ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕೊಡಿ; ತ್ಯಾಜ್ಯ ವಿಲೇವಾರಿ ಕೈಗೊಳ್ಳಿ

ರಾಯಚೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ: ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 24 ಮಾರ್ಚ್ 2017, 9:26 IST
ಅಕ್ಷರ ಗಾತ್ರ

ರಾಯಚೂರು: ಸಮರ್ಪಕ ಕುಡಿಯುವ ನೀರು, ವಿದ್ಯುತ್‌ ಕೊಡಿ, ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಹಾಗೂ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡಿಸುವಂತೆ ನಗರದ ಜನರು ಒತ್ತಾಯಿಸುತ್ತಿದ್ದಾರೆ. ಇಷ್ಟನ್ನೂ ಮಾಡಿಕೊಡದಿದ್ದರೆ ವಾರ್ಡ್‌ನಲ್ಲಿ ಜನರು ಬೆನ್ನುಬಿದ್ದು ಹೊಡೆಯುತ್ತಾರೆ ಎಂದು ನಗರಸಭೆ ಸದಸ್ಯರು ಏರುದನಿಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಇಲ್ಲಿನ ನಗರ ಸಭೆಯ ನೂತನ ಸಭಾಂಗಣದಲ್ಲಿ ಪಿ.ಹೇಮಲತಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು. ನೀರು ಬಿಡುವುದಕ್ಕೆ ಸಮಯವೇ ಇಲ್ಲ. ಮೂರು ದಿನಕ್ಕೊಮ್ಮೆ ರಾತ್ರಿ ಕೂಡಾ ನೀರು ಬಿಡುತ್ತಾರೆ. ಇದರಿಂದ ಕೂಲಿಕಾರರು ತೊಂದರೆ ಅನುಭವಿಸುತ್ತಿದ್ದಾರೆ.

ನಗರದಲ್ಲಿ ಅಕಾಲಿಕ ಮಳೆಯಿಂದ ಅಲ್ಲಲ್ಲಿ ನೀರು ನಿಂತುಕೊಂಡು ಸಮಸ್ಯೆಯಾಗಿತ್ತು. ರಾಜಕಾಲುವೆಯನ್ನು ಆದಷ್ಟು ಬೇಗನೆ ಸರಿಪಡಿಸುವ ಕೆಲಸ ಮಾಡಬೇಕು ಎಂದು ಸದಸ್ಯ ದೊಡ್ಡ ಮಲ್ಲೇಶಪ್ಪ ಅಧಿಕಾರಿಗಳನ್ನು ಸಭೆ ಆರಂಭದಲ್ಲೆ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ದನಿಗೂಡಿಸಿ ಅನೇಕ ಸದಸ್ಯರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ಇಂಧನ ಹಾಕಿಸುವುದಿಲ್ಲ. ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಸೊಳ್ಳೆಗಳು ಹೆಚ್ಚಾಗಿ, ಡೆಂಗೆ ಜ್ವರಕ್ಕೆ ಜನರು ತುತ್ತಾಗುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.

ಬಾರ್‌ಗಳಿಂದ ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಟೆಂಡರ್‌ಗಳನ್ನು ಶೇ 30 ರಷ್ಟು ಕಡಿಮೆಗೆ ಪಡೆದುಕೊಳ್ಳುವ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಯಚೂರು ನಗರ ಅಭಿವೃದ್ಧಿಗಾಗಿ ಕೋಟ್ಯಾಂತರ ಅನುದಾನ ಬಂದಿದ್ದರೂ ಕಾಮಗಾರಿಗಳು ಗುಣಮಟ್ಟದ್ದಾಗುತ್ತಿಲ್ಲ. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕೆಲಸವಾಗಬೇಕು. ಈ ರೀತಿಯ ಟೆಂಡರ್‌ಗೆ ಕಡಿವಾಣ ಹಾಕುವ ಕೆಲಸವಾಗಬೇಕಿದೆ.

ಕಲ್ಲೂರು ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಹಂದಿ, ನಾಯಿಗಳ ಹಾವಳಿ ವಿಪರೀತವಾಗಿದೆ ಎಂದು ನಿಖಾತ್‌ ಸಲ್ಮಾ, ಈರಣ್ಣಗೌಡ, ಶ್ರೀನಿವಾಸರೆಡ್ಡಿ ಸೇರಿದಂತೆ ಅನೇಕರು ಸಮಸ್ಯೆಗಳನ್ನು ಹೇಳಿಕೊಂಡರು.

24/7 ನೀರು ಪೂರೈಸಲು ಪೈಪ್‌ಲೈನ್‌ ಹಾಕುವುದಕ್ಕೆ ರಸ್ತೆಗಳನ್ನು ತುಂಬಾ ಹಾಳು ಮಾಡಲಾಗುತ್ತಿದೆ. ಅಗೆದ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚುತ್ತಿಲ್ಲ. ಹೀಗಾಗಿ ದೂಳಿನ ವಾತಾವರಣ ಹೆಚ್ಚಾಗಿದೆ. ಕೂಡಲೇ ಅವರಿಂದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಮಯಾವಕಾಶ ಕೊಡಿ: ರಾಜಕಾಲುವೆಗೆ ಸಂಬಂಧಿಸಿದ ಟೆಂಡರ್ ಬಗ್ಗೆ ಕೆಲವು ಆಕ್ಷೇಪಣೆಗಳಿದ್ದವು. ಈಗ ಸರಿಪಡಿಸಲಾಗಿದೆ. ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸಮಯಾವಕಾಶ ಕೊಡಬೇಕು ಎಂದು ಪೌರಾಯುಕ್ತ ಗುರುಲಿಂಗಪ್ಪ ಕೇಳಿಕೊಂಡರು.

ಈಗಿರುವ ನಿಯಮಾನುಸಾರ ಕಡಿಮೆ ಮೊತ್ತ ಉಲ್ಲೇಖಿಸುವವರಿಗೆ ಟೆಂಡರ್‌ ಕೊಡಲಾಗುತ್ತಿದೆ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಆಯಾ ವಾರ್ಡ್‌ಗಳಲ್ಲಿ ಕಾಮಗಾರಿಗಳು ನಡೆಯುತ್ತಿರುವಾಗ ವಾರ್ಡ್‌ ಸದಸ್ಯರು ಪರಿವೀಕ್ಷಣೆ ಮಾಡಬೇಕು. ಕಳಪೆ ಕಾಮಗಾರಿಗಳಿದ್ದರೆ ಗಮನಕ್ಕೆ ತರಬೇಕು. ತ್ಯಾಜ್ಯ ವಿಲೇವಾರಿ ಎಂದಿನಂತೆ ನಡೆಯುತ್ತಿದೆ. ಫಾಗಿಂಗ್‌ ಮಾಡಿಸಿ ಸೊಳ್ಳೆಗಳನ್ನು ನಿಯಂತ್ರಿಸಲಾಗುತ್ತಿದೆ. ಏಪ್ರಿಲ್‌ ಒಳಗಾಗಿ ಒಳಚರಂಡಿ ಕೆಲಸ ಪೂರ್ಣ ಗೊಳಿಸುತ್ತೇವೆ ಎಂದು ಅವರು ತಿಳಿಸಿದರು.

ಟೇಬಲ್‌ ಏರಿ ನಿಂತ ಸದಸ್ಯ!
ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೆಲ್ಲ ಸದಸ್ಯರೆಲ್ಲ ಪಾಸ್‌.. ಪಾಸ್‌... ಎಂದು ಹೇಳುತ್ತಿದ್ದರು. ವಾರ್ಡ್‌ ಸಂಖ್ಯೆ 25ರ ಸದಸ್ಯ ನರಸಪ್ಪ ಅವರು ಸಭಾಂಗಣದೊಳಗಿನ ರೌಂಡ್‌ ಟೇಬಲ್‌ ದಿಢೀರ್‌ ಹತ್ತಿ ನಿಂತರು. ಸದಸ್ಯರೆಲ್ಲ ಗಾಬರಿಯಿಂದ ನೋಡುತ್ತಿದ್ದಂತೆ ಕೆಳಗೆ ಎಗರಿದರು. ಎಲ್ಲಕ್ಕೂ ಪಾಸ್‌.. ಪಾಸ್‌ ಹೇಳುವುದು ಪ್ರಜಾಪ್ರಭುತ್ವ ವಿರೋಧಿ. ಸಮಸ್ಯೆ ಹೇಳಿಕೊಳ್ಳುವುದಕ್ಕೆ ಅವಕಾಶ ಕೊಡಿ ಎಂದು ಆಕ್ಷೇಪಿಸಿದರು.

‘ಬಹುತೇಕ ಸದಸ್ಯರ ಒಪ್ಪಿಗೆಯೊಂದಿಗೆ ನಿರ್ಣಯಗಳನ್ನು ಪಾಸು ಮಾಡಲಾಗುತ್ತಿದೆ. ಹೀಗೆ ಟೇಬಲ್‌ ಎಗರಿದ್ದು ತಪ್ಪು’ ಎಂದು ಉಪಾಧ್ಯಕ್ಷ ಜಯಣ್ಣ ಅವರ ಹೇಳಿದರು.

ಶೌಚಾಲಯವಿಲ್ಲದೆ ಮಹಿಳೆಯರು ಬಯಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಶೌಚಾಲಯ ನಿರ್ಮಾಣ ವಿಷಯ ಜಿಲ್ಲಾಧಿಕಾರಿ ಕಚೇರಿವರೆಗೂ ವಿಷಯ ತಲುಪಿದರೂ ಶೌಚಾಲಯ ಕಟ್ಟಿಸಿಲ್ಲ ಎಂದು ನರಸಪ್ಪ ಕೇಳಿದರು.

ವಾರ್ಡ್‌ ಸಂಖ್ಯೆ 31 ರ ಸದಸ್ಯ ಸೈಯದ್ ಶಾಲಮ್‌ ಮಾತನಾಡಿ, ‘ಈಗ ಪ್ರಸ್ತಾಪವಾದ ಶೌಚಾಲಯ ನನ್ನ ವಾರ್ಡ್‌ನಲ್ಲಿದೆ. ಅದರ ಕಾಮಗಾರಿ ಪೂರ್ಣಗೊಂಡಿದೆ. ಆಕ್ಷೇಪ ಎತ್ತಿದವರು ಮೊದಲು ತಮ್ಮ ವಾರ್ಡ್‌ನಲ್ಲಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲಿ’ ಎಂದು ವಿಷಯಕ್ಕೆ ತೆರೆ ಎಳೆದರು.

ಒದ್ದು ಕೆಲಸ ಮಾಡ್ಸೋಣ!
ವಾರ್ಡ್‌ ಸಮಸ್ಯೆಗಳನ್ನು ಸಭೆಯಲ್ಲಿ ಹೇಳುವುದು ಬೇಡ. ಜನರನ್ನು ಕರೆದುಕೊಂಡು ಬಂದು ನಗರಸಭೆ ಎದುರು ಧರಣಿ ಮಾಡೋಣ. ಕೆಲಸ ಮಾಡದವನ್ನು ಒದ್ದು ಕೆಲ್ಸಾ ಮಾಡ್ಸೋಣ ಎಂದು ವಾರ್ಡ್‌ ಸಂಖ್ಯೆ 9 ರ ಸದಸ್ಯ ಶೇಖ್‌ ಮೆಹಬೂಬ್‌ ಆವೇಶದಿಂದ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೌರಾಯುಕ್ತ ಗುರುಲಿಂಗಪ್ಪ  ‘ಸದಸ್ಯರು ಈ ರೀತಿ ಪದ ಬಳಸಬಾರದು. ಇದನ್ನು ಸಹಿಸಲು ಆಗುವುದಿಲ್ಲ. ಕಾಲಕಾಲಕ್ಕೆ ಸದಸ್ಯರು ಕೇಳುವ ಮಾಹಿತಿಯನ್ನೆಲ್ಲ ಒದಗಿಸುತ್ತಾ ಬಂದಿದ್ದೇವೆ’ ಎಂದರು. ಉಪಾಧ್ಯಕ್ಷ  ಜಯಣ್ಣ ಅವರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದರು.
ರಾಜ್‌ ಪುತ್ಥಳಿ

ನಗರದ ಪ್ರಮುಖ ವೃತ್ತದಲ್ಲಿ ಚಿತ್ರನಟ ರಾಜಕುಮಾರ್‌ ಅವರ ಪುತ್ಥಳಿ ನಿರ್ಮಿಸುವಂತೆ ಕನ್ನಡ ಚಳವಳಿ ಕೇಂದ್ರ ಸಮಿತಿ ಸಲ್ಲಿಸಿದ್ದ ಮನವಿಗೆ ನಗರಸಭೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.  ರಾಜ್‌ ಪುತ್ಥಳಿ ನಿರ್ಮಾಣಕ್ಕೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದರು.

*
ಜನರ ಅನುಕೂಲಕ್ಕಾಗಿ ಅಧಿಕಾರಿಗಳು ಮಾಡುವ ಕೆಲಸದ ಬಗ್ಗೆ  ಸದಸ್ಯರು ಪ್ರತಿಷ್ಠೆ ವಿಷಯ ಮಾಡಬಾರದು. ಅಧಿಕಾರಿಗಳು  ಅನುಮತಿ ಪಡೆದು ಕೆಲಸ ಮಾಡಬೇಕು.
-ಜಯಣ್ಣ,
ನಗರಸಭೆ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT