ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಮಿ ಹುಡುಗನ ಗಾನ ಸಂಕಲ್ಪ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಸ್ಸಾಮಿ ಹಾಡು ಹಾಡಿದರೆ ಅಂಗರಾಗ್ ಮಹಂತ. ಪಾಶ್ಚಾತ್ಯ ರಾಗ ಹೊಮ್ಮಿತೆಂದರೆ ‘ಪಾಪೋ’. ಕೆಲವರು ‘ಪ್ಯಾಪೋ’, ‘ಪಾಪೋನ್’ ಎಂದೂ ಕೂಗಿದ್ದುಂಟು.  ಒಬ್ಬನೇ ಗಾಯಕನಿಗೆ ಎರಡೆರಡು ಹೆಸರು. ಒಂದು ಅಪ್ಪ–ಅಮ್ಮ ಇಟ್ಟಿದ್ದು, ಇನ್ನೊಂದು ಸ್ನೇಹಿತರು ಕೊಟ್ಟಿದ್ದು.

ಖಗೇನ್ ಮಹಂತ, ಅರ್ಚನಾ ಮಹಂತ ದಂಪತಿ ಅಸ್ಸಾಂ ಜನಪದ ಗೀತೆಗಳಿಗೆ ಹೆಸರಾಗಿದ್ದವರು. ಅವರ ಮಗ ಅಂಗರಾಗ್. ಬಾಲ್ಯದಿಂದಲೇ ಮಗನಿಗೂ ಸಂಪ್ರದಾಯಬದ್ಧವಾಗಿ ಅಸ್ಸಾಮಿ ಶಾಸ್ತ್ರೀಯ ಸಂಗೀತವನ್ನು ಅಪ್ಪ–ಅಮ್ಮ ಧಾರೆ ಎರೆದಿದ್ದರು.

ವಾಸ್ತುಶಿಲ್ಪಿ ಆಗಬೇಕೆಂದು ದೆಹಲಿಯ ತಿಟ್ಹತ್ತಿದ ಅಂಗರಾಗ್ ಬ್ಯಾಂಡ್‌ಗಳ ಭಾಗವಾದರು. ಜೇಬಿನಲ್ಲಿ ಕಾಸು ಇಲ್ಲದೇ ಇದ್ದಾಗ ಅವರಿಗೆ ಸಂಗೀತವೇ ಆದಾಯ ತರುವ ದಾರಿ. ರಸ್ತೆ ಮಧ್ಯ ಸಂಗೀತ ಕಛೇರಿ ಆಯೋಜಿಸಿ, ಜನರನ್ನು ಜಮಾಯಿಸುವಂತೆ ಮಾಡುವ ಬ್ಯಾಂಡ್ ಸಂಸ್ಕೃತಿ ಕಳೆಗಟ್ಟುತ್ತಿದ್ದ ಹೊತ್ತಲ್ಲೇ ಅಂಗರಾಗ್ ತಮ್ಮ ಜನಪದ ಗೀತೆಗಳನ್ನು ತನ್ಮಯರಾಗಿ ಹಾಡಿದರು. ಖೋಲ್, ತಬಲಾ, ಗಿಟಾರ್, ಹಾರ್ಮೋನಿಯಂ ನುಡಿಸುವುದನ್ನೂ ಕಲಿತಿದ್ದ ಅಂಗರಾಗ್ ತಮ್ಮದಲ್ಲದ ಪಾಶ್ಚಾತ್ಯ ರಾಗಗಳನ್ನೂ ಒಪ್ಪಿಕೊಂಡಿದ್ದೇ ಪಾಕೆಟ್ ಮನಿ ಸಲುವಾಗಿ.

ವಿಶ್ವದಾದ್ಯಂತ ಸಂಚರಿಸಿ, ಎಲ್ಲೆಲ್ಲಿ ದೇಸಿ ರಾಗಗಳು ಹೊಮ್ಮುತ್ತವೋ ಅವನ್ನೆಲ್ಲಾ ಎದೆಗೆ ಇಳಿಸಿಕೊಳ್ಳುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಆದರೆ, ಹಣ ಬೇಕು ಎನಿಸಿದಾಗಲೆಲ್ಲ ವಾಸ್ತುಶಿಲ್ಪಿಯೇ ಆಗುವುದು ಲೇಸೆನಿಸುತ್ತಿತ್ತು, ಸಂಗೀತ ಕಛೇರಿಗೆ ಬುಲಾವು ಬಂದರೆ ಮುಖ ಸಹಜವಾಗಿಯೇ ಅರಳುತ್ತಿತ್ತು.
ಒಂದು ರಾತ್ರಿ ಅಂಗರಾಗ್‌ಗೆ ನಿದ್ದೆ ಬರಲಿಲ್ಲ. ಜನ ‘ಪಾಪೋಂ’ ಎಂದು ಕೂಗಿದ್ದು ನೆನಪಾಯಿತು.

ಇನ್ನೊಂದು ಕಡೆ ವಾಸ್ತುಶಿಲ್ಪಿ ಆಗು ಎಂದು ಒಳಮನಸ್ಸು ಹೇಳುತ್ತಿತ್ತು. ಹಾಸಿಗೆಯಿಂದ ಎದ್ದ ‘ಪಾಪೋಂ’ ತನ್ನೂರಿನ ತನ್ನದೇ ರಾಗವನ್ನು ಗುನುಗಿದರು. ಹಾಡುವ ಅವಕಾಶ ಹುಡುಕಿ ಸ್ಟುಡಿಯೊ ಮೆಟ್ಟಿಲುಗಳ ಸವೆಸಿದವರ ಕರುಣಾಜನಕ ಕಥೆಗಳು ಅವರಿಗೂ ಗೊತ್ತಿತ್ತು.

ಆ ದಾರಿ ತನ್ನದಲ್ಲ ಎಂದು ನಿರ್ಧರಿಸಿಬಿಟ್ಟಿದ್ದ ಅವರು, ಎದೆಯ ರಾಗಗಳನ್ನು ಅವಕಾಶ ಸಿಕ್ಕಾಗಲೆಲ್ಲ ಕೇಳಿಸುತ್ತಿದ್ದರು. ತಮ್ಮ ಕಛೇರಿಗಳಿಂದಲೇ ಹೊಂದಿಸಿಟ್ಟ ಹಣದಿಂದ ಅವರು 2004ರಲ್ಲಿ ‘ಜುನಕಿ ರಾತಿ’ ಎಂಬ ಅಸ್ಸಾಮಿ ಆಲ್ಬಂ ಹೊರತಂದರು.

ಸಂಗೀತಗಾರ, ವಾಸ್ತುಶಿಲ್ಪಿ ಎರಡರಲ್ಲಿ ಏನಾಗಬೇಕು ಎಂಬ ಜಿಜ್ಞಾಸೆ ಅಂಗರಾಗ್ ಅವರನ್ನು ತಿಂಗಳುಗಟ್ಟಲೆ ಕಾಡಿದ್ದುಂಟು. ಸ್ನೇಹಿತರ ಬಳಗದಲ್ಲಿದ್ದ ಒಬ್ಬ ಮನೋವೈದ್ಯರ ಸಲಹೆಯನ್ನು ಅವರು ಕೇಳಿದ್ದೂ ಇದೆ. ಕೊನೆಗೆ ಅವರು ಹೆಸರಲ್ಲೇ ಇರುವ ರಾಗಗಳನ್ನೇ ಆಯ್ದುಕೊಂಡರು. ವಾಸ್ತುಶಿಲ್ಪಿ ಆಗಲಿಲ್ಲ. ‘ಸಂಗೀತಗಾರನಷ್ಟೇ ಆಗುವೆ’ ಎಂದು ಅವರು ದೃಢಸಂಕಲ್ಪ ಮಾಡಿದ ರಾತ್ರಿ ಚೆನ್ನಾಗಿ ನಿದ್ರೆ ಹತ್ತಿತ್ತು.

‘ಪಾಪೋ’ ಕಂಠ ಕ್ರಮೇಣ ಜನಪ್ರಿಯವಾಯಿತು. ಹಾಡು ಹಾಡುವುದಷ್ಟೇ ಅಲ್ಲ, ಬರೆಯುವುದರಲ್ಲೂ ಪಳಗಿದ ಕೈ ಅವರದ್ದು. ಹೊಟ್ಟೆಪಾಡಿಗಾಗಿ ‘ಜಿಂಗಲ್ಸ್‌’ ಮಾಡಿಕೊಂಡಿದ್ದ ಅವರು ಬಿಡುವಿನಲ್ಲಿ ಕೆಲವು ಹಾಡುಗಳನ್ನು ಬರೆದು, ಮಟ್ಟು ಹಾಕಿ, ತಾವೇ ಹಾಡಿ ಧ್ವನಿ ಮುದ್ರಿಸಿಡುತ್ತಿದ್ದರು.

‘ಸಾಜ್ನಾ ಬಾವರೆ’ ಹಾಗೆ ಅವರು ಸಿದ್ಧಪಡಿಸಿದ್ದ ಹಾಡುಗಳಲ್ಲಿ ಒಂದು. ‘ಎಂಐದಿಲ್‌ವಾಲ್ ಪಂಡಿತ್ಸ್‌’ ಎಂಬ ಬ್ಯಾಂಡ್‌ ಅದರ ಸಹ ನಿರ್ಮಾಣಕ್ಕೆ ಒಪ್ಪಿತು. ಅದೇ ಹಾಡು ‘ಲೆಟ್ಸ್‌ ಎಂಜಾಯ್’ ಎಂಬ ಹಿಂದಿ ಚಿತ್ರದಲ್ಲಿ ಬಳಕೆಯಾದದ್ದು ಈ ಹಾಡುಗಾರನ ಬದುಕಿನ ಮಹತ್ವದ ತಿರುವು.

ಎಂಟಿವಿಯ ಕೋಕ್‌ ಸ್ಟುಡಿಯೊ ಕಾರ್ಯಕ್ರಮದಲ್ಲಿ ಹಾಡಲು ಬುಲಾವು ಬಂದಾಗ ಅಂಗರಾಗ್, ಮೂರು ಹೊಸ ಮಟ್ಟುಗಳನ್ನು ಪ್ರಸ್ತುತಪಡಿಸಿದರು. ಅವರು ಹಾಗೂ ಬೆನ್ನಿ ದಯಾಳ್ ಹಾಡಿದ ಗೀತೆ ಯೂಟ್ಯೂಬ್‌ನಲ್ಲಿ ಈಗಲೂ ಜನಪ್ರಿಯ.

ಬಾಲಿವುಡ್ ಗಾಯಕ ಆಗಬೇಕೆಂಬ ಬಯಕೆಯಿಂದ ಎಲ್ಲರೂ ಸ್ಟುಡಿಯೊಗಳಿಗೆ ಎಡತಾಕುವುದು ಸಾಮಾನ್ಯ. ಆದರೆ, ಈ ಅಸ್ಸಾಮಿ ಪ್ರತಿಭೆ ಚಿತ್ರರಂಗವೇ ತನ್ನತ್ತ ತಿರುಗಿನೋಡುವಂತೆ ರಸ್ತೆಬದಿಯ ಸಂಗೀತ ಕಛೇರಿಗಳಿಂದಲೇ ಮಾಡಿದ್ದು ಸೋಜಿಗ.

ಜಿಜ್ಞಾಸೆಯಿಂದ ಹೊರಬಂದು, ಸಂಗೀತ ಪಯಣ ಮುಂದುವರಿಸಿರುವ ಅಂಗರಾಗ್ ಈಗ ರಸ್ತೆಗೆ ಇಳಿದರೆ ಜನ ಸುತ್ತುವರಿಯುತ್ತಾರೆ. ‘ಬೇಫಿಕ್ರೆ’ ಚಿತ್ರದ ‘ಜೇಬೋಂ ಮೆ ಬಿಖ್ರೆ ಹೈ ತಾರೆ’ ಹಾಡನ್ನು ಅವರು ಉಳಿದವರ ಎದೆಗಿಳಿಸುತ್ತಾರೆ. ಮುಷ್ಟಿ ತುಂಬ ನಕ್ಷತ್ರ ಹಿಡಿಯುವುದೆಂದರೆ ಇದೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT