ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಮುಡಿಗೆ ಬಾರ್ಡರ್‌–ಗಾವಸ್ಕರ್ ಟ್ರೋಫಿ?

ಭಾರತ–ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌
Last Updated 24 ಮಾರ್ಚ್ 2017, 20:11 IST
ಅಕ್ಷರ ಗಾತ್ರ

ಧರ್ಮಶಾಲಾ: ಆಟಕ್ಕಿಂತಲೂ ಹೆಚ್ಚಾಗಿ ವಿವಾದಗಳಿಂದ ಸುದ್ದಿಯಾಗುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ  ಟೆಸ್ಟ್‌ ಸರಣಿ ಈಗ ಅಂತಿಮ ಘಟ್ಟ ತಲುಪಿದೆ.

ಮೊದಲ ಮೂರು ಪಂದ್ಯಗಳ ಪೈಕಿ ಎರಡೂ ತಂಡಗಳು ತಲಾ ಒಂದರಲ್ಲಿ ಗೆದ್ದಿದ್ದು ಇನ್ನೊಂದು ಪಂದ್ಯ ಡ್ರಾ ಆಗಿದೆ. ಹೀಗಾಗಿ ಶನಿವಾರದಿಂದ ಧರ್ಮಶಾಲಾ ದಲ್ಲಿ ಆರಂಭವಾಗುವ ನಾಲ್ಕನೇ ಹಾಗೂ ಅಂತಿಮ ಪಂದ್ಯ ಉಭಯ ತಂಡಗಳ ಪಾಲಿಗೂ ಪ್ರತಿಷ್ಠೆಯ ಹೋರಾಟವಾಗಿ ಪರಿಣಮಿಸಿದೆ.

ವಿರಾಟ್‌ ಕೊಹ್ಲಿ ಪಡೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದರೆ, ಸ್ಟೀವನ್‌ ಸ್ಮಿತ್‌ ಬಳಗ ನಂತರದ ಸ್ಥಾನದಲ್ಲಿದೆ. ರಾಂಚಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ಗಳಿಸುವ ಉತ್ತಮ ಅವಕಾಶ ಇತ್ತು.  ಆಸ್ಟ್ರೇ ಲಿಯಾದ ಪೀಟರ್‌ ಹ್ಯಾಂಡ್ಸ್‌ಕಂಬ್‌ ಮತ್ತು ಶಾನ್‌ ಮಾರ್ಷ್  ಅವರ ಅಮೋಘ ಜೊತೆಯಾಟ ಮುರಿಯಲು ಆತಿಥೇಯ ಬೌಲರ್‌ಗಳು ವಿಫಲರಾಗಿದ್ದರಿಂದ ಜಯದ ಅವಕಾಶ ಕೈಜಾರಿತ್ತು. ಆದರೆ ಧರ್ಮಶಾಲಾದಲ್ಲಿ ಗೆಲುವಿನ ತೋರಣ ಕಟ್ಟಿ ಹಿಂದಿನ ನಿರಾಸೆ ಮರೆಯಲು ಭಾರತ ತಂಡ ಕಾತರಿಸುತ್ತಿದೆ.

ರಾಂಚಿ ಟೆಸ್ಟ್‌ನಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ಬಲಭುಜಕ್ಕೆ ಗಾಯ ಮಾಡಿಕೊಂಡಿದ್ದ ಕೊಹ್ಲಿ ಇನ್ನೂ  ಪೂರ್ಣವಾಗಿ ಗುಣಮುಖರಾಗಿಲ್ಲ. ಅವರು ಈ ಪಂದ್ಯ ದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದೇ  ಹೇಳಲಾಗುತ್ತಿದೆ. ಶುಕ್ರವಾರ  ಕೊಹ್ಲಿ  ಬ್ಯಾಟಿಂಗ್‌ ಅಭ್ಯಾಸ  ನಡೆಸದಿರುವುದು ಇದನ್ನು ಪುಷ್ಟೀಕರಿಸಿದೆ. ಒಂದೊಮ್ಮೆ ವಿರಾಟ್ ಕಣಕ್ಕಿಳಿಯದಿದ್ದರೆ ಮುಂಬೈನ ಶ್ರೇಯಸ್‌ ಅಯ್ಯರ್‌ ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಶುಕ್ರವಾರ ಬೆಳಿಗ್ಗೆ ತಂಡ ಸೇರಿಕೊಂಡಿರುವ ಅವರು ಸಂಜೆ ನೆಟ್ಸ್‌ನಲ್ಲಿ ಸಾಕಷ್ಟು ಸಮಯ ಅಭ್ಯಾಸ ನಡೆಸಿದರು. ಈ ವೇಳೆ ಕೊಹ್ಲಿ ಮತ್ತು ಕೋಚ್‌ ಅನಿಲ್‌ ಕುಂಬ್ಳೆ ಅವರು ಶ್ರೇಯಸ್‌ಗೆ ಅಗತ್ಯ ಸಲಹೆಗಳನ್ನು ನೀಡಿದ್ದು ಕಂಡುಬಂದಿತು. ಶ್ರೇಯಸ್‌ ಈ ಬಾರಿಯ ದೇಶಿ ಟೂರ್ನಿಗಳಲ್ಲಿ ಗಮನ ಸೆಳೆದಿದ್ದರು. ಕೊಹ್ಲಿಯಂತೆ ಆಕ್ರಮಣಕಾರಿಯಾಗಿ ಆಡಬಲ್ಲ ಸಾಮರ್ಥ್ಯ ಹೊಂದಿರುವ ಅವರು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು.

ಕೆ.ಎಲ್‌. ರಾಹುಲ್‌ ಮತ್ತು ಮುರಳಿ ವಿಜಯ್‌, ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲೂ ಇನಿಂಗ್ಸ್‌ ಆರಂಭಿಸಲಿದ್ದಾರೆ. ಇವರು ಹಿಂದಿನ ಪಂದ್ಯದಲ್ಲಿ ತಂಡಕ್ಕೆ ಅಮೋಘ ಆರಂಭ ಒದಗಿಸಿದ್ದರು. ಉತ್ತಮ ಲಯದಲ್ಲಿರುವ ಕರ್ನಾಟಕದ ರಾಹುಲ್‌ ಸರಣಿಯಲ್ಲಿ  ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ.  ಐದು ಇನಿಂಗ್ಸ್‌ಗಳಿಂದ ಅವರು 282ರನ್‌ ಪೇರಿಸಿದ್ದಾರೆ.

ಗಾಯದ ಕಾರಣ ಎರಡನೇ ಟೆಸ್ಟ್‌ಗೆ ಅಲಭ್ಯರಾಗಿದ್ದ ವಿಜಯ್‌, ರಾಂಚಿಯಲ್ಲಿ ಅರ್ಧಶತಕ ಗಳಿಸಿ ಕಳೆದುಕೊಂಡಿದ್ದ ವಿಶ್ವಾಸ ಮರಳಿ ಪಡೆದಿದ್ದಾರೆ.
ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇ ಶ್ವರ ಪೂಜಾರ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭ ಅನಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಅವರು ಸರಣಿಯಲ್ಲಿ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.

ಅವರ ಖಾತೆಯಲ್ಲಿ  348ರನ್‌ಗಳು ಇವೆ.  ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ ಕೂಡ ಎದುರಾಳಿ ಬೌಲರ್‌ಗಳಿಗೆ ಸವಾಲಾಗಬಲ್ಲ ರು.ಉಪ ನಾಯಕ ಅಜಿಂಕ್ಯ ರಹಾನೆ ಮತ್ತು  ಕರ್ನಾಟಕದ ಕರುಣ್‌ ನಾಯರ್‌ ಹಿಂದಿನ ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆಹಾಕಿಲ್ಲ. ಅವರು ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವುದು ಅಗತ್ಯ.

ಧರ್ಮಶಾಲಾ ಪಿಚ್‌ ವೇಗಿಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ನಾಯಕ ಕೊಹ್ಲಿ ಒಬ್ಬ ಹೆಚ್ಚುವರಿ ವೇಗಿಗೆ ಅವಕಾಶ ನೀಡಿದರೂ ಅಚ್ಚರಿಪಡ ಬೇಕಿಲ್ಲ. ಹಾಗಾದಲ್ಲಿ ಭುವನೇಶ್ವರ್‌ ಕುಮಾರ್‌ ಆಡುವ ಬಳಗದಲ್ಲಿ ಸ್ಥಾನ ಗಳಿಸಲಿದ್ದಾರೆ. ಆಗ ಕರುಣ್‌ ಅವಕಾಶ ವಂಚಿತರಾಗಬಹುದು. ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಅವರ ಸ್ಪಿನ್‌ ಮೋಡಿ ಈ ಪಂದ್ಯದಲ್ಲೂ ಮುಂದುವರಿಯುವ ನಿರೀಕ್ಷೆ ಇದೆ.

ವಿಶ್ವಾಸದಲ್ಲಿ ಆಸ್ಟ್ರೇಲಿಯಾ: ಕಾಂಗರೂಗಳ ನಾಡಿನ ತಂಡ ಕೂಡ ಸರಣಿ ಗೆಲುವಿನ ಕನಸು ಕಾಣುತ್ತಿದೆ.ನಾಯಕ ಸ್ಮಿತ್‌, ಡೇವಿಡ್‌ ವಾರ್ನರ್‌ , ಮ್ಯಾಟ್‌ ರೆನ್‌ಷಾ ಮತ್ತು ಮ್ಯಾಥ್ಯೂ ವೇಡ್‌ ಆತಿಥೇಯ ಬೌಲರ್‌ಗಳನ್ನು ಕಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಸರಣಿಯಲ್ಲಿ ಹೆಚ್ಚು ರನ್‌ ಗಳಿಸಿರುವ ಬಲಗೈ ಬ್ಯಾಟ್ಸ್‌ಮನ್‌ ಸ್ಮಿತ್‌  ಈ ಪಂದ್ಯ ದಲ್ಲಿಯೂ ‘ರನ್‌ ಶಿಖರ’  ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.
ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಹ್ಯಾಂಡ್ಸ್‌ಕಂಬ್‌ ಮತ್ತು ಶಾನ್‌ ಮಾರ್ಷ್‌ ಕೂಡ ಮಿಂಚಲು ಕಾದಿದ್ದಾರೆ. ಜೋಶ್‌ ಹ್ಯಾಜಲ್‌ವುಡ್‌ ಮತ್ತು  ಪ್ಯಾಟ್‌ ಕಮಿನ್ಸ್‌ ಅವರನ್ನು ಹೊಂದಿರುವ ಪ್ರವಾಸಿ ತಂಡ ಬೌಲಿಂಗ್‌ ವಿಭಾಗದಲ್ಲೂ ಬಲಾಢ್ಯವಾಗಿದೆ. ಸ್ಟೀವ್‌ ಓ ಕೀಫ್ ಮತ್ತು ನೇಥನ್‌ ಲಾಯನ್‌ ತಮ್ಮ ಬತ್ತಳಿಕೆಯಲ್ಲಿ ರುವ ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಸಿದ್ಧತೆ ನಡೆಸಿದ್ದಾರೆ.

***
ನಾನು ಮನಸ್ಸಿಗೆ ತೋಚಿದ್ದನ್ನು ಮಾತ್ರ ಮಾಡುತ್ತೇನೆ
‘ನಾನು ಮನಸ್ಸಿಗೆ ಸರಿ ಅನಿಸಿದ್ದನ್ನು ಮಾತ್ರ ಮಾಡುತ್ತೇನೆ. ಮನಸ್ಸಿಗೆ ತೋಚಿ ದ್ದನ್ನು ಹೇಳುತ್ತೇನೆ. ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಯಾರೋ ಹೇಳುತ್ತಾರೆ ಎಂದು ನನ್ನ ಸ್ವಭಾವದಲ್ಲಿ ಬದಲಾವಣೆ ಮಾಡಿ ಕೊಳ್ಳುವ ಪ್ರಶ್ನೆಯೇ ಉದ್ಭವಿಸು ವುದಿಲ್ಲ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ನುಡಿದಿದ್ದಾರೆ.

ಆಸ್ಟ್ರೇಲಿಯಾದ ದಿ ಡೈಲಿ ಟೆಲಿಗ್ರಾಫ್‌ ಕೊಹ್ಲಿ ಅವರನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹೋಲಿಸಿ ಸುದ್ದಿ ಪ್ರಕಟಿಸಿತ್ತು.
ಈ ಬಗ್ಗೆ ಕೇಳಲಾದ ಪ್ರಶ್ನೆಗೆ ‘ನನ್ನನ್ನು ಟೀಕಿಸಿ ಬರೆದರೆ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚುತ್ತದೆ ಎಂದರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಅಂತಹವರಿಗೆ ಒಳ್ಳೆಯದಾಗಲಿ’ ಎಂದು ಉತ್ತರಿಸಿದರು.

‘ಹೊರ ಜಗತ್ತು ನನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತದೆ ಎಂಬುದರ ಬಗ್ಗೆ  ಎಂದಿಗೂ ಯೋಚಿಸುವುದಿಲ್ಲ. ಸಹ ಆಟಗಾರರು ಮತ್ತು ಸ್ನೇಹಿತರು ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಾಕು. ನಾನು ಟೀಕೆಗಳಿಗೆಲ್ಲಾ  ಬಗ್ಗುವವನಲ್ಲ.  ಇದು ನನಗೆ ಮೊದಲೇನಲ್ಲ. ವೃತ್ತಿ ಬದುಕಿನ ಆರಂಭದಲ್ಲೂ ಸಾಕಷ್ಟು ಬಾರಿ ಇಂತಹ ಟೀಕೆಗಳನ್ನೆಲ್ಲಾ ಎದುರಿಸಿದ್ದೇನೆ’ ಎಂದಿದ್ದಾರೆ.

ತಮ್ಮ ಬಲಗೈಗೆ ಆಗಿರುವ ಗಾಯದ ಬಗ್ಗೆ ಮಾತನಾಡಿದ ವಿರಾಟ್‌ ‘ ಇನ್ನೂ ಸ್ವಲ್ಪ ನೋವು ಇದೆ. ಏನಾಗಿದೆ ಎಂಬುದು ನನಗೂ ಸರಿಯಾಗಿ ಅರ್ಥವಾಗುತ್ತಿಲ್ಲ. ತಂಡದ ಫಿಸಿಯೊ ಬಳಿ ಕೇಳಿದರೆ ನನಗಾಗಿರುವ ಗಾಯದ ಬಗ್ಗೆ ಸರಿಯಾಗಿ ವಿವರಿಸಬಲ್ಲರು’ ಎಂದು ನುಡಿದಿದ್ದಾರೆ.

***
ಶಮಿ, ಶ್ರೇಯಸ್‌ಗೆ ಸ್ಥಾನ
ಧರ್ಮಶಾಲಾ(ಪಿಟಿಐ): ಪಶ್ಚಿಮ ಬಂಗಾಳದ ವೇಗಿ ಮಹಮ್ಮದ್‌ ಶಮಿ ಮತ್ತು ಮುಂಬೈನ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಈ ವಿಷಯವನ್ನು ಬಿಸಿಸಿಐ ಶುಕ್ರವಾರ   ತಿಳಿಸಿದೆ.

ಗಾಯದಿಂದ ಚೇತರಿಸಿಕೊಂಡ ಬಳಿಕ ತಮಿಳುನಾಡು ವಿರುದ್ಧದ ವಿಜಯ್‌ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಆಡಿದ್ದ ಶಮಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ವೇಗಿ ಇಶಾಂತ್‌ ಶರ್ಮಾ ಹಿಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಕೈಬಿಟ್ಟು ಶಮಿಗೆ ಅಂತಿಮ ಬಳಗದಲ್ಲಿ ಸ್ಥಾನ ನೀಡಲು ತಂಡದ ಆಡಳಿತ ಮಂಡಳಿ ಚಿಂತಿಸಿದೆ.

ರಹಾನೆ ಕೂಡ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರು
‘ಬಲಗೈಗೆ ಗಾಯ ಮಾಡಿಕೊಂಡಿ ರುವ ವಿರಾಟ್‌ ಕೊಹ್ಲಿ ನಾಲ್ಕನೇ ಪಂದ್ಯಕ್ಕೆ ಅಲಭ್ಯರಾದರೂ ಭಾರತ ಚಿಂತಿಸುವ ಅಗತ್ಯವಿಲ್ಲ.  ಅಜಿಂಕ್ಯ ರಹಾನೆ ಆಡುವ ಬಳಗದಲ್ಲಿದ್ದು ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರು’ ಎಂದು  ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ನುಡಿದಿದ್ದಾರೆ. ‘ಕೊಹ್ಲಿ ಅನುಪಸ್ಥಿತಿಯಲ್ಲೂ ಭಾರತ ತಂಡ ಉತ್ತಮವಾಗಿ ಆಡಬಲ್ಲದು. ರಾಂಚಿ ಪಂದ್ಯದಲ್ಲಿ ರಹಾನೆ ಅವರು  ನಾಯಕತ್ವದ ಜವಾಬ್ದಾರಿಯನ್ನು ಉತ್ತಮ ವಾಗಿ ನಿಭಾಯಿಸಿದ್ದರು. ಅವರು ಪರಿಸ್ಥಿತಿ ಯನ್ನು ಅರಿತು ಅದಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸಬಲ್ಲರು’ ಎಂದಿದ್ದಾರೆ.

ದಲೈಲಾಮ ಭೇಟಿಯಾದ ಆಸ್ಟ್ರೇಲಿಯಾದ ಆಟಗಾರರು
ಧರ್ಮಶಾಲಾ (ಪಿಟಿಐ): ಆಸ್ಟ್ರೇಲಿಯಾದ ಆಟಗಾರರು ಶುಕ್ರವಾರ ಮೆಕ್‌ಲಾಯ್ಡ್‌ ಗಂಜ್‌ ಬೌದ್ಧ ಮಠಕ್ಕೆ ಭೇಟಿ ನೀಡಿ ಟಿಬೇಟನ್‌ ಧರ್ಮಗುರು ದಲೈಲಾಮ ಅವರ ಆಶಿರ್ವಾದ ಪಡೆದರು. ಭೇಟಿಯ ನೆನಪಿಗಾಗಿ ತಂಡದ ಆಟಗಾರರ ಹಸ್ತಾಕ್ಷರ ಒಳಗೊಂಡ ಪೋಷಾಕನ್ನು ದಲೈಲಾಮ ಅವರಿಗೆ ನೀಡಿದರು.

ಬಳಿಕ ಮಾತನಾಡಿದ ಸ್ಮಿತ್‌ ‘ಲಾಮ ಅವರ ಭೇಟಿಯ ಬಳಿಕ ಮನಸ್ಸು ಹಗುರಾಗಿದೆ. ಮುಂದಿನ ಐದು ದಿನ ನಿಶ್ಚಿಂತೆಯಿಂದ ನಿದ್ರಿಸಬಲ್ಲೆ’ ಎಂದರು.
‘ನಾವು ಪರಸ್ಪರ ಮೂಗು ತಾಗಿಸಿ ಶುಭಾಶಯ ವಿನಿಮಯ ಮಾಡಿ ಕೊಂಡೆವು. ಬಳಿಕ ಅವರು ಆಟಗಾರರ ರೆಲ್ಲರನ್ನೂ ಆಶಿರ್ವದಿಸಿದರು’ ಎಂದು ತಿಳಿಸಿದರು.‘ಮನಸ್ಸಿನ ನೆಮ್ಮದಿಗಾಗಿ ನಾವು ಲಾಮ ಅವರ ಬೌದ್ಧ ಮಠಕ್ಕೆ ಭೇಟಿ ನೀಡಿದ್ದೆವು. ಅವರ ಮಾತುಗಳು ನಮ್ಮಲ್ಲಿ ಹೊಸ ಹುರುಪು ತುಂಬಿವೆ’ ಎಂದರು.

ತಂಡಗಳು ಹೀಗಿವೆ:
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ಕರುಣ್‌ ನಾಯರ್‌, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಜಯಂತ್‌ ಯಾದವ್‌, ಕುಲದೀಪ್‌ ಯಾದವ್‌, ಅಭಿನವ್‌ ಮುಕುಂದ್‌ ಮತ್ತು ಶ್ರೇಯಸ್‌ ಅಯ್ಯರ್‌.
ಆಸ್ಟ್ರೇಲಿಯಾ: ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಮ್ಯಾಟ್‌ ರೆನ್‌ಷಾ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಮ್ಯಾಥ್ಯೂ ವೇಡ್‌ (ವಿಕೆಟ್‌ ಕೀಪರ್‌), ಪ್ಯಾಟ್‌ ಕಮಿನ್ಸ್‌, ಆಸ್ಟನ್‌ ಅಗರ್‌, ಜಾಕ್ಸನ್‌ ಬರ್ಡ್‌, ಜೋಶ್‌ ಹ್ಯಾಜಲ್‌ವುಡ್‌, ಉಸ್ಮಾನ್‌ ಖವಾಜ, ನೇಥನ್‌ ಲಾಯನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸ್ಟೀವ್‌ ಓ ಕೀಫ್‌, ಮಾರ್ಕಸ್‌ ಸ್ಟೊಯಿನಿಸ್‌ ಮತ್ತು ಮಿಷೆಲ್‌ ಸ್ವೆಪ್ಸನ್‌.
ಪಂದ್ಯದ ಆರಂಭ: ಬೆಳಿಗ್ಗೆ 9.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT