ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಚಿಕಿತ್ಸಾಲಯ ವಾಹನದಲ್ಲೇ ಓದಿ ರ‍್ಯಾಂಕ್‌!

ಐಎಫ್‌ಎಸ್‌: ಬಳ್ಳಾರಿಯ ಪಶುವೈದ್ಯಾಧಿಕಾರಿ ಡಾ.ಬಸವರಾಜ್‌ ಪರಿಶ್ರಮಕ್ಕೆ ತಕ್ಕ ಪ್ರತಿಫಲ
Last Updated 24 ಮಾರ್ಚ್ 2017, 7:17 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯ ದೇವರಕಾಡಿನ ಸಂಸ್ಕೃತಿ, ನನ್ನಲ್ಲಿದ್ದ ಅರಣ್ಯದ ಬಗೆಗಿನ ಆಸಕ್ತಿ ಇಂಡಿಯನ್‌ ಫಾರೆಸ್ಟ್ ಸರ್ವಿಸ್‌ (ಐಎಫ್‌ಎಸ್‌) ಪರೀಕ್ಷೆ ತೆಗೆದುಕೊಳ್ಳುವಂತೆ ಮಾಡಿತು. ಸಮಯ ಸಿಕ್ಕಾಗ ಸಂಚಾರಿ ಪಶು ಚಿಕಿತ್ಸಾಲಯದ ವಾಹನದಲ್ಲೇ ಕುಳಿತು ಅಭ್ಯಾಸ ಮಾಡಿದ್ದರ ಫಲವಾಗಿ ರಾಷ್ಟ್ರಕ್ಕೆ 34ನೇ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು...’

–ಇದು ಕೊಡಗಿನ ವಿರಾಜಪೇಟೆ ತಾಲ್ಲೂಕು ಸಂಚಾರಿ ಪಶುವೈದ್ಯಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಮೋರಿಗೇರಿ ಗ್ರಾಮದ ಡಾ.ಕೆ.ಎನ್‌. ಬಸವರಾಜ್‌ ಅವರ ಮಾತು.

ಕೇಂದ್ರ ನಾಗರಿಕ ಸೇವಾ ಆಯೋಗವು (ಯುಪಿಎಸ್‌ಸಿ) ನಡೆಸಿದ 2016–17ನೇ ಸಾಲಿನ ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆಯ ಮೂಲಕ ಬಸವರಾಜ್‌ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅಣಿಯಾಗಿದ್ದಾರೆ.

ಆಗಸ್ಟ್‌ನಲ್ಲಿ ನಡೆದಿದ್ದ ಪ್ರಿಲಿಮನರಿ ಪರೀಕ್ಷೆಯಲ್ಲಿ 1,500 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಫೆಬ್ರುವರಿಯಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ 330 ಅಭ್ಯರ್ಥಿಗಳಲ್ಲಿ 110 ಮಂದಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದ ಆರು ಅಭ್ಯರ್ಥಿಗಳಲ್ಲಿ ಡಾ.ಬಸವರಾಜು ರಾಜ್ಯಕ್ಕೆ ಮೊದಲಿಗರು.

ತಂದೆ ನಾಗನಗೌಡ, ತಾಯಿ ಶಾರದಾ ಕೃಷಿಕರು. ಅಣ್ಣ ಭರತ್‌ಗೌಡ ಪ್ರೌಢಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಕ. ತಂಗಿ ವೀಣಾ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ. 

ಊರಿನಲ್ಲಿ 10 ಎಕರೆಯಷ್ಟು ಜಮೀನಿದ್ದರೂ ನೀರಾವರಿ ಇಲ್ಲದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಕುಟುಂಬದ ಪರಿಸ್ಥಿತಿ ಕಣ್ಣಾರೆ ಕಂಡಿದ್ದ ಬಸವರಾಜ್‌ ಬಾಲ್ಯದಿಂದಲೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವ ಕನಸು ಕಂಡಿದ್ದರು. ಅದು ಇದೀಗ ನನಸಾಗಿದೆ. ತಮ್ಮ ಯಶಸ್ಸಿನ ಕಥೆಯನ್ನು ‘ಪ್ರಜಾವಾಣಿ’ಯೊಂದಿಗೆ ಗುರುವಾರ ಹಂಚಿಕೊಂಡಿದ್ದಾರೆ.

‘ಮೋರಿಗೇರಿ ಗ್ರಾಮದಲ್ಲೇ 1ರಿಂದ 10ನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ; ಬಳಿಕ ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಉಜ್ಜೈನಿ (ಎಸ್‌ಯುಜೆಎಂ) ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ. ಬಳಿಕ ಸಿಇಟಿಯಲ್ಲೂ ಉತ್ತಮ ರ‍್ಯಾಂಕ್‌ ಲಭಿಸಿತು.

ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಐದು ವರ್ಷದ ಬ್ಯಾಚುಲರ್‌ ಇನ್‌ ವೆಟನರಿ ಸೈನ್ಸ್‌ ಆ್ಯಂಡ್‌ ಅನಿಮಲ್‌ ಹಸ್ಬೆಂಡ್ರಿ ಕೋರ್ಸ್‌ ಪೂರ್ಣಗೊಳಿಸಿದೆ. 2006ರಲ್ಲಿ ವಿರಾಜಪೇಟೆಯ ಸಂಚಾರಿ ಚಿಕಿತ್ಸಾಲಯಕ್ಕೆ ನೇಮಕಗೊಂಡೆ. ಕೊಡಗಿನ ಪರಿಸರ ಕಂಡು ಅಂದಿನಿಂದಲೇ ಐಎಫ್‌ಎಸ್‌ ಪರೀಕ್ಷೆಗೆ ತಯಾರಿ ನಡೆಸಿದೆ’ ಎಂದು ವಿವರಿಸಿದರು.   

‘ಸ್ನಾತಕೋತ್ತರ ಪದವಿಗೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್‌ ಬಂದಿದ್ದರೂ ನಾಗರಿಕ ಸೇವಾ ಪರೀಕ್ಷೆಯ ಬರೆಯುವ ಕನಸು ಹಾಗೂ ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗೆ ಪಶು ಇಲಾಖೆಯಲ್ಲಿ ವೃತ್ತಿ ಆರಂಭಿಸಿದೆ’ ಎಂದು ಹೇಳಿದರು.

‘ಐಎಫ್‌ಎಸ್‌ನ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಲಭಿಸಿದೆ. ಕಳೆದ ವರ್ಷದ ಪರೀಕ್ಷೆಯಲ್ಲಿ 10 ಅಂಕಗಳು ಕಡಿಮೆಯಾದ ಕಾರಣ ರ‍್ಯಾಂಕ್‌ ಬಂದಿರಲಿಲ್ಲ. ಆದರೂ, ಅಭ್ಯಾಸ ಬಿಡಲಿಲ್ಲ. ಸಂಚಾರಿ ಚಿಕಿತ್ಸಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಪ್ರತಿನಿತ್ಯ ಗ್ರಾಮ ಹಾಗೂ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಿಕಿತ್ಸೆಗೆ ತೆರಳುವುದು ಅನಿವಾರ್ಯವಿತ್ತು. ಸಮಯ ಸಿಕ್ಕಾಗಲೆಲ್ಲಾ ವಾಹನದಲ್ಲಿ ಕುಳಿತೆ ಓದಿದೆ.

ಸಿಬ್ಬಂದಿ ಸಹಕಾರ ನೀಡುತ್ತಿದ್ದರು. ಎಲ್ಲಿಯೂ ತರಬೇತಿಗೆ ಸೇರಲಿಲ್ಲ. ಇಂಟರ್‌ನೆಟ್‌ನಲ್ಲಿ ಸಿಗುತ್ತಿದ್ದ ಮಾಹಿತಿಯನ್ನೇ ಡೌನ್‌ಲೋಡ್‌ ಮಾಡಿಕೊಂಡು ಅಭ್ಯಾಸ ನಡೆಸಿದೆ. ನಿತ್ಯ ನಾಲ್ಕರಿಂದ ಐದು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದರೆ, ಪರೀಕ್ಷೆಯ ವೇಳೆ ರಜೆ ತೆಗೆದುಕೊಂಡು 10ರಿಂದ 12 ಗಂಟೆಗಳ ಕಾಲ ಅಭ್ಯಾಸ ಮಾಡಿದೆ’ ಎಂದು ತಮ್ಮ ಪರಿಶ್ರಮವನ್ನು ಹಂಚಿಕೊಂಡರು.

‘ಮುಖ್ಯ ಪರೀಕ್ಷೆಗೆ ಫಾರೆಸ್ಟ್ರಿ ಹಾಗೂ ವೆಟನರಿ ಸೈನ್ಸ್‌ ಎಂಬ ಎರಡು ಐಚ್ಛಿಕ ವಿಷಯ ಆಯ್ಕೆ ಮಾಡಿಕೊಂಡೆ. ಪದವಿ ಹಂತದಲ್ಲಿ ಇದೇ ವಿಷಯಗಳನ್ನು ಓದಿದ್ದ ಕಾರಣ ಪರೀಕ್ಷೆ ಎದುರಿಸುವುದು ಸುಲಭವಾಯಿತು.

ಹರಿಹರ ತಾಲ್ಲೂಕಿನ ಪ್ರಗತಿಪರ ರೈತ, ಮಾವ ಡಿ.ವ್ಯೋಮಕೇಶ್ವರಪ್ಪ ಅವರು ಪ್ರೇರಣೆ ನೀಡಿದರು. ವಿರಾಜಪೇಟೆಯ ಕೆದಮಳ್ಳೂರಿನಲ್ಲಿ ಪಶುವೈದ್ಯರಾಗಿದ್ದ ಬಳ್ಳಾರಿಯ ಡಾ.ಕೊಟ್ರೇಶ್‌ಸ್ವಾಮಿ 2006ರಲ್ಲಿ ಐಆರ್‌ಎಸ್‌ (ಇಂಡಿಯನ್‌ ರೆವಿನ್ಯೂ ಸರ್ವಿಸ್‌)ಗೆ ಆಯ್ಕೆಯಾಗಿದ್ದರು. ಅವರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಸ್ಮರಿಸುತ್ತಾರೆ ಬಸವರಾಜ್‌.

‘ಪರಿಶ್ರಮ, ಶ್ರದ್ಧೆಯಿದ್ದರೆ ಗ್ರಾಮೀಣ ಪ್ರತಿಭೆಗಳೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿದೆ. ಇಂಟರ್‌ನೆಟ್‌ ಬಳಕೆ, ದಿನಪತ್ರಿಕೆಗಳ ಓದಿನಿಂದ ಗ್ರಾಮೀಣ ವಿದ್ಯಾರ್ಥಿಗಳೂ ಯುಪಿಎಸ್‌ಸಿ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT