ಘಟಕ ಆರಂಭವಾದ ನಂತರ ತಾಲೂಕಿನ 39 ಗ್ರಾ.ಪಂ ವ್ಯಾಪ್ತಿಗೂ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲು ಇಲಾಖಾಧಿಕಾರಿಗಳು ಈಗಾಗಲೇ ಸಮೀಕ್ಷೆ  ನಡೆಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಶಾಲಾ ಅವಧಿಗೆ ಪೂರಕವಾಗುವಂತೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಎಸ್.ಆರ್.ಶಾಂತಲಾರಾಜಣ್ಣ, ಜಿ.ಜೆ.ರಾಜಣ್ಣ, ಉಪವಿಭಾಗಾಧಿಕಾರಿ ಅನಿತಾಲಕ್ಷ್ಮೀ, ಲೋಕೋಪಯೋಗಿ ಇಲಾಖೆಯ ಇ.ಇ ಟಿ.ಜಯಪ್ರಕಾಶ್, ತಹಶೀಲ್ದಾರ್ ಎಚ್.ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT