ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿ ಜನರ ‘ಧ್ವನಿ’ಯಾಗಿ...

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ನಮ್‌ ಹಾಡಿಯಲ್ಲಿರೋ ಹೆಣ್ಮಕ್ಳಿಗೆ ಆರೋಗ್ಯ ಹೇಗ್‌ ಕಾಪಾಡ್ಕಬೇಕು ಅಂತ ಗೊತ್ತಿರ್ಲಿಲ್ಲ. ಪ್ರತಿ ತಿಂಗ್ಳ ಮುಟ್ಟಿನ್‌ ಸಮಯ್‌ದಾಗೆ ಹೇಗೆ ಸ್ವಚ್ಛ ಮಾಡ್ಕಂಬೇಕು ಅಂತನೂ ತಿಳಿತಿರ್ಲಿಲ್ಲ. ಎಷ್ಟೋ ಹೆಣ್ಮಕ್ಳು ಒಳಗಿನ್‌ ಸಮಸ್ಯೆಗಳ್ನ ಗಂಡಸ್ರತ್ರ ಹೇಳ್ಕಳಕಾಗ್ದೆ ನೋವ್‌ ಅನ್ಬವುಸ್ತಿದ್ರು.

ಆಸ್ಪತ್ರೆ ಅಂದ್ರೆ ಮಾರ್ದೂರ ಓಡೋಯ್ತಿದ್ರು. ಆದ್ರ ಈಗ ಎಲ್ಲವ್ರು ತಿಳ್ಕಂಡವ್ರೆ. ಏನೇ ಆರೋಗ್ಯ ಸಮಸ್ಯೆ ಬಂದ್ರೂನು ಆಸ್ಪತ್ರೆಗೆ ಹೋಗುವಷ್ಟು ಬುದ್ಧಿ ಬಂದೈತೆ. ಇದನ್ನೆಲ್ಲ ಹೇಳ್ಕೊಟ್ಟಿದ್ದು ನಮ್ಮ ‘ಜನಧ್ವನಿ...’

–ಬಿ.ಮಟಗೆರೆ ಹಾಡಿಯ ವಸಂತಮ್ಮ ಅವರ ಈ ಖುಷಿಗೆ ಕಾರಣ ಸಮುದಾಯ ಬಾನುಲಿ ಕೇಂದ್ರದ ‘ಜನಧ್ವನಿ–90.8’ ವಾಹಿನಿ. ಇದು ಹಾಡಿ ಜನಗಳಲ್ಲಿ ಬದಲಾವಣೆಯ ಅಡಿಗಲ್ಲು ಹಾಕಿದೆ. ಆಧುನಿಕತೆಯ ಸೋಂಕಿಲ್ಲದೆ ಕಾಡಿನಲ್ಲೇ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಹಾಡಿಗಳ ಜನ, ಆರೋಗ್ಯ ಸಮಸ್ಯೆಯ ಅರಿವು ಇಲ್ಲದೆ ಇಂದಿಗೂ ನಲುಗುತ್ತಿದ್ದಾರೆ.

ಅಂಥವರಿಗೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ, ಅವುಗಳಿಗೆ ಒಗ್ಗಿಕೊಳ್ಳುವಂತೆ ಮಾಡುವ ಕಷ್ಟಕರ ಕಾರ್ಯವನ್ನೂ ಯಶಸ್ವಿಯಾಗಿ ನಡೆಸುತ್ತಿದೆ ‘ಜನಧ್ವನಿ’.

ಕಾಡುಕುರುಬ, ಜೇನುಕುರುಬ, ಎರವ, ಸೋಲಿಗ, ಬೆಟ್ಟಕುರುಬ ಈ 5 ಪಂಗಡಗಳನ್ನು ಒಳಗೊಂಡ ಸುಮಾರು 120 ಹಾಡಿಗಳು ಎಚ್‌.ಡಿ.ಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿವೆ. ಇದರಲ್ಲಿ ಕೆಲವರು ಕಾಡನ್ನು ಬಿಟ್ಟು, ಅರಣ್ಯದ ಅಂಚಿನಲ್ಲಿ ನೆಲೆ ಕಂಡುಕೊಂಡಿದ್ದರೆ, ಇನ್ನು ಹಲವರು ಕಾಡಿನಲ್ಲೇ ವಾಸಿಸುತ್ತಿದ್ದಾರೆ.

ಈ ಜನರಿಗಾಗೇ ‘ನಂಗ ಕಾಡು– ನಂಗ ಜನ’ ಕಾರ್ಯಕ್ರಮ ರೂಪಿಸಿ, ಕಾಡಿನ ನಂಟು, ಅವರ ಅನುಭವಗಳ ವಿನಿಮಯಕ್ಕೆ ವಾಹಿನಿ ವೇದಿಕೆ ಒದಗಿಸಿದೆ. ಸಾಮಾನ್ಯವಾಗಿ ಹಾಡಿ ಜನ ಸಣ್ಣಪುಟ್ಟ ರೋಗಗಳಿಗೆ ಕಾಡಿನಲ್ಲೇ ಸಿಗುವ ಗಿಡಮೂಲಿಕೆಯಿಂದ ಔಷಧ ತಯಾರಿಸಿ ಉಪಯೋಗಿಸುತ್ತಾರೆ. ಈ ಬಗೆಯನ್ನು ನಾಡಿನ ಜನರಿಗೂ ತಲುಪಿಸುವ ಕೆಲಸವನ್ನು ವಾಹಿನಿ ಮಾಡುತ್ತಿದೆ.

‘ಹಾಡಿಗಳಲ್ಲಿ ಸಾಕಷ್ಟ್‌ ಮನೆಗಳಲ್ಲಿ ಟೀವಿಗಳು ಅವೆ. ಆದ್ರೆ, ಅದ್ರಲ್ಲಿ ನಮ್ಮ ಜೀವನಕ್ಕೆ ಬೇಕಾಗುವ ವಿಷ್ಯಾ ಸಿಗೋಲ್ಲ. ಆದ್ರಿಂದ ನಾವು ಹೆಚ್ಚಾಗಿ ಇದನ್ನೇ ಕೇಳೋದು’ ಎನ್ನುತ್ತಾರೆ ಡಿ.ಬಿ.ಕುಪ್ಪೆ ಹಾಡಿಯ ಮರಿಯಮ್ಮ.

‘ಬಾಲ್ಯವಿವಾಹ ಮಾಡಿದ್ರೆ ಹೆಣ್ಮಕ್ಳಿಗೆ ಯಾವ್‌ ರೀತಿ ಸಮಸ್ಯೆ ಆಗ್ತದೆ, ಹೇಗೆ ಕೃಷಿ ಮಾಡಬೇಕು, ಸಂಘಗಳನ್ನು ಹೇಗ್‌ ರಚನೆ ಮಾಡ್ಕಬೇಕು. ಹಣ ಹೇಗ್‌ ಉಳಿತಾಯ ಮಾಡ್ಬೇಕು, ಇವೆಲ್ಲ ಇಸ್ಯಗಳನ್ನು ಬಾನುಲಿಯಿಂದ ಕೇಳಿ ತಿಳ್ಕಂಡಿವೆ. ನಮ್ಗೆ ತಿಳಿದಿದ್ದನ್ನ ಬೇರೆಯವ್ರಿಗೂ ಹೇಳ್ತಿವಿ’ ಎನ್ನುತ್ತಾರೆ ಬಿ.ಮಟಗೆರೆ ಹಾಡಿಯ ತಿರುಮಾರ.

ಹೀಗೆ ಸುಮಾರು 200 ಹಳ್ಳಿಗಳ ಎರಡು ಲಕ್ಷ ಜನರನ್ನು ತಲುಪುತ್ತಿರುವ ‘ಜನಧ್ವನಿ’ ಶೇ 35ರಷ್ಟು ಹಾಡಿ ಜನರನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಾಡಿನ ಜನರನ್ನು ಕಂಡು ದೂರ ಸರಿಯುತ್ತಿದ್ದ ಗಿರಿಜನರು ಬಾನುಲಿ ಸ್ಟುಡಿಯೊದಲ್ಲಿ ಕುಳಿತು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ವಾಹಿನಿ ಕೇಳುವುದಕ್ಕಾಗಿಯೇ ಹಾಡಿಗಳಲ್ಲಿ ಮೈಕ್‌ ವ್ಯವಸ್ಥೆ ಅಳವಡಿಸಲಾಗಿದೆ!

‘ಹಾಡಿ ಜನರ ಮನವೊಲಿಸುವ ಕೆಲಸ ಬಹಳ ಕಷ್ಟದ್ದು. ಸಂದರ್ಶನಕ್ಕೆಂದು ಹೋದಾಗ ಆಗಂತುಕರಂತೆ ನಮ್ಮನ್ನು ನೋಡುತ್ತಿದ್ದರು. ಇನ್ನು ಕೆಲವರು ಕಣ್ಣಿಗೆ ಬೀಳದಂತೆ ಓಡಿ ಹೋಗುತ್ತಿದ್ದರು. ನಂಬಿಕೆ ಬಾರದಿದ್ದರೆ ಯಾವ ಕಾರಣಕ್ಕೂ ಅವರು ಮಾತನಾಡುವುದಿಲ್ಲ.

ಈಗ ‘ಜನಧ್ವನಿ’ ಎಂದ ತಕ್ಷಣ ನಗುಮೊಗದಿಂದ ಸ್ವಾಗತಿಸುತ್ತಾರೆ’ ಎಂದು ಅನುಭವ ಬಿಚ್ಚಿಡುತ್ತಾರೆ ಜನಧ್ವನಿಯ ಕಾರ್ಯಕ್ರಮ ನಿರ್ಮಾಣ ಸಹಾಯಕ ಶಿವಲಿಂಗು.

ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಆಶ್ರಯದಲ್ಲಿ ಸರಗೂರಿನಲ್ಲಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವ ವೈದ್ಯರು ಲಭ್ಯ, ಯಾರು ಇಲ್ಲ ಎಂಬ ಮಾಹಿತಿಯನ್ನು ನಿತ್ಯ ಬೆಳಿಗ್ಗೆ ಬಾನುಲಿ ಮೂಲಕ ನೀಡಲಾಗುತ್ತದೆ. ಇದರಿಂದ ಹತ್ತಾರು ಕಿ.ಮೀ ದೂರದಿಂದ ಬರುವ ರೋಗಿಗಳಿಗೆ ಅನುಕೂಲವಾಗಿದೆ. ವಾರದಲ್ಲಿ ಮೂರು ದಿನ ವೈದ್ಯರು ನೇರ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ.

ಕೃಷಿಯಲ್ಲಿ ನಿರಂತರ ಪ್ರಯೋಗಗಳನ್ನು ಮಾಡಿ, ಹೆಚ್ಚು ಇಳುವರಿ ಪಡೆಯುವ ಕೌಶಲ ಹೊಂದಿರುವ ಹಾಡಿಯ ರೈತರನ್ನು ಪರಿಚಯಿಸುವ ಕಾರ್ಯದಲ್ಲೂ ‘ಜನಧ್ವನಿ’ ತೊಡಗಿದೆ. ‘ಡಿ.ಬಿ.ಕುಪ್ಪೆ ಹಾಡಿಯ ಕರಿಯಪ್ಪ ಎಂಬುವವರು ಚಿಕ್ಕ ಜಮೀನಿನಲ್ಲೇ ನಾಲ್ಕೈದು ಬಗೆಯ ಬೆಳೆಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.

ಅವರನ್ನು ಸಂದರ್ಶಿಸಲು ಮುಂದಾದಾಗ ಮಾತನಾಡಲು ನಿರಾಕರಿಸಿದರು. ಈಗ ಅವರೇ ಸ್ಟುಡಿಯೊಗೆ ಬಂದು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ’ ಎನ್ನುತ್ತಾರೆ ‘ಜನಧ್ವನಿ’ಯ ಕಾರ್ಯಕ್ರಮ ನಿರ್ಮಾಣ ಹಿರಿಯ ಸಹಾಯಕ ಲಿಂಗರಾಜು.

ನಾಟಕ ಹಾಗೂ ಹರಿಕಥೆಯ ಮೂಲಕ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಗಣಿತವನ್ನು ಹೇಳಿಕೊಡುವ ‘ಲೆಕ್ಕದ ಕಟ್ಟೆ’ ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ರೂಪಿಸಲಾಗಿತ್ತು.

2016ರ ನವೆಂಬರ್‌ವರೆಗೆ ‘ಲೆಕ್ಕದ ಕಟ್ಟೆ’ಯ 180 ಸಂಚಿಕೆಗಳು ಪ್ರಸಾರವಾಗಿವೆ. ‘ಈ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರವೂ ಮೆಚ್ಚುಗೆ ಸೂಚಿಸಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಇದೇ ಬಗೆಯ ಕಾರ್ಯಕ್ರಮ ರೂಪಿಸಲು ಕೇಂದ್ರದಿಂದ ಪ್ರಸ್ತಾವ ಬಂದಿದೆ’ ಎನ್ನುತ್ತಾರೆ ಜನಧ್ವನಿ ಬಾನುಲಿ ಕೇಂದ್ರದ ವ್ಯವಸ್ಥಾಪಕ ಶಿವಕುಮಾರ್‌.  

ಜನಧ್ವನಿ ಕುರಿತು...
2012ರ ಫೆಬ್ರುವರಿ 24ರಂದು ಸ್ಥಾಪನೆಯಾದ ‘ಜನಧ್ವನಿ–90.8’ ವಾಹಿನಿಯ ತರಂಗಗಳು ಸರಗೂರು ಸುತ್ತಮುತ್ತಲ 35 ಕಿ.ಮೀ. ವ್ಯಾಪ್ತಿಯನ್ನು ತಲುಪುತ್ತವೆ. ದಿನಕ್ಕೆ 13 ಗಂಟೆ ಕಾರ್ಯಕ್ರಮ ನೀಡಲಾಗುತ್ತಿದೆ. ಜಾನಪದ ಕಲೆಯನ್ನು ಪ್ರೋತ್ಸಾಹಿಸಲು ‘ಹಾಡು ಹಸೆ’, ವೃದ್ಧರ ಸಮಸ್ಯೆ ಹಾಗೂ ಅವರ ಅನುಭವಗಳನ್ನು ಹಂಚಿಕೊಳ್ಳಲು ‘ಮುಸ್ಸಂಜೆ’, ಆರೋಗ್ಯದ ಬಗ್ಗೆ ಮಾಹಿತಿ ನೀಡಲು ‘ಆರೋಗ್ಯದಂಗಳ’, ರೈತರ ಸಮಸ್ಯೆಗಳನ್ನು ಬಿಂಬಿಸಲು ‘ರೈತ ಧ್ವನಿ’, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜನರ ನಡುವೆ ಸಂಪರ್ಕ ಕಲ್ಪಿಸಲು ನೇರ ಫೋನ್‌ ಇನ್‌ ‘ಸೇತುವೆ’ ಸೇರಿದಂತೆ 35 ವಿವಿಧ ಬಗೆಯ ಕಾರ್ಯಕ್ರಮಗಳನ್ನು ಬಾನುಲಿ ಕೇಂದ್ರ ರೂಪಿಸಿದೆ.

*
ಚಿಕಿತ್ಸೆಗೆ ಬಂದ ಆದಿವಾಸಿಗಳಿಗೆ ಸ್ವಚ್ಛತೆ ಬಗ್ಗೆ ಅರಿವಿಲ್ಲ ಎಂಬುದು ಗಮನಕ್ಕೆ ಬಂದ ಕಾರಣ ಅದರ ಬಗ್ಗೆ ‘ಜನಧ್ವನಿ’ಯಲ್ಲಿ ಮಾಹಿತಿ ನೀಡಿದೆವು. ಹತ್ತು ಜನರಲ್ಲಿ ಕೊನೇಪಕ್ಷ ಇಬ್ಬರಾದರೂ ಸುಧಾರಣೆ ಕಂಡಿರುವುದು  ಅನುಭವಕ್ಕೆ ಬಂದಿದೆ.
–ಡಾ.ಚೈತನ್ಯ ಪ್ರಸಾದ್‌,
ವೈದ್ಯ, ಸ್ವಾಮಿ ವಿವೇಕಾನಂದ ಆಸ್ಪತ್ರೆ

*
ಹಾಡಿಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಹಾಡು, ಕಥೆಗಳ ಮೂಲಕ, ಸಂದರ್ಶನದ ಮೂಲಕ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಜತೆಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮುಖಾಮುಖಿ ಮಾಡಿ ಗಿರಿಜನರ ಸಮಸ್ಯೆಗಳಿಗೆ ಸ್ಪಂದಿಸಲು ವೇದಿಕೆ ಒದಗಿಸಿದ್ದೇವೆ.
–ಶಿವಕುಮಾರ್‌,
ಜನಧ್ವನಿ ಬಾನುಲಿ ಕೇಂದ್ರದ ವ್ಯವಸ್ಥಾಪಕ, ಸರಗೂರು

*
ಟೀವಿಯಿಂದಾಗಿ ರೇಡಿಯೊ ಕೇಳುಗರ ಸಂಖ್ಯೆ ಕಡಿಮೆಯಾಗಿತ್ತು. ಮತ್ತೆ ರೇಡಿಯೊದತ್ತ ನಮ್ಮನ್ನು ಸೆಳೆದಿರುವುದು ‘ಜನಧ್ವನಿ’ ವಾಹಿನಿ. ಗಿರಿಜನರಿಗಷ್ಟೇ ಅಲ್ಲದೇ, ಮಕ್ಕಳಿಗೆ ಇಂಗ್ಲಿಷ್‌ ಕಲಿಕೆ, ಲೆಕ್ಕದ ಕಟ್ಟೆ, ವಿಜ್ಞಾನ ಕಾರ್ಯಕ್ರಮಗಳು ಬಹಳಷ್ಟು ಮಾಹಿತಿ ನೀಡುತ್ತಿದೆ.
–ಎಚ್‌.ಗೋವಿಂದಯ್ಯ ನಿವೃತ್ತ ಶಿಕ್ಷಕ, ಸರಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT