ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಮಿತಿ ಶೇ15ಕ್ಕೆ ಹೆಚ್ಚಳ ಪ್ರಸ್ತಾಪ

Last Updated 27 ಮಾರ್ಚ್ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ವರ್ಗಾವಣೆ ಮಿತಿಯನ್ನು ಶೇ15ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಇದುವರೆಗೆ ಶೈಕ್ಷಣಿಕ ಜಿಲ್ಲೆಯೊಳಗೆ ಶೇ 5ರಷ್ಟು ಮತ್ತು ಅಂತರ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯೊಳಗೆ ಶೇ 3ರಷ್ಟು ಸೇರಿ ಒಟ್ಟು ಹುದ್ದೆಗಳ ಶೇ8ರಷ್ಟು ಶಿಕ್ಷಕರ ವರ್ಗಾವಣೆಗೆ ಮಾತ್ರ ಅವಕಾಶ ಇತ್ತು. ಈಗ ಅದನ್ನು ಶೇ15ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ನಗರ ಪ್ರದೇಶಗಳಲ್ಲಿ (‘ಎ’ ವಲಯ) ಗರಿಷ್ಠ 10 ವರ್ಷ ಕರ್ತವ್ಯ ನಿರ್ವಹಿಸಿದವರನ್ನು ಮತ್ತು ನಿವೃತ್ತಿಗೆ ಎರಡು ವರ್ಷಕ್ಕಿಂತ ಹೆಚ್ಚು ಸೇವಾವಧಿ ಹೊಂದಿದವರನ್ನು ಗ್ರಾಮಾಂತರ ಪ್ರದೇಶಕ್ಕೆ (‘ಸಿ’ ವಲಯ) ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುವುದು.

ಮಾನ್ಯತೆ ಪಡೆದ ಶಿಕ್ಷಕರ ಸಂಘದ ಪದಾಧಿಕಾರಿಗಳು, ಅವಿವಾಹಿತೆಯರು, ವಿಧವೆಯರು  ಮತ್ತು ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ಶಿಕ್ಷಕರಿಗೆ ಇದರಿಂದ ವಿನಾಯಿತಿ ದೊರೆಯಲಿದೆ. ಕಡ್ಡಾಯವಾಗಿ ವರ್ಗಾವಣೆ ಮಾಡಬೇಕಾದ ಶಿಕ್ಷಕರಿಗೆ ‘ಸಿ’ ವಲಯದಲ್ಲಿ ಹುದ್ದೆಗಳು ಖಾಲಿ ಇಲ್ಲದಿದ್ದಾಗ, ಅಲ್ಲಿನ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಿ ಅಲ್ಲಿಗೆ ನೇಮಿಸಬೇಕು.

ಶಿಕ್ಷಕ/ಶಿಕ್ಷಕಿ ತನ್ನ ಶೈಕ್ಷಣಿಕ ಜಿಲ್ಲೆಯ ಹೊರಗಿನ ಸರ್ಕಾರಿ ಅಥವಾ ಸಾರ್ವಜನಿಕ ವಲಯದ  ಉದ್ದಿಮೆಯಲ್ಲಿ ಇರುವವರನ್ನು ಮದುವೆಯಾದಲ್ಲಿ ಸೇವಾವಧಿ ಹೊರತಾಗಿಯೂ ವರ್ಗಾವಣೆ ಮಾಡಬಹುದಾಗಿದೆ.  ಕನಿಷ್ಠ ಸೇವಾವಧಿ ಪೂರ್ಣಗೊಳಿಸದಿದ್ದರೂ ಮತ್ತೊಂದು ಶೈಕ್ಷಣಿಕ ಜಿಲ್ಲೆಯಲ್ಲಿ ಖಾಲಿ ಹುದ್ದೆ ಇದ್ದು, ಅಲ್ಲಿಗೆ ವರ್ಗಾವಣೆ ಕೋರಿದಾಗ ಪರಿಗಣಿಸಬಹುದು ಎಂದು ಕಾಯ್ದೆಯಲ್ಲಿ ಬದಲಾವಣೆ ತರಲಾಗಿದೆ.

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ನಿಯಂತ್ರಣಕ್ಕೆ ಕಾಯ್ದೆ

ಬೆಂಗಳೂರು: ಸಿಬಿಎಸ್‌ಇ  ಮತ್ತು ಐಸಿಎಸ್‌ಇ  ಶಾಲೆಗಳಲ್ಲಿನ ವಿದ್ಯಾರ್ಥಿಗಳ ರಕ್ಷಣೆ ಮತ್ತು ಭದ್ರತೆಗಾಗಿ  ಕರ್ನಾಟಕ ಶಿಕ್ಷಣ (ಎರಡನೇ ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ವ್ಯಾಪ್ತಿಯಲ್ಲಿ ಈ ಶಾಲೆಗಳನ್ನು ತರಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ಅಥವಾ ಸದಸ್ಯನ ಮೇಲೆ ಆರೋಪ ಸಾಬೀತಾದಲ್ಲಿ  6 ತಿಂಗಳ ಸೆರೆವಾಸ ಮತ್ತು ₹1 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ.
ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ  ಮಾಡಿದರೆ ಅಂತಹ ಶಿಕ್ಷಣ ಸಂಸ್ಥೆ ವಿರುದ್ಧ ₹ 10 ಲಕ್ಷ ವರೆಗೆ ದಂಡ ವಿಧಿಸಲು  ‘ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ಕ್ಕೆ
ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT