ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಭರಿತ ರಂಜನೆ

Last Updated 24 ಮಾರ್ಚ್ 2017, 12:14 IST
ಅಕ್ಷರ ಗಾತ್ರ

ನಿರ್ಮಾಪಕ: ವಿಜಯ್ ಕಿರಗಂದೂರು
ನಿರ್ದೇಶಕ: ಸಂತೋಷ್ ಆನಂದರಾಮ್
ತಾರಾಗಣ: ಪುನೀತ್ ರಾಜಕುಮಾರ್, ಪ್ರಿಯಾ ಆನಂದ್, ಅನಂತನಾಗ್, ಪ್ರಕಾಶ್ ರೈ

‘ರಾಜಕುಮಾರ’ ಸಿನಿಮಾಕ್ಕೂ ವರನಟ ರಾಜಕುಮಾರ್ ಅವರಿಗೂ ಏನೂ ಸಂಬಂಧವಿಲ್ಲ. ‘ರಾಜಕುಮಾರ’ ಒಂದು ವ್ಯಕ್ತಿತ್ವ’ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಹೇಳಿಕೊಂಡೇ ಬಂದಿದ್ದರು. ಅದೇ ರೀತಿ ‘ರಾಜಕುಮಾರ’ ಚಿತ್ರದಲ್ಲಿ ಉನ್ನತ ವ್ಯಕ್ತಿತ್ವವೊಂದನ್ನು ಅನಾವರಣ ಮಾಡುವ ಪ್ರಯತ್ನ ಮಾಡಿರುವ ನಿರ್ದೇಶಕರು, ಆ ಮೂಲಕ ರಾಜಕುಮಾರ್ ಅವರನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಹಾಡುಗಳಲ್ಲಿಯೂ ಆ ಛಾಯೆ ಕಾಣುತ್ತದೆ.

ನಾಯಕನ ಎಂಟ್ರಿಗೆ ಹೊಡೆದಾಟದ ದೃಶ್ಯ, ಅದರ ಬೆನ್ನಿಗೆ ಒಂದು ಹಾಡು – ಹೀಗೆ ಒಂದು ಕಮರ್ಷಿಯಲ್ ಸಿನಿಮಾ ಟೇಕ್ ಆಫ್ ಆಗಲು ಬೇಕು ಎಂದು ನಂಬಲಾದ ತಂತ್ರಗಳನ್ನೆಲ್ಲ ದುಡಿಸಿಕೊಳ್ಳಲಾಗಿದೆ. ಚಿತ್ರವನ್ನು ಮಧ್ಯಂತರದ ಮೊದಲು ಮತ್ತು ನಂತರ ಎಂದು ವಿಭಾಗಿಸಿ ನೋಡಬಹುದು. ಮೊದಲ ಭಾಗದಲ್ಲಿ ಸುಖೀ ಕುಟುಂಬದೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ನಾಯಕನಿಗೆ ಆತನನ್ನು ಪ್ರೀತಿಸುವ ಒಬ್ಬ ಹುಡುಗಿಯೂ ಇರುತ್ತಾಳೆ. ವಿಮಾನ ಅಪಘಾತದಲ್ಲಿ ಕುಟುಂಬವನ್ನು ಕಳೆದುಕೊಳ್ಳುವ ಆತ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳುತ್ತಾನೆ.
ನಾಯಕನ ತಂದೆ ಆಸ್ಟ್ರೇಲಿಯಾದಲ್ಲಿ ಉದ್ಯಮಿ. ಆತ ತನ್ನ ಲಾಭದಲ್ಲಿ ಒಂದು ಭಾಗವನ್ನು ಭಾರತದಲ್ಲಿ ಪೋಲಿಯೊ ನಿವಾರಣೆಗೆ ಮೀಸಲಿಡುತ್ತಾನೆ. ಆದರೆ ಆ ಯೋಜನೆಯಲ್ಲಿ ನೀಡಲಾದ ಔಷಧಿಗಳು ಕಳಪೆ ಗುಣಮಟ್ಟದವು. ಆ ಆರೋಪ ಎದುರಾಗುವ ಮುನ್ನವೇ ಆತ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ತಂದೆಯ ಮೇಲೆ ಬಂದಿರುವ ಆರೋಪದ ಹಿಂದಿನ ದುಷ್ಟಶಕ್ತಿಗಳನ್ನು ಬಯಲಿಗೆಳೆದು ಸತ್ಯವನ್ನು ಸಾಬೀತು ಮಾಡುವ ಪಣ ನಾಯಕನು. ಆಸ್ಟ್ರೇಲಿಯಾದಲ್ಲಿ ಇದ್ದುಕೊಂಡು ಭಾರತದ ಗೌರವ ಕಾಪಾಡುವಷ್ಟೇ ತನ್ನವರ ಗೌರವ ಕಾಪಾಡುವುದೂ ಅವನಿಗೆ ಮುಖ್ಯ.

ಕುಟುಂಬವನ್ನು ಕಳೆದುಕೊಂಡ ನಾಯಕ ವೃದ್ಧಾಶ್ರಮಕ್ಕೆ ಬರುತ್ತಾನೆ. ಮಕ್ಕಳಿಂದ ದೂರಾಗಿ ಅಲ್ಲಿರುವ ಹಿರಿಯ ಜೀವಗಳಿಗೆ ಪ್ರೀತಿ ಹಂಚುತ್ತ ಬದುಕನ್ನು ಸಹನೀಯವಾಗಿಸುವುದರಲ್ಲಿ ಖುಷಿ ಕಾಣುತ್ತಾನೆ. ಎಲ್ಲರೂ ಇದ್ದೂ ಕುಟುಂಬದಿಂದ ದೂರವಾದವರಿಗಾಗಿ ಮರುಗುತ್ತಾನೆ. ಒಂದು ಸಮಸ್ಯೆ ತನ್ನದು ಎಂದು ಭಾವಿಸುವುದಕ್ಕಿಂತ ಅದು ಸಮಾಜದ ಸಮಸ್ಯೆ ಎಂದು ಗ್ರಹಿಸುವ ವಿಶಾಲಹೃದಯಿ ಈ ‘ರಾಜಕುಮಾರ’.
ಅಚ್ಚುಕಟ್ಟಾದ ಕೌಟುಂಬಿಕ ಮೌಲ್ಯಗಳನ್ನಿಟ್ಟುಕೊಂಡು ಬರುವ ಕಥೆಗಳು ಕಡಿಮೆ ಆಗಿರುವ ಸಂದರ್ಭದಲ್ಲಿ, ಆ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ‘ರಾಜಕುಮಾರ’ ಕಾಣುತ್ತದೆ. ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳನ್ನು ಅಳವಡಿಸಿ ಸವಿಯಾದ ಮನರಂಜನೆಯ ಹದಮಿಶ್ರಣದ ಪ್ಯಾಕೇಜ್ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪುನೀತ್ ಅಭಿಮಾನಿಗಳನ್ನು ತೃಪ್ತಿಪಡಿಸುವ ಯಾವ ಅವಕಾಶವನ್ನೂ ಅವರು ಕೈಚೆಲ್ಲಿಲ್ಲ.

ನಟನೆ, ಹೊಡೆದಾಟ ಮತ್ತು ನೃತ್ಯಗಳಲ್ಲಿ ಪುನೀತ್ ಖುಷಿ ಕೊಡುತ್ತಾರೆ. ಪ್ರಿಯಾ ಆನಂದ್‌ಗೆ ದ್ವಿತೀಯಾರ್ಧದಲ್ಲಿ ಅವಕಾಶವೇ ಇಲ್ಲ. ರಂಗಾಯಣ ರಘು ಅವರದ್ದು ಅತಿರೇಕವಿಲ್ಲದ ಪಕ್ವ ಅಭಿನಯ. ಕನ್ನಡ ಚಿತ್ರರಂಗದ ಬಹುತೇಕ ಪ್ರಮುಖ ಕಲಾವಿದರನ್ನು ಇಲ್ಲಿ ಒಂದೇ ಚಿತ್ರದಲ್ಲಿ ಕಾಣುತ್ತೇವೆ. ಮತ್ತು ಆ ಪಾತ್ರಗಳಿಗೆ ಸೂಕ್ತ ಹಿನ್ನೆಲೆಯನ್ನೂ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂರು ಹಾಡುಗಳು ಇಂಪಾಗಿವೆ. ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ಆಸ್ಟ್ರೇಲಿಯಾದ ಸೌಂದರ್ಯವನ್ನು ತೋರಿಸಲು ಶ್ರಮ ವಹಿಸಿದ್ದಾರೆ. ಸಂಕಲನದಲ್ಲಿ ಕೆ.ಎಂ. ಪ್ರಕಾಶ್ ತುಸು ಹೆಚ್ಚೇ ಉದಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT