ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ನಿದ್ದೆಗೆಡಿಸಿದ ಆದಿತ್ಯನಾಥ ಕಾರ್ಯವೈಖರಿ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲಖನೌ : ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿ ಕೊಂಡ ಒಂದು ವಾರದಲ್ಲಿ 50ಕ್ಕೂ ಹೆಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ  ಆದಿತ್ಯನಾಥ ಯೋಗಿ ಅವರು ತಮ್ಮ ಕಾರ್ಯದಕ್ಷತೆ ತೋರಿಸಿದ್ದಾರೆ.

ಮೊದಲ ದಿನವೇ ಇಡೀ ಸಚಿವಾಲಯ ಕಟ್ಟಡ ಸುತ್ತಾಡಿದ ಅವರು,  ಕಚೇರಿಗಳು ಸ್ವಚ್ಛವಾಗಿ ಇರಬೇಕು, ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು ಎಂದು ಸರ್ಕಾರಿ ನೌಕರರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು.

ಗೋಡೆಗಳು ಮತ್ತು ಏಣಿಯ ಮೆಟ್ಟಿಲುಗಳ ಮೇಲೆ ಪಾನ್ ಬೀಡಾ ಉಗುಳಿ ಆಗಿರುವ ಕಲೆ, ದೂಳು ತಿನ್ನುತ್ತಿರುವ ಕಡತಗಳು ಮತ್ತು ಕೆಲಸಕ್ಕೆ ಗೈರು ಹಾಜರಾದ ಸಿಬ್ಬಂದಿ... ಇವೇ ಮೊದಲಾದ ಲೋಪಗಳನ್ನು ಅವರು ಮೊದಲ ದಿನವೇ ಪತ್ತೆಹಚ್ಚಿದ್ದರು.

ಸಚಿವಾಲಯದ ಕಟ್ಟಡ ಗಲೀಜು ಆಗಿರುವುದನ್ನು ಕಂಡು ಸಿಡಿಮಿಡಿಗೊಂಡಿದ್ದ ಅವರು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಪಾನ್‌ ಹಾಕಿಕೊಳ್ಳಬಾರದು ಎಂದು ಆದೇಶಿಸಿದ್ದರು.

ಜನಪ್ರತಿನಿಧಿಗಳು ಮತ್ತು ಬಿಜೆಪಿ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ಕಾಮಗಾರಿಗಳ ಗುತ್ತಿಗೆ ಪಡೆಯುವಂತಿಲ್ಲ ಎಂಬ ಆದೇಶವನ್ನು ಅವರು ಹೊರಡಿಸಿದ್ದಾರೆ.

‘ಪ್ರತಿದಿನ 18–20 ತಾಸುಗಳ ಕಾಲ ಕೆಲಸ ಮಾಡುವವರು ಮಾತ್ರ ನಮ್ಮ ಜತೆ ಇರುತ್ತಾರೆ; ಇಲ್ಲದಿದ್ದರೆ ಮನೆಗೆ ಹೋಗಬೇಕಾಗುತ್ತದೆ’ ಎಂದು ಸರ್ಕಾರಿ ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಆದಿತ್ಯನಾಥ ನೀಡಿದ್ದಾರೆ.

ಗೋಮತಿ ನದಿದಂಡೆ ಯೋಜನೆ ಸಿ.ಎಂ ಅಸಮಾಧಾನ

ಲಖನೌ : ಉತ್ತರ ಪ್ರದೇಶದ ಹಿಂದಿನ ಅಖಿಲೇಶ್‌ ಯಾದವ್‌ ಸರ್ಕಾರ  ಚಾಲನೆ ನೀಡಿದ್ದ ಗೋಮತಿ ನದಿದಂಡೆ ಯೋಜನೆಯ ಕಾಮಗಾರಿ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯೋಜನೆಗೆ ಎರಡು ವರ್ಷ ವ್ಯರ್ಥ ಮಾಡಿದಲ್ಲದೆ ₹1,427 ಕೋಟಿ ಖರ್ಚು ಮಾಡಿ, ಕೇವಲ ಶೇಕಡ 60ರಷ್ಟು ಕಾಮಗಾರಿ ನಡೆದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ಗೋಮತಿ ನದಿ ಶುದ್ಧೀಕರಿಸಲು ನದಿಗೆ ತಡೆಗೋಡೆ ನಿರ್ಮಿಸುವುದು ಮತ್ತು ಮಲಿನ ನೀರು ನದಿ ಸೇರದಂತೆ ತಡೆಯಲು ದಂಡೆಗಳಲ್ಲಿ ಒಳಚರಂಡಿ ಕಾಲುವೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಹಿಂದಿನ ಅಖಿಲೇಶ್‌ ಯಾದವ್‌ ಸರ್ಕಾರ ಚಾಲನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT