ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದನಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಸುಕ್ರಿ

ಟ್ಯಾಗೋರ್‌ ಚಿತ್ರಕಲಾ ಮಹಾವಿದ್ಯಾಲಯದಿಂದ ಸಮೂಹ ಚಿತ್ರಕಲಾ ಪ್ರದರ್ಶನ
Last Updated 24 ಮಾರ್ಚ್ 2017, 6:57 IST
ಅಕ್ಷರ ಗಾತ್ರ

ಕಾರವಾರ: ಕಲಾವಿದ ಬಿಡಿಸುವ ಚಿತ್ರಗಳು ಕೇವಲ ಬಣ್ಣಗಳ ಮಿಶ್ರಣವಲ್ಲ. ಅವುಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಲಾಕೃತಿಗಳು. ಹೀಗಾಗಿ ಚಿತ್ರಕಲೆಗೆ ಹಾಗೂ ಕಲಾವಿದನಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಜಾನಪದ ಕಲಾವಿದೆ ಸುಕ್ರಿ ಬೊಮ್ಮು ಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಟ್ಯಾಗೋರ್‌ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಒಂದು ದಿನದ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೇಖಾ ಚಿತ್ರಗಳಲ್ಲಿಯೂ ಜೀವಂತಿಕೆಯನ್ನು ತುಂಬಬಲ್ಲ ಶಕ್ತಿ ಕಲಾವಿದನಿಗೆ ಮಾತ್ರ ಇದೆ ಎಂದು ಹೇಳಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ವಿ.ಎಂ.ಹೆಗಡೆ ಮಾತನಾಡಿ, ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಎಲ್ಲ ಚಿತ್ರಗಳೂ ಗಮನ ಸೆಳೆಯುತ್ತಿವೆ. ಕಲಾ ಕ್ಷೇತ್ರದಲ್ಲಿ ಇಂದು ಚಿತ್ರ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶಗಳಿದ್ದು, ಕಲಾವಿದರಿಂದ ಸಾಮಾಜಿಕ ಕಳಕಳಿಯ ಚಿತ್ರಗಳು ರಚನೆಯಾಗಬೇಕು ಎಂದು ಹೇಳಿದರು.

ಚಂದ್ರಕಾಂತ ಬಲೆಸಾರ ಮಾತನಾಡಿ, ಚಿತ್ರಕಲೆಯಿಂದ ಸಮಾಜಕ್ಕೆ ಉತ್ತಮ ಸಂದೇಶಗಳು ರವಾನೆಯಾಗಬೇಕು. ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗದೆ ಸ್ವ- ಇಚ್ಛೆಯಿಂದ, ಸ್ವಂತ ಕಲ್ಪನೆಯ ಮೂಲಕ ಚಿತ್ರಗಳನ್ನು ಬಿಡಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು.

ವಿದ್ಯಾರ್ಥಿ ಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೇ ಚಿತ್ರಕಲೆಯಂತಹ ಕಲಾಪ್ರಕಾರಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲೆ ಎನ್ನುವುದು ಬೇರೆಯವರು ನೀಡಿ ಬರುವ ವಿದ್ಯೆಯಲ್ಲ. ಅದು ನೈಸರ್ಗಿಕದತ್ತವಾದ ಕೊಡುಗೆ ಎಂದು ಹೇಳಿದರು. ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಆರ್.ನಾಯಕ, ರೋಹಿತ್ ಆಗೇರ, ಸರಿತಾ ಗೌಡ, ಜಾಫರ್ ಉಪಸ್ಥಿತರಿದ್ದರು.

ಕಲಾಸಕ್ತರ ಗಮನ ಸೆಳೆದ ಚಿತ್ರಗಳು 
ಜಾನಪದ ಕಲಾವಿದೆ ಸುಕ್ರಿ ಬೊಮ್ಮು ಗೌಡ, ರಾಧಾ- ಕೃಷ್ಣರ ಜೋಡಿ, ಗಣಪತಿಯ ವಿಗ್ರಹ, ನಾಟ್ಯ ದೇವತೆ, ಸೀತಾರಾಮರ ಜೋಡಿ, ದೀಪ ಹಿಡಿದ ಯುವತಿ, ಹಳ್ಳಿ ಸೊಗಡಿನ ಚಿತ್ರಗಳು, ಮಹಿಳೆ ಮತ್ತು ಪ್ರಕೃತಿಯನ್ನು ಹೋಲಿಕೆ ಮಾಡಿ ಬಿಡಿಸಿದ ಚಿತ್ರಗಳು ಕಲಾಸಕ್ತರ ಮನಸ್ಸಿಗೆ ಮುದ ನೀಡಿದವು.

ಚಿತ್ರಕಲಾ ಮಹಾವಿದ್ಯಾಲಯದ ಸುಮಾರು 15ಕ್ಕೂ ವಿದ್ಯಾರ್ಥಿಗಳು ಬಿಡಿಸಿದ ಸುಮಾರು 50ಕ್ಕೂ ಅಧಿಕ ಚಿತ್ರಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಬೆಳಿಗ್ಗೆ 11 ರಿಂದ ರಾತ್ರಿ 8ವರೆಗೆ ನಡೆದ ಚಿತ್ರ ಪ್ರದರ್ಶನವನ್ನು ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ವೀಕ್ಷಿಸಿದರು.

*
ಚಿತ್ರಕಲಾಕೃತಿಗಳು ಹಾಗೂ ಕಲಾವಿದರಿಂದ ಸಾಮಾಜಿಕ ಬದಲಾವಣೆ ಸಾಧ್ಯವಿದೆ.
-ಡಾ.ವಿ.ಎಂ.ಹೆಗಡೆ,
ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT