ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳು ಜವಾಬ್ದಾರಿಗೆ ಆತ್ಮವಂಚನೆ ಮಾಡಬಾರದು

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರಂಗಾರೆಡ್ಡಿ ಕೋಡಿರಾಂಪುರ ಅಭಿಮತ
Last Updated 27 ಮಾರ್ಚ್ 2017, 7:24 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ:  ‘ಸಮಾಜದಿಂದ ಮನ್ನಣೆ ಬಯಸುವ ಸಾಹಿತಿಗಳು ಮತ್ತು ಚಿಂತಕರು ಸಮಾಜ ಬಯಸುವ ಜವಾಬ್ದಾರಿಯನ್ನು ಆತ್ಮವಂಚನೆ ಇಲ್ಲದೆ ನಿರ್ವಹಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಂಗಾರೆಡ್ಡಿ ಕೋಡಿರಾಂಪುರ ಪ್ರತಿಪಾದಿಸಿದರು. 
 
ಗೌರಿಬಿದನೂರಿನಲ್ಲಿ ನಡೆದ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ‘ಸಾಹಿತ್ಯ–ಸಮಾಜ–ಸಂಸ್ಕೃತಿ’ ಎಂಬ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
‘ಅರ್ಥಶಾಸ್ತ್ರ, ಇತಿಹಾಸ, ಭೌತವಿಜ್ಞಾನ, ರಸಾಯನಿಕ ವಿಜ್ಞಾನ ಇಂತಹ ಯಾವುದೇ ವಿಷಯಕ್ಕೆ ಇಲ್ಲದ ಒಂದು ಮಾಂತ್ರಿಕ ಶಕ್ತಿ ಸಾಹಿತ್ಯಕ್ಕೆ ಇದೆ. ಹೀಗಾಗಿಯೇ ಸಾಹಿತ್ಯ ಬಹುಕಾಲದಿಂದ ಜನರ ನಡುವೆ ಇದೆ. ಅದೊಂದೆ ಭಾವನೆಗಳನ್ನು ಹೊರಹಾಕುವ ಅಭಿವ್ಯಕ್ತಿ ಮಾಧ್ಯಮ.
 
ಆದ್ದರಿಂದ ಅದು ಸಾಮಾಜಿಕ ಜವಾಬ್ದಾರಿಯನ್ನು ಒಳಗೊಂಡಿರಬೇಕಾಗುತ್ತದೆ. ಹೀಗಾಗಿ ಸಾಹಿತಿಗಳು ಲೋಕೋಪಯೋಗಿಯಾದ, ಮನುಷ್ಯನ ಬದುಕನ್ನು ಹಸನುಗೊಳಿಸುವ ಕೆಲಸಕ್ಕೆ ಪೂರಕವಾಗಿ ಸಾಹಿತ್ಯ ಕೃಷಿ ಮಾಡಬೇಕು’ ಎಂದು ಹೇಳಿದರು. 
 
‘ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಇವು ಒಂದಕ್ಕೊಂದು ಅಂತರ್‌ ಸಂಬಂಧ ಹೊಂದಿವೆ. ಕಲೆ ಬಿಟ್ಟು ಮನುಷ್ಯ ಬದುಕಲು ಸಾಧ್ಯವಿಲ್ಲ. ಒಂದೊಮ್ಮೆ ಬದುಕಿದರೆ ಆತ ಯಂತ್ರಮಾನವನ ರೀತಿ ಇರುತ್ತಾನೆ. ಇವತ್ತು ಸಮಾಜ ಆಹಾರ ರಾಜಕೀಯ ಸೇರಿದಂತೆ ಅನೇಕ ಗೊಂದಲಗಳಿಂದ ಕೂಡಿದೆ.

ಪುರಾಣ ಕಾಲದಿಂದ ಈವರೆಗೆ ನಮಗೆ ಯುದ್ಧಗಳ ಭೀತಿ ತಪ್ಪಿಲ್ಲ. ಅಭದ್ರತೆಯಲ್ಲಿ ಬದುಕುತ್ತಿರುವ ಈ ಹೊತ್ತಿನಲ್ಲಿ ನಮಗೆ ಶಾಂತಿ, ನೆಮ್ಮದಿ, ಸಹಬಾಳ್ವೆಯ ಅಗತ್ಯವಿದೆ’ ಎಂದರು. 
 
‘ಕನ್ನಡ ಸಾಹಿತ್ಯ ಮತ್ತು ವೈಚಾರಿಕತೆ’ ಎಂಬ ವಿಷಯ ಕುರಿತು ಮಾತನಾಡಿದ ಬಾಗೇಪಲ್ಲಿ ನ್ಯಾಷನಲ್ ಪದವಿ ಕಾಲೇಜಿನ ಪ್ರಾಧ್ಯಾಪಕ ರಾಮಯ್ಯ, ‘ಸಮಾಜವು ಪ್ರಸ್ತುತ ಸಂದರ್ಭದಲ್ಲಿ ತೀವ್ರತರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಮತಿಯವಾದ ಕೋಮುವಾದ, ಪುನರ್‌ಜನ್ಮ, ಜೋತಿಷ್ಯಶಾಸ್ತ್ರದಂತಹ ಅತಾರ್ಕಿಕವಾದಗಳು ಮತ್ತು ಮಡೆ ಮಡೆ ಸ್ನಾನವೆಂಬ ಧಾರ್ಮಿಕ ನೆಲೆಯ ತಾರತಮ್ಯಗಳು ಮನುಕುಲದ ನೆಮ್ಮದಿ ಹಾಳು ಮಾಡುತ್ತಿವೆ’ ಎಂದರು. 
 
‘ವಿಚಾರವಾದ ಮಂಡಿಸುವವರನ್ನು ಇವತ್ತು ಹತ್ಯೆ ಮಾಡುವ ಸಂದರ್ಭ ಸೃಷ್ಟಿಯಾಗುತ್ತಿದೆ. ಇನ್ನೊಂದೆಡೆ ಬೌದ್ಧಿಕ ಸ್ವಾತಂತ್ರ್ಯ ಧಮನ ಮಾಡಲಾಗುತ್ತಿದೆ. ಆಹಾರ ಕ್ರಮವನ್ನು ಮತ್ತೊಬ್ಬರು ನಿರ್ಧರಿಸುವಂತಾಗುತ್ತಿದೆ.
 
ಇದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಕ್ರಮವಲ್ಲ. ಬಹುಸಂಸ್ಕೃತಿ ನಾಡಿನಲ್ಲಿ ಏಕಸಂಸ್ಕೃತಿ ಹೇರುವ ಪ್ರಯತ್ನಗಳನ್ನು ತಡೆಗಟ್ಟಬೇಕಿದೆ. ಒಂದು ಸ್ವಾಸ್ಥ್ಯ ಸಮಾಜದ ಸುಸ್ಥಿರ ಬೆಳವಣಿಗೆಗೆ ಮತ್ತು ವೈಚಾರಿಕ ಸಾಹಿತ್ಯದ ಅಗತ್ಯವಿದೆ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. 
 
‘ಕನ್ನಡ ಸಾಹಿತ್ಯ–ಸಂಸ್ಕೃತಿ’ ಎಂಬ ವಿಷಯ ಕುರಿತು ಮಾತನಾಡಿದ ಬಶೆಟ್ಟಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್‌.ಕೆ.ಆದಿನಾರಾಯಣ, ‘ಇವತ್ತು ಮಕ್ಕಳಿಗೆ ವಿದ್ಯಾರ್ಥಿಗಳನ್ನು ರ್‌್ಯಾಂಕ್‌ಗಳ ಹಿಂದೆ ಓಡಿಸುತ್ತ, ಮೌಲ್ಯಗಳನ್ನು ಕಲಿಸುವುದರಲ್ಲಿ ಎಡವುತ್ತಿದ್ದೇವೆ.
 
ಮಕ್ಕಳಲ್ಲಿ ಲೋಕೋಪಕಾರದ ಗುಣ ಬೆಳೆಸುವ ತಾಯಂದಿರು ಕಡಿಮೆಯಾಗುತ್ತಿದ್ದಾರೆ. ಮೌಲ್ಯಗಳ ಬಗ್ಗೆ ಹೇಳುವವರು ಇಲ್ಲವಾಗುತ್ತಿದ್ದಾರೆ ಎನ್ನುವ ಟೀಕೆಗಳ ನಡುವೆಯೇ ಕೇಳುವವರೂ ಇಲ್ಲ ಎನ್ನುವ ವಾಸ್ತವವಿದೆ. ಇವತ್ತು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸುವ ಅಗತ್ಯವಿದೆ’ ಎಂದು ಹೇಳಿದರು. 
 
‘ಸಾಹಿತಿಯಾದವನು ಇಂತದ್ದೇ ಬರೆಯಬೇಕು ಎನ್ನುವ ನೀತಿ ನಿಯಮಗಳಿಲ್ಲ. ಹಾಗೆಂದು ತೋಚಿದ್ದನ್ನೆಲ್ಲ ಬರೆದರೆ ಸಮಾಜ ದಿಕ್ಕು ತಪ್ಪುತ್ತದೆ. ಸಾಹಿತಿಗೂ ಒಂದು ಸಾಮಾಜಿಕ ಬದ್ಧತೆ ಇದೆ.
 
ಸಮಾಜದ ಬೇಕು ಬೇಡಗಳಿಗೆ ಸ್ಪಂದಿಸುವ ಜವಾಬ್ದಾರಿ ಸಾಹಿತಿಗೆ ಇರುವುದರಿಂದ ಸಂಸ್ಕೃತಿಯ ತಳಹದಿಯ ಮೇಲೆ ಪ್ರಸ್ತುತ ಸಮಾಜದ ಆಗುಹೋಗುಗಳು, ಸಮಸ್ಯೆಗಳಿಗೆ ಸ್ಪಂದಿಸುವ ಹಾಗೇ ಬರೆಯಬೇಕು. ಆಗ ಮಾತ್ರ ಆ ಸಾಹಿತ್ಯವನ್ನು ಸಮಾಜ ಸ್ವೀಕರಿಸುತ್ತದೆ. ಸಾಹಿತಿಗೂ ಗೌರವ ಸಲ್ಲಿಸುತ್ತದೆ’ ಎಂದು ತಿಳಿಸಿದರು. 
 
ಬೆಂಗಳೂರು ಜಯನಗರದ ನ್ಯಾಷನಲ್‌ ಕಾಲೇಜಿನ ಪ್ರಾಧ್ಯಾಪಕ ಕೆ.ಪಿ.ನಾರಾಯಣಪ್ಪ, ‘ಸಾಹಿತ್ಯ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಸಾಕಷ್ಟು ಅನ್ಯಾಯ, ದೌರ್ಜನ್ಯ, ಅಸತ್ಯಗಳು ನೆಲೆಗೊಂಡಿದ್ದರು ಕ್ರಾಂತಿ ನಡೆಯುತ್ತಿಲ್ಲ.

ಏಕೆಂದರೆ ಸಾಹಿತ್ಯ ಮನಸ್ಸು ಮೃದುಗೊಳಿಸುತ್ತ  ಸುಂದರವಾದ ಸಮಾಜ ರಚನೆಗೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದೆ’ ಎಂದರು. ಸಮ್ಮೇಳನಾಧ್ಯಕ್ಷ ಪ್ರೊ.ಬಿ.ಗಂಗಾಧರಮೂರ್ತಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT