ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ ತಡೆಗೆ ಮುಂಜಾಗ್ರತೆ ವಹಿಸಿ

ಜಿಲ್ಲಾ ಬಿಕ್ಕಟ್ಟು ಪರಿಹಾರ ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ಚೈತ್ರಾ ಸೂಚನೆ
Last Updated 24 ಮಾರ್ಚ್ 2017, 8:29 IST
ಅಕ್ಷರ ಗಾತ್ರ

ಹಾಸನ: ಅಪಾಯಕಾರಿ ಇಂಧನ, ರಾಸಾಯನಿಕಗಳ ಬಳಕೆ ಮತ್ತು ನಿರ್ವಹಣೆ ಮಾಡುವ ಕೈಗಾರಿಕೆಗಳಲ್ಲಿ ವ್ಯವಸ್ಥಿತ ವಿಪತ್ತು ನಿರ್ವಹಣಾ ಯೋಜನೆಗಳಿರಬೇಕು ಎಂದು ಜಿಲ್ಲಾಧಿಕಾರಿ ವಿ.ಚೈತ್ರಾ ತಿಳಿಸಿದರು.

ನಗರದ ಹೊರ ವಲಯದಲ್ಲಿರುವ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಘಟಕದಲ್ಲಿ (ಎಚ್‌ಪಿಸಿಎಲ್) ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಭೆ ಮತ್ತು ಅಣಕು ಪ್ರದರ್ಶನದಲ್ಲಿ ಮಾತನಾಡಿದ ಅವರು,  ಭೂಪಾಲ್ ದುರಂತ ಸೇರಿದಂತೆ ಅನೇಕ ದುರ್ಘಟನೆಗಳು ಜಾಗೃತಿ ಪ್ರಜ್ಞೆ ಮೂಡಿಸಿದ್ದು,  ಎಂದೆಂದೂ ಅಂತಹ ಅಪಾಯಗಳು ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಹಾಲಿ ಇರುವ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಎಚ್‌ಪಿಸಿಎಲ್‌ ಆವರಣದೊಳಗೆ ವಿಪತ್ತು ನಿರ್ವಹಣಾ ಯೋಜನೆ ವ್ಯವಸ್ಥಿತವಾಗಿದೆ. ಆದರೆ ವಿಪತ್ತಿನ ಸಂದರ್ಭದಲ್ಲಿ ನೆರೆಹೊರೆಯ ಗ್ರಾಮಗಳು ಎದುರಿಸಬೇಕಾದ ಸನ್ನಡತೆ ಅಥವಾ ನಿಯಂತ್ರಣ ಕ್ರಮಗಳು, ಸಂಚಾರಿ ನಿಯಂತ್ರಣ ಕ್ರಮಗಳು, ವಿಪತ್ತಿನ ನಂತರದ ಪರಿಹಾರ ಕ್ರಮಗಳ ಬಗ್ಗೆಯೂ ಯೋಜನೆಯಲ್ಲಿ ಅಳವಡಿಸವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಎಚ್‌ಪಿಸಿಎಲ್ ಅತ್ಯಂತ ಹೆಚ್ಚು ವಿಪತ್ತು ಸಂಭವವಿರುವ ಕೈಗಾರಿಕೆಗಳಲ್ಲೊಂದು. ಇಲ್ಲಿ ಕೇವಲ ಭೂಪಾಲ್ ಮಾದರಿ ಅಥವಾ ಇನ್ನಾವುದಾದರೊಂದು ಕಾರ್ಖಾನೆಯ ಮಾದರಿಯನ್ನೇ  ಇಟ್ಟುಕೊಂಡು ಅಪಾಯ ನಿಯಂತ್ರಣ ಉಪಾಯ ರೂಪಿಸದೇ ಸ್ಥಳೀಯ ಸಂಭವನೀಯ ಆಪತ್ತಿನ ಸಾಧ್ಯತೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ರೂಪಿಸಬೇಕು ಎಂದು ಸಲಹೆ ನೀಡಿದರು.

ಕಂಪೆನಿ ಮುಖ್ಯಸ್ಥ ರಾಮರಾವ್ ಅವರು ಸಂಸ್ಥೆಯ ಕಾರ್ಯವೈಖರಿ, ಸಂಭವನೀಯ ಅಪಾಯಗಳು, ಅದಕ್ಕೆ ಮಾಡಿಕೊಂಡಿರುವ ಸಿದ್ಧತೆಗಳು ಮತ್ತು ಸಿಬ್ಬಂದಿ ಸುರಕ್ಷತಾ ಕ್ರಮಗಳ ಬಗ್ಗೆ ವಿವರ ನೀಡಿದರು.

ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ಆನಂದ್ ಮಾತನಾಡಿ, ಎಚ್‌ಪಿಸಿಎಲ್ ಜಿಲ್ಲೆಯಲ್ಲಿರುವ ಅತ್ಯಂತ ಅಪಾಯಕಾರಿ ಕೈಗಾರಿಕಾ ಘಟಕಗಳಲ್ಲಿ ಒಂದು. ಆದರೆ, ಈ ಬಗ್ಗೆ ಆತಂಕದ ಅವಶ್ಯಕತೆ ಇಲ್ಲ.

ಇಲ್ಲಿ ಎಲ್ಲಾ ಸುರಕ್ಷತಾ ಕ್ರಮ  ಕೈಗೊಳ್ಳಲಾಗಿದೆ. ಎಂತಹ ರೀತಿಯ ಕೆಟ್ಟ ಸನ್ನಿವೇಶಗಳನ್ನೂ ಎದುರಿಸುವಷ್ಟು ಸಾಮರ್ಥ್ಯ, ಸಾಧನ ಸಲಕರಣೆ ಇಲ್ಲಿದೆ. ಅಪಾಯಕಾರಿ ಇಂಧನ ಹಾಗೂ ರಾಸಾಯನಿಕಗಳ ಬಳಕೆ ಮಾಡುತ್ತಿರುವ ಕೈಗಾರಿಕಾ ಘಟಕಗಳಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ಜಾಗೃತರಾಗಿರಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಿ.ಆರ್. ರಂಗನಾಥ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ  ಹಾಜರಿದ್ದರು.

ಅಗ್ನಿ ಅವಘಡದ ಸಂದರ್ಭಗಳನ್ನು ಎದುರಿಸಲು ಕೈಗೊಂಡಿರುವ ತಾಂತ್ರಿಕ, ನೈಪುಣ್ಯತೆ, ಸಿಬ್ಬಂದಿಗೆ ಇರುವ ತರಬೇತಿ ಹಾಗೂ ಇಂತಹ ಸನ್ನಿವೇಶಗಳನ್ನು ಎದುರಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

*
ಎಲ್ಲಾ ರೀತಿಯ ಅಪಾಯಗಳನ್ನು ಎದುರಿಸಲು ಸಿಬ್ಬಂದಿಗೆ ನಿರಂತರವಾಗಿ  ತರಬೇತಿಗಳನ್ನು ನೀಡಲಾಗುತ್ತಿದೆ.
-ರಾಮ್‌ರಾವ್,
ಎಚ್‌ಪಿಸಿಎಲ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT