ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕರಾಯಪ್ಪಗೆ ನಿರೀಕ್ಷಣಾ ಜಾಮೀನು

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾವೇರಿ ನೀರಾವರಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್‌. ಚಿಕ್ಕರಾಯಪ್ಪಗೆ ಹೈಕೋರ್ಟ್‌ ಶುಕ್ರವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಪಿ.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು  ವಿಲೇವಾರಿ ಮಾಡಿದೆ.

ಷರತ್ತುಗಳು: ‘ಆರೋಪಿಯು ₹5 ಲಕ್ಷ ಮೊತ್ತದ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಈ ಆದೇಶ ಪ್ರಕಟವಾದ ಒಂದು ವಾರದೊಳಗೆ ಮ್ಯಾಜಿಸ್ಟ್ರೇಟ್‌ ಅವರಿಗೆ ಪಾಸ್‌ಪೋರ್ಟ್ ಒಪ್ಪಿಸಬೇಕು. ಮ್ಯಾಜಿಸ್ಟ್ರೇಟ್‌ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳಬಾರದು.

ತನಿಖಾಧಿಕಾರಿ ಕರೆದಾಗಲೆಲ್ಲಾ ಹಾಜರಾಗಬೇಕು. ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಈ ಷರತ್ತುಗಳಲ್ಲಿ ಯಾವುದನ್ನಾದರೂ ಉಲ್ಲಂಘಿಸಿದರೆ ಅರ್ಜಿದಾರರ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್‌ ಕೋರಿಕೆ ಸಲ್ಲಿಸಬಹುದು’ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಪ್ರಕರಣವೇನು?: ಕಳೆದ ವರ್ಷ ನವೆಂಬರ್ 30ರಂದು ಚಿಕ್ಕರಾಯಪ್ಪ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ‘ಚಿಕ್ಕರಾಯಪ್ಪ  ಸರ್ಕಾರಿ ನೌಕರರಾಗಿ ಈತನಕ ಗಳಿಸಬೇಕಾಗಿದ್ದ ಅಂದಾಜು ಆಸ್ತಿ ₹1.30 ಕೋಟಿ ಇರಬೇಕಿತ್ತು. ಆದರೆ,  ದಾಳಿ ವೇಳೆ ₹5.35 ಕೋಟಿ ಆಸ್ತಿ ಹೊಂದಿರುವುದು ಪತ್ತೆಯಾಗಿದೆ’ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿದೆ.

ಚಿಕ್ಕರಾಯಪ್ಪ ಅವರು 1983ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಸರ್ಕಾರಿ ನೌಕರರಾಗಿ ನೇಮಕಗೊಂಡವರು.
ಸೂಕ್ತ ಸಾಕ್ಷ್ಯಗಳಿಲ್ಲ: ‘ಡಾಲರ್ಸ್‌ ಕಾಲೋನಿಯಲ್ಲಿರುವ ಪೆಬೆಲ್‌ ಬೇ ಅಪಾರ್ಟ್‌ಮೆಂಟ್‌ ಅನ್ನು ಚಿಕ್ಕರಾಯಪ್ಪ ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ ಎಂಬ ಆರೋಪಕ್ಕೆ ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ’ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

’ಅಮಾನತು ಹಿಂಪಡೆಯಲು ಅನುಕೂಲವಾಗಿದೆ’: ‘ಹೈಕೋರ್ಟ್‌ ಆದೇಶದಿಂದಾಗಿ ಚಿಕ್ಕರಾಯಪ್ಪ ಅವರ ಅಮಾನತು ರದ್ದಿಗೆ ಇರುವ ಅಡೆತಡೆ ನಿವಾರಣೆಯಾದಂತಾಗಿದೆ’ ಎಂದು ಚಿಕ್ಕರಾಯಪ್ಪ ಪರ ವಕೀಲ ಎಂ.ಎಸ್‌.ಶ್ಯಾಮಸುಂದರ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಮಾನತು ಆದೇಶ ರದ್ದುಪಡಿಸಬೇಕೆಂದು ಚಿಕ್ಕರಾಯಪ್ಪ ಈಗಾಗಲೇ  ಸರ್ಕಾರವನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT