ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ ಹರಾಜು ಪ್ರಕ್ರಿಯೆ: ರೈತರ ಪ್ರತಿಭಟನೆ

ವಿವಿಧ ಬ್ಯಾಂಕ್‌ ಶಾಖೆಗಳ ವಿರುದ್ಧ ಪ್ರತಿಭಟನೆ, ಖಾಸಗಿ ಲೇವಾದೇವಿ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 24 ಮಾರ್ಚ್ 2017, 7:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬೆಳೆ ಸಾಲಕ್ಕಾಗಿ ಬ್ಯಾಂಕ್‌ಗಳಲ್ಲಿ ರೈತರು ಅಡಮಾನ ಇಟ್ಟಿದ್ದ ಚಿನ್ನಾಭರಣಗಳನ್ನು ಕರ್ನಾಟಕ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕ್‌ ಶಾಖೆಗಳು ಹರಾಜು ಹಾಕಲು ಮುಂದಾಗಿದ್ದು, ಸರ್ಕಾರ ಅದನ್ನು ತಡೆಯಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

  ಇಲ್ಲಿನ ಕರ್ನಾಟಕ ಬ್ಯಾಂಕ್‌ ಶಾಖೆ ಎದುರು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಿನಿ ವಿಧಾನಸೌಧದಿಂದ ಬ್ಯಾಂಕ್‌ ಶಾಖೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ರೈತರು ಅಡವಿಟ್ಟಿರುವ ಚಿನ್ನಾಭರಣಗಳನ್ನು ಹರಾಜು ಹಾಕಿದರೆ ಜೈಲ್‌ ಭರೋ ಚಳವಳಿ ನಡೆಸುತ್ತೇವೆ. ಪೊಲೀಸರ ಲಾಠಿ ಏಟು, ಬಂದೂಕಿನ ಬೆದರಿಕೆಗೆ ಬಗ್ಗುವುದಿಲ್ಲ. ರೈತರ ಉಳಿವಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ದರಿದ್ದೇವೆ.

ಸರ್ಕಾರ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಖಾಸಗಿ ಲೇವಾದೇವಿ ಸಂಸ್ಥೆಗಳಾದ ಮುತ್ತೂಟ್‌ ಫೈನಾನ್‌ ಮತ್ತು ಮಣಪ್ಪುರಣಂ ಸಂಸ್ಥೆಗಳು ರೈತರನ್ನು ಲೂಟಿ ಮಾಡುತ್ತಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್‌. ನಂಜುಂಡೇಗೌಡ ಆಗ್ರಹಿಸಿದರು.

ಪಿಎಸ್‌ಎಸ್‌ಕೆ ನಿರ್ದೇಶಕ ಪಾಂಡು ಮಾತನಾಡಿ, ಬ್ಯಾಂಕ್‌ಗಳು ಕೃಷಿ ಸಾಲ ಪಡೆದ ರೈತರಿಗೆ ನೋಟಿಸ್‌ ನೀಡುವ ಮತ್ತು ಚಿನ್ನಾಭರಣ ಹರಾಜು ಮಾಡುವ ಬೆದರಿಕೆಯೊಡ್ಡಿ ಆತ್ಮಹತ್ಯೆಗೆ ಪ್ರಚೋದಿಸುತ್ತಿವೆ. ಜನರು ಕೇಳದ ಯೋಜನೆಗಳನ್ನು ಪ್ರಕಟಿಸುವ ಸರ್ಕಾರ ಸಾಲ ಮನ್ನಾ ಮಾಡುವಂತೆ ರೈತರು ದುಂಬಾಲು ಬಿದ್ದರೂ ಬೇಡಿಕೆಗೆ ಸ್ಪಂದಿಸದೆ ಕಡೆಗಣಿಸುತ್ತಿದೆ ಎಂದು ದೂರಿದರು.

ರೈತರ ಚಿನ್ನಾಭರಣ ಹರಾಜು ಸಂಬಂಧ ಬ್ಯಾಂಕ್‌ನ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕ ವೆಂಕಟೇಶ್‌ ಕಾಮತ್‌ ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ತಾಲ್ಲೂಕು ಕಾರ್ಯಾಧ್ಯಕ್ಷ ಬಿ.ಎಸ್‌. ರಮೇಶ್‌, ಅಧ್ಯಕ್ಷ ಕೃಷ್ಣೇಗೌಡ, ಯುವ ಘಟಕದ ಅಧ್ಯಕ್ಷ ಕಡತನಾಳು ಬಾಬು, ಜಯರಾಮೇಗೌಡ, ರಾಂಪುರ ಬೋರೇಗೌಡ, ಬಾಲಕೃಷ್ಣ, ಎಂ.ವಿ. ಕೃಷ್ಣ, ಮಹದೇವು, ನಂಜುಂಡಪ್ಪ, ನಿಂಗೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT